ಸಂಡೂರು:
ವಚನಗಳ ಅಧ್ಯಯನ ಹಾಗೂ ಅನುಸರಣೆಯಿಂದ ನಮ್ಮ ಬದುಕಿನ ಮೌಲ್ಯ ವೃದ್ಧಿಯಾಗಿ, ನಮ್ಮಲ್ಲಿ ಮಾನವೀಯ ಮೌಲ್ಯಗಳು ಬೆಳೆದು ಬರುತ್ತವೆ.
ವಿದ್ಯಾರ್ಥಿ-ಯುವಜನರು ಮೊಬೈಲ್ ಗೀಳಿನಿಂದ ಹೊರಬಂದು ವಚನಗಳ ಅಧ್ಯಯನ ಮಾಡಿ ಅವುಗಳ ಸಾರವನ್ನು ಅರಿತುಕೊಂಡು ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಕೆ. ಪ್ರೇಮಾ ಹೇಳಿದರು.
ಪಟ್ಟಣದ ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠದಲ್ಲಿ ಶ್ರೀಮಠ ಹಾಗೂ ಅಕ್ಕನ ಬಳಗದ ಸಹಯೋಗದಲ್ಲಿ ಸೆಪ್ಟೆಂಬರ್ 5 ರಿಂದ 9ರವರೆಗೆ ಹಮ್ಮಿಕೊಂಡಿರುವ ಶರಣ ಶ್ರವಣ ಶರಣ ಚರಿತಾಮೃತ ಪ್ರವಚನ ಕಾರ್ಯಕ್ರಮ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಶರಣರ ವಚನಗಳ ಸ್ಮರಣೆಯಿಂದ ನಮ್ಮಲ್ಲಿ ಧನಾತ್ಮಕ ಚಿಂತನೆಗಳು ಬೆಳೆಯಲು ಸಾಧ್ಯ. ಅವುಗಳು ನಮ್ಮನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತವೆ. ಇಂದಿನ ಮಕ್ಕಳಿಗೆ ವಚನಗಳನ್ನು ಕಲಿಸುವುದು ಅಗತ್ಯವಾಗಿದೆ ಎಂದರು.
ಹೊಸಪೇಟೆಯ ನಿವೃತ್ತ ಪ್ರಾಚಾರ್ಯ ಡಿ.ಎಂ. ಮಲ್ಲಿಕಾರ್ಜುನಯ್ಯ ತಮ್ಮ ಪ್ರವಚನದಲ್ಲಿ ಸಮ್ಯಕ್ ಜ್ಞಾನ ಸರ್ವಭೂಷಣ ಶಿವಯೋಗಿಗಳ ಜನನ, ಬಾಲ್ಯ, ಶಿಕ್ಷಣ, ದೇಶ ಸಂಚಾರ, ಸಾಹಿತ್ಯ ಕೃತಿಗಳ ಕುರಿತು ತಿಳಿಸಿದರು.

ಮಹಾಜ್ಞಾನಿಯಾಗಿದ್ದ ಸರ್ವ ಭೂಷಣ ಶಿವಯೋಗಿಗಳು ಕೈವಲ್ಯ ಕಲ್ಪವಲ್ಲಿ ಎಂಬ ಕೃತಿ ರಚಿಸಿ, ಆಧ್ಯಾತ್ಮಿಕ ಜ್ಞಾನ ತಿಳಿಸಿದರು. ದೇಶ ಸಂಚಾರ ಮಾಡಿ ಅನುಭಾವಿಗಳಾದರು. ಜಾತಿಭೇದ ವಿರೋಧಿಸಿದ್ದಲ್ಲದೆ, ಮನುಷ್ಯರನ್ನು ಮಹಾತ್ಮರನಾಗಿಸಲು ಶ್ರಮಿಸಿದರು ಎಂದರು.
ಪ್ರಸಾದದ ಸೇವೆ ಕೈಗೊಂಡಿದ್ದ ಪತ್ರಕರ್ತ ಅರಳಿ ಕುಮಾರಸ್ವಾಮಿ ಮಾತನಾಡಿ, ಪ್ರಭುಸ್ವಾಮಿಗಳ ಸಾನಿಧ್ಯದಲ್ಲಿ ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರ ಶಿವಾನುಭವಗೋಷ್ಠಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಬೈಲುವದ್ದಿಗೇರಿಯ ಡಿ. ಎಂ. ಯರಿಸ್ವಾಮಿ ಗವಾಯಿಗಳು ಪುರಾಣ ಪಠಣ ಹಾಗೂ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕುಡತಿನಿಯ ಡಿ. ತಿಪ್ಪೇಸ್ವಾಮಿ ತಬಲಾ ಸಾಥ್ ನೀಡಿದರು.
ಶ್ರೀಮಠದ ಪ್ರಭುಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಅಕ್ಕನ ಬಳಗದ ಅಧ್ಯಕ್ಷೆ ಸರೋಜ ಪ್ರಕಾಶ ಜ್ಯೋತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಿರ್ಮಲ ಬಸವರಾಜ ಗೋನಾಳ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಂತಮ್ಮ ಚರಂತಯ್ಯ ಸ್ವಾಗತಿಸಿದರು. ವಿಶಾಲ ಕುಮಾರಸ್ವಾಮಿ ಉಗ್ರಾಣದ ಪ್ರೇಮಾ ಕೆ. ಅವರ ವ್ಯಕ್ತಿ ಪರಿಚಯ ಮಾಡಿಕೊಟ್ಟರು.

ವಿದ್ಯಾ ಶಶಿಧರ ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ತೆಕ್ಕಲಕೋಟೆ ವಂದಿಸಿದರು.
ಅಕ್ಕನ ಬಳಗದ ಗೌರವಾಧ್ಯಕ್ಷೆ ಶಾಂತಮ್ಮ ಪ್ರಭುರಾಜ, ಅಂಕಮನಾಳ, ಹಿರಿಯ ಸಲಹಾ ಸಮಿತಿ ಸದಸ್ಯೆ ಚೆನ್ನಮ್ಮ ದೊರೆಗೌಡ್ರು, ಎಲ್. ವಸಂತಮ್ಮ ಕುಮಾರಸ್ವಾಮಿ, ನಿಕಟಪೂರ್ವ ಅಧ್ಯಕ್ಷೆ ಜ್ಯೋತಿ ನಾಗರಾಜ ಗುಡಿಕೋಟಿ, ಬಪ್ಪಕಾನ್ ಕುಮಾರಸ್ವಾಮಿ, ಹಗರಿ ಬಸವರಾಜಪ್ಪ, ಎಂ. ಚರಂತಯ್ಯ, ಗುಡಿಕೋಟಿ ನಾಗರಾಜ, ವೀರಯ್ಯಸ್ವಾಮಿ, ಚಂದ್ರಶೇಖರಪ್ಪ, ಮಂಗಾಪುರ ಈರಣ್ಣ, ಪುಂತಕಲ್ ವೀರೇಶ, ಹಗರಿ ಯೋಗೇಶ್, ಎಚ್. ಕೊಟ್ರಬಸಪ್ಪ, ಸರ್ವ ಸದಸ್ಯರು ಉಪಸ್ಥಿತರಿದ್ದರು.
