ಕಲಬುರ್ಗಿ, ಗೌರಿ ಹತ್ಯೆ: ಮುಗಿಯದ ವಿಚಾರಣೆ, ಮರೀಚಿಕೆಯಾದ ನ್ಯಾಯ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಹುಬ್ಬಳಿ-ಧಾರವಾಡದ ನೂತನ ಪೊಲೀಸ್ ಆಯುಕ್ತ ಅವರಿಗೆ ಗೌರಿ ಲಂಕೇಶ್ ಹತ್ಯೆ ಅಮಿತ್ ಬದ್ದೆ ಆರೋಪಿ ಸನ್ಮಾನ ಮಾಡುತ್ತಿರುವ ಫೋಟೋ ವೈರಲ್ ಆಗಿದೆ.

ಕಾರ್ಯಕ್ರಮದ ದಿನ 200 ಜನ ಬಂದು ಸನ್ಮಾನ ಮಾಡಿದ್ದರಿಂದ ಗೊತ್ತಾಗದೆ ಅಚಾತುರ್ಯ ನಡೆದಿದೆ, ಎಂದು ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.

ಗೌರಿ ಮತ್ತು ಎಂ.ಎಂ. ಕಲಬುರ್ಗಿ ಹತ್ಯೆಯಾಗಿ ಕ್ರಮವಾಗಿ ಒಂಬತ್ತು ಮತ್ತು ಹನ್ನೊಂದು ವರ್ಷಗಳು ಕಳೆದಿವೆ. ಕಳೆದ 10 ದಿನಗಳಲ್ಲಿ ಇವರ ಸ್ಮರಣೆಯಲ್ಲಿ ಅನೇಕ ಕಾರ್ಯಕ್ರಮಗಳು ನಡೆದಿವೆ.

ಇಬ್ಬರು ಲಿಂಗಾಯತ ಧುರೀಣರ ಹತ್ಯೆಯಲ್ಲಿ ಆರೋಪಿಗಳಿಗೆ ಶಿಕ್ಷೆ ನೀಡುವ ಗಂಭೀರತೆ ವ್ಯವಸ್ಥೆಯಲ್ಲಿ ಇಲ್ಲದಿರುವುದಕ್ಕೆ ಈ ಸನ್ಮಾನ ಮತ್ತೊಂದು ಸಣ್ಣ ನಿದರ್ಶನವಷ್ಟೇ.

ಕಳೆದ ವರ್ಷ ಗೌರಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗೆ ಬಂದ ಅಮಿತ್ ಬದ್ದಿ ಮತ್ತು ಗಣೇಶ ಮಿಸ್ಕಿನ್ ಅವರಿಗೆ ಹುಬ್ಬಳ್ಳಿ, ವಿಜಯಪುರಗಳಲ್ಲಿ ಹಿಂದುತ್ವಗುಂಪುಗಳಿಂದ ಸಂಭ್ರಮದ ಸ್ವಾಗತ ದೊರಕಿತ್ತು.

ಗೌರಿ ಪ್ರಕರಣದ ಇನ್ನೊಬ್ಬ ಆರೋಪಿ, ಶ್ರೀಕಾಂತ್ ಪಂಗಾರ್ಕರ್, ಜಾಮೀನಿನ ಮೇಲೆ ಹೊರಬಂದರೂ ಈಗ ಮಹಾರಾಷ್ಟ್ರದ ಜಲ್ನಾ ನಗರದ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದಾರೆ.

ಈ ಎರಡೂ ಪ್ರಕರಣಗಳ ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದಾರೆ ಎಂಬುದನ್ನು ಗಮನಿಸಬೇಕು.

ಅವರ ವಿಚಾರಣೆ ಇನ್ನೂ ನಡೆಯುತ್ತಿವೆ. ಅದು ಸಧ್ಯದಲ್ಲೇ ಅಂತ್ಯಗೊಳ್ಳುವ ಯಾವುದೇ ಲಕ್ಷಣವೂ ಕಾಣುತಿಲ್ಲ.

ಈಗ ತಿಂಗಳಿಗೆ ನಾಲ್ಕು ದಿನ ವಿಚಾರಣೆ ನಡೆಯುತ್ತಿದೆ. ಗೌರಿ ಪ್ರಕರಣದಲ್ಲಿ 532 ಸಾಕ್ಷಿಗಳಲ್ಲಿ, ಇಲ್ಲಿಯವರೆಗೆ ಪ್ರಾಸಿಕ್ಯೂಷನ್ 220 ಸಾಕ್ಷಿಗಳನ್ನು ವಿಚಾರಣೆ ಮಾಡಿದೆ. 130 ಸಾಕ್ಷಿಗಳನ್ನು ಬಿಟ್ಟುಕೊಟ್ಟಿದೆ ಅಂದರೆ ಇನ್ನೂ 180 ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ವಿಚಾರಣೆ ಮಾಡಬೇಕಾಗಿದೆ.

ಕಲ್ಬುರ್ಗಿ ಪ್ರಕರಣದ ವಿಚಾರಣೆ ಇನ್ನೂ ನಿಧಾನವಾಗಿ ಸಾಗುತ್ತಿದೆ. ಇಲ್ಲಿ ಕೊನೆಯ ವಿಚಾರಣೆ ನಡೆದಿದ್ದು ಏಪ್ರಿಲ್ 2026ರಲ್ಲಿ, ಮುಂದಿನ ವಿಚಾರಣೆಯ ದಿನಾಂಕ ಸೆಪ್ಟೆಂಬರ್ 23.

139 ಸಾಕ್ಷಿಗಳಲ್ಲಿ, ಪ್ರಾಸಿಕ್ಯೂಷನ್ 33 ಸಾಕ್ಷಿಗಳನ್ನು ವಿಚಾರಣೆ ಮಾಡಿದೆ. 30 ಸಾಕ್ಷಿಗಳನ್ನು ಬಿಟ್ಟುಕೊಟ್ಟಿದೆ ಅಂದರೆ ಇನ್ನೂ 77 ಸಾಕ್ಷಿಗಳನ್ನು ವಿಚಾರಣೆ ಮಾಡಬೇಕಾಗಿದೆ.

ಈ ಎರಡೂ ಪ್ರಕರಣಗಳಲ್ಲಿ ನ್ಯಾಯ ಸಿಗುವ ಭರವಸೆ ಕಲಬುರ್ಗಿ, ಗೌರಿಯ ಆಪ್ತರು ಕಳೆದುಕೊಂಡಿದ್ದಾರೆ.

“ಪ್ರಕರಣದ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವ ಪ್ರಸ್ತಾಪವು ಸಹ ಫಲ ನೀಡಲಿಲ್ಲ. ವಿಚಾರಣೆ ಪ್ರಾರಂಭವಾದಾಗಿನಿಂದ ಏಳು ನ್ಯಾಯಾಧೀಶರು ಬದಲಾಗಿದ್ದಾರೆ ಮತ್ತು ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಇದ್ದಾರೆ” ಎಂದು ಕವಿತಾ ಲಂಕೇಶ್ ಹೇಳುತ್ತಾರೆ.

2015ರಲ್ಲಿ ಕಲಬುರ್ಗಿಯವರ ಕೊಲೆಯ ಮುನ್ನ ನರೇಂದ್ರ ದಾಭೋಲ್ಕರ್ (2013) ಮತ್ತು ಗೋವಿಂದ್ ಪನ್ಸಾರೆ (2015) ಅವರನ್ನು ಮಹಾರಾಷ್ಟ್ರದಲ್ಲಿ ಕೊಲ್ಲಲಾಗಿತ್ತು. ಈ ಪ್ರಕರಣಗಳೂ ಬಗೆಹರಿಯದೆ ಉಳಿದಿವೆ.

ಗೌರಿ ಹತ್ಯೆಯ ನಂತರ ರಚನೆಯಾದ ಐಪಿಎಸ್ ಅಧಿಕಾರಿ ಬಿ.ಕೆ. ಪಾಲ್ ನೇತೃತ್ವದ ಎಸ್‌ಐಟಿ ಪ್ರಕರಣವನ್ನು ಭೇದಿಸಿ, ಗೋವಾ ಮೂಲದ ಸನಾತನ ಸಂಸ್ಥೆ ಮತ್ತು ಅದರ ಸಹೋದರಿ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರುವ ಒಂದು ಉಗ್ರವಾದಿಗಳ ತಂಡ “ಹಿಂದೂ ವಿರೋಧಿ” ಎಂದು ಪರಿಗಣಿಸಿದ ಜನರನ್ನು ಕೊಲ್ಲಲು ಸಂಚು ರೂಪಿಸಿತ್ತು ಎಂದು ಆರೋಪಿಸಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
3 Comments
    • ನ್ಯಾಯ ಈವತ್ತು ಸಿಗುತ್ತೆ, ನಾಳೆ ಸಿಗುತ್ತೆ, ನಾಡಿದ್ದು ಸಿಗುತ್ತೆ ಎಂಬೆ ಆಸೆಯೊಂದಿಗೆ ನಮ್ಮ ಜೀವನದ ಪಯಣವೇ (ಸುಮಾರು ಜನಗಳ) ಮುಗಿದು ಹೋಗುತ್ತಿದೆ ಆದರೆ ನ್ಯಾಯ ಮಾತ್ರ ನಮಗೆ ಸಿಗುತ್ತಿಲ್ಲ ಆದಕ್ಕೆ ಕಾರಣ …………………………………… ಯಾರು ?

  • ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಯಲ್ಲಿ ನ್ಯಾಯಾಂಗ ನಡೆದುಕೊಳ್ಳುವ ರೀತಿಗೆ ಹಿಡಿದ ಕೈಗನ್ನಡಿಯಂತಿದೆ. ಇದರಲ್ಲಿ ಹಲವಾರು ರೀತಿಯ ವ್ಯವಸ್ಥಿತ ಕಾಣದ ಕೈಗಳು ಕೆಲಸ ಮಾಡಿರುವ ಅನುಮಾನಗಳಿವೆ. ಇಲ್ಲವಾದಲ್ಲಿ ಹೀಗೆ ನಾಲ್ಕು ಒಂದೇ ತೆರನಾದ ಸರಣಿ ಹತ್ಯೆಗಳನ್ನು ಇಷ್ಟು ವರ್ಷಗಳ ತನಕ ವ್ಯವಸ್ಥಿತ ರೀತಿಯಲ್ಲಿ ವಿಚಾರಣೆ ನಡೆಸಿ ಅಂತಿಮ ತೀರ್ಪು ಕೊಡಲು ಸಾಧ್ಯವಾಗಿಲ್ಲ ಎಂದರೆ ಇದರ ಹಿಂದಿರುವ ಕಾಣದ/ಕಾಣುವ ಕೈಗಳು ಯಾವುವು? ಇಷ್ಟೊಂದು ಬಹಿರಂಗವಾಗಿ ತಪ್ಪಿತಸ್ಥರು ಎಂದು ಗುರುತಿಸಿ ವಿಚಾರಣೆಗೆ ಒಳಪಡಿಸಿದವರನ್ನು ಸನ್ಮಾನಿಸುವುದು, ದೊಡ್ಡ ದೊಡ್ಡ ರಾಜಕಾರಣಿಗಳು ಮತ್ತು ಅಧಿಕಾರಿಗಳ ಸಂಪರ್ಕದಲ್ಲಿರುವುದು ಏನನ್ನು ತೋರಿಸುತ್ತದೆ?

Leave a Reply

Your email address will not be published. Required fields are marked *