ರಾಯಚೂರು:
ನಗರದ ಬಸವ ಕೇಂದ್ರದಲ್ಲಿ ಡಾ. ಜಯದೇವಿತಾಯಿ ಲಿಗಾಡೆ ಅವರ ಸ್ಮರಣೋತ್ಸವವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರದ ಉಪಾಧ್ಯಕ್ಷರಾದ ಚನ್ನಬಸವ ಇಂಜಿನಿಯರ್ ಮಾತನಾಡುತ್ತಾ, ಜಯದೇವಿತಾಯಿ ಲಿಗಾಡೆ ಎಂದರೆ ನೆನಪಾಗುವುದೇ ಗಡಿನಾಡ ಕನ್ನಡ ಪ್ರೇಮ, ದಾಸೋಹ ಸಂಸ್ಕೃತಿ, ಬಸವಾದಿ ಶರಣರ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಅವರ ಅಪಾರ ಕಾರ್ಯ.
ಲಿಗಾಡೆಯವರ ಮನೆತನವೇ ದಾಸೋಹ ಸಂಸ್ಕೃತಿಯದು. ಸಾಹಿತಿಗಳಿಗೆ, ಹೋರಾಟಗಾರರಿಗೆ, ಬಡ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ಹಾಗೂ ಆಶ್ರಯದ ತಾಣವಾಗಿತ್ತು. ವಿಶೇಷವೆಂದರೆ ಜಯದೇವಿ ತಾಯಿಯವರು ಓದಿದ್ದು ಮರಾಠಿ ಭಾಷೆಯಲ್ಲಿ 4ನೇ ತರಗತಿಯವರೆಗೆ.
ಮದುವೆಯ ತರುವಾಯ ಅಪಾರ ಕನ್ನಡ ಭಾಷಾ ಪ್ರೇಮಿಗಳಾದ ಅವರು ಕನ್ನಡ ಭಾಷೆ, ಲಿಪಿ ಮತ್ತು ವಚನ ಸಾಹಿತ್ಯವನ್ನು ಅಧ್ಯಯನ ಮಾಡಿ ಶಿವಯೋಗಿ ಸಿದ್ದರಾಮೇಶ್ವರರ ಜೀವನ ಸಾಧನೆ ಮತ್ತು ಮಹತ್ವ ಕುರಿತು ರಚಿಸಿದ “ಶ್ರೀ ಸಿದ್ಧರಾಮ ಪುರಾಣ” ಮಹಾಕಾವ್ಯ.
ಈ ಕಾವ್ಯವು ಕನ್ನಡ ಸಾಹಿತ್ಯ ಲೋಕದ ರತ್ನ, ಸಾಹಿತಿ ಜಿ.ಪಿ. ರಾಜರತ್ನಂ ಅವರು ಅತ್ತುನ್ನತ ಮಹಾ ಕಾವ್ಯವೆಂದು ಕೊಂಡಾಡಿದ್ದಾರೆ. ಈ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಪ್ರಶಸ್ತಿ, ದೇವರಾಜ್ ಬಹದ್ದೂರ್ ಪ್ರಶಸ್ತಿ ಲಭಿಸಿದವು.
ಅವರು ಬರೆದ ತಾರಕ ತಂಬೂರಿ, ಜಯಗೀತೆ ಮತ್ತು ಸಾವಿರ ಪದಗಳು ಮುಂತಾದ ಕಾವ್ಯ ಸಂಕಲನಗಳನ್ನು ತ್ರಿಪದಿ ಛಂದಸ್ಸಿನಲ್ಲಿ ರಚಿಸಿದರು. “ಹಿಗ್ಗುತ್ತಿದೆ ವಿಶ್ವ” ಕವನ 14 ಭಾಷೆಗಳಿಗೆ ಅನುವಾದಗೊಂಡು ವಿಶ್ವದ ಗಮನ ಸೆಳೆದಿರುವುದು ವಿಶೇಷ.
ಮಹಾರಾಷ್ಟ್ರ ಸರಕಾರವು ಕನ್ನಡ ಶಾಲೆಗಳನ್ನು ಮುಚ್ಚಿ ಹಾಕಲು ನಿರ್ಧರಿಸಿದಾಗ 400 ಶಿಕ್ಷಕರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ವೇತನ ನೀಡಿ, ನೂರಾರು ಕನ್ನಡ ಶಾಲೆಗಳಿಗೆ ಜೀವ ತುಂಬಿದರು. ಸೊಲ್ಲಾಪುರ ಕರ್ನಾಟಕಕ್ಕೆ ಸೇರಿಸಬೇಕೆಂದು ಪ್ರತಿಪಾದಿಸಿ ಅಂದಿನ ಪ್ರಧಾನಿ ಜವಾಹರಲಾಲ ನೆಹರು ಅವರಿಗೆ ತಮ್ಮ ರಕ್ತದಲ್ಲೇ ಪತ್ರ ಬರೆದು ಕನ್ನಡದ ಕಿಚ್ಚನ್ನು ಪ್ರದರ್ಶಿಸಿದ ದಿಟ್ಟ ಮಹಿಳೆ.

1974ರಲ್ಲಿ ಮಂಡ್ಯದಲ್ಲಿ ನಡೆದ 48ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಮಹಿಳೆ. ಸೊಲ್ಲಾಪುರವು ಮಹಾರಾಷ್ಟ್ರಕ್ಕೆ ಸೇರಿದ ನಂತರ ಬಸವಣ್ಣನವರ ಕಾರ್ಯಕ್ಷೇತ್ರವಾದ ಬಸವಕಲ್ಯಾಣಕ್ಕೆ ಬಂದು ನೆಲೆಸಿ, ಬಸವನ ಸೇವೆ ಮಾಡುತ್ತಾ ಜುಲೈ 24, 1986ರಂದು ಲಿಂಗೈಕ್ಯರಾದರು ಎಂದರು.
ವಾರದ ವಿಶ್ಲೇಷಣೆಗಾಗಿ ಕೊಟ್ಟ ವಚನ’ ಭಕ್ತಂಗೆ ಬಡತನವುಂಟೆ?……….. ಕುರಿತು ರಂಗಪ್ಪ ಮ್ಯಾದಾರ, ಮಾನ್ವಿ ಅವರು ಮಾತನಾಡುತ್ತಾ, ನಮ್ಮ ಅಂತರಂಗದೊಳಗೆ ಹುದುಗಿರುವ ಭಕ್ತಿಯ ನಿಧಿಯ ಕುರಿತು ತಿಳಿದಾತನೇ ಸದಾ ಸಿರಿವಂತ. ಅಂತವರು ಸದಾ ಹಸನ್ಮುಖಿಯಾಗಿ, ಪರೋಪಕಾರಿಯಾಗಿ ನೆಮ್ಮದಿಯಿಂದ ಜೀವನ ಸಾಗಿಸುತ್ತಾರೆಂದರು.
ಇದೇ ವಚನದ ಮೇಲೆ ಮುಕ್ತಾಯಕ್ಕ ನರಕಲದಿನ್ನಿ ಅವರು ಮಾತನಾಡುತ್ತಾ, ಬಡತನ ಎನ್ನುವುದು ಯಾರಿಗೆ? ನಿತ್ಯನಿಗೆ ಅಂದರೆ ಶಿವನಿಗೆ ಮರಣವಿದೆಯಾ? ಭಕ್ತನು ಭಗವಂತನನ್ನು ನಂಬಿ ಬಾಳುವಂತವನು. ಶಿವನು ಮಹಾದಾನಿ. ಅವನು ಅಂತರಂಗದಲ್ಲಿ, ಬಹಿರಂಗದಲ್ಲಿ ಸಿರಿವಂತರು. ಅವರು ಭಕ್ತಿಯ ಸಿರಿವಂತರು, ಜ್ಞಾನದ ಸಿರಿವಂತರು, ಶಿವಯೋಗದ ಸಿರಿವಂತರು, ಅಂತವರು ಎಲ್ಲದರಲ್ಲೂ ಸಿರಿವಂತರೆಂದು ಶರಣಿ ಲಕ್ಕಮ್ಮನವರ ವಚನದ ಒಳಾರ್ಥವಾಗಿದೆ ಎಂದರು.
ಡಾ. ಪ್ರಿಯಾಂಕಾ ಗದ್ವಾಲ ಅವರು ಮಕ್ಕಳಿಗೆ ವಚನ ಪಾಠ ನಡೆಸಿಕೊಟ್ಟರು. ವಚನ ಗಾಯನವನ್ನು ನಾಗೇಶ್ವರಪ್ಪ ಎಎಸ್ಐ ಮಾಡಿದರು. ಸಾಮೂಹಿಕ ಬಸವ ಪ್ರಾರ್ಥನೆಯನ್ನು ತಾಯಮ್ಮ ಯಲ್ಲನಗೌಡ ಮಾಡಿಸಿದರು. ಸರೋಜಮ್ಮ ಮಾಲಿಪಾಟೀಲ ಸ್ವಾಗತಿಸಿದರು, ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ವೆಂಕಣ್ಣ ಆಶಾಪುರ ಸೇರಿದಂತೆ ಕಾರ್ಯಕ್ರಮದಲ್ಲಿ ಹಲವಾರು ಶರಣ ಶರಣೆಯರು ಪಾಲ್ಗೊಂಡಿದ್ದರು.
