ಚನ್ನಬಸವೇಶ್ವರ ಗುರುಕುಲದಲ್ಲಿ ೨೦೨೬ನೇ ಸಾಲಿನ ನೀಟ್ ಸಾಧಕರ ಸನ್ಮಾನ

ಬಸವ ಮೀಡಿಯಾ
ಬಸವ ಮೀಡಿಯಾ

ವಿದ್ಯೆ ಜತೆಗೆ ಮಾನವೀಯತೆ ಮುಖ್ಯ

ಭಾಲ್ಕಿ:

ಇಂದಿನ ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು, ಹೆತ್ತವರು ಮತ್ತು ಕಲಿತ ವಿದ್ಯಾಸಂಸ್ಥೆಗೆ ಗೌರವ ತಂದು ಕೊಡುವ ಕೆಲಸ ಮಾಡಬೇಕಾಗಿದೆ ಎಂದು ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಸಚಿವ ಡಾ. ರಿಯಾಜ್ ಬಾಷಾ ಎಸ್. ಹೇಳಿದರು.

ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ನ ವತಿಯಿಂದ ಗುರುವಾರ ಆಯೋಜಿಸಿದ್ದ ಚನ್ನಬಸವೇಶ್ವರ ಗುರುಕುಲ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ೨೦೨೬ನೇ ಸಾಲಿನ ನೀಟ್ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಗಡಿಭಾಗದಲ್ಲಿ ಡಾ. ಬಸವಲಿಂಗ ಪಟ್ಟದ್ದೇವರು ಶಿಕ್ಷಣ ಸಂಸ್ಥೆ ಸ್ಥಾಪಿಸಿ ಗ್ರಾಮೀಣ ಭಾಗದ ಪರಿಸರದ ಹಚ್ಚ ಹಸಿರಿನ ನಡುವೆ ಗುರುಕುಲ ಶಿಕ್ಷಣದ ಮೂಲಕ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿದ್ದಾರೆ.

ಚನ್ನಬಸವೇಶ್ವರ ಗುರುಕುಲ ಇದೊಂದು ಪವಿತ್ರ ಜ್ಞಾನದೇಗುಲವಾಗಿದೆ. ಇಂತಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯೆ ಕಲಿಯುತ್ತಿರುವ ಮಕ್ಕಳು ಅದೃಷ್ಟವಂತರು, ಪುಣ್ಯವಂತರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ಮಹಾನಗರದಂತಹ ಪ್ರತಿಷ್ಠಿತ ರಾಷ್ಟ್ರ, ಅಂತರರಾಷ್ಟ್ರಮಟ್ಟದ ಶಾಲಾ-ಕಾಲೇಜುಗಳಲ್ಲಿ ಇಂದು ಶಿಕ್ಷಣದ ಮೌಲ್ಯ ಕುಸಿಯುತ್ತಿರುವುದು ಕಂಡು ಬರುತ್ತಿದೆ. ಆದರೆ, ಈ ಭಾಗದಲ್ಲಿ ಪೂಜ್ಯರು ಕಟ್ಟಿದ ಸಂಸ್ಥೆಯ ಮೂಲಕ ಪ್ರತಿವರ್ಷ ನೂರಾರು ಮಕ್ಕಳು ನೀಟ್ ಮತ್ತು ಐಐಟಿ ಶಿಕ್ಷಣದಲ್ಲಿ ಕ್ರಾಂತಿಗೈಯುತ್ತಿದ್ದಾರೆ.

ಇಲ್ಲಿಯ ಗುಣಾತ್ಮಕ ಶಿಕ್ಷಣ ಮತ್ತು ಉತ್ತಮ ಸಂಸ್ಕಾರದ ಪರಿಣಾಮ ಆ ಮೂಲಕ ಬಡಮಕ್ಕಳು ಡಾಕ್ಟರ್ ಮತ್ತು ಎಂಜನಿಯರ್ ಕನಸು ನನಸು ಮಾಡಿಕೊಳ್ಳುತ್ತಿರುವುದು ಹೆಮ್ಮೆ ತರಿಸಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಶೈಕ್ಷಣಿಕ ಪ್ರಶಸ್ತಿ ಪುರಸ್ಕೃತ, ಬ್ರೀಮ್ಸ್ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ಉಮಾ ಬಸವರಾಜ ದೇಶಮುಖ ಮಾತನಾಡಿ, ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಮೈಗೂಡಿಸಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು. ಜೀವನುದ್ದಕ್ಕೂ ಕಲಿಕೆ ಎನ್ನುವುದು ನಿರಂತರವಾಗಿರುತ್ತದೆ. ವೈದ್ಯರಾಗುವ ವಿದ್ಯಾರ್ಥಿಗಳು ತಮ್ಮ ವೃತ್ತಿಯನ್ನು ಪ್ರೀತಿಸಿ ರೋಗಿಗಳಿಗೆ ಬದುಕು ಧೈರ್ಯ ತುಂಬಬೇಕು ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಇಂದಿನ ದಿನಮಾನಗಳಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ತೀವ್ರ ಆತಂಕ ತರಿಸಿದೆ. ಮಕ್ಕಳಾದವರೂ ಹೆತ್ತವರನ್ನು ಭಾರವಾದ ದೃಷ್ಟಿಯಿಂದ ಕಾಣುತ್ತಿದ್ದಾರೆ. ಹಾಗಾಬಾರದು ಹೆತ್ತವರ ಸೇವೆ ಮಾಡಿದರೇ ಮಕ್ಕಳಿಗೆ ಸದಾಕಾಲ ದೇವರು ಆಶೀರ್ವದಿಸುತ್ತಾನೆ ಎಂಬುದನ್ನು ಮರೆಯಬಾರದು. ನಮ್ಮ ಸಂಸ್ಥೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಕಲ್ಪಿಸಿಕೊಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿ ಮಾತನಾಡಿದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನೀಟ್ ಸಾಧಕ ವಿದ್ಯಾರ್ಥಿಗಳಾದ ಸಾಕ್ಷಿ, ಆದಿತ್ಯ, ದೇವಾನಂದ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಕುಮಾರಿ ಸೃಷ್ಟಿ ವಚನ ಪ್ರಾರ್ಥನೆ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಉಪಕುಲಸಚಿವ ಡಾ. ಮಂಜುನಾಥ ರೆಡ್ಡಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಶಶಿಧರ ಕೋಸಂಬೆ, ಓಂಲಕ್ಷ್ಮಿ ಸೌಹಾರ್ದ ಸಂಘದ ಉಪಾಧ್ಯಕ್ಷ ಓಂಕಾರ ಕನಶೆಟ್ಟೆ, ಹಿರಿಯ ವೈದ್ಯ ಡಾ.ರಾಜೇಂದ್ರ ಜಾಧವ, ಹಿರಿಯ ನ್ಯಾಯವಾದಿ ರಾಜಶೇಖರ ಅಷ್ಟೂರೆ ಸೇರಿದಂತೆ ಹಲವರು ಇದ್ದರು.

ಸಾಧಕರಿಗೆ ಸನ್ಮಾನ

ಇದೇವೇಳೆ 2026ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸುಮಾರು 150ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಾಕ್ಷಿ ೬೪೭, ಆದಿತ್ಯ ೬೨೯, ಸಂದೀಪ ೬೧೨, ಸುಮಿತ ೬೦೭, ದೇವಾನಂದ ೬೦೭, ಶ್ರೇಯಾ ೫೯೭, ಆದಿತ್ಯ ೫೯೫, ಅರ್ಪಿತಾ ೫೯೩, ವೈಭವ ೫೯೨ ಮತ್ತು ದತ್ತಾತ್ರೆಯೇ ೫೯೧ ಸೇರಿದಂತೆ ಹಲವರನ್ನು ಪೂಜ್ಯರು ಸನ್ಮಾನಿಸಿ, ಆಶೀರ್ವದಿಸಿದರು.

ದೇಶಮುಖ ದಂಪತಿಗೆ ಸನ್ಮಾನ:

ರಾಷ್ಟ್ರೀಯ ಶೈಕ್ಷಣಿಕ ಪ್ರಶಸ್ತಿ ಪುರಸ್ಕೃತೆ, ಬ್ರೀಮ್ಸ್ನ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ಉಮಾ ಬಸವರಾಜ ದೇಶಮುಖ ದಂಪತಿಗಳನ್ನು ಉಭಯ ಪೂಜ್ಯರು ಸನ್ಮಾನಿಸಿ, ಪ್ರಶಸ್ತಿ ನೀಡಿ ಗೌರವಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಮೋಹನ ರೆಡ್ಡಿ ಸ್ವಾಗತಿಸಿದರು. ಮಧುಕರ ಗಾಂವಕರ ನಿರೂಪಿಸಿದರು. ಸಿದ್ರಾಮ ಗೊಗ್ಗಾ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *