ಬಸವಕೇಂದ್ರದ ‘ವಚನ ಶ್ರಾವಣ’ ಪ್ರಾರಂಭೋತ್ಸವ
ಹುಬ್ಬಳ್ಳಿ :
ಬಸವಧರ್ಮದ ತತ್ವಗಳನ್ನು ಮನೆಮನೆಗೆ, ಮನ ಮನಗಳಿಗೆ ತಲುಪಿಸುವ ಉದ್ದೇಶದಿಂದ ಆಗಸ್ಟ್ 16ರಿಂದ ಸೆಪ್ಟಂಬರ್ 13ರವರೆಗೆ ನಡೆಯಲಿರುವ ‘ವಚನ ಶ್ರಾವಣ’ಕಾರ್ಯಕ್ರಮಕ್ಕೆ ರವಿವಾರ ಚಾಲನೆ ನೀಡಲಾಯಿತು.
ಸ್ಥಳೀಯ’ಬಸವ ಕೇಂದ್ರ’ದ ವತಿಯಿಂದ ವೀರಾಪುರ ರಸ್ತೆಯ ‘ಶ್ರೀ ಗುರುಬಸವ ಮಂಟಪ ಟ್ರಸ್ಟ್’ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವತತ್ವ, ವಚನ ಸಾಹಿತ್ಯ ಹಾಗೂ ಶರಣರ ಜೀವನಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ‘ವಚನ ಶ್ರಾವಣ’ ಕಾರ್ಯಕ್ರಮದ ಪ್ರಾರಂಭೋತ್ಸವ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಜಿ. ಬಿ. ಹಳ್ಯಾಳ ವಹಿಸಿದ್ದರು. ವಚನ ಅನುಭಾವವನ್ನು ಗುಳೇದಗುಡ್ಡ ಬಸವಕೇಂದ್ರದ ಅನುಭಾವಿಗಳಾದ ಡಾ. ಗಿರೀಶ ನೀಲಕಂಠಮಠ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಂದ್ರಶೇಖರ ಕರವೀರಶೆಟ್ಟರ ಹಾಗೂ ಗೌರವ ಉಪಸ್ಥಿತಿಯಲ್ಲಿ ಸುಲೋಚನಾತಾಯಿ ಭೂಸನೂರ, ಪ್ರೊ. ಎಸ್. ವಿ. ಪಟ್ಟಣಶೆಟ್ಟಿ, ಸುಧೀರ ಸಾದರಹಳ್ಳಿ, ಕೆ. ಎಸ್. ಇನಾಮತಿ, ಶಶಿಧರ ಕರವೀರಶೆಟ್ಟರ ಸೇರಿದಂತೆ ಬಸವಕೇಂದ್ರ ಹಾಗೂ ಶ್ರೀಗುರುಬಸವ ಮಂಟಪ ಟ್ರಸ್ಟಿನ ಶರಣರು ಹಾಗೂ ಬಸವಾಭಿಮಾನಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಚನ ಸಂಗೀತದ ಮೂಲಕವೂ ವಚನ ಸಂದೇಶವನ್ನು ಜನರಿಗೆ ತಲುಪಿಸಲಾಯಿತು. ವಚನ ಸುನಾದ ಸಂಗೀತ ಬಳಗದವರಿಂದ ಸಂಗೀತ ಕಾರ್ಯಕ್ರಮ, ಯೋಗಾಂಗ ತ್ರಿವಿಧಿ ಪಾರಾಯಣ ನಡೆಯಿತು.
ಸುಲೋಚನಾ ಭೂಸನೂರ ಸ್ವಾಗತಿಸಿದರು. ಲಕ್ಷ್ಮಿ ಶಿವಳ್ಳಿ ನಿರೂಪಿಸಿದರು. ಪ್ರಭು ಅಂಗಡಿ ಶರಣು ಸಮರ್ಪಿಸಿದರು.

ವಚನ ಚಿಂತನೆ
ಕಾರ್ಯಕ್ರಮದಲ್ಲಿ ಕಾಯಕ–ದಾಸೋಹದ ಮಹತ್ವದ ಬಸವಣ್ಣನವರ ಈ ವಚನದ ಕುರಿತು ವಚನ ಚಿಂತನೆ ನಡೆಯಿತು:
“ನಾನು ಆರಂಬವ ಮಾಡುವೆನಯ್ಯಾ ಗುರುಪೂಜೆಗೆಂದು,
ನಾನು ಬೆವಹಾರವ ಮಾಡುವೆನಯ್ಯಾ ಲಿಂಗಾರ್ಚನೆಗೆಂದು,
ನಾನು ಪರಸೇವೆಯ ಮಾಡುವೆನಯ್ಯಾ ಜಂಗಮ ದಾಸೋಹಕ್ಕೆಂದು.
ನಾನಾವ ಕರ್ಮಂಗಳ ಮಾಡಿದರೆಯೂ ಆ ಕರ್ಮದ ಫಲಭೋಗ ನೀ ಕೊಡುವೆ ಎಂಬುದ ನಾನು ಬಲ್ಲೆನು.
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದ ಕ್ರೀಯ ಮಾಡೆನು; ನಿಮ್ಮ ಸೊಮ್ಮಿಂಗೆ ಸವೆಸುವೆನು, ನಿಮ್ಮಾಣೆ ಕೂಡಲಸಂಗಮದೇವಾ.”
ಈ ವಚನದ ಆಶಯವನ್ನು ವಿವರಿಸಿದ ಗುಳೇದಗುಡ್ಡ ಬಸವಕೇಂದ್ರದ ಅನುಭಾವಿಗಳಾದ ಡಾ. ಗಿರೀಶ ನೀಲಕಂಠಮಠ ಅವರು, ಆತ್ಮೋದ್ದಾರ (ವ್ಯಕ್ತಿಶುದ್ಧಿ), ಸಮಸಮಾಜ ದೃಷ್ಟಿ, ಕಾಯಕ ಮತ್ತು ದಾಸೋಹಗಳು ಬಸವಧರ್ಮದ ಮೂಲಭೂತ ತತ್ವಗಳು ಎಂದು ಹೇಳಿದರು.

ಅವರು ಮುಂದುವರಿದು, ನಾವು ಮಾಡುವ ಯಾವುದೇ ಕೆಲಸವಿರಲಿ, ಅದನ್ನು ತನು, ಮನ, ಭಾವಪೂರ್ವಕವಾಗಿ ಸತ್ಯಶುದ್ಧಿಯಿಂದ ಮಾಡಬೇಕು. ಬಂದ ಪ್ರತಿಫಲವನ್ನು ಗುರು, ಲಿಂಗ, ಜಂಗಮಕ್ಕೆ ಹಿಂದೂ ಮುಂದೂ ನೋಡದೆ ಸವೆಸಬೇಕು. ಅಂದಾಗಲೇ ಆ ಕೆಲಸ/ವೃತ್ತಿ ಕಾಯಕವೆನಿಸುತ್ತದೆ. ಆ ಕಾಯಕವೇ ಮುಂದುವರಿದು ದಾಸೋಹವಾಗಿ ಸಂಪನ್ನವಾಗುತ್ತದೆ.
“ದೈವೀಕರಣಗೊಂಡಿರುವ ವ್ಯಕ್ತಿತ್ವದ ಸಾಮಾಜೀಕರಣವೇ ಈ ಜಂಟಿ ತತ್ವಗಳಾದ ಕಾಯಕ-ದಾಸೋಹಗಳು.” ಎಂದು ಅವರು ಹೇಳಿದರು.
ಸದಾಚಾರದ ವ್ಯಾಖ್ಯಾನವನ್ನು ವಿಶ್ಲೇಷಿಸುತ್ತ “ನಾನು ಯಾವ ಕಾಯಕವಾದರೂ, ಅದನ್ನು ಗುರುಪೂಜೆಯೆಂದೇ, ಲಿಂಗಾರ್ಚನೆಯೆಂದೇ ಭಾವಿಸಿ ಮಾಡುತ್ತೇನೆ. ಈ ಪವಿತ್ರತೆಯ ಭಾವ, ಪವಿತ್ರ ಫಲವನ್ನೇ ನೀಡುತ್ತದೆ. ಭಕ್ತನನ್ನು ಭವಕ್ಕೆ ಎಳೆಸದೆ, ನಿತ್ಯಮುಕ್ತನನ್ನಾಗಿ ಮಾಡುತ್ತದೆ.” ಎಂದು ವಿವಿಧ ವಚನಗಳ ಮೂಲಕ ವಿವರಿಸಿದರು.
“ಆ ಸತ್ಕಾಯಕದಿಂದ ಬಂದ ಫಲವನ್ನು, “ಶಿವನ ಸೊಮ್ಮು ಶಿವನಿಗೆ ಸಲ್ಲಿಸಿ, ನಿಶ್ಚಿಂತನಾಗಬೇಕು”ಎಂಬ ಭಾವದಿಂದ ಗುರು, ಲಿಂಗ, ಜಂಗಮಕ್ಕೆ ಸವಿಸಿದಾಗ ಮಾತ್ರ, ಅನ್ನದೊಳಗೊಂದು ಅಗುಳಷ್ಟನ್ನೂ ಸಂಗ್ರಹಿಸದ, “ಇಂದಿಗೆ ನೂರು ವರ್ಷ ತುಂಬಿತ್ತೆಂಬ”ತೃಪ್ತಿಭಾವದ ಶರಣ ಜೀವನ ಸಾಧ್ಯವಾಗುತ್ತದೆ ಎಂದು ಅನೇಕ ದೃಷ್ಟಾಂತಗಳ ಮೂಲಕ ಮನಮುಟ್ಟುವಂತೆ ತಿಳಿಸಿದರು.

ಒಟ್ಟಿನಲ್ಲಿ, ಕಾಯಕವನ್ನು ಕೇವಲ ಜೀವನೋಪಾಯವಾಗಿ ನೋಡದೆ ಗುರುಪೂಜೆ, ಲಿಂಗಾರ್ಚನೆ ಮತ್ತು ಜಂಗಮ ದಾಸೋಹದ ಪವಿತ್ರ ಸಾಧನೆಯಾಗಿ ಕಾಣಬೇಕು ಎಂಬ ಸಂದೇಶವನ್ನು ‘ವಚನ ಶ್ರಾವಣದ ಪ್ರಾರಂಭೋತ್ಸವ’ ಕಾರ್ಯಕ್ರಮದ ಮೂಲಕ ಸಾರಲಾಯಿತು.
ವಚನ ಸಂದೇಶವು ಮನೆಮನೆಗೆ ತಲುಪುವ ಮೂಲಕ ಬಸವಧರ್ಮದ ಮೌಲ್ಯಗಳು ಜನಜೀವನದಲ್ಲಿ ಇನ್ನಷ್ಟು ಗಟ್ಟಿಯಾಗಿ ಬೇರೂರಬೇಕು ಎಂಬ ಆಶಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
