35 ವರ್ಷಗಳಿಂದ ಕೂಡಲಸಂಗಮ ಮಂಡಳಿಯ ಲೆಕ್ಕ ಪರಿಶೋಧನೆ ಮಾಡಿಸದೇ ಇರುವುದಕ್ಕೆ ಸಚಿವರ ತರಾಟೆ
ಬೆಂಗಳೂರು:
ಬಸವಕಲ್ಯಾಣದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ‘ಅನುಭವ ಮಂಟಪ’ದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿರಿ. ಮತ್ತೆ ಕಾಲಾವಕಾಶ ಕೇಳಬೇಡಿ, ಅದು ಸರಿಯಲ್ಲ. ಶೀಘ್ರ ಪೂರ್ಣಗೊಳಿಸಿ ಜನಾರ್ಪಣೆಗೆ ಕಟ್ಟಡ ಸಿದ್ಧಪಡಿಸಬೇಕು’ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಕಂದಾಯ ಸಚಿವ ಜಿ. ಪರಮೇಶ್ವರ ಅವರು ನಿರ್ದೇಶನ ನೀಡಿದರು.
ಈಚೆಗೆ ಕಂದಾಯ ಇಲಾಖೆಯ ವ್ಯಾಪ್ತಿಗೆ ಸೇರುವ ವಿವಿಧ ಅಭಿವೃದ್ಧಿ ಪ್ರಾಧಿಕಾರಗಳ ಪ್ರಗತಿ ಪರಿಶೀಲನೆಯನ್ನು ಅವರು ನಡೆಸಿ, ಮಾತನಾಡಿದರು.
ಬಸವಕಲ್ಯಾಣ ಮಂಡಳಿಯು 2005ರಲ್ಲಿ ಆಸ್ತಿತ್ವಕ್ಕೆ ಬಂದಿದ್ದರೂ, 2023ರವರೆಗೆ ಯಾವುದೇ ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗಿಲ್ಲ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹744 ಕೋಟಿ ಮಂಜೂರು ಮಾಡಿ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಅದರಲ್ಲಿ ₹480 ಕೋಟಿ ಖರ್ಚು ಮಾಡಲಾಗಿದೆ. 17 ಸ್ಮಾರಕಗಳ ಕಾಮಗಾರಿ ಶೀಘ್ರದಲ್ಲಿ ಮುಗಿಸಬೇಕು’ ಎಂದವರು ಸೂಚಿಸಿದರು.
35 ವರ್ಷಗಳಿಂದ ಕೂಡಲಸಂಗಮ ಮಂಡಳಿಯ ಲೆಕ್ಕ ಪರಿಶೋಧನೆ ಮಾಡಿಸದೇ ಇರುವುದಕ್ಕೆ ತರಾಟೆಗೆ ತೆಗೆದುಕೊಂಡ ಸಚಿವರು, ‘ಕಾಮಗಾರಿಗಳಿಗೆ ಸಂಬಂಧಿಸಿದಂತೆ ಯೋಜನೆ ಸಿದ್ಧಪಡಿಸಿದ ಬಳಿಕ ಮೂಲ ಅಂದಾಜು ವೆಚ್ಚದಲ್ಲಿ ಪರಿಷ್ಕರಣೆಯಾದರೆ ಸಮರ್ಥನೆ ಸಹಿತ ಮಂಡಳಿಯಿಂದ ಅನುಮೋದನೆ ಪಡೆಯಬೇಕು. ನಂತರ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದವರು ತಿಳಿಸಿದರು.
“ಚಿಕ್ಕಸಂಗಮದಲ್ಲಿ ಕಲ್ಯಾಣ ಮಂಟಪ, ವೇದ ಪಾಠಶಾಲೆ ಮತ್ತಿತರ ಅಭಿವೃದ್ಧಿಗೆ ₹24.98 ಕೋಟಿ ಅನುದಾನ ನೀಡಬೇಕೆಂಬ ಬೇಡಿಕೆ ಬಗ್ಗೆ ಕ್ರಮ ವಹಿಸಲಾಗುವುದು.
ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ ಪರಮೇಶ್ವರ, ಮುಂದೆ ಕೈಗೊಳ್ಳಬೇಕಿರುವ ಅಭಿವೃದ್ಧಿ ಕೆಲಸಗಳ ಬಗ್ಗೆಯೂ ಪ್ರಸ್ತಾವ ಸಲ್ಲಿಸಬೇಕು ಎಂದು ಸೂಚಿಸಿದರು.
ಸಚಿವರಾದ ಎಂ.ಬಿ. ಪಾಟೀಲ, ಶಾಸಕರಾದ ಶಿವಾನಂದ ಪಾಟೀಲ. ಬಸವರಾಜ ಶಿವಣ್ಣನವರ, ಯಾಸೀರಖಾನ್ ಪಠಾಣ, ಬಾಬಾಸಾಹೇಬ ಪಾಟೀಲ, ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಟಾರಿಯಾ, ಅಭಿವೃದ್ಧಿ ಪ್ರಾಧಿಕಾರಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
