ಬಸವ ಶಕ್ತಿ: ಆಗಸ್ಟ್ 8, 9 ಗದಗದಲ್ಲಿ ಎರಡನೇ ಶಿಬಿರ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಬಸವ ಸಂಘಟನೆಗಳ ರಾಜಕೀಯ ಪ್ರಜ್ಞೆ ಹಾಗೂ ಪ್ರಭಾವವನ್ನು ಪಕ್ಷಾತೀತವಾಗಿ ಬೆಳೆಸಲು ಬಸವಶಕ್ತಿ ಶಿಬಿರ ಹೊಸಪೇಟೆಯ ನಂತರ ಗದಗದಲ್ಲಿ ನಡೆಯಲಿದೆ.

ಆಗಸ್ಟ್ 8, 9 ಗದಗ ಜಿಲ್ಲೆಯ ಹಲವಾರು ಬಸವ ಸಂಘಟನೆಗಳ ಸಹಯೋಗದಲ್ಲಿ ಶಿಬಿರ ನಡೆಯಲಿದೆ.

ಜಾಗತಿಕ ಲಿಂಗಾಯತ ಮಹಾಸಭಾ, ಬಸವದಳ, ಲಿಂಗಾಯತ ಪ್ರಗತಿಶೀಲ ಸಂಘ, ಬಸವಕೇಂದ್ರ, ಶರಣ ಸಾಹಿತ್ಯ ಪರಿಷತ್ತು ಮುಂತಾದ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಎರಡು ದಿನಗಳ ಶಿಬಿರವನ್ನು ಆಯೋಜಿಸಲಾಗಿದೆ.

ಅಶೋಕ ಬರಗುಂಡಿ, ಚಂದ್ರಶೇಖರ ವಸ್ತ್ರದ, ಶಶಿಧರ ತೋಡ್ಕರ್, ಬಸು ಸೂಳಿಭಾವಿ, ಚಿಂತಾಮಣಿ ಸಿಂಧಗಿ, ರಾಜಶೇಖರ ನಾರನಾಳ, ಶಾಂತಕುಮಾರ ಹರ್ಲಾಪುರ, ಏನ್ ಎಂ ಪವಾಡಿಗೌಡ್ರ, ಎ.ವೈ. ನವಲಗುಂದ, ಎಂ ಎಸ್ ಹಡಪದ, ಟಿ ಎಚ್ ಬಸವರಾಜ್, ಡಾ. ಅಕ್ಕಿ ಬಸವೇಶ, ಡಾ ಜಿ ಬಿ ಪಾಟೀಲ್,
ಬಿ.ಎ. ಕೆಂಚರಡ್ಡಿ, ಸಂಪನ್ಮೂಲ ವ್ಯಕ್ತಿಗಳಾಗಿ ಬರಲಿದ್ದಾರೆ.

ಹೊಸಪೇಟೆಯಿಂದ ಆರಂಭವಾಗುವ ಬಸವಶಕ್ತಿ ಶಿಬಿರಗಳು ರಾಜ್ಯಾದ್ಯಂತ ವಿವಿಧ ಜಿಲ್ಲೆ, ತಾಲೂಕುಗಳಲ್ಲಿ ನಡೆಯಲಿದೆ.

“ಬಸವಶಕ್ತಿ ಶಿಬಿರಗಳ ಹಿಂದೆ ಆರು ತಿಂಗಳ ಪರಿಶ್ರಮವಿದೆ. ವಿವಿಧ ಜಿಲ್ಲೆ ತಾಲೂಕುಗಳಲ್ಲಿ ನೂರಾರು ಬಸವ ಕಾರ್ಯಕರ್ತರ, ಚಿಂತಕರ ಜೊತೆ ಸಮಾಲೋಚಿಸಿ ಈ ಶಿಬಿರಗಳನ್ನು ರೂಪಿಸಿದ್ದೇವೆ,” ಎಂದು ಬಸವ ಮೀಡಿಯಾ ಟ್ರಸ್ಟಿನ ಟಿ. ಆರ್. ಚಂದ್ರಶೇಖರ್ ಹೇಳಿದರು.

“ಈ ಶಿಬಿರಗಳನ್ನು ಜಿಲ್ಲೆ, ತಾಲೂಕುಗಳಲ್ಲಿ ಆಯೋಜಿಸಲು ಮುಂದೆ ಬಂದಿರುವ ಬಸವ ಸಂಘಟನೆಗಳ ಪ್ರಮುಖರಿಗೆ, ಕಾರ್ಯಕರ್ತರಿಗೆ ನಮ್ಮ ಕೃತಜ್ಞತೆ ಸಲ್ಲಿಸುತ್ತೇವೆ. ಅವರಿಗೆ ಎಲ್ಲಾ ರೀತಿ ನೆರವಾಗಿ ನಾಡಿನ ಮೂಲೆ ಮೂಲೆಗಳಲ್ಲಿ ಬಸವ ಶಕ್ತಿ ಶಿಬಿರಗಳು ನಡೆಯುವಂತೆ ಮಾಡಲು ಬಸವಾಭಿಮಾನಿಗಳನ್ನು ಕೋರಿಕೊಳ್ಳುತ್ತೇವೆ,” ಎಂದು ತಿಳಿಸಿದರು.

ಬಸವ ಶಕ್ತಿ ಶಿಬಿರಗಳ ಬಗ್ಗೆ ಸಾಮಾನ್ಯವಾಗಿ ಕೇಳಿಬರುತ್ತಿರುವ ಕೆಲವು ಪ್ರಶ್ನೆಗಳನ್ನು ಉತ್ತರಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇವೆ.

1) ಬಸವ ಶಕ್ತಿ ಶಿಬಿರಗಳ ಉದ್ದೇಶವೇನು?

ಕಳೆದ ನಾಲ್ಕು ಐದು ವರ್ಷಗಳಿಂದ ಲಿಂಗಾಯತ ಧರ್ಮ, ಸಮಾಜದ ಮೇಲೆ ಸೈದ್ಧಾಂತಿಕ, ರಾಜಕೀಯ ದಾಳಿ ನಡೆಯುತ್ತಿದೆ.

ವಚನದರ್ಶನದಿಂದ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಗಳ ತನಕ ಹಲವಾರು ರೀತಿಯ ಗೋಚರ, ಅಗೋಚರ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ.

ಬಸವಣ್ಣನವರ ಹೆಸರಿಗೇ ‘ತಾಲಿಬಾನ್’ ಪದ ಜೋಡಿಸಿ ಅಪಪ್ರಚಾರ ಮಾಡಲಾಗುತ್ತಿದೆ. ಲಿಂಗಾಯತ ಸ್ವಾಮೀಜಿಗಳನ್ನು ಇಲ್ಲಿ ಪ್ರಕಟ ಮಾಡಲಾಗದ ಪದಗಳಿಂದ ದೂಷಿಸಲಾಗುತ್ತಿದೆ. ಲಿಂಗಾಯತರ ವಿರುದ್ಧ ಇತರ ಸಮುದಾಯಗಳನ್ನು ಎತ್ತಿ ಕಟ್ಟುವ ಪ್ರಚೋದನೆಗಳೂ ನಡೆಯುತ್ತಿವೆ.

ವಿಪರ್ಯಾಸವೆಂದರೆ ಲಿಂಗಾಯತ ಮತಗಳಿಂದ ಆಯ್ಕೆಯಾಗಿ ಬರುವ ಲಿಂಗಾಯತ ರಾಜಕಾರಣಿಗಳನ್ನೇ ಲಿಂಗಾಯತ ಸಮಾಜದ ವಿರುದ್ಧ ಬಳಸಿಕೊಳ್ಳಲಾಗುತ್ತಿದೆ.

ಬಸವ ಸಂಘಟನೆಗಳು ರಾಜಕೀಯ ಪ್ರಭಾವ, ಪ್ರಜ್ಞೆ ಮೂಡಿಸಿಕೊಂಡರೆ ಇವುಗಳನ್ನು ತಡೆಗಟ್ಟಲು ಸಾಧ್ಯ.

ನಮ್ಮ ವಿರುದ್ಧ ಕೆಲಸ ಮಾಡುತ್ತಿರುವ ಲಿಂಗಾಯತ ರಾಜಕಾರಣಿಗಳಿಗೆ ಸರಿಯಾದ ದಾರಿಯಲ್ಲಿ ಹೋಗುವಂತೆ ನಾವೂ ಒತ್ತಡ ಹಾಕುವ ಅಗತ್ಯ ಬಂದಿದೆ.

ಇದರಿಂದ ಮಾತ್ರ ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ರಾಜಕೀಯ ಬೆಂಬಲ ಪಡೆಯಲು ಸಾಧ್ಯ.

ಒಬ್ಬ ಮಾಜಿ ಮಂತ್ರಿ ‘ನಮ್ಮ ಮೇಲೆ ಮೇಲಿಂದ ಒತ್ತಡ ಬರುತ್ತದೆ, ಅದಕ್ಕೆ ನಾವು ಕನ್ನೇರಿ ಸ್ವಾಮಿ ಸಮಾವೇಶಕ್ಕೆ ಹಣ ಕೊಟ್ಟು, ಜನ ಸೇರಿಸಬೇಕಾಗುತ್ತದೆ,’ ಎಂದು ಇತ್ತೀಚಿಗೆ ಹೇಳಿದರು.

ಇಂತಹ ರಾಜಕಾರಣಿಗಳನ್ನು ಲಿಂಗಾಯತ ಧರ್ಮ, ಸಮಾಜದ ಪರವಾಗಿ ಯಾರೂ ಪ್ರಶ್ನಿಸುತ್ತಿಲ್ಲ. ಅಂತವರ ಮೇಲೆ ನಾವೂ ಒತ್ತಡ ತರುವ ಕೆಲಸವನ್ನು ನಾವು ಮಾಡಬೇಕು.

2) ಈ ಕೆಲಸವನ್ನು ಬಸವ ಸಂಘಟನೆಗಳೇ ಏಕೆ ಮಾಡಬೇಕು?

ಇಂದು ಜಿಲ್ಲಾ, ತಾಲೂಕು, ಗ್ರಾಮ ಮಟ್ಟದಲ್ಲಿ ನೂರಾರು ಬಸವ ಸಂಘಟನೆಗಳು, ಸಾವಿರಾರು ಬಸವ ಕಾರ್ಯಕರ್ತರು ಸಕ್ರಿಯವಾಗಿದ್ದಾರೆ.

ಇವರು ನಿರಂತರವಾಗಿ ಜನರ ಜೊತೆ ಧರ್ಮಕ್ಕಾಗಿ, ಸಮಾಜದ ಒಳಿತಿಗಾಗಿ ದುಡಿಯುತ್ತಿದ್ದಾರೆ. ಇವರಲ್ಲಿರುವ ಸಂಘಟನಾ ಸಾಮರ್ಥ್ಯವನ್ನೂ ನಾವು ಬಸವ ಸಂಸ್ಕೃತಿ ಅಭಿಯಾನದಂತಹ ಕಾರ್ಯಕ್ರಮಗಳಲ್ಲಿ ನೋಡಿದ್ದೇವೆ.

ಬಹುತೇಕವಾಗಿ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಗೆ ಸೀಮಿತವಾಗಿರುವ ಇವರಿಗೆ ರಾಜಕೀಯ ಚಿಂತನೆಯ ವೇದಿಕೆಯಾಗಿ ಬಸವ ಶಕ್ತಿ ಶಿಬಿರಗಳು ರೂಪುಗೊಂಡಿವೆ.

ಬಸವ ಸಂಘಟನೆಗಳು ಲಿಂಗಾಯತ ಧರ್ಮ, ಸಮಾಜದ ಸಂಘಟಿತ ಶಕ್ತಿ. ಇವರು ರಾಜಕೀಯದಲ್ಲಿ ಸಕ್ರಿಯವಾದರೆ ಮಾತ್ರ ನಮಗಿರುವ ರಾಜಕೀಯ ವಿರೋಧವನ್ನು ಬೆಂಬಲವಾಗಿ ಪರಿವರ್ತಿಸಲು ಸಾಧ್ಯ.

3) ಬಸವ ಸಂಘಟನೆಗಳು ಚುನಾವಣೆಯಲ್ಲಿ ಸ್ಪರ್ಧಿಸಬೇಕೇ?

ಯಾರನ್ನೂ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡುವುದು ಬಸವ ಶಕ್ತಿ ಶಿಬಿರಗಳ ಉದ್ದೇಶವಲ್ಲ.

ನಾವು ರಾಜಕೀಯ ಪಕ್ಷಗಳ, ರಾಜಕಾರಣಿಗಳ, ಸರಕಾರದ ಮೇಲೆ ಒಂದು ಒತ್ತಡ ಗುಂಪಾಗಿ (pressure group) ಕೆಲಸ ಮಾಡಬೇಕು. ಈ ಕೆಲಸ ಈಗಾಗಲೇ ನಡೆಯುತ್ತಿದೆ. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವುದು ನಮ್ಮ ಉದ್ದೇಶ.

4) ಬಸವ ಸಂಘಟನೆಗಳು ರಾಜಕಾರಣಿಗಳ ಮೇಲೆ ಒತ್ತಡ ತರಲು ಸಾಧ್ಯವೇ?

ಇಂದು ರಾಜಕೀಯ ಪೈಪೋಟಿ ಹೆಚ್ಚಿ ಬಹುತೇಕ ಕ್ಷೇತ್ರಗಳಲ್ಲಿ ಗೆಲುವಿನ ಅಂತರ ಕುಸಿದಿದೆ. ಇದರಿಂದ ಸಣ್ಣ ಪ್ರಮಾಣದ ಮತಗಳು ಕಳಚಿಕೊಂಡರೂ ರಾಜಕಾರಣಿಗಳಿಗೆ ಬಿಸಿ ಮುಟ್ಟುತ್ತದೆ.

ಆಯ್ದ ಕ್ಷೇತ್ರಗಳಲ್ಲಿ ಆಯ್ದ ಬೂತ್ ಗಳಲ್ಲಿ ಬಸವತತ್ವದ ಆಧಾರದ ಮೇಲೆ ಲಿಂಗಾಯತ ಮತಗಳನ್ನು ಕ್ರೋಡೀಕರಿಸುವ ಕೆಲಸವನ್ನು ಬಸವ ಸಂಘಟನೆಗಳು ಮಾಡಬೇಕು.

ಒಂದು ಕ್ಷೇತ್ರದಲ್ಲಿ 50,000 ಲಿಂಗಾಯತ ಮತಗಳಿದ್ದರೆ ಇಷ್ಟೂ ಮತಗಳ ತಿರುಗಿಸುವ ಅಗತ್ಯವಿಲ್ಲಾ. ಇದರಲ್ಲಿ ಒಂದು ಸಣ್ಣ ಪ್ರಮಾಣದ ಮತಗಳ ಮೇಲೆ ಪ್ರಭಾವ ಬೀರಿದರೆ ಸಾಕು ರಾಜಕಾರಣಿಗಳಿಗೆ ಬಿಸಿ ಮುಟ್ಟುತ್ತದೆ.

ಚುನಾವಣೆಗಳ ಹೊರತಾಗಿ, ಬೇರೆ ಸಮಯಗಳಲ್ಲಿಯೂ ಸರಕಾರ, ರಾಜಕಾರಣಿಗಳ ಮೇಲೆ ಒತ್ತಡ ತರುವ ಕೆಲಸ ಇನ್ನೂ ಪರಿಣಾಮಕಾರಿಯಾಗಿ ಮಾಡಬಹುದು. ಇವೆಲ್ಲಾ ಬಸವ ಶಕ್ತಿ ಶಿಬಿರಗಳಲ್ಲಿ ಚರ್ಚೆಯಾಗಲಿವೆ.

ಲಿಂಗಾಯತ ಧರ್ಮಕ್ಕೆ ವಿರುದ್ಧವಾಗಿರುವ ಕೆಲವು ರಾಜಕಾರಣಿಗಳ ಗೆಲುವಿನ ಅಂತರ

5) ಯಾವ ಯಾವ ವಿಷಯಗಳು ಬಸವ ಶಕ್ತಿ ಶಿಬಿರಗಳಲ್ಲಿ ಚರ್ಚೆಯಾಗಲಿವೆ.

ಲಿಂಗಾಯತರ ಮೇಲೆ ಸಾಂಸ್ಕೃತಿಕ, ರಾಜಕೀಯ ಆಕ್ರಮಣ
ಬಸವ ಸಂಘಟನೆಗಳಿಗೆ ರಾಜಕೀಯ ಪ್ರಭಾವ, ಪ್ರಜ್ಞೆ ಬೇಕೇ?
ಬಸವ ಸಂಘಟನೆಗಳು ಚುನಾವಣೆಗಳಲ್ಲಿ ಸಕ್ರಿಯವಾಗುವುದು ಹೇಗೆ?
ಚುನಾವಣೆ ಹೊರತಾಗಿ ಸರಕಾರ, ರಾಜಕಾರಣಿಗಳ ಮೇಲೆ ಒತ್ತಡ ತರುವುದು ಹೇಗೆ?
ಚುನಾವಣೆಯಲ್ಲಿ ಲಿಂಗಾಯತ ಧರ್ಮದ ಬಗ್ಗೆ ಅಭಿಪ್ರಾಯ ರೂಪಿಸುವುದು ಹೇಗೆ
ನಾಡು, ನುಡಿಗೆ ಲಿಂಗಾಯತ ರಾಜಕೀಯ ಸ್ಪಂದಿಸಲಿ
ಅನುಭವ ಮಂಟಪ ಜಾಗೃತಿ ಸಭೆ

6) ಬಸವ ಶಕ್ತಿ ಶಿಬಿರಗಳು ಯಾವ ಪಕ್ಷದ ಪರವಾಗಿವೆ?

ಬಸವ ಶಕ್ತಿ ಶಿಬಿರಗಳು ಯಾವುದೇ ಪಕ್ಷದ ಪರ ಅಥವಾ ವಿರುಧ್ಧವಾಗಿಲ್ಲ. ನಮಗೆ ಯಾವುದೇ ಪಕ್ಷ ಅಥವಾ ವ್ಯಕ್ತಿಯನ್ನು ಅಧಿಕಾರಕ್ಕೆ ತರುವ ಅಥವಾ ತೆಗೆಯುವ ಉದ್ದೇಶವಿಲ್ಲ.

ಬಸವ ಕಾರ್ಯಕರ್ತರು ಯಾವ ಯಾವ ಪಕ್ಷದಲ್ಲಿದ್ದಾರೋ ಅದೇ ಪಕ್ಷಗಳಲ್ಲಿ ಗಟ್ಟಿಯಾಗಬೇಕು. ಅವರಿರುವ ಪಕ್ಷಗಳಲ್ಲಿಯೇ ಬಸವ ದ್ರೋಹದ ಕೆಲಸಕ್ಕೆ ಕಡಿವಾಣ ಹಾಕಬೇಕು, ಬಸವ ತತ್ವ ಗಟ್ಟಿಗೊಳಿಸಬೇಕು. ಅಷ್ಟು ಮಾತ್ರ ನಮ್ಮ ಉದ್ದೇಶ.

ಒಟ್ಟಾರೆ ಎಲ್ಲಾ ಪಕ್ಷಗಳಲ್ಲಿಯೂ ಬಸವ ಕಾರ್ಯಕರ್ತರ ಪ್ರಭಾವ ಹೆಚ್ಚಿಸುವುದು ನಮ್ಮ ಉದ್ದೇಶ.

7) ನಾನೂ ಶಿಬಿರದಲ್ಲಿ ಭಾಗವಹಿಸಬಹುದೇ?

ಬಸವ ಶಕ್ತಿ ಶಿಬಿರಗಳಲ್ಲಿ ಆಯ್ದ ವ್ಯಕ್ತಿಗಳಿಗೆ ಮಾತ್ರ ಭಾಗವಹಿಸಲು ಅಹ್ವಾನ ನೀಡಲಾಗಿದೆ.

ಶಿಬಿರಗಳಲ್ಲಿ ಚರ್ಚೆ, ಸಂವಾದ, ವಿಚಾರ ವಿನಿಮಯಕ್ಕೆ ಆದ್ಯತೆ ನೀಡಲಾಗಿದೆ. ಆದ್ದರಿಂದ ಶಿಬಿರಾರ್ಥಿಗಳ ಸಂಖ್ಯೆಯನ್ನು ಸೀಮಿತಗೊಳಿಸುವುದು ಅನಿವಾರ್ಯವಾಗಿದೆ.

ಮುಂದೆ ಬೇರೆ ಬೇರೆ ಊರುಗಳಲ್ಲಿ ಬಸವ ಶಕ್ತಿ ಶಿಬಿರಗಳನ್ನು ಆಯೋಜಿಸುವ ಆಸಕ್ತಿ, ಸಾಮರ್ಥ್ಯ, ಚುನಾವಣೆ ಸಮಯದಲ್ಲಿ ಸಕ್ರಿಯವಾಗಿ ದುಡಿಯಲು ಆಸಕ್ತಿ ಇರುವವರಿಗೆ ಆದ್ಯತೆ ನೀಡಲಾಗಿದೆ.

ನಿಮಗೆ ಭಾಗವಹಿಸಲು ಆಸಕ್ತಿಯಿದ್ದರೆ ಸ್ಥಳೀಯ ಆಯೋಜಕರನ್ನು ದಯವಿಟ್ಟು ಸಂಪರ್ಕಿಸಿ.

ಬಸವ ಶಕ್ತಿ ಶಿಬಿರಗಳ ವಿಷಯಗಳನ್ನೇ ಗೂಗಲ್ ಮೀಟುಗಳ ಮೂಲಕವೂ ಚರ್ಚಿಸಲಾಗುವುದು. ಆಗ ಎಲ್ಲರೂ ಭಾಗವಹಿಸಬಹುದು.

8) ನಾನೂ ಬಸವ ಶಕ್ತಿ ಶಿಬಿರಗಳನ್ನು ಸಂಘಟಿಸಬಹುದೇ?

ಖಂಡಿತವಾಗಿಯೂ. ರಾಜಕೀಯ ಆಸಕ್ತಿ, ಬಸವ ಬದ್ಧತೆ, ಸಂಘಟನಾ ಸಾಮರ್ಥ್ಯವಿರುವವರೆಲ್ಲರೂ ಶಿಬಿರಗಳಲ್ಲಿ ಭಾಗವಹಿಸಿ, ನಂತರ ಅವರ ಅವರ ಊರುಗಳಲ್ಲಿ ಈ ಕಾರ್ಯಕ್ರಮ ಆಯೋಜಿಸುವುದನ್ನು ಎದುರು ನೋಡುತ್ತಿದ್ದೇವೆ.

9) ಬಸವ ಶಕ್ತಿ ಶಿಬಿರಗಳು ಲಿಂಗಾಯತರಿಗೆ ಸೀಮಿತವೇ?

ಬಸವ ಸಂಘಟನೆಗಳಲ್ಲಿರುವ ಎಲ್ಲರಿಗೂ ಈ ಶಿಬಿರಗಳಲ್ಲಿ ಭಾಗವಹಿಸುವ ಅವಕಾಶವಿದೆ.

ನಾವು ಸಮಾನ ಮನಸ್ಕ ಸಂಘಟನೆಗಳ ಜೊತೆ ಕೈ ಜೋಡಿಸಿ ಒಟ್ಟಾಗಿ ದುಡಿಯುವ ಅಗತ್ಯವಿದೆ.

ಬಸವ ಸಂಘಟನೆಗಳು ‘ಲಿಂಗಾಯತ’ ವಿಷಯಕ್ಕೆ ಸೀಮಿತವಾಗಬಾರದು. ನಾಡು, ನುಡಿಯ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಬೇಕು.

ಶಿಬಿರಗಳಲ್ಲಿ ಇದರ ಬಗ್ಗೆ ಗಂಭೀರವಾದ ಚರ್ಚೆ ನಡೆಸಲಾಗುವುದು.

10) ಬಸವ ಶಕ್ತಿ ಅಂತ ಹೊಸ ಸಂಘಟನೆ ಕಟ್ಟುತ್ತಿದ್ದೀರಾ?

ಬಸವ ಶಕ್ತಿ ಅನ್ನುವ ಯಾವುದೇ ಸಂಘಟನೆಯನ್ನು ನಾವು ಕಟ್ಟುತ್ತಿಲ್ಲ. ಇದು ಕಾರ್ಯಕ್ರಮದ ಹೆಸರು ಮಾತ್ರ.

ವಿವಿಧ ಜಿಲ್ಲೆಗಳಲ್ಲಿ ಸಕ್ರಿಯವಾಗಿರುವ ಸಂಘಟನೆಗಳ ಜೊತೆಯಲ್ಲಿಯೇ ಇದನ್ನು ನಡೆಸುತ್ತೇವೆ.

11) ಅನುಭವ ಮಂಟಪ ಜಾಗೃತಿ ಶಿಬಿರಗಳ ಬಗ್ಗೆ ಹೇಳಿ.

ಮುಂದಿನ ವರ್ಷ ನೂತನ ಅನುಭವ ಮಂಟಪ ಪೂರ್ಣಗೊಳ್ಳಲಿದೆ. ಐತಿಹಾಸಿಕ ಮಹತ್ವವುಳ್ಳ ಈ ಸ್ಮಾರಕದ ನಿರ್ವಹಣೆಗೆ ಬಸವಾನುಯಾಯಿಗಳ ಸ್ವಯಂಸೇವಕರ ಪಡೆಗಳನ್ನು ಕಟ್ಟಲು ಹಿರಿಯ ಚಿಂತಕರು ಕರೆ ನೀಡಿದ್ದಾರೆ.

ನೂತನ ಅನುಭವ ಮಂಟಪವನ್ನು ಬಸವತತ್ವದ ವಿರೋಧಿಗಳಿಂದ ಸಂರಕ್ಷಿಸಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ.

ಈ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಅನುಭವ ಮಂಟಪ ಜಾಗೃತಿ ಶಿಬಿರಗಳನ್ನು ಈ ಕಾರ್ಯಕ್ರಮದ ಭಾಗವಾಗಿಯೇ ಶುರು ಮಾಡಲಾಗುತ್ತಿದೆ.

ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮುಂದೆ ತಮ್ಮ ಊರುಗಳಲ್ಲೂ ಈ ಶಿಬಿರಗಳನ್ನು ಆಯೋಜಿಸುತ್ತಾರೆಂದು ಎದುರು ನೋಡುತ್ತಿದ್ದೇವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *