ಪೂಜ್ಯ ಶರಣಬಸವ ದೇವರಿಂದ ಸಿದ್ದಲಿಂಗೇಶ್ವರ ಚರಿತಾಮೃತ ಪ್ರವಚನ ಶುರು

ಮುಂಡರಗಿ:

ವಿಜ್ಞಾನ ಮತ್ತು ತಂತ್ರಜ್ಞಾನದ ಈ ಯುಗದಲ್ಲಿ ಧರ್ಮದ ಪಾತ್ರ ಬಹುಮುಖ್ಯವಾಗಿದೆ. ಬೆರಳ ತುದಿಯಲ್ಲಿಯೇ ಜಗತ್ತನ್ನು ಕಾಣುವ ಈ ಕಾಲದಲ್ಲಿ ಎಲ್ಲವೂ ಧರ್ಮದಿಂದ ನಡೆದರೆ ಮಾತ್ರ ದೇಶದ ಅಭಿವೃದ್ಧಿ ಆಗುವುದರ ಜೊತೆಗೆ ಸಂಬಂಧಗಳು ಉಳಿಯಲು ಸಾಧ್ಯವಾಗುತ್ತದೆ ಎಂದು ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಹೇಳಿದರು.

ಅವರು ಇಲ್ಲಿಯ ತೋಂಟದಾರ್ಯ ಶಾಖಾಮಠದಲ್ಲಿ ಆಷಾಢ ಮಾಸದ ನಿಮಿತ್ಯ ಹಮ್ಮಿಕೊಂಡಿರುವ ಎಡೆಯೂರು ಶ್ರೀ ತೋಂಟದ ಸಿದ್ಧಲಿಂಗೇಶ್ವರ ಚರಿತಾಮೃತ ಪ್ರವಚನದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮೌಲ್ಯಭರಿತ ಶಿಕ್ಷಣದ ಅವಶ್ಯಕತೆ ಇಂದು ಬಹಳ ಇದೆ. ಮಠಮಾನ್ಯಗಳು ಮಕ್ಕಳಿಗೆ ಮತ್ತು ಜನಸಾಮಾನ್ಯರಿಗೆ ಸಂಸ್ಕಾರವನ್ನು ನೀಡುವುದರೊಂದಿಗೆ ಅವರ ಬದುಕಿನ ಪಥವನ್ನು ಮೌಲ್ಯದತ್ತ ಬದಲಿಸಬೇಕಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶರಣೆ ರತ್ನಾ ಮಹಾಲಿಂಗ ಯಾಳಗಿ ಮಾತನಾಡಿ, ಎಡೆಯೂರು ಸಿದ್ಧಲಿಂಗೇಶ್ವರರ ಚಿತ್ರ ಬಿಡಿಸಿದ್ದು ನಮ್ಮ ತಂದೆಯವರಾದ ಚೆಟ್ಟಿ ಅವರು ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತಿದೆ. ಇಂತಹ ಪುರಾಣ ಪ್ರವಚನಗಳು ನಮ್ಮ ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಮಹಾತ್ಮರ ಮತ್ತು ಶರಣರ ಜೀವನ ಚರಿತ್ರೆ ನಮಗೆಲ್ಲ ನೆಮ್ಮದಿಯ ಬದುಕಿಗೆ ದಾರಿತೋರುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ, ಮುಂಡರಗಿ ಬಿಜೆಪಿ ಮಂಡಲದ ಅಧ್ಯಕ್ಷ ಡಾ. ಕುಮಾರಸ್ವಾಮಿ ಹಿರೇಮಠ, ಕಪ್ಪತ ಹಿಲ್ಸ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ ಮುಂತಾದವರು ಮಾತನಾಡಿ, ಇಂದಿನ ಕಲುಷಿತ ವಾತಾವರಣ ಮತ್ತು ಕಲುಷಿತ ಮನಸ್ಸು ಶುದ್ಧವಾಗಬೇಕಾದರೆ ಮಠ-ಮಾನ್ಯಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಲಿಸುವ ಕಾರ್ಯ ಮಾಡಬೇಕು ಎಂದರು.

ಇವತ್ತು ನಮ್ಮ ಮನಸ್ಸುಗಳು ಕೆಟ್ಟ ಮಾತುಗಳನ್ನು ಹೆಚ್ಚಿಗೆ ನೆನಪಿಟ್ಟುಕೊಳ್ಳುತ್ತದೆ. ಆದರೆ ಒಳ್ಳೆಯ ನುಡಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳದೆ ಇರುವುದರಿಂದ ಮನಸ್ಸುಗಳು ಮಲೀನವಾಗಿವೆ. ಮನಸ್ಸು ಶುದ್ದಿಕರಣಕ್ಕೆ ಇಂತಹ ಪ್ರವಚನಗಳು ದಾರಿದೀಪವಾಗುತ್ತವೆ ಎಂದರು.

ಅಧ್ಯಕ್ಷತೆಯನ್ನು ಕಸ್ತೂರೆಮ್ಮ ನಾವಿ ವಹಿಸಿದ್ದರು.

ಬಸವಬೆಳವಿಯ ಶ್ರೀ ಚರಮೂರ್ತಿ ಚರಂತೇಶ್ವರ ವಿರಕ್ತಮಠದ ಪೂಜ್ಯ ಶರಣಬಸವ ದೇವರು ಎಡೆಯೂರು ಶ್ರೀ ತೋಂಟದ ಸಿದ್ಧಲಿಂಗೇಶ್ವರ ಚರಿತಾಮೃತ ಪ್ರವಚನವನ್ನು ಪ್ರಾರಂಭಿಸಿದರು.

ಅವರಿಗೆ ಸಂಗೀತ ಸಾಥನ್ನು ಕಲ್ಯಾಣಕುಮಾರ ಹಾರಕೂಡ ಗವಾಯಿಗಳು, ತಬಲಾವಾದಕರಾಗಿ ರಮೇಶ ಕಟ್ಟಿಸಂಗಾವಿ ಮತ್ತು ವಾಯೋಲಿನ ವಾದಕರಾಗಿ ಷಣ್ಮುಖಯ್ಯ ಹಿರೇಮಠ ಕಾರ್ಯ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಇಓ ವಿಜಯಕುಮಾರ ಬೆಣ್ಣಿ, ಡಾ. ವೀರಣ್ಣ ಮಡಿವಾಳರ ಮತ್ತಿತರರನ್ಧು ಸನ್ಮಾನಿಸಲಾಯಿತು.

ವೇದಿಕೆಯ ಮೇಲೆ ಮಾಜಿ ಸಚಿವ ಎಸ್.ಎಸ್. ಪಾಟೀಲ, ಆಯ್.ಎಸ್. ಪೂಜಾರ, ಬಸಯ್ಯ ಗಿಂಡಿಮಠ, ಶಿವಕುಮಾರ ಬೆಟಗೇರಿ, ಸುರೇಶ ಬಣಗಾರ, ಶರಣಪ್ಪ ಕುಬಸದ, ಎಸ್.ಎಸ್. ಗಡ್ಡದ, ವಿಶ್ವನಾಥ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ಬಂಗಲೆ ಮುಂತಾದವರಿದ್ದರು.

ಮಂಜುನಾಥ ಮೇಗಲಮನಿ, ಬಸವರಾಜ ಹೂಗಾರ, ಅಶೋಕ ಅಣ್ಣಿಗೇರಿ ಅವರು ದಾಸೋಹ ಸೇವೆಯನ್ನು ವಹಿಸಿದ್ದರು. ಪ್ರಾರಂಭದಲ್ಲಿ ಪ್ರವಚನ ಸಮಿತಿಯ ಅಧ್ಯಕ್ಷ ಸಿ.ಕೆ. ಗಣಪ್ಪನವರ ಸ್ವಾಗತಿಸಿ, ಪ್ರಾಸ್ತಾವಿಸಿದರು. ಕೊಟ್ರೇಶ ಅಂಗಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *