ಹೊಸದುರ್ಗ ಗ್ರಾಮಗಳಲ್ಲಿ ಬಸವತತ್ವ ಬಿತ್ತುತ್ತಿರುವ ಮಾಸಿಕ ಕಾರ್ಯಕ್ರಮ

‘ಬಸವ ಭಾರತಕ್ಕಾಗಿ ಬಸವ ಚಿಂತನೆ’

ಹೊಸದುರ್ಗ:

ತಾಲೂಕಿನ ಮೈಲಾರಪುರ ಗ್ರಾಮದಲ್ಲಿ ಶನಿವಾರ ವಿಶ್ವಗುರು ಬಸವಣ್ಣನವರ ಸಮಾನತೆ, ಮಾನವೀಯತೆ ಹಾಗೂ ವೈಚಾರಿಕ ಚಿಂತನೆಗಳನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ “ಬಸವ ಭಾರತಕ್ಕಾಗಿ ಬಸವ ಚಿಂತನೆ” ಮಾಸಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಹೊಳಲ್ಕೆರೆ ಒಂಟಿಕಂಬ ಮಠದ ಪೂಜ್ಯ ತಿಪ್ಪೇರುದ್ರ ಸ್ವಾಮೀಜಿ ಅವರು ಆಶೀರ್ವಚನ ನೀಡುತ್ತಾ, ಇಷ್ಟಲಿಂಗ ಧಾರಣೆಯು ವಿಶ್ವಗುರು ಬಸವಣ್ಣನವರು ಸಮಾನತೆಯ ಸಂದೇಶವನ್ನು ಸಮಾಜದಲ್ಲಿ ನೆಲೆಗೊಳಿಸುವ ಉದ್ದೇಶದಿಂದ ನೀಡಿದ ಮಹತ್ವದ ಪರಿಕಲ್ಪನೆಯಾಗಿದೆ.

ಇಷ್ಟಲಿಂಗ ಯಾವುದೇ ಜಾತಿಗೆ ಸೀಮಿತವಾಗಿರದೆ, ಬಸವತತ್ವ ಹಾಗೂ ಲಿಂಗಾಯತ ಧರ್ಮದ ಮೌಲ್ಯಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರತಿಯೊಬ್ಬರೂ ಸದ್ಗುರುಗಳಿಂದ ಇಷ್ಟಲಿಂಗ ಧಾರಣೆ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಲಿಂಗಾಯತವು ಜಾತಿಯಲ್ಲ, ಅದು ಸಮಾನತೆ, ಅನುಭವ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಧರ್ಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜೆ. ಮಲ್ಲೇಶ (ರೇಷ್ಮೆರಾಜ) ಅವರು, ವಿಶ್ವಗುರು ಬಸವಣ್ಣನವರು ಜಾತ್ಯತೀತ, ಸಮಾನತೆ ಆಧಾರಿತ ಹಾಗೂ ವೈಚಾರಿಕ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ.

ಅವರ ಆದರ್ಶಗಳನ್ನು ಆಧುನಿಕ ಸಮಾಜದಲ್ಲಿ ಸಾಕಾರಗೊಳಿಸುವ ಉದ್ದೇಶದಿಂದ “ಬಸವ ಭಾರತ” ಪರಿಕಲ್ಪನೆಯನ್ನು ರೂಪಿಸಲಾಗಿದ್ದು, ಬಸವಾದಿ ಶರಣರ ತತ್ವಗಳು ಹಾಗೂ ವಚನ ಸಾಹಿತ್ಯದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಗ್ರಾಮಮಟ್ಟದಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದ್ದ ಜೆ. ಶಿವಣ್ಣ ಶಿಕ್ಷಕರು, ಅವರು ಬಸವ ಭಾರತ ಪರಿಕಲ್ಪನೆ ಕುರಿತು ಉಪನ್ಯಾಸ ನೀಡಿ, ಬಸವಣ್ಣನವರ ತತ್ವಗಳು ಇಂದಿನ ಸಮಾಜಕ್ಕೆ ಮಾರ್ಗದರ್ಶಿಯಾಗಿದ್ದು, ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ವೈಚಾರಿಕತೆಯ ಆಧಾರದ ಮೇಲೆ ರಾಷ್ಟ್ರ ನಿರ್ಮಾಣವಾಗಬೇಕೆಂದು ಕರೆ ನೀಡಿದರು.

ಅಕ್ಕಮಹಾದೇವಿ ಮಾತಾಜಿಯವರು ಆಶೀರ್ವಚನ ನೀಡಿ, ವಿಶ್ವಗುರು ಬಸವಣ್ಣನವರ ವಿಚಾರಧಾರೆಗಳು ವಿಶ್ವದಾದ್ಯಂತ ವ್ಯಾಪಿಸಬೇಕಾದರೆ ಗ್ರಾಮ ಮಟ್ಟದಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಜಿ. ಚನ್ನಬಸಪ್ಪ ವಹಿಸಿದ್ದರು. ಎಂ.ಎಸ್. ರವಿಕುಮಾರ ಸ್ವಾಗತಿಸಿದರು.

ವೇದಿಕೆಯಲ್ಲಿ ಎನ್.ಸಿ. ಚಂದ್ರಶೇಖರಪ್ಪ, ಪರಮೇಶ್ವರಪ್ಪ, ಆರ್. ನಾಗರಾಜು, ಆದ್ರಿಕಟ್ಟೆ ಬಸವರಾಜಪ್ಪ, ಶರಣಪ್ಪ ನಾಯಿಗೆರೆ, ಎಂ. ರಂಗನಾಥ ನಾಯಿಗೆರೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಹೊಸದುರ್ಗ, ನಾಯಿಗೆರೆ, ಕಾಚಾಪುರ, ಹಾರೋಗೊಂಡನಹಳ್ಳಿ ಹಾಗೂ ಮೈಲಾರಪುರ ಗ್ರಾಮಗಳ ಬಸವಾಭಿಮಾನಿಗಳು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *