ಅಂಬಿಗರ ಚೌಡಯ್ಯ ಯುವಸೇನೆಯಿಂದ ವಚನ ಸಾಹಿತ್ಯ ಚಿಂತನೆ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ವಚನಗಳಿಂದ ಸಮಾಜದಲ್ಲಿ ಜಾಗೃತಿ

ಬೀದರ:

12ನೇ ಶತಮಾನದ ಶರಣರು ಕಾಯಕಕ್ಕೆ ಅತ್ಯುನ್ನತ ಸ್ಥಾನ ನೀಡಿದ್ದರು. ನಿರ್ಮಲ ಮನಸ್ಸಿನಿಂದ ಮಾಡುವ ಕಾಯಕದಲ್ಲಿಯೇ ದೇವರನ್ನು ಕಂಡ ಶರಣರು ಸಮಾಜಕ್ಕೆ ಆದರ್ಶರಾಗಿದ್ದಾರೆ ಎಂದು ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಟೋಕರೆ ಕೋಳಿ ಸಮಾಜ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ ಅವರು ಹೇಳಿದರು.

ನಗರದ ಹೊಸ ಬಸ್ ನಿಲ್ದಾಣ ಎದುರಿನ ಕನಕಾದ್ರಿ ಕಂಫರ್ಟ್ ಹೊಟೇಲ್ ಸಭಾಂಗಣದಲ್ಲಿ ಅಂಬಿಗರ ಚೌಡಯ್ಯ ಯುವಸೇನೆ ವತಿಯಿಂದ ರವಿವಾರ ಆಯೋಜಿಸಿದ್ದ ವಚನ ಸಾಹಿತ್ಯ ಚಿಂತನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಿಜಶರಣ ಅಂಬಿಗರ ಚೌಡಯ್ಯ ಅವರು ಮೂಢನಂಬಿಕೆಗಳ ವಿರುದ್ಧ ಹೋರಾಡಿ ಸಮಾಜದಲ್ಲಿದ್ದ ಕಂದಾಚಾರಗಳನ್ನು ತೊಲಗಿಸಲು ಶ್ರಮಿಸಿದ ಮಹಾನ್ ಶರಣರಾಗಿದ್ದಾರೆ ಎಂದರು.

ಹಿರಿಯ ಸಾಹಿತಿ ಮಾಣಿಕ್ ನೇಳಗಿ ಅವರು ಮಾತನಾಡಿ, ಸಮಾಜದ ಜನರು ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ತಮ್ಮಲ್ಲಿರುವ ಸೃಜನಶೀಲ ಪ್ರತಿಭೆ ಮತ್ತು ಕೌಶಲ್ಯಗಳನ್ನು ಹೊರತಂದು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಉತ್ತಮ ನಡತೆ ಮತ್ತು ಸನ್ನಡತೆಯಿಂದ ಬದುಕಿದರೆ ಸಮಾಜದಲ್ಲಿ ಗೌರವ ಹೆಚ್ಚುವುದಲ್ಲದೆ ಇತರರಿಗೆ ಮಾದರಿಯಾಗಬಹುದು ಎಂದು ತಿಳಿಸಿದರು.

ಸಾಹಿತಿ ಬಿ.ಜೆ ಪಾರ್ವತಿ ಸೋನಾರೆ ಅವರು ಮಾತನಾಡಿ, ಪ್ರತಿತಿಂಗಳ ಪ್ರಥಮ ರವಿವಾರ ವಚನ ಸಾಹಿತ್ಯ ಚಿಂತನೆ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸುವ ಮೂಲಕ ಸಮಾಜದ ಜನರನ್ನು ಒಂದೆಡೆ ಸೇರಿಸುವ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರೆ ಉತ್ತಮ ವಿಚಾರಗಳು ಮುಂದಿನ ಪೀಳಿಗೆಗೂ ತಲುಪಲಿವೆ ಎಂದು ಅಭಿಪ್ರಾಯಪಟ್ಟರು.

ಅಂಬಿಗರ ಚೌಡಯ್ಯ ಯುವಸೇನೆಯ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಶರಣರ ಸಂದೇಶಗಳು ಜನಸಾಮಾನ್ಯರಿಗೆ ತಲುಪುವ ಉದ್ಧೇಶದಿಂದ ಸಂಘಟನೆ ನಿರಂತರವಾಗಿ ವಚನ ಸಾಹಿತ್ಯ ಚಿಂತನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸಮಾಜದಲ್ಲಿರುವ ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಕಾರ್ಯವನ್ನು ಸಂಘಟನೆ ಕೈಗೊಂಡಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜಶೇಖರ್ ಗುರೂಜಿ, ಉದ್ಯಮಿ ನಂದಕುಮಾರ ಜಮಗೀಕರ, ಜಿಲ್ಲಾ ಟೋಕರೆ ಕೋಳಿ ಸಮಾಜ ಸಂಘದ ಉಪಾಧ್ಯಕ್ಷ ಸುನೀಲ ಖಾಶೆಂಪುರ, ಪ್ರಧಾನ ಕಾರ್ಯದರ್ಶಿ ಮಾರುತಿ ಮಾಸ್ಟರ್, ಷಣ್ಮುಖಪ್ಪ ಶೇಕಾಪುರ, ಸಂಜೀವಕುಮಾರ ಸಿರ್ಸೆ, ಮಲ್ಲಿಕಾರ್ಜುನ ಪಾಟೀಲ, ಚಿತೇಂದ್ರ ಜಮಾದಾರ ಹಾಗೂ ಸಮಾಜದ ಮುಖಂಡರು, ಯುವಕರು, ಮಕ್ಕಳು ಇದ್ದರು.

ಚಂದ್ರಕಾಂತ ಹಳ್ಳಿಖೇಡಕರ್ ಸ್ವಾಗತಿಸಿದರು. ರವೀಂದ್ರ ಬಾಲೆಬಾಯಿ ನಿರೂಪಿಸಿದರು. ಚೀತಾನಂದ ಖಾಶೆಂಪುರ ವಂದಿಸಿದರು.

ಕೃಪೆ: ವಾರ್ತಾ ಭಾರತಿ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *