ಶಂಕರ ದಾಸೀಮಯ್ಯ, ನುಲಿಯ ಚಂದಯ್ಯ, ಅಕ್ಕನಾಗಮ್ಮ ಜಯಂತಿ ಕಾರ್ಯಕ್ರಮ
ದಾವಣಗೆರೆ:
ಕದಳಿ ವೇದಿಕೆಯ ಜಿಲ್ಲಾ ಘಟಕದಿಂದ ನಗರದ ಎ. ವಿ. ಕಮಲಮ್ಮ ಕಾಲೇಜಿನಲ್ಲಿ ಇತ್ತೀಚೆಗೆ 184 ನೆಯ ಕಮ್ಮಟದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ, ಶರಣ ಶಂಕರ ದಾಸೀಮಯ್ಯ, ಶರಣ ನುಲಿಯ ಚಂದಯ್ಯ ಹಾಗೂ ಶರಣೆ ಅಕ್ಕನಾಗಮ್ಮನವರ ಜಯಂತಿ ಮತ್ತು ದತ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶರಣೆ ಮೀನಾಕ್ಷಮ್ಮ ಮತ್ತು ಲಿಂ. ದೇವಿಗೆರೆ ವೀರಭದ್ರಪ್ಪ ದತ್ತಿ ಕಾರ್ಯಕ್ರಮದಲ್ಲಿ ಅನುಭಾವಿಗಳಾಗಿ ಶರಣ ಮಂಜುನಾಥ ಕುರ್ಕಿ ಆಗಮಿಸಿದ್ದರು. ಅವರು ಮಾತನಾಡುತ್ತ, ಸಾಹಿತ್ಯದಲ್ಲಿ ಶ್ರೇಷ್ಠವಾದುದು ವಚನ ಸಾಹಿತ್ಯ. 12 ನೇ ಶತಮಾನದ ಶಿವಶರಣರು ಅದನ್ನು ಶ್ರೀಮಂತಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಶಿವಶರಣರು ವಚನಗಳಲ್ಲಿ ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯಗಳು, ಸಮಾನತೆ ಮತ್ತು ಕಾಯಕದ ಮಹತ್ವವನ್ನು ಸಾರಿದವರು. ಇಂತಹ ಅಮೂಲ್ಯ ವಚನ ಸಾಹಿತ್ಯವನ್ನು ಉಳಿಸಿ, ಬೆಳೆಸಿ, ಅನುಷ್ಠಾನಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ದತ್ತಿ ದಾನಿಗಳಾದ ಗಿರೀಶ ಅವರು ತಮ್ಮ ಮಾತುಗಳಲ್ಲಿ ತಮ್ಮ ತಂದೆಯವರ ಕುರಿತು ಅಭಿಮಾನದ ಮಾತುಗಳನ್ನು ವ್ಯಕ್ತಪಡಿಸಿದರು.
ಉಪಸಂಚಾಲಕರಾದ ಪ್ರಮಿಳಾ ನಟರಾಜ ಅವರು ಮಾತನಾಡಿ, ಶರಣ ಸಾಹಿತ್ಯ ಪರಿಷತ್ತಿನ ಸ್ಥಾಪಕರಾದ ಸುತ್ತೂರಿನ ಜಗದ್ಗುರು ಲಿಂಗೈಕ್ಯ ಶ್ರೀ ರಾಜೇಂದ್ರ ಮಹಾಸ್ವಾಮಿಗಳು ಶ್ರಮವಹಿಸಿ ಮಕ್ಕಳಿಗೆ ಶಿಕ್ಷಣ ಹಾಗೂ ವಸತಿ ನಿಲಯಗಳನ್ನು ಸ್ಥಾಪಿಸಿದ ಕುರಿತು ಹಾಗೂ ಜನ ಮಾನಸದಲ್ಲಿ ವಚನ ಸಾಹಿತ್ಯ ಬಿತ್ತುವ ಕೆಲಸವನ್ನು ಮಾಡುವ ಸಲುವಾಗಿ ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ ಬಗೆ ವಿವರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳ ಸ್ಥಾನದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ರಣದೀರ ಅವರು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷರಾದ ನಿರ್ಮಲಾ ಶಿವಕುಮಾರ ಅವರು ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳಲ್ಲಿ, ಶರಣ ಶಂಕರದಾಸಿಮಯ್ಯ, ಶರಣ ನುಲಿಯ ಚಂದಯ್ಯ, ಹಾಗೂ ಶರಣೆ ಅಕ್ಕನಾಗಮ್ಮನವರ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿ ದತ್ತಿ ದಾನಿಗಳ ಕುರಿತು, ಮನುಷ್ಯ ತನ್ನ ಸಂಪಾದನೆಯ ಒಂದು ಭಾಗವನ್ನು ಸಮಾಜದ ಹಿತಕ್ಕಾಗಿ ವಿನಿಯೋಗಿಸುವ ಗಿರೀಶ ಅವರು ನಿಜವಾದ ಅರ್ಥದಲ್ಲಿ ಸಮಾಜದ ಆಸ್ತಿಯಾಗಿದ್ದಾರೆಂದರು.
ವಚನಗಳ ವಿಶೇಷತೆ ಏನೆಂದರೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಾವು ಎಷ್ಟೇ ಮುಂದುವರಿದರೂ ನಾವು ಮಾನವೀಯ ಮೌಲ್ಯಗಳನ್ನು ಮರೆಯಬಾರದೆಂದು ತಿಳಿಸಿದರು.
ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವೇದಿಕೆ ಸದಸ್ಯರಿಗಾಗಿ ಹಾಗೂ ವಚನ ವಿಶ್ಲೇಷಣೆ ಸ್ಪರ್ಧೆಯಲ್ಲಿ ಭಾಗವಹಿಸಿದ ಕಾಲೇಜಿನ ಮಕ್ಕಳಿಗೆ ರತ್ನಾ ರೆಡ್ಡಿ ಅವರು ಬಹುಮಾನ ಕಾರ್ಯಕ್ರಮ ನಡೆಸಿಕೊಟ್ಟರು.
ಚಂದ್ರಿಕಾ ಮಂಜುನಾಥ ಸ್ವಾಗತಿಸಿದರು. ಪೂರ್ಣಿಮಾ ಪ್ರಸನ್ನಕುಮಾರ ದತ್ತಿ, ದತ್ತಿ ದಾನಿಗಳ ಹಾಗೂ ದತ್ತಿ ಉಪನ್ಯಾಸಕರನ್ನು ಪರಿಚಯಿಸಿದರು. ನಂದಿನಿ ಗಂಗಾಧರ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾಲೇಜಿನ ವಿದ್ಯಾರ್ಥಿಗಳಿಂದ ವಚನ ಪ್ರಾರ್ಥನೆ ನಡೆಯಿತು.
ಕಾರ್ಯಕ್ರಮದಲ್ಲಿ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ವಿಜಯ ಚಂದ್ರಶೇಖರ, ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಮಮತ ನಾಗರಾಜ, ಸಲಹಾ ಸಮಿತಿ ಸದಸ್ಯರಾದ ನೀಲ್ಗುಂದ ಜಯಮ್ಮ, ವಿನೋದಾ ಅಜಗಣ್ಣನವರ, ಸಮಿತಿ ಸದಸ್ಯರಾದ ವಸಂತ ಕೆ. ಆರ್., ವೇದಿಕೆಯ ಸದಸ್ಯರಾದ ಗಿರಿಜಮ್ಮ ಮಧುಮತಿ ಗಿರೀಶ, ಕಾಲೇಜಿನ ಪ್ರಾಧ್ಯಾಪಕರಾದ ಗೀತಾ ಬಸವರಾಜ ಹಾಗೂ ಕವಿತಾ ಹಾಗೂ ಕಾಲೇಜಿನ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
