ವಚನ ವಿಶ್ಲೇಷಣೆಯೊಂದಿಗೆ ಕ್ರಿಯಾಮೂರ್ತಿಗಳಿಗೆ ನಿಜಾಚರಣೆ ಪಾಠ

ರಾಯಚೂರು:

ಶರಣ ಅಲ್ಲಮಪ್ರಭುಗಳ ವಚನ ನಿರ್ವಚನದ ಮೂಲಕ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಪಿ. ರುದ್ರಪ್ಪ ಅವರು ವಚನ ಕ್ರಿಯಾಮೂರ್ತಿಗಳಿಗೆ ಲಿಂಗಾಯತ ಧರ್ಮ ನಿಜಾಚರಣೆಗಳ ಕುರಿತು ವಿವರಿಸಿದರು.

ಅಲ್ಲಮಪ್ರಭುಗಳ ಪ್ರಸಾದ ತತ್ವದ ವಚನ ವಿವರಿಸುತ್ತ, ಸೃಷ್ಟಿಯಲ್ಲಿ ನೆಲೆಸಿರುವ, ಪ್ರಸಾದತತ್ವ ಮಾನವನಲ್ಲಿ ಹೇಗೆ ಅಂತರ್ಗತವಾಗಿದೆ, ಅದೇ ನಮ್ಮ ಸ್ವರೂಪ, ಅದನ್ನು ವಿಕಾಸ ಮಾಡಿಕೊಳ್ಳುವ ಸೂತ್ರಗಳ ಬಗ್ಗೆ ಚರ್ಚಿಸಲಾಯಿತು.

ಪೃಥ್ವಿ ತತ್ವದ ಕಾಠಿಣ್ಯ ಮಾನವನ ಸಂವೇದನೆಗಳನ್ನು ಅಳಿಸಿ ಹಾಕಿಬಿಟ್ಟಿದೆ. ಧರ್ಮಗಳ ಮೂಲ ಗುರಿಯೆ ಮನುಷ್ಯನ ಸಂವೇದನೆಗಳನ್ನು ವೃದ್ಧಿಸುವದು. ಸಂವೇದನೆ ಇಲ್ಲದೇ ಅಂತರಂಗದ ಪ್ರಸಾದ ದೊರೆಯದು.

ಸೃಷ್ಟಿಯ ಪ್ರತಿ ಜೀವಿಯಲ್ಲಿನ ಬಗೆಗಿನ ಸಂವೇದನಾರಹಿತ ಬದುಕು, ಬಾಹ್ಯ ಸಂಪತ್ತು, ಅಧಿಕಾರ, ಹಣ, ಎಷ್ಟಿದ್ದರೂ ಮಾನವನಿಗೆ ಸಂತೃಪ್ತಿ ಇಲ್ಲವಾಗಿದೆ.

ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಮತ್ತು ತತ್ವಜ್ಞಾನಿ ನಿಕೋಲಾಸ್ ರೋರಿಚ್ ಅವರು ಬದುಕಿನ ಸಂವೇದನೆಯ ಬಗ್ಗೆ ಆಡಿದ ಮಾತುಗಳನ್ನ ನೆನಪಿಸಿಕೊಳ್ಳಲಾಯಿತು.

ನಂತರ ನಿಜಾಚಾರಣೆಗಳ ಮಹತ್ವಗಳನ್ನು ವಿವರಿಸಿ, ನಿಜದ ಆಚರಣೆ ಎಂದರೆ ಸತ್ಯದ ಆಚರಣೆ. ಮಾನವ, ದೇಹ ಮಾತ್ರದ ಮೂಲಕ ಜೀವಿಸಿದರೆ ತನ್ನ ಮೂಲ ಅಂಗವಾದ ಭಾವವನ್ನು ಕುಬ್ಜಗೊಳಿಸಿಕೊಂಡಾಗ ಅನುಸರಣೆ ಪ್ರಾರಂಭವಾಗುತ್ತದೆ.

ನಮ್ಮ ಹಿರಿಯರು ಏನು ಮಾಡಿಕೊಂಡು ಬಂದಿದ್ದರೋ ಅದನ್ನೇ ಭಾವರಹಿತವಾಗಿ, ಅರ್ಥರಹಿತವಾಗಿ ಮುಂದುವರೆಸಿ ಮಾಡುವದನ್ನೇ ಮೌಢ್ಯ ಸಂಪ್ರದಾಯ ಎನ್ನುವದು.

ಕ್ರಿಯಾಮೂರ್ತಿಗಳು ಆಗುವವರ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು, ನಾರಿದಟ್ಟೆ, ಗರ್ಭ ಲಿಂಗದೀಕ್ಷೆ, ನಾಮಕರಣ, ಗುರುಪ್ರವೇಶ, ಅಂತ್ಯಕ್ರಿಯೆಗಳ ಸಮಯದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ, ಕ್ರಿಯಾಮೂರ್ತಿಗಳು ಎಲ್ಲಿಯೋ ಮೌಢ್ಯ ಆಚರಣೆ, ಭೇದ ನೀತಿಗಳಿಗೆ ಆಸ್ಪದ ಕೊಡದೆ ನಿಜಾಚರಣೆ ಮಾಡುವ ಮನೆಯವರಿಗೆ ನೋವಾಗದಂತೆ, ಅವರ ಸಂಭ್ರಮಕ್ಕೆ ಧಕ್ಕೆ ಬಾರದಂತೆ ಎಚ್ಚರಿಕೆಯಿಂದ ಕಾರ್ಯ ಮಾಡುವ ವಿಧಾನಗಳನ್ನ ಅನುಸರಿಸುವ ಬಗ್ಗೆ ಚರ್ಚಿಸಿದರು.

ಎಲ್ಲಿಯೋ ಯಾರನ್ನೋ ಟೀಕೆ ಮಾಡದೆ ಕೇವಲ ತತ್ವ ಸಿಂದ್ಧಾಂತಗಳ ಸರಳ ವಿವರಣೆಗಳಿಗೆ ಆಧ್ಯತೆ ನೀಡುವಂತೆ ವಿನಂತಿಸಲಾಯಿತು.

ಇದು ಕೇವಲ ಚರ್ಚೆ ಆಗದೆ ಅಂತಹ ನಿಜಾಚರಣೆ ನಡೆಯುವ ಕಾರ್ಯಗಳಲ್ಲಿ ಭಾಗವಹಿಸಿದಾಗ ಮಾತ್ರ ಆ ಆಚರಣೆಗಳ ತಿಳುವಳಿಕೆ ಬರುತ್ತದೆ ಎಂದು ತಿಳಿಸಿ, ಈ ಕಾರ್ಯದಲ್ಲಿ ಎಲ್ಲಿಯೂ ಹಣವೇ ಪ್ರಾಮುಖ್ಯಗೊಳ್ಳದಂತೆ ನೋಡಿಕೊಳ್ಳಬೇಕೆಂದು ರುದ್ರಪ್ಪ ಅವರು ವಿನಂತಿ ಮಾಡಿದರು.

ವಚನ ಗಾಯನ ಹಾಗೂ ಸಾಮೂಹಿಕ ಬಸವ ಪ್ರಾರ್ಥನೆಯನ್ನು ಪಾರ್ವತಿ ಪಾಟೀಲ, ಸಂಗಡಿಗರು ನಡೆಸಿಕೊಟ್ಟರು. ಧನಂಜಯ ಹಡಪದ ಸ್ವಾಗತಿಸಿದರು. ಚನ್ನಬಸವ ಇಂಜಿನಿಯರ್ ನಿರೂಪಿಸಿದರು. ತಾಯಮ್ಮ ಯಲ್ಲನಗೌಡ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *