“ಬುದ್ಧ, ಬಸವ, ಬಾಬಾಸಾಹೇಬರ ಸಿದ್ಧಾಂತ ಬಹುತ್ವ ಭಾರತಕ್ಕೆ ಅತ್ಯವಶ್ಯ”

ಸಿಂಧನೂರು:

ಮಹಾನ್ ಆದರ್ಶ ವ್ಯಕ್ತಿತ್ವದ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಅವರುಗಳ ತತ್ವ, ಸಿದ್ಧಾಂತಗಳು ಬಹುತ್ವ ಭಾರತಕ್ಕೆ ಅತ್ಯವಶ್ಯಕ ಎಂದು ಉಪನ್ಯಾಸಕ ಬಸವರಾಜ ನಾಯಕ ಅವರು ಹೇಳಿದರು.

ನಗರದ ಕರೆಗೌಡ ಪೊಲೀಸಪಾಟೀಲ ಕುರುಕುಂದ ಅವರ ಮನೆಯಲ್ಲಿ ಶ್ರಾವಣ ಮಾಸದ ನಿಮಿತ್ತ ನಡೆದ ‘ಮೌಢ್ಯಮುಕ್ತ ಬದುಕಿಗಾಗಿ ವಚನ ಶ್ರವಣ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬುದ್ದ, ಬಸವ, ಅಂಬೇಡ್ಕರ್ ಅವರುಗಳು ಈ ದೇಶದ ಯುಗಪುರುಷರು. ಈ ಮೂವರ ಕಾಲಘಟ್ಟ ಬೇರೆ ಬೇರೆ. ಈ ಮೂರೂ ಮಹಾನುಭಾವರು ಬೆಳೆದು ಬಂದ ಮಾರ್ಗವೂ ಬೇರೆ ಬೇರೆ. ಆದರೆ ಈ ಮೂವರ ಉದ್ಧೇಶ ಒಂದೇ ಆಗಿದೆ. ಅದು ಶೋಷಣೆಮುಕ್ತ ಸಮಸಮಾಜದ ನಿರ್ಮಾಣ ಎಂದರು.

ಇಂದಿಗೂ ನಮ್ಮನ್ನು ಜಾತಿಯೆಂಬ ಪೆಡಂಭೂತ ಆವರಿಸಿದೆ, ಕೋಮುವಾದ ಕಾಡುತ್ತಿದೆ, ಭಯೋತ್ಪಾದನೆಯ ಆತಂಕವಿದೆ. ಅನೇಕ ಅಮಲುಗಳಿಂದಾಗಿ ಮನುಷ್ಯ ಸಂಬಂಧಗಳು ಹಾಳಾಗುತ್ತಿವೆ. ಇಂತಹ ಸಂದರ್ಭದಲ್ಲಿ ಅಹಿಂಸಾವಾದಿ ಬುದ್ಧನ, ಕ್ರಾಂತಿಕಾರಿ ಬಸವನ, ಶೋಷಿತರ ರಕ್ಷಕ ಬಾಬಾ ಸಾಹೇಬರ ಸಿದ್ದಾಂತಗಳು ಅತ್ಯವಶ್ಯವಾಗಿವೆ.

ಭಾರತ ಬಹುತ್ವದ ದೇಶವಾಗಿದೆ. ಇಲ್ಲಿ ಬಹುಸಂಸ್ಕೃತಿ, ಬಹುಭಾಷೆ, ವಿವಿಧ ಆಚಾರ, ವಿಚಾರಗಳು ಇರುವುದರಿಂದ ಎಲ್ಲರೂ ನಮ್ಮವರೆಂದು ಬದುಕಬೇಕಾಗಿದೆ.

ವಿಪರ್ಯಾಸ ಏನೆಂದರೆ ನಾವು ಕೇವಲ ವಿಚಾರ ಪ್ರಿಯರಾಗಿದ್ದೇವೆ ಆದರೆ ಆಚಾರಪ್ರಿಯರಾಗಿಲ್ಲ. ಈ ಮಹನೀಯರ ತತ್ವ ಸಿದ್ಧಾಂತಗಳನ್ನು ನಿರರ್ಗಳವಾಗಿ ಮಾತನಾಡುತ್ತೇವೆ. ಅದನ್ನು ಸರಿ ಎಂದು ಒಪ್ಪಿಕೊಳ್ಳುತ್ತೇವೆ, ಆದರೆ ಆಚರಣೆಯಲ್ಲಿ ಶೂನ್ಯ.

ಬಸವಣ್ಣನಲ್ಲಿ ಬುದ್ಧನಿದ್ದಾನೆ, ಅಂಬೇಡ್ಕರ್ ಅವರಲ್ಲಿ ಬುದ್ಧ ಬಸವ ಇಬ್ಬರು ಇದ್ದಾರೆ, ನಮ್ಮಲ್ಲಿ ಬುದ್ಧ, ಬಸವ, ಬಾಬಾ ಯಸಾಹೇಬ ಇವರುಗಳನ್ನು ತುಂಬಿಕೊಳ್ಳಬೇಕಾಗಿದೆ.

ಬುದ್ಧ ಜನಸಾಮಾನ್ಯರ ಭಾಷೆಯಾದ ಪಾಳಿಯಲ್ಲಿ ಬೋಧಿಸಿದರೆ, ಬಸವ ತಂದೆ ಸಂಸ್ಕೃತವನ್ನು ಬದಿಗಿಟ್ಟು ಶ್ರೀಸಾಮಾನ್ಯನ ಭಾಷೆಯಾದ ಕನ್ನಡದಲ್ಲಿ ವಚನ ರಚನೆ ಮಾಡುವ ಮೂಲಕ ಹೊಸ ಮನ್ವಂತರಕ್ಕೆ ನಾಂದಿ ಹಾಡಿದರು. ಈ ಮೂವರ ದೃಷ್ಟಿಯಲ್ಲಿ ಧರ್ಮವೆಂದರೆ ಎಲ್ಲರೂ ಸಮಾನವಾಗಿ ಬದುಕುವುದು ಹಾಗೂ ಸಮಾಜವನ್ನು ರಿಪೇರಿ ಮಾಡುವುದು.

ಇಂದಿಗೂ ಮೇಲ್ವರ್ಗದವರಿಗೆ ಮೇಲ್ಹರಿಮೆ, ಕೆಳವರ್ಗದವರಿಗೆ ಕೀಳರಿಮೆ ಹೋಗಿಲ್ಲ. ಇದು ತೊಲಗಿದಾಗ ಮಾತ್ರ ನಿಜವಾದ ಧರ್ಮದ ಆಚರಣೆಯಾಗುತ್ತದೆ. ಈ ಮೂರು ಮಹಾನುಭಾವರಿಗೆ ಕರ್ಮ ಸಿದ್ದಾಂತದಲ್ಲಿ ನಂಬಿಕೆ ಇರಲಿಲ್ಲ. ಹಿಂದಿನ ಜನ್ಮದ ಕರ್ಮ ಇಂದಿನ ಜನುಮದಲ್ಲಿ ಕಾಡುತ್ತಿದೆ ಎಂಬ ನಂಬಿಕೆ ಇವರದ್ದಲ್ಲ.

ಮಹಾತ್ಮ ಬುದ್ಧನ ವಿಚಾರಗಳ ಪ್ರಭಾವಕ್ಕೆ ಬ್ರಾಹ್ಮಣ, ಕ್ಷತ್ರಿಯ, ಕ್ಷೌರಿಕ ಹಾಗೂ ವೇಶ್ಯೆಯರೂ ಕೂಡ ಒಳಗಾಗಿ ಬೌದ್ಧರಾಗಿ ಪರಿವರ್ತನೆಯಾದರು. ಹಾಗೆಯೇ ಬಸವಣ್ಣನವರ ಕಾಲದಲ್ಲಿಯೂ ಸಾವಿರಾರು ತಳಸಮುದಾಯದವರು ಮತ್ತು ವೇಶ್ಯೆಯರು ಇಷ್ಟಲಿಂಗವನ್ನು ಧರಿಸುವ ಮೂಲಕ ತತ್ವಶ್ರೇಷ್ಠತೆಯನ್ನು ಪಡೆದರು.

ಬೌದ್ಧ ಧರ್ಮದಲ್ಲಿ ಪಂಚಶೀಲ ತತ್ವಗಳನ್ನು ಕಾಣುತ್ತೇವೆ ಅದೇ ರೀತಿ ಬಸವಣ್ಣನವರ ವಚನಗಳಲ್ಲಿ ಸಪ್ತಶೀಲಗಳಿವೆ. ಇವು ಯಥಾಪ್ರಕಾರವಾಗಿ ಅನುಷ್ಠಾನಕ್ಕೆ ಬಂದಲ್ಲಿ ನವ ಸಮಾಜದ ನಿರ್ಮಾಣ ಸಾಧ್ಯವಿದೆ.

ಪುರೋಹಿತಶಾಹಿಗಳು ಕೇವಲ ಒಂದೇ ಧರ್ಮದಲ್ಲಿ ಅಲ್ಲ, ಅವರು ಎಲ್ಲಾ ಧರ್ಮಗಳಲ್ಲಿಯೂ ಇದ್ದರು. ಬುದ್ಧ, ಬಸವ, ಅಂಬೇಡ್ಕರರು ಅವರ ವಿರುದ್ಧ ತೊಡೆತಟ್ಟಿ ನಿಂತು ಸಮಸಮಾಜಕ್ಕೆ ನಾಂದಿ ಹಾಡಿದರು.

ಬಹುದೇವೋಪಾಸನೆಗೆ ವಿರುದ್ಧವಾಗಿ ಇಷ್ಟಲಿಂಗದ ಅವಿಷ್ಕಾರವನ್ನು ಬಸವಣ್ಣನವರು ಮಾಡಿದರು. ಬಾಲಕ ಬಸವ ಮನೆಯಿಂದ ಸಿಡಿದೆದ್ದ ಮೊದಲ ಬಂಡಾಯಗಾರ ಎನ್ನಬಹುದು. ಅನುಭವ ಮಂಟಪದ ಪರಿಕಲ್ಪನೆ, ಅಂತರ್ಜಾತಿಯ ವಿವಾಹ ಇವು ಬಸವಣ್ಣನವರಿಗೆ ಇದ್ದ ಎದೆಗಾರಿಕೆಯನ್ನು ಎತ್ತಿ ತೋರಿಸುತ್ತದೆ.

ಅಂದಿನ ಸಮಾಜದಲ್ಲಿದ್ದ ಜಾತಿಯ ಅಮಲು, ಸಂಪತ್ತಿನ ಅಮಲು ಇಳಿಸಲು ಹಾಗೂ ದೇವಾಲಯಗಳ ಪ್ರವೇಶ ನಿಷೇಧದ ವಿರುದ್ಧ ದೇಹವೇ ದೇಗುಲ ವೆಂದು ಘೋಷಿಸಿ ಇಷ್ಟಲಿಂಗ ಪ್ರತಿಯೊಬ್ಬರಿಗೂ ನೀಡುವ ಮೂಲಕ ಧಾರ್ಮಿಕವಾಗಿ ಹೊಸ ಬದಲಾವಣೆಯನ್ನು ತಂದರು.

ಇಂದು ಸಾಮಾನ್ಯವಾಗಿ ಬಳಸುವ ಕೀಳು ಜಾತಿ ಸೂಚಕ ಪದಗಳನ್ನು ಬಸವಣ್ಣನವರು ಬಳಸಿದ ರೀತಿಯೇ ವಿಭಿನ್ನ. ಇದು ಅವರ ವಿದ್ವತ್ತಿನ ಪ್ರತೀಕವಾಗಿದೆ. ಬಸವಣ್ಣ ಅನುಭವದ ಮಂಟಪದ ಮೂಲಕ, ಬಾಬಾಸಾಹೇಬ ಸಂವಿಧಾನದ ಮೂಲಕ ವಾಕ್ ಸ್ವಾತಂತ್ರ್ಯವನ್ನು ಎತ್ತಿ ಹಿಡಿದರು.

ಬಾಬಾ ಸಾಹೇಬರು ಬಾಲ್ಯದಲ್ಲಿ ಅನುಭವಿಸಿದ ನೋವು ಮತ್ತು ಅವಹೇಳನ ಹೇಳತೀರದು. ಆದರೂ ಎದೆಗುಂದದೆ ಗುರಿಯನ್ನು ಸಾಧಿಸಿ ತೋರಿಸಿಕೊಟ್ಟರು. ಅವರು ನಮ್ಮ ದೇಶದ ಸ್ವಾತಂತ್ರ್ಯಕ್ಕಿಂತ ಮುಖ್ಯವಾಗಿ ದೇಶದಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸಮಾನತೆ ಬರಬೇಕೆಂದು ವಾದಿಸುತ್ತಿದ್ದರು.

ದೇಶದ ಸ್ವಾತಂತ್ರ್ಯ ದೇಶದ ಒಳಗಿನ ಶೋಷಣೆಯನ್ನು ನಿರ್ನಾಮ ಮಾಡಲು ಸಹಕಾರಿಯಾಗುವುದೇ ಎಂಬ ಪ್ರಶ್ನೆ ಅವರನ್ನು ಕಾಡುತ್ತಿತ್ತು. ಚೌಡರ್ ಕೆರೆಯ ಪ್ರಸಂಗ ಅವರ ಮೊದಲ ಸಾಮಾಜಿಕ ನ್ಯಾಯದ ಜಯ. ಹಿಂದೂ ಸಮಾಜವನ್ನು ಸರಿದಾರಿಗೆ ತರಲು ಪ್ರಯತ್ನಿಸಿ ಸೋತಾಗ ಅವರು 1956ನೇ ಇಸ್ವಿ ಆಗಸ್ಟ್ ತಿಂಗಳ 14ರಂದು ಬೌದ್ಧ ಧರ್ಮ ಸ್ವೀಕರಿಸಿದರು ಎಂದು ಬಸವರಾಜ ನಾಯಕ ಅನುಭಾವ ಹಂಚಿಕೊಂಡರು.

ಪ್ರಾಸ್ತಾವಿಕವಾಗಿ ವರ್ತಕರಾದ ಮಲ್ಲಿಕಾರ್ಜುನ ಒಗನಾಳ ಅವರು ಮಾತನಾಡುತ್ತಾ, ವ್ಯಸನಮುಕ್ತ ಬದುಕು ನಮ್ಮದಾಗಬೇಕಾದರೆ ಶರಣರ ವಚನಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅರಿವಿನ ಕುರುಹು ಆಗಿರುವ ಇಷ್ಟಲಿಂಗ ಪೂಜೆ ನಮ್ಮನ್ನು ವ್ಯಸನ ಮುಕ್ತಗೊಳಿಸುತ್ತದೆ. ನಮ್ಮ ಪೂರ್ವಜರ ಸಂಸ್ಮರಣೆ ನಮ್ಮನ್ನು ಸರಿಯಾದ ದಾರಿಗೆ ತೆಗೆದುಕೊಂಡು ಹೋಗುತ್ತದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಲಿಂಗೈಕ್ಯ ಶೇಖರಗೌಡ ಮಾಲಿಪಾಟೀಲರನ್ನು ಅವರ ಒಡನಾಡಿ ನಿರುಪಾದ್ಯಪ್ಪ ಗುಡಿಹಾಳ ವಕೀಲರು ಸ್ಮರಿಸಿದರು. ಬುದ್ಧ, ಬಸವ, ಅಂಬೇಡ್ಕರ್ ಅವರ ಸ್ಮರಣೀಯ ಸಂದರ್ಭದಲ್ಲಿ ಲಿಂಗೈಕ್ಯ ಶೇಖರಗೌಡರನ್ನು ಸ್ಮರಿಸುತ್ತಿರುವುದು ಒಳ್ಳೆಯ ವಿಚಾರ. ಶೇಖರಗೌಡ್ರು ಸ್ನೇಹಜೀವಿಯಾಗಿದ್ದರು. ಅವರು ಆರ್ಥಿಕವಾಗಿ ಎಷ್ಟೇ ಎತ್ತರದಲ್ಲಿದ್ದರೂ ನಮ್ಮೊಂದಿಗೆ ಸರಳವಾಗಿ ಇರುತ್ತಿದ್ದರು ಎಂದು ನುಡಿದರು.

ಕಾರ್ಯಕ್ರಮದ ಸಮ್ಮುಖವನ್ನು ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು ಸುವರ್ಣಗಿರಿ ವಿರಕ್ತಮಠ, ಯದ್ದಲದೊಡ್ಡಿ ಇವರು ವಹಿಸಿದ್ದರು.

ಬಸಮ್ಮ ತಾಳಿಕೋಟೆ ಪ್ರಾರ್ಥಿಸಿದರು. ನಾಗರಾಜ ಪಾಟೀಲ ಸ್ವಾಗತಿಸಿದರು. ಹನುಮಂತಪ್ಪ ಬೇರಿಗಿ ಶಿಕ್ಷಕರು ಕಾರ್ಯಕ್ರಮವನ್ನು ನಿರೂಪಿಸಿದರು.

ವೇದಿಕೆಯಲ್ಲಿ ನಾಗಭೂಷಣ ನವಲಿ, ಗಂಗಮ್ಮ ಪಿ. ಕುರಕುಂದ, ಪಿ. ರುದ್ರಪ್ಪ ಅವರು ಉಪಸ್ಥಿತರಿದ್ದರು. ನೂರಾರು ಶರಣರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
2 Comments
  • Budda ,basava, ambedkar are not compared. Budda is born as king face the same issue of discrimination and left to sanyasa, ambedkar is born as lower cast,fight for his rights is reactive. But Basavana born as middle class family in upper caste, Even though he is scholar . He choose for welfare of society by linga bedha,vachana bedha,anubhava bedha. He involve himself in all the process. Till today we Lingayat failure to understand his concept of theory of welfare. But now time has came , wakeup and reconstruct.

  • ಬಸವಣ್ಣನವರದು ಕ್ರಾಂತಿಕಾರಿ ವೀಚಾರಗಳು. ಹಾಗೆ ಆಚರಣೆಗೆ ತಂದರು

Leave a Reply

Your email address will not be published. Required fields are marked *