ಕಾಯಕ ಮತ್ತು ದಾಸೋಹ ಪರಂಪರೆ ಇಂದಿಗೂ ಜೀವಂತ: ಡಾ. ರವೀಂದ್ರನಾಥ

ಕೂಡ್ಲಿಗಿ:

ಬಸವಾದಿ ಶರಣರು ಪ್ರತಿಪಾದಿಸಿದ ‘ಕಾಯಕವೇ ಕೈಲಾಸ’ ಹಾಗೂ ‘ದಾಸೋಹವೇ ಧರ್ಮ’ ಎಂಬ ತತ್ವಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದ್ದು, ಅವುಗಳ ಅನುಷ್ಠಾನದಿಂದ ಸಮಾನತೆ ಮತ್ತು ಸೇವಾ ಮನೋಭಾವವನ್ನು ಬೆಳೆಸಬಹುದು ಎಂದು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ರವೀಂದ್ರನಾಥ ಹೇಳಿದರು.

ಅವರು ಕಾನಾಮಡಗು ಶರಣಬಸವೇಶ್ವರ ದಾಸೋಹ ಮಠದ ಆವರಣದಲ್ಲಿ ಆಯೋಜಿಸಿದ್ದ ದಾಸೋಹ ಪೌರ್ಣಿಮೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಶರಣರ ಕಾಯಕ ಮತ್ತು ದಾಸೋಹ ಪರಂಪರೆ ಇತಿಹಾಸದ ಪುಟಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಂದಿಗೂ ಅನೇಕ ಮಠಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ಸಮಾಜ ಸೇವಾ ಸಂಘಟನೆಗಳು ಅನ್ನದಾಸೋಹ, ಶಿಕ್ಷಣ, ಆರೋಗ್ಯ ಸೇವೆ ಹಾಗೂ ಮಾನವೀಯ ಕಾರ್ಯಗಳ ಮೂಲಕ ಈ ಮೌಲ್ಯಗಳನ್ನು ಜೀವಂತವಾಗಿರಿಸಿಕೊಂಡಿವೆ ಎಂದು ಅವರು ತಿಳಿಸಿದರು.

ಶ್ರಮಕ್ಕೆ ಗೌರವ ನೀಡುವ ಮನೋಭಾವವೇ ಕಾಯಕದ ಸಾರವಾಗಿದ್ದು, ದುಡಿದು ಸಂಪಾದಿಸಿದ ಸಂಪತ್ತನ್ನು ಸಮಾಜದ ಒಳಿತಿಗಾಗಿ ಹಂಚಿಕೊಳ್ಳುವುದೇ ದಾಸೋಹದ ನಿಜವಾದ ಅರ್ಥವಾಗಿದೆ.

ಇಂದಿನ ಯುವಜನತೆ ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಆಳವಡಿಸಿಕೊಂಡು ಪ್ರಾಮಾಣಿಕ ಶ್ರಮ, ಸಾಮಾಜಿಕ ಕಾಳಜಿ ಹಾಗೂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಮಾಜದಲ್ಲಿ ಜಾತಿ, ಮತ, ಪಂಥಗಳ ಭೇದವಿಲ್ಲದೆ ಸಮಾನತೆ ಮತ್ತು ಸಹಬಾಳ್ವೆಯನ್ನು ಬೆಳೆಸುವ ಶಕ್ತಿ ಬಸವ ತತ್ವಗಳಲ್ಲಿದ್ದು, ಕಾಯಕ ಮತ್ತು ದಾಸೋಹ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಮಾತ್ರ ಆರೋಗ್ಯಕರ ಹಾಗೂ ಸಮಾನತೆಯ ಸಮಾಜ ಕಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಆರಂಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎನ್.ಎಂ. ರವಿಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಪೂಜ್ಯ ಯೋಗಿರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ದಾಸೋಹ ಪೌರ್ಣಿಮೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾ.ಮ. ಬಮಡಿ ಶರಣಾರ್ಯರು (ಧರ್ಮಾಧಿಕಾರಿಗಳು) ವಹಿಸಿದ್ದರು.

ಹಗರಿಬೊಮ್ಮನಹಳ್ಳಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಎಂ. ಮಂಜುನಾಥ ಕಾರ್ಯಕ್ರಮದ ಮಹತ್ವ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ನೀರಗಂಟಿ ಶರಣಪ್ಪ, ಚನ್ನವೀರ ಸ್ವಾಮಿ, ಎಚ್.ಎಂ.ಬಿ. ಗುರುಮೂರ್ತಿ, ಕೆ. ಸುಭಾಷಚಂದ್ರ, ಆಲೂರು ಮಲ್ಲಿಕಾರ್ಜುನ, ಸುರೇಶ, ಸೋಮಶೇಖರಪ್ಪ, ತಿಪ್ಪೇಸ್ವಾಮಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ತಳವಾ‌ರ ಶರಣಪ್ಪ, ಶರಣ ಸಾಹಿತ್ಯಾಸಕ್ತರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ತಳವಾರ ಶರಣಪ್ಪ ಸ್ವಾಗತಿಸಿದರು. ದಿವಾಕರ ನಾರಾಯಣ ಕಾರ್ಯಕ್ರಮ ನಿರೂಪಿಸಿದರು. ನುಂಕೇಶ ಓಬಶೆಟ್ಟಿಹಳ್ಳಿ ಅವರ ತಂಡದಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *