ಗುಳೇದಗುಡ್ಡ:
ಬಸವ ಕೇಂದ್ರದ ವತಿಯಿಂದ ನಡೆದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ನಿಜಸುಖಿ ಹಡಪದ ಅಪ್ಪಣ್ಣನವರ ಸ್ಮರಣೋತ್ಸವವನ್ನು ಆಚರಿಸಲಾಯಿತು.
ಹಿರಿಯ ಶರಣ ದಾನಪ್ಪನವರು ಬಂಡಿ ಅವರ ಮನೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶರಣ ಅಪ್ಪಣ್ಣ ತಂದೆಗಳ ವಚನವನ್ನು ಚಿಂತನೆಗೆ ಆಯ್ದುಕೊಳ್ಳಲಾಗಿತ್ತು. ವಚನ ಹೀಗಿದೆ …
ಭಕ್ತಿಯ ಮಾಡಿದೆನೆಂಬವರೆಲ್ಲ ಭಾಗ್ಯವಂತರಾದರು
ಮುಕ್ತಿಯ ಸಾಧಿಸಿಹೆನೆಂಬವರೆಲ್ಲ ಮೂವಿಧಿಗೆ ಒಳಗಾದರು.
ತತ್ವವನರಿತಿಹೆನೆಂಬುವರೆಲ್ಲ ತರ್ಕಿಗಳಾದರು
ವಿರಕ್ತಿಯ ಮಾಡಿಹೆನೆಂಬವರೆಲ್ಲ ವೈರಾಗಿಗಳಾದರು
ಈ ಚತುರ್ವಿಧದೊಳಗೆ ಆವಂಗವೂ ಅಲ್ಲ .
ಎಮ್ಮ ಬಸವಪ್ರಿಯ ಕೂಡಲ ಚನ್ನಬಸವಣ್ಣನಲ್ಲಿ ಶರಣರ ಪರಿ ಬೇರೆ.
ಇಂದಿನ ವಚನ ವಿಶ್ಲೇಷಣೆಯೊಂದಿಗೆ ಹಡಪದ ಅಪ್ಪಣ್ಣನವರ ಚರಿತ್ರೆಯನ್ನು ಪ್ರೊ. ಶ್ರೀಕಾಂತ್ ಗಡೇದ ಅವರು ಪರಿಚಯಿಸುತ್ತ, ಹಡಪದ ಅಪ್ಪಣ್ಣನವರು ಹಿರಿಯ ಶಿವಾನುಭವಿಗಳಾಗಿದ್ದರು. ಸಕಲ ಪ್ರಾಣಿಗಳಲ್ಲಿ ದಯೆ ಕರುಣೆಗಳನ್ನು ಕಂಡ ಸಮಸಮಾಜದ ನಿರ್ಮಾಪಕ ಅಪ್ಪ ಬಸವಣ್ಣನವರ ಅಂಗರಕ್ಷಕನಾಗಿˌ ಆಪ್ತ ಕಾರ್ಯದರ್ಶಿಯಾಗಿ ಇದ್ದವರು ಈ ಹಡಪದ ಅಪ್ಪಣ್ಣ ತಂದೆಗಳು.

ಬನವಾಸಿಯ ಮಧುಕೇಶ್ವರ ದೇವಾಲಯದ ಗಗ್ಗರಿಕಟ್ಟೆಯಲ್ಲಿ ಅಪ್ಪಣ್ಣನವರ ಉಬ್ಬು ಶಿಲ್ಪವಿದೆ. ಬಸವ ಮಹಾಮನೆಯ ಮೇಲುಸ್ತುವಾರಿ ವಹಿಸುತ್ತ ಸಾಮಾಜಿಕ ಕ್ರಾಂತಿಯ ಮುನ್ನಲೆಯಲ್ಲಿದ್ದರೂ ಎಲ್ಲ ಶರಣರ ಪ್ರೀತಿಗೆ ಪಾತ್ರರಾಗಿದ್ದ ಅವರು ಕಾಯಕ ದಾಸೋಹ ತತ್ವಗಳ ಪ್ರತಿಪಾದಕರಾಗಿದ್ದರು.
ತಮ್ಮ ಹಡಪದ ಕಾಯಕವನ್ನು ಮಾಡುತ್ತಲೇ ಸಮಾಜದ ಮೌಡ್ಯವನ್ನು ಕಿತ್ತೆಸೆಯಲು ಪ್ರಯತ್ನಿಸಿದರು. ಅವರ ಪತ್ನಿ ಲಿಂಗಮ್ಮನವರು ಪತಿಗೆ ತಕ್ಕ ಸತಿಯಾಗಿ ಶರಣ ದಂಪತಿಗಳು ಎನಿಸಿಕೊಂಡರು. ಜೊತೆಗೆ ಈ ದಂಪತಿಗಳು ವಚನಗಳನ್ನು ಬರೆದರು. ಮಾನವೀಯತೆ, ಅನುಕಂಪ, ದಯೆ, ಸರ್ವರಲ್ಲಿ ಸಮಭಾವ ಮೊದಲಾದವು ಇವರ ಕೊಡುಗೆಗಳಾಗಿವೆ.
ಇಂತಹ ಹಡಪದ ಅಪ್ಪಣ್ಣ ತಂದೆಗಳು ಶರಣ ಸಂದೋಹದಲ್ಲಿದ್ದು, ಲೌಕಿಕಕ್ಕೆ ಬಡಿದಾಡದೆ ಲಿಂಗಾನುಭವಿಗಳಾಗಿ ನಿಜ ಸುಖಿಯೇ ಆಗಿದ್ದರು” ಎಂದು ಮುಂತಾಗಿ ಹಡಪದ ಅಪ್ಪಣ್ಣ ದಂಪತಿಗಳನ್ನು ಪರಿಚಯಿಸಿದರು.
ನಿವೃತ್ತ ಪ್ರೊ. ಮಹದೇವಯ್ಯ ನೀಲಕಂಠಮಠ ಅವರು ಮಾತನಾಡುತ್ತಾ, “ಹಡಪದ ಅಪ್ಪಣ್ಣನವರು ಕಾಯಕ ಜೀವಿಶರಣರು. ಕ್ರಾಂತಿ ಪೂರ್ವದ ಸಾಮಾಜಿಕ ಅವ್ಯವಸ್ಥೆಯನ್ನು ತೆಗೆದು ಹಾಕಿದರು. ಜಾತಿಗಿಂತ ಕಾಯಕ ಮುಖ್ಯ ಎಂಬ ತತ್ವವನ್ನು ಎತ್ತಿ ಹೇಳಿದರು. ಶರಣ ಅಪ್ಪಣ್ಣನವರು ಬಸವಣ್ಣನವರ ಜೊತೆಗೆ ಕೊನೆಯವರೆಗೂ ಇದ್ದವರು. ಇವರು ನೀಡಿದ ಸಂಸ್ಕೃತಿಯೇ ಈಗಲೂ ಸಮಾಜದಲ್ಲಿ ಮೈವೆತ್ತಿಕೊಂಡಿದೆ.

ಹೀಗೆ ಎಲ್ಲ ಶರಣರು ನೀಡಿದ ಲಿಂಗಾಯತ ತತ್ವಗಳನ್ನು ಹರಡುವದೇ ಬಸವ ಕೇಂದ್ರದ ಉದ್ದೇಶವಾಗಿದೆ ” ಎಂದು ಹೇಳುತ್ತ ಹಲವು ವಚನಗಳನ್ನು ಈ ಸಂದರ್ಭದಲ್ಲಿ ಉದ್ದರಿಸಿದರು.
ಇದೇ ಸಂದರ್ಭದಲ್ಲಿ ಸಿದ್ದಲಿಂಗಪ್ಪ ಬರಗುಂಡಿಯವರು ಇಂದಿನ ವಚನವನ್ನು ಕುರಿತು ಮಾತನಾಡುತ್ತಾ, “ಬಸವಪೂರ್ವದ ಸ್ಥಿತಿಗಿಂತ ನಂತರದ ಶರಣರ ಅನುಭಾವದ ದೃಷ್ಟಿಕೋನವೇ ಬೇರೆಯಾಗಿತ್ತು. ಕೇವಲ ಭಕ್ತಿ ಮುಕ್ತಿ ಎಂಬಲ್ಲಿಯೇ ಬಡಿದಾಡಿಕೊಂಡು ವ್ಯರ್ಥ ಬದುಕನ್ನು ಬದುಕಿ ˌಶೋಷಣೆಗೆ ಒಳಗಾಗಿದ್ದ ಜನರನ್ನು ಶರಣರು ಎಚ್ಚರಿಸಿದರು. ಶರಣರ ಪರಿಯೇ ಬೇರೆಯಾಗಿ ಇತ್ತು ಎಂಬುದನ್ನು ಹಡಪದ ಅಪ್ಪಣ್ಣನವರು ಈ ವಚನದ ಮೂಲಕ ಸ್ಪಷ್ಟಪಡಿಸುತ್ತಾರೆ.
ಭಕ್ತಿ ಮುಕ್ತಿ ತತ್ವ ಮತ್ತು ವಿರಕ್ತಿ ಎಂಬ ಶಬ್ದಗಳಿಗೆ ಮರುಳಾಗಿ ಲೌಕಿಕ ಬದುಕನ್ನೇ ಹಾಳು ಮಾಡಿಕೊಂಡವರು ಹಲವರು. ಆದರೆ ಶರಣರು ಇವುಗಳನ್ನೇ ಅನುಭವದ ಮೆಟ್ಟಿಲುಗಳನ್ನಾಗಿಸಿ ಪರಶಿವನಲ್ಲಿ ಸಮರಸ ಹೊಂದಿ ನಿಜಸುಖಿಗಳಾದರು ಎಂಬುದು ಅಪ್ಪಣ್ಣವರ ಸ್ಪಷ್ಟ ಅಭಿಪ್ರಾಯವಾಗಿದೆ.
ಹಿಂದಿನವರು ಭಕ್ತಿಮಾಡಿ ಭಾಗ್ಯವಂತರಾಗಿˌ ಮುಕ್ತಿಬೇಡಿ ತಾಪತ್ರಯಕ್ಕೆ ಒಳಗಾಗಿˌ ತತ್ವವನ್ನು ತಿಳಿದೆವು ಎಂಬ ಅಹಂಭಾವದಲ್ಲಿ ತರ್ಕಿಗಳಾಗಿˌ ವಿರಕ್ತಿಯಮಾಡಿˌ ಬಿಟ್ಟೆವು ಬಿಟ್ಟೆವು ಎಂಬ ವೈರಾಗಿಗಳಾದರೇ ವಿನಃ ಅವರಾರೂ ಅನುಭಾವಿಗಳಾಗಿˌ ಲಿಂಗ ಮುಟ್ಟಿ ಲಿಂಗವಾಗಲಿಲ್ಲ. ಆದರೆ ನಮ್ಮ ಶರಣರು ಆ ಪರಶಿವ ತತ್ವದಲ್ಲಿ ಸಮರಸವಾಗಿ ಐಕ್ಯರೇ ಆದರು.
ಹೀಗಾಗಿ ಲಿಂಗಾಯತರ ಪರಿಯೇ ಬೇರೆ ಎಂಬುದನ್ನು ನಿಜಸುಖಿ ಶರಣ ಹಡಪದ ಅಪ್ಪಣ್ಣನವರು ಈ ವಚನದಲ್ಲಿ ಮಾರ್ಮಿಕವಾಗಿ ತಿಳಿಸಿದ್ದಾರೆ” ಎಂದು ವಚನವನ್ನು ಪರಿಚಯಿಸಿದರು.
ಪ್ರಾರಂಭದಲ್ಲಿ ಪ್ರೊ. ಗಾಯತ್ರಿ ಕಲ್ಯಾಣಿ ಹಾಗೂ ಶ್ರೀದೇವಿ ಶೇಖಾ ಅವರಿಂದ ಸಾಮೂಹಿಕ ವಚನ ಪ್ರಾರ್ಥನೆಯಾಯಿತು. ಪ್ರೊ. ಮಹದೇವಯ್ಯ ನೀಲಕಂಠಮಠ ಅವರು ಹಡಪದ ಅಪ್ಪಣ್ಣವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುರುಘೇಶ ಶೇಖಾ ಅವರು ಸ್ವಾಗತಿಸಿ ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ದಾನಪ್ಪ ಬಂಡಿ, ಬಸಲಿಂಗಯ್ಯ ಕಂಬಾಳಿಮಠ, ಮಹಾಲಿಂಗಪ್ಪ ಕರನಂದಿ, ಮಹಾಂತೇಶ ಸಿಂದಗಿ, ಕೃಷ್ಣಾಜಿ ಮಹೇಂದ್ರಕರ, ರಾಚಣ್ಣ ಕೆರೂರ, ರಾಚಪ್ಪ ಕಲಾದಗಿ, ಪಾಂಡಪ್ಪ ಕಳಸಾ, ಪುತ್ರಪ್ಪ ಬೀಳಗಿ, ರವಿ ಹಡಪದ, ಉಮೇಶ ಗಡೇದ, ಪರಶುರಾಮ ಹಡಪದ, ಸುರೇಖಾ ಗೆದ್ದಲಮರಿ, ದಾಕ್ಷಾಯಿಣಿ ತೆಗ್ಗಿ, ಲಲಿತಾ ನೀಲಕಂಠಮಠ, ಬಳಿಗೇರ ಮೊದಲಾದವರು ಹಾಗೂ ಹಡಪದ ಕಾಯಕದ ಸಮಾಜ ಬಾಂಧವರು ಉಪಸ್ಥಿತರಿದ್ದರು.
