ವಚನ ನಿರ್ವಚನ: ತಾನೇ ತನ್ನರಿವಿನ ಮೂಲಕ ಗುರುವಾಗಬೇಕು

ಬಸವ ಮೀಡಿಯಾ
ಬಸವ ಮೀಡಿಯಾ

“ಗುರು ಹೊರಗಿಲ್ಲ ಬೆಳಕಿನ ರೂಪವಾಗಿ ತನ್ನೊಳಗೇ ಇದ್ದಾನೆ”

ಗುಳೇದಗುಡ್ಡ:

ಇಲ್ಲಿನ ಚನ್ನಪ್ಪ ದಾನಪ್ಪ ಕಲಾದಗಿ ಅವರ ಮನೆಯಲ್ಲಿ ಶನಿವಾರ‌ ಬಸವ ಕೇಂದ್ರದ ವತಿಯಿಂದ ‘ಮನೆಯಲ್ಲಿ ಮಹಾಮನೆ ಕಾರ್ಯಕ್ರಮ’ ನಡೆಯಿತು.

ಅಂದು ಚಿಂತನೆಗಾಗಿ ಶರಣೆ ಮುಕ್ತಾಯಕ್ಕ ಅವರ ಈ ಕೆಳಗಿನ ವಚನವನ್ನು ಆಯ್ದುಕೊಳ್ಳಲಾಗಿತ್ತು:

ತನ್ನ ತಾನರಿದವಂಗೆ ಅರಿವೆ ಗುರು,

ಅರಿವರಿತು ಮರೆವು ನಷ್ಟವಾದಲ್ಲಿ,

ದೃಷ್ಟ ನಷ್ಟವೇ ಗುರು.

ದ್ರಷ್ಟ ನಷ್ಟವೇ ಗುರು ತಾನದಲ್ಲಿ,

ಮುಟ್ಟಿತೋರಿದವರಿಲ್ಲದಡೇನು?

ಸಹಜವ ನೆಲೆಗೊಳಿಸುವ ನಿರ್ಣಯ ನಿಷ್ಪತ್ತಿಯೇ ಗುರು ನೋಡಾ.

ಗುರು ತಾನಾದಡೂ ಗುರುವಿಡಿದಿರಬೇಕು

ಎನ್ನ ಅಜಗಣ್ಣನಂತೆ.

ಪ್ರಾರಂಭದಲ್ಲಿ ಪ್ರೊ. ಶ್ರೀಕಾಂತ ಗಡೇದ ಅವರು ಅನುಭಾವ ನೀಡುತ್ತ “ಈ ವಚನದ ಕರ್ತೃ ಮುಕ್ತಾಯಕ್ಕಳಾಗಿದ್ದುˌ ಸುಮಾರು 37 ವಚನಗಳನ್ನು ಬರೆದಿದ್ದಾಳೆ. ಇವರು ತನ್ನ ಅಣ್ಣ ಅಜಗಣ್ಣನನ್ನು ಗುರುವೆಂದೇ ಬಗೆದು ಬದುಕಿದವಳು. ಲಿಂಗೈಕ್ಯ ಅಣ್ಣನ ಪಾರ್ಥಿವ ಶರೀರವನ್ನು ಕಂಡು ದುಃಖಿಸುತ್ತಿದ್ದವಳಿಗೆˌ ಗುರುವನ್ನೇ ಕಳೆದುಕೊಂಡ ಭ್ರಮೆಯಾಗಿತ್ತು. ಆಗ ಅಲ್ಲಿಗೆ ದಯಮಾಡಿಸಿದ ಅಲ್ಲಮಪ್ರಭುದೇವರುˌ ಆಕೆಗೆ ಗುರುತತ್ವವನ್ನು ವಿವರಿಸಿದ್ದಲ್ಲದೆ, ವ್ಯಕ್ತಿಗತ ಗುರುವಿನ ಬಗ್ಗೆ ಇರುವ ಭ್ರಮೆಯನ್ನು ಹೋಗಲಾಡಿಸಿದರು. ಗುರು ಹೇಗಿರಬೇಕು ಎಂಬುದನ್ನುˌ ಅದಕ್ಕೆ ಮಾದರಿಯಾಗಿದ್ದ ಅಜಗಣ್ಣನೇ ತನ್ನ ಗುರುವೆಂಬುದನ್ನು ಮುಕ್ತಾಯಕ್ಕ ಹೇಳಿದ್ದಾಳೆ ಎಂಬುದನ್ನು ವಿವರವಾಗಿ ವಿವರಿಸಿದರು.

ಮಹಾಂತೇಶ ಸಿಂದಗಿ ಅವರು ಈ ವಚನವನ್ನು ವಿವರಿಸುತ್ತಾ, ಅರಿವು ಎಂಬುದು ಕೇವಲ ಶಬ್ದಾರ್ಥವಾಗಬಾರದು. ಅದು ತನ್ನ ಸ್ವರೂಪ ಜ್ಞಾನವಾಗಬೇಕು. ಗುರು ತನ್ನ ಅಜ್ಞಾನವನ್ನು ಕಳೆಯುತ್ತಾನೆ; ಮೋಕ್ಷ ನೀಡುತ್ತಾನೆ; ಪಾಪ ಕಳೆಯುತ್ತಾನೆ ಎಂದು ಭಾವಿಸುವುದಕ್ಕಿಂತ ವ್ಯಕ್ತಿಯ ಒಳಗಿನ ಸ್ವಾನುಭಾವದ ನೆಲೆ, ತನಗೆ ಗುರುವಾಗಬೇಕು. ಹೀಗಾಗಿ ಗುರು ಕೇವಲ ಹೊರಗಿಲ್ಲ ಬೆಳಕಿನ ರೂಪವಾಗಿ ತನ್ನೊಳಗೇ ಇದ್ದಾನೆ ಎಂದು ಅಭಿಪ್ರಾಯಪಟ್ಟರು.      

ಪ್ರೊ. ಸುರೇಶ ರಾಜನಾಳ ಅವರು “ಭಕ್ತನಾದವನು ಎಂಥ ಜ್ಞಾನಿಯೇ ಆಗಿದ್ದರು ಗುರುವಿನ ಮಾರ್ಗದರ್ಶನ ಬೇಕೇ ಬೇಕು. ಈ ಬಗ್ಗೆ ಹಲವರಿಗೆ ಗೊಂದಲವಿದೆ. ಇದನ್ನು ಪರಿಹರಿಸಿಕೊಳ್ಳಬೇಕು. ಗುರುವೆನ್ನುವುದು ತನ್ನರಿವಲ್ಲದೆ ಮತ್ತೇನಲ್ಲ ಎಂಬುದು ಎಲ್ಲ ಶರಣರ ಅಭಿಪ್ರಾಯವಾಗಿದೆ. ಹೀಗಾಗಿ ಅಂಗದ ಗುಣಗಳನ್ನು ಕಳೆದುಕೊಂಡು ಲಿಂಗವೇ ತಾನಾಗಿದ್ದೇನೆ ಎಂಬುದು ತನ್ನರಿವಾಗಿದೆ.  ಇದೇ ಗುರುವಾಗಬೇಕು ಇದೇ ತನ್ನನ್ನು ಶಿವನನ್ನಾಗಿ ಮಾಡುತ್ತದೆ. ಇಂಥ ಅರಿವೇ ಗುರುವಾಗುತ್ತದೆ ಎಂದು ಮುಕ್ತಾಯಕ್ಕ ಹೇಳಿದ್ದಾಳೆ” ಎಂದು ಪ್ರೊ. ರಾಜನಾಳ ಅವರು ಪ್ರತಿಪಾದಿಸಿದರು.

ಬಸವ ಕೇಂದ್ರದ ಹಿರಿಯ ಅನುಭಾವಿಗಳಾದ ಶರಣ ಪ್ರೊ. ಮಹದೇವಯ್ಯ ನೀಲಕಂಠಮಠ ಅವರು ಮಾತನಾಡುತ್ತ” ಮುಕ್ತಾಯಕ್ಕ ಗುರುವನ್ನು ಕುರಿತು ಇಡೀ ಶರಣರ ಒಪ್ಪಿತ ತತ್ವವನ್ನೇ ಇಲ್ಲಿ ಹೇಳಿದ್ದಾಳೆ. ಸಾಧಕನಾದವನಿಗೆ ಆಧ್ಯಾತ್ಮದಲ್ಲಿ ಗುರುವಿನ ಪಾತ್ರ ಹೇಗೆ ಮುಖ್ಯವೋ ಹಾಗೆಯೇ ಲೌಕಿಕದಲ್ಲಿಯೂ ಅವಶ್ಯವಿದೆ. ಗುರುವೆಂಬುದನ್ನು ಅರಿವು ಮತ್ತು ಲಕ್ಷ್ಯ ಎಂಬುವ ಅರ್ಥದಲ್ಲಿ ಮುಕ್ತಾಯಕ್ಕ ಬಳಸಿದಂತೆ ಕಾಣುತ್ತದೆ.

ಬದುಕಿನಲ್ಲಿ ಲಕ್ಷ್ಯವಿಲ್ಲದ ಬದುಕು ಹೇಗೆ ನಗೆಪಾಟಲಿಗೆ ಒಳಗಾಗುತ್ತದೆಯೋ ಹಾಗೆ ಅಂತರಂಗದಲ್ಲಿ ಅರಿವು ಗುರುವಾಗದಿದ್ದರೆ ಜೀವನ ಭ್ರಮಾದೀನವಾಗುತ್ತದೆ. ಲಿಂಗಾಂಗ ಸಾಮರಸ್ಯ ಎಂಬುದು ತನ್ನರಿವಿನ ಪೂರ್ಣತೆ. ಸ್ವತ: ತಾನೇ ತನ್ನಲ್ಲಿ ಗುರು ಆಗಿದ್ದರು. ಗುರುವನ್ನು ಹೊಂದಿರಬೇಕು ಎಂಬುದು ಈ ವಚನದ ಭಾವ “ಎಂಬುದನ್ನು ಹಲವು ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಿದರು.

ಸಿದ್ದಲಿಂಗಪ್ಪ ಬರಗುಂಡಿಯವರು ಈ ವಚನವನ್ನು ಕುರಿತು ಮಾತನಾಡುತ್ತಾ,” ಅನುಭಾವಿ ಶರಣೆ ಮುಕ್ತಾಯಕ್ಕ ತಾಯಿಯವರು ಈ ವಚನದ ಮೂಲಕ ಅಷ್ಟಾವರಣದೊಳಗಣ ‘ಗುರು’ ಎಂಬ ತತ್ವಕ್ಕೆ ಅರ್ಥವನ್ನು ನೀಡಿದ್ದಾರೆ.  ಪ್ರತಿಯೊಬ್ಬರು ಗುರುವನ್ನು ಹೊಂದಿರುವದಷ್ಟೇ ಅಲ್ಲˌ ತಾನೇ ತನ್ನ ಅರಿವಿನ ಮೂಲಕ ಗುರುವಾಗಬೇಕು. ಇಂಥ ಗುರು ತನುತ್ರಯಗಳಲ್ಲಿ ಲಿಂಗತ್ರಯಗಳನ್ನು ಅಳವಡಿಸಬೇಕು. ತನ್ನ ಅರುಹಿನ ಕುರುಹದ ಇಷ್ಟಲಿಂಗವನ್ನು ನೋಡುತ್ತಾ ಹೋದಂತೆˌ ತಾನೇ ಇಲ್ಲ ವಾಗಬೇಕು. ನಂತರದ ಸ್ಥಿತಿ ಲಿಂಗದೊಳಗೆ ಸಮರಸವಾಗಿ ಏನೊಂದೂ ಇಲ್ಲದಂತೆ, ನದಿಯೊಳಗೆ ನದಿ ಬೆರೆಸಿದಂತಾಗಬೇಕು —ಇದು ತನ್ನ ಸ್ವಾನುಭಾವವೆಂಬ ಗುರುವಿನಿಂದಲೇ ಸಾಧ್ಯ. ಈ ಹಂತದಲ್ಲಿ ತಾನೇ ಗುರುವೆಂದು ಅಹಂ ಭಾವವನ್ನು ಹೊಂದದೆ ಅರಿವು ಉಂಟಾಗಿ, ಮರೆವು ನಷ್ಟವಾದಲ್ಲಿ ಅಲ್ಲಿಂದ ‘ಸಹಜ’ ನೆಲೆಗೊಂಡುˌ ನಿರ್ಣಯ ನಿಷ್ಪತ್ತಿಯಾದಲ್ಲಿ ಕೂಡˌ ಗುರುವನ್ನು ತನ್ನ ಅಣ್ಣ ಅಜಗಣ್ಣನಂತೆ ಹೊಂದಿರಬೇಕು ಎಂದು ಮುಕ್ತಾಯಕ್ಕ ಹೇಳುತ್ತಾ ಅಷ್ಟಾವರಣವನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂಬುವ ಸೂಚನೆ ಈ ವಚನದಲ್ಲಿದೆ” ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮವು ಜಯಶ್ರೀ ಬರಗುಂಡಿ ಹಾಗೂ ವಿಶಾಲಾಕ್ಷಿ ಗಾಳಿ ಅವರ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಮುರುಘೇಶ ಶೇಖಾ ಅವರು ಸ್ವಾಗತಿಸಿ, ಶರಣು ಸಮರ್ಪಣೆ ಮಾಡಿದರು.  ಬಸಲಿಂಗಯ್ಯ ಕಂಬಾಳಿಮಠ, ಪಾಂಡಪ್ಪ ಕಳಸಾ, ಪುತ್ರಪ್ಪ ಬೀಳಗಿ, ದಾನಪ್ಪ ಬಂಡಿ, ಮಹಾಲಿಂಗಪ್ಪ ಕರನಂದಿ, ಬಸವರಾಜ ಖಂಡಿ, ರಾಚಪ್ಪ ಯಂಡಿಗೇರಿ, ದಾನಪ್ಪ ಕಲಾದಗಿ, ದಾಕ್ಷಾಯಿಣಿ ತೆಗ್ಗಿ, ಪಾರ್ವತಿ ತಿಪ್ಪಾ, ಕಲಾದಗಿಯವರ ಬಂಧು ಬಳಗ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಗುಲ್ಬರ್ಗಾದ ಪ್ರೊ. ಸಿ.ಎಸ್.ಮಂಗಳೂರು, ಬೆಂಗಳೂರಿನಿಂದ ಕೃಷ್ಣಪ್ಪ ಶಿರೂರ, ಕೃಷ್ಣಾಜಿ ಮಹೇಂದ್ರಕರ ಮೊದಲಾದವರು ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
1 Comment

Leave a Reply

Your email address will not be published. Required fields are marked *