ಬಸವಕಲ್ಯಾಣದಲ್ಲಿ ತಿಂಗಳು ಪೂರ್ತಿ ನಡೆಯುವ ಬಸವಧರ್ಮ ಪ್ರವಚನ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ:

ಬಸವಾದಿ ಶರಣರ ತತ್ವ, ಸಿದ್ಧಾಂತಗಳು ಎಲ್ಲರ ಜೀವನದಲ್ಲಿ ಅಂತರ್ಗತವಾಗಲಿ ಎಂದು ಹುಲಸೂರಿನ ಗುರುಬಸವೇಶ್ವರ ಸಂಸ್ಥಾನಮಠದ ಪೀಠಾಧಿಪತಿ ಡಾ. ಶಿವಾನಂದ ಮಹಾಸ್ವಾಮಿಗಳು ಹೇಳಿದರು.

ನಗರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ತಿಂಗಳು ಕಾಲ ನಡೆಯುವ ಬಸವಧರ್ಮ ಪ್ರವಚನ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಬಸವಣ್ಣನವರ ಚಿಂತನೆ ವಿಶ್ವಮಟ್ಟದಲ್ಲಿ ಕೊಂಡೊಯ್ಯುವಲ್ಲಿ ಲಿಂಗೈಕ್ಯ ಮಾತೆ ಮಹಾದೇವಿ ಅವರ ಶ್ರೇಯಸ್ಸು, ಶ್ರಮ ದೊಡ್ಡದು ಎಂದರು.

ಪ್ರವಚನ ಸಾಮಾನ್ಯ ಉಪನ್ಯಾಸಕ್ಕಿಂತ ದೊಡ್ಡದು. ಸಮಾಜ ಪರಿವರ್ತನಾ ಗುಣ ಪ್ರವಚನಕ್ಕಿದೆ. ಡಾ. ಗಂಗಾದೇವಿ ಮಾತಾಜಿ ಅವರ ಪ್ರವಚನ ಬಸವೇಶ್ವರ ದೇವಸ್ಥಾನದ ಮೂಲಕ ಜಗತ್ತನ್ನು ಬೆಳಗುವ ಬೆಳಕಾಗಲಿ ಎಂದರು.

ಕೂಡಲಸಂಗಮ ಬಸವಧರ್ಮ ಪೀಠದ ಡಾ. ಗಂಗಾದೇವಿ ಮಾತಾಜಿ ಅವರು ಮಾತನಾಡಿ, ಪ್ರವಚನ ಎನ್ನುವುದು ಜ್ಞಾನ ಪ್ರಸಾದ. ಶರಣರ, ಸಂತರ, ಯೋಗಿಗಳ ಆಲೋಚನೆಗಳನ್ನು ಕೇಳಿಸಿಕೊಂಡು ಸ್ವಾನುಭವ ಪಡೆಯುವ ಮೂಲಕ ಅರಿವು ಕಂಡುಕೊಳ್ಳುವುದಾಗಿದೆ ಎಂದರು‌.

ಇಡೀ ಪ್ರಕೃತಿಯಲ್ಲಿ ಮನುಷ್ಯ ಮಾತ್ರ ವಿಚಾರ ಮಾಡುವ ಶಕ್ತಿ ಪಡೆದಿದ್ದಾನೆ. ಹಾಗಾಗಿ ಅವನು ಜ್ಞಾನ ಪರಂಪರೆಯಲ್ಲಿ ನಡೆಯಬೇಕು. ನಮ್ಮದು ಕೃಷಿ ಪ್ರಧಾನ ದೇಶ. ವರ್ಷಪೂರ್ತಿ ದುಡಿವ ರೈತ ಶ್ರಾವಣದ ಮಳೆಗಾಲದಲ್ಲಿ ಜ್ಞಾನದ ಕೇಳುಗನಾಗಬೇಕು.

ಖೇಳಗಿ ಶಿವಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಪೂಜ್ಯ ಶಿವಲಿಂಗೇಶ್ವರ ಮಹಾಸ್ವಾಮಿಗಳು ಮಾತನಾಡಿ, ಬಸವಾದಿ ಶರಣರು ನೀಡಿದ ಕಾಯಕ, ದಾಸೋಹ ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸತ್ಯಶುದ್ಧವಾದದ್ದೇ ನಿಜವಾದ ಕಾಯಕ ಎಂಬುದು ಶರಣರ ವ್ಯಾಖ್ಯಾನವಾಗಿದೆ. ಬಸವ ತತ್ವದ ಅರಿವು ನಮ್ಮ ಬದುಕು ಹಸನು ಮಾಡುತ್ತದೆ ಎಂದು ಹೇಳಿದರು.

ಸಮಾರಂಭ ಉದ್ಘಾಟಿಸಿದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಹುಲ್ ಇಜಾರೆ ಮಾತನಾಡಿ, ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ನಾಡಿಗೆ ನೀಡಿದ ಈ ನೆಲ ಅತ್ಯಂತ ಪವಿತ್ರವಾಗಿದೆ. ಇಂಥ ನೆಲದಲ್ಲಿ  ಕೆಲಸ ಮಾಡುವ ಅವಕಾಶ ದೊರೆತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ ಅವರು ಮಾತನಾಡಿ, ಬಸವ ಫಿಲಾಸಫಿ ಜಗತ್ತಿನ ಫಿಲಾಸಫಿಯ ಭಾಗವಾಗಿದೆ. ಅದರ ಕುರಿತು ಚಿಂತನೆ, ಚರ್ಚೆ ನಿರಂತರ ನಡೆಯಬೇಕು. ಶಾಲೆ, ಕಾಲೇಜು, ಧಾರ್ಮಿಕ ಸ್ಥಳಗಳಲ್ಲಿ ಬಸವ ಚಿಂತನೆ ನಿತ್ಯ ನಡೆಯಬೇಕು ಎಂದರು.

ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಿಡಿಪಿಸಿ ಕೋಶಾಧ್ಯಕ್ಷ ಜಗನ್ನಾಥ ಖೂಬಾ, ಕಾರ್ಯದರ್ಶಿ ಅಶೋಕ ನಾಗರಾಳೆ, ಸಹಕಾರ್ಯದರ್ಶಿ, ಬಸವರಾಜ ಬಾಲಕಿಲೆ, ಸುನೀಲ ರಾಯವಾಡೆ, ನಿರ್ದೇಶಕರಾದ ವೀರಣ್ಣಾ ಹಲಶೆಟ್ಟೆ, ಭದ್ರಿನಾಥ ಪಾಟೀಲ, ಮಲ್ಲಿಕಾರ್ಜುನ ಚಿರಡೆ, ಪುಷ್ಪಾವತಿ ಮಾಮಾ, ಬಿಡಿವಿಸಿ ಉಪಾಧ್ಯಕ್ಷ ಡಾ. ಜಿ. ಎಸ್. ಭುರಾಳೆ, ಕಾರ್ಯದರ್ಶಿ ಶಿವರಾಜ ಶಾಶೆಟ್ಟೆ ಮೊದಲಾದವರು ಇದ್ದರು.

ವಿವೇಕಾನಂದ ವಸ್ತ್ರದ ಹಾಗೂ ಮಂಜುನಾಥ ಹೇಮಶೆಟ್ಟಿ ಅವರಿಂದ ವಚನ ಗಾಯನ ನಡೆಯಿತು. ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ ಸ್ವಾಗತಿಸಿದರು. ಜ್ಯೋತಿ ತುಗಾವೆ ನಿರೂಪಿಸಿ, ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *