ದೀರ್ಘ ಹೋರಾಟದ ನಂತರ ಬಂದ ನೀರು: ಲಿಂಗಾಯತ ಸ್ವಾಮೀಜಿಗಳ ಸಂತಸ

ಬಸವ ಮೀಡಿಯಾ
ಬಸವ ಮೀಡಿಯಾ

ಸ್ಮರಣೀಯ ದಿನಕ್ಕೆ ಸಾಕ್ಷಿಯಾದ ಪಂಡಿತಾರಾಧ್ಯ, ಮರುಳಸಿದ್ಧ ಸ್ವಾಮೀಜಿ

ಸಾಣೇಹಳ್ಳಿ:

ತರೀಕೆರೆ ತಾಲ್ಲೂಕಿನ ಶಾಂತಿಪುರದ ಬಳಿ ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ಹೊಸದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕುಗಳಿಗೆ ಸೋಮವಾರ ಅಧಿಕೃತವಾಗಿ ಬಿಡಲಾಯಿತು.

ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಪೂಜ್ಯ ಪಂಡಿತಾರಾಧ್ಯ ಸ್ವಾಮೀಜಿಗಳು ನೀರನ್ನು ವೀಕ್ಷಿಸಿ ಮಾತನಾಡಿ; “ಕಳೆದ 30 ವರ್ಷಗಳಿಂದ ಅನೇಕ ಮಹನೀಯರು ಈ ನೀರಿಗಾಗಿ ನಿರಂತರ ಹೋರಾಟ ನಡೆಸಿದ್ದಾರೆ. ಇಂದು ಆ ಹೋರಾಟದ ಫಲ ದೊರೆತಿದ್ದು, ಅಗಲಿದ ಹೋರಾಟಗಾರರನ್ನು ಮೊದಲು ಸ್ಮರಿಸಬೇಕಾಗಿದೆ.

ತರೀಕೆರೆ ಮತ್ತು ಹೊಸಹಳ್ಳಿ ಭಾಗದಲ್ಲಿ ಜಮೀನು ನೀಡಲು ರೈತರು ನಡೆಸಿದ್ದ ಮುಷ್ಕರದ ಸಂದರ್ಭದಲ್ಲಿ, ಅವರನ್ನು ಸಾಣೇಹಳ್ಳಿಗೆ ಕರೆಸಿ ಮನವೊಲಿಸಿ ಸಮಸ್ಯೆ ಪರಿಹರಿಸಲಾಗಿತ್ತು. ಇಷ್ಟಾದರೂ ನೀರು ಬಂದಿರುವುದು ಖುಷಿಯ ಸಂಗತಿ.

“ರೈತರು ಕೇವಲ ನೀರು ಬಂದ ತಕ್ಷಣ ಜಾಗೃತಿ ಕಳೆದುಕೊಳ್ಳಬಾರದು. ‘ಆರಂಭಶೂರತ್ವ’ ಬಿಟ್ಟು ಸದಾ ಜಾಗೃತರಾಗಿದ್ದರೆ ಮಾತ್ರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೂ ನೀರು ತಲುಪಿಸಲು ಸಾಧ್ಯ. ಸರ್ಕಾರ ಉಳಿದ ತಾಲ್ಲೂಕುಗಳನ್ನೂ ತಕ್ಷಣವೇ ಬರಪೀಡಿತ ಪಟ್ಟಿಗೆ ಸೇರಿಸಿ ಪರಿಹಾರ ನೀಡಬೇಕು. ರೈತರ ನೆಮ್ಮದಿಯಲ್ಲೇ ನಮ್ಮ ನೆಮ್ಮದಿ ಇದೆ,” ಎಂದರು.

ಶಿವಮೊಗ್ಗ ಬಸವಕೇಂದ್ರದ ಪೂಜ್ಯ ಮರುಳಸಿದ್ಧ ಸ್ವಾಮಿಗಳು ಮಾತನಾಡಿ, “ಶತಮಾನಗಳ ಬರದ ಅನುಭವದ ನಂತರ ಇಂದು ಭದ್ರಾ ನದಿ ಬಯಲು ಸೀಮೆಯತ್ತ ಹರಿದು ಬಂದಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇದು ಒಬ್ಬಿಬ್ಬರ ಹೋರಾಟವಲ್ಲ. ಈ ಯೋಜನೆಗಾಗಿ ಶ್ರಮಿಸಿದ ಎಲ್ಲ ನಾಯಕರು ಹಾಗೂ ರೈತರ ಶ್ರಮ ಅಭಿನಂದನಾರ್ಹ.

ನೀರು ನಿರಂತರವಾಗಿ ಹರಿಯಲು ರೈತರು ತಮ್ಮ ಗಟ್ಟಿ ಧ್ವನಿಯನ್ನು ಕಾಯ್ದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ‘ಕನ್ನಡಪ್ರಭ’ ಜಿಲ್ಲಾ ಮುಖ್ಯ ವರದಿಗಾರ ಷಣ್ಮುಖ, ರೈತ ಸಂಘದ ಮುಖಂಡರಾದ ಲಿಂಗಾರೆಡ್ಡಿ, ಇಸಾಕ್ ಹಾಗೂ ಹಲವಾರು ರೈತ ಮುಖಂಡರು ಉಪಸ್ಥಿತರಿದ್ದರು.

ಷಣ್ಮುಖ ಅವರು ಸರ್ವರನ್ನೂ ಸ್ವಾಗತಿಸಿದರು.

ದಶಕಗಳ ಕನಸು ನನಸಾದ ಹಿನ್ನೆಲೆಯಲ್ಲಿ ನೀರು ವೀಕ್ಷಿಸಲು ಆಗಮಿಸಿದ್ದ ನೂರಾರು ರೈತರ ಮುಖದಲ್ಲಿ ಸಂಭ್ರಮ ಮತ್ತು ಹರ್ಷ ಎದ್ದು ಕಾಣುತ್ತಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *