ಯಳಂದೂರಿನಲ್ಲಿ ಅದ್ಧೂರಿ ಬಸವ ಜಯಂತಿ ಆಚರಣೆ
ಯಳಂದೂರು
ಇಡೀ ವಿಶ್ವವೇ ಬಸವಣ್ಣನವರ ತತ್ವಾದರ್ಶಗಳನ್ನು ಇಷ್ಟಪಡುತ್ತಿದ್ದು, ಅವರು ಜಗತ್ತಿನ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಅವರ ಅದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕರೆ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ, ಬಸವ ಜಯಂತಿ ಆಚರಣಾ ಸಮಿತಿ ಹಾಗೂ ಬಸವ ಬಳಗ ಒಕ್ಕೂಟಗಳ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಬಸವ ಉತ್ಸವ ಕಾರ್ಯಕ್ರಮದಲ್ಲಿ
ಮಾತನಾಡಿದರು.
ಬಸವಣ್ಣ ನಮ್ಮ ಹೆಮ್ಮೆಯಾಗಿದ್ದಾರೆ. ಬಸವ ಜಯಂತಿಯನ್ನು ವಿಶ್ವದ ಇತರೆ ರಾಷ್ಟ್ರಗಳಲ್ಲೂ ಆಚರಿಸುವ ವಾಡಿಕೆ ಹೆಚ್ಚಾಗುತ್ತಿದೆ. ನಮ್ಮ ರಾಜ್ಯದ ಪ್ರತಿ ಗ್ರಾಮಗಳಲ್ಲೂ ಜಯಂತಿ ಆಚರಣೆ ಮಾಡಲಾಗುತ್ತಿದೆ. 12ನೇ ಶತಮಾನದಲ್ಲಿ ಇವರು ನಡೆಸಿದ ಕ್ರಾಂತಿ, ಮಾನವ ಕುಲದ ಪರಿಕಲ್ಪನೆ, ಜಾತ್ಯತೀತ ನಿಲುವು ಎಲ್ಲರಿಗೂ ಆದರ್ಶವಾಗಿದೆ ಎಂದರು.

ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಬಸವಣ್ಣ ಜಗತ್ತಿಗೆ ಮಾನವ ಧರ್ಮ ಸೃಷ್ಟಿಸಿದ ಮಹಾನ್ ದಾರ್ಶನಿಕರಾಗಿದ್ದಾರೆ. ಮಹಾಮನೆಯ ಇವರ ಕಲ್ಪನೆಯೇ ಅತ್ಯಧ್ಭುವಾಗಿದೆ. ಎಲ್ಲರಿಗೂ ಅರ್ಥವಾಗುವಂತೆ ವಚನಗಳ ಮೂಲಕ ಹೇಳಿಕೊಟ್ಟ ಮಹಾನ್ ಸಂತರಾಗಿದ್ದಾರೆ. ಇವರ ತತ್ವಾದರ್ಶಗಳು ನಮಗೆ ಆದರ್ಶಪ್ರಾಯವಾಗಲಿ ಎಂದರು.
ವೈಭವದ ಮೆರವಣಿಗೆ:
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಂದಿಕಂಬಗಳಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮೆರವಣಿಗೆಯಲ್ಲಿ ಕಪ್ಪು ಬಣ್ಣದ ಜಲ್ಲಿಕಟ್ಟು ಶನಿಕರ, ಅಲಂಕೃತ ಹಳ್ಳಿಕಾರ್ ಹೋರಿಗಳು, ಮಂಗಳವಾದ್ಯಗಳ ತಂಡ, ವೀರಗಾಸೆ ಕುಣಿತ, ಗೊರುಕನ ನೃತ್ಯತಂಡ, ಡೊಳ್ಳು ಕುಣಿತ, ಅಶ್ವಾರೂಢ ಬಸವೇಶ್ವರ ಪುತ್ಥಳಿ, ಬೆಳ್ಳಿ ರಥದಲ್ಲಿ ಸಾಗಿದ ಬಸವೇಶ್ವರರ ಭಾವಚಿತ್ರ, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಜನಾ ತಂಡಗಳ ಸಮ್ಮುಖದಲ್ಲಿ ಮೆರವಣಿಗೆ ಕಣ್ಮನ ಸೆಳೆಯಿತು.

ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಮಾಜಿ ಶಾಸಕ ಎನ್. ಮಹೇಶ್, ಎಸ್. ಬಾಲರಾಜು, ಜೆಡಿಎಸ್‌ನ ಪುಟ್ಟಸ್ವಾಮಿ, ಕಾರಾಪುರ ವಿರಕ್ತ ಮಠದ ಬಸವರಾಜಸ್ವಾಮಿ ಒಡೆಯರ್, ಸಾಲೂರು, ಗೌಡಹಳ್ಳಿ, ಹರವೆ, ವಾಟಾಳು, ಮುಡಿಗುಂಡ, ಅಗರಕಲ್ಲು, ಮರಿಯಾಲ, ಗೌಡಹಳ್ಳಿ, ಕುದೇರು, ಹೊನ್ನೂರು ಮಾವಳ್ಳಿ, ಕೆಸ್ತೂರು ಮಠ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು, ಕಾಡಾ ಅಧ್ಯಕ್ಷ ಮರಿಸ್ವಾಮಿ, ತೋಟೇಶ್, ವೀರಶೈವ ಮಹಾಸಭಾದ ಮೂಡ್ಲುಪುರ ನಂದೀಶ್, ವೀರಶೈವ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಗೌಡಹಳ್ಳಿ ರವಿ, ಬಸವ ಉತ್ಸವ ಸಮಿತಿ ಅಧ್ಯಕ್ಷ ಕೆಸ್ತೂರು ಪುಟ್ಟಸುಬ್ಬಪ್ಪ, ಉಪಾಧ್ಯಕ್ಷ ಶಿವಕುಮಾರ ಸ್ವಾಮಿ, ಕಾರ್ಯದರ್ಶಿ ಕೊಮರನಪುರ ಚಂದ್ರಶೇಖರ್, ಕೆಸ್ತೂರು ಮಹದೇವಸ್ವಾಮಿ, ಯುವ ಘಟಕದ ಅಧ್ಯಕ್ಷ ಮಲ್ಲಿಗೆಹಳ್ಳಿ ಸಂತೋಷ್ ಸೇರಿದಂತೆ ಅನೇಕರು ಇದ್ದರು.

ಹೇಳಿಕೆಗಳು ಕೇವಲ ಬಾಯ್ಮಾತಾಗಿರದೆ ಕಾರ್ಯರೂಪಕ್ಕೆ ಬರಬೇಕು. ಬಸವ ಧರ್ಮ ಸಾಂವಿಧಾನಿಕ ಮಾನ್ಯತೆಗೆ ಹರಗುರು ಚರಮೂರ್ತಿಗಳು ಪ್ರಾದೇಶಿಕ ಭಿನ್ನತೆ ತೊರೆದು ಒಗ್ಗಟ್ಟಿನಿಂದ ಹೋರಾಟಕ್ಕೆ ಇಳಿಯಬೇಕಾದ್ದು ಇಂದಿನ ತುರ್ತು !