ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿ ಅಮಿತ್ ಬದ್ದಿ ಆಯುಕ್ತರನ್ನು ಸನ್ಮಾನಿಸಿರುವ ಫೋಟೋ ವೈರಲ್ ಆಗಿದೆ.
ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಭೂಷಣ್ ಬೋರಸೆ ಅವರಿಗೆ ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿ ಹಾಗೂ ಗಾಂಜಾ ಪ್ರಕರಣದ ಆರೋಪಿ ಸನ್ಮಾನ ಮಾಡಿರುವ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿ ಅಮಿತ್ ಬದ್ದಿ ಆಯುಕ್ತರನ್ನು ಸನ್ಮಾನಿಸಿರುವ ಫೋಟೋ ವೈರಲ್ ಆಗಿದೆ.
ಜೊತೆಗೆ ಎನ್‌ಡಿಪಿಎಸ್ ಪ್ರಕರಣ (NDPS Case)ದಲ್ಲಿ ಆರೋಪಿ ಎನ್ನಲಾದ ಖೇತ್‌ಸಿಂಗ್ ರಾಜಪುರೋಹಿತ ಎಂಬುವವರು ಆಯುಕ್ತರಿಗೆ ಹೂಗುಚ್ಛ ನೀಡಿ ಸನ್ಮಾನ ಮಾಡಿರುವ ಫೋಟೋಗಳು ಕೂಡಾ ವೈರಲ್ ಆಗಿದೆ.
ಈ ಮೊದಲು ಕಮಿಷನರ್ ಆಗಿದ್ದ ಎನ್ ಶಶಿಕುಮಾರ್ ಇತ್ತೀಚೆಗೆ ವರ್ಗಾವಣೆಗೊಂಡಿದ್ದರು. ಅವರ ಸ್ಥಾನಕ್ಕೆ ನೂತನ ಆಯುಕ್ತರಾಗಿ ಭೂಷಣ್ ಬೋರಸೆ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಈ ಆರೋಪಿಗಳು ಪೊಲೀಸ್ ಆಯುಕ್ತರ ಕಚೇರಿಗೆ ಪ್ರವೇಶಿಸಿ ಸನ್ಮಾನ ಮಾಡಿದ್ದಾರೆ.
ಭೂಷಣ್ ಬೋರಸೆ ಅವರು ಅಧಿಕಾರ ವಹಿಸಿಕೊಂಡ ಕೂಡಲೇ ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಇದೀಗ ಡ್ರಗ್ಸ್ ಪ್ರಕರಣದ ಆರೋಪಿಯಿಂದಲೇ ನೂತನ ಆಯುಕ್ತರಿಗೆ ಸನ್ಮಾನ ನಡೆದಿದೆ.
ಆಯುಕ್ತರ ಸ್ಪಷ್ಟನೆ:
ವಿವಾದಕ್ಕೆ ನೂತನ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.
“ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ದಿನವೇ ಎಲ್ಲರ ಹಿನ್ನೆಲೆ ಅರಿಯಲು ಸಾಧ್ಯವೇ? ಆ ದಿನ ಶುಭ ಕೋರಲು ಸುಮಾರು 200ಕ್ಕೂ ಅಧಿಕ ಜನ ಆಗಮಿಸಿದ್ದರು. ಗಣ್ಯರು, ಸಂಘಟನೆಗಳ ಮುಖಂಡರು ಗುಂಪು ಗುಂಪಾಗಿ ಬಂದು ಭೇಟಿ ಮಾಡಿದರು. ಅಂದು ಆಯುಕ್ತರ ಕಚೇರಿ ಜನಜಂಗುಳಿಯಿಂದ ಕೂಡಿತ್ತು. ಸ್ಥಳೀಯ ಪೊಲೀಸ್ ಸಿಬ್ಬಂದಿ ಅಂತಹ ವ್ಯಕ್ತಿಗಳು ಬಂದಿರುವುದನ್ನು ಗಮನಿಸಿಲ್ಲ ಎಂದು ಕಾಣಿಸುತ್ತೆ. ಅಪರಾಧ ಹಿನ್ನೆಲೆಯುಳ್ಳವರು ಕಚೇರಿ ಪ್ರವೇಶಿಸದಂತೆ ಎಚ್ಚರಿಕೆ ವಹಿಸಲು ಓರ್ವ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡುವೆ.”
