ಕಲಬುರಗಿ:
ಬಸವಣ್ಣನವರ ಸಮಕಾಲೀನರಾಗಿದ್ದ ಶರಣೆ ಹಡಪದ ಲಿಂಗಮ್ಮನವರು ಕೇವಲ ವಚನಕಾರ್ತಿಯಷ್ಟೇ ಅಲ್ಲ. ವೈಚಾರಿಕ ಚಿಂತಕಿ, ಅದ್ಭುತ ಆಧ್ಯಾತ್ಮಿಕ ಎತ್ತರ ಹೊಂದಿದ್ದ ಜ್ಣಾನಮಯಿ ಎಂದು ಶರಣ ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಹೇಳಿದರು.
ವಚನೋತ್ಸವ ಪ್ರತಿಷ್ಠಾನದ ವತಿಯಿಂದ ಶ್ರಾವಣಮಾಸದ ಪ್ರಯುಕ್ತ ಮನೆಯಂಗಳದಲ್ಲಿ ಶ್ರಾವಣ ಶರಣ ಕಾರ್ಯಕ್ರಮದ ಅಂಗವಾಗಿ ಕುಬೇರ ನಗರದ ಹನುಮಾನ ಮಂದಿರದ ಯೋಗ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಶರಣ ದರ್ಶನ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಹಡಪದ ಲಿಂಗಮ್ಮನವರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಹಡಪದ ಅಪ್ಪಣ್ಣನವರ ಮಡದಿಯಾಗಿದ್ದ ಲಿಂಗಮ್ಮನವರು ಸ್ವತಂತ್ರ ವಿಚಾರಧಾರೆ, ದಿಟ್ಟ ನಿಲುವುಗಳಿಂದ ಶರಣ ಸಂಕುಲದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದರು.
ಬಸವಣ್ಣನವರ ಆಪ್ತಸಾಯಕರಾಗಿದ್ದ ಅಪ್ಪಣ್ಣ ಹಾಗೂ ಲಿಂಗಮ್ಮರು ಕಲ್ಯಾಣ ಕ್ರಾಂತಿಗೆ ಕೈಜೋಡಿಸಿದ್ದರು. ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಕ್ರಾಂತಿ ಇಡೀ ಜಗತ್ತಿನಲ್ಲಿಯೇ ವಿನೂತನ ಕ್ರಾಂತಿಯಾಗಿದೆ. ವಚನ ಸಾಹಿತ್ಯ ನುಡಿದಂತೆ ನಡೆದ ಸಾಹಿತ್ಯ, ಅದು ಅನುಭಾವ ಸಾಹಿತ್ಯ. ಹೀಗಾಗಿ ಇಂದಿಗೂ ಶರಣರು ಮತ್ತು ಅವರ ಸಾಹಿತ್ಯ ಜೀವಂತವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಬಸವಣ್ಣನವರ ಸಮ ಸಮಾಜದ ಕನಸಿಗೆ ಎಲ್ಲ ಶರಣ ಶರಣೆಯರು ಕೈ ಜೋಡಿಸಿದ್ದರಿಂದ ಕಲ್ಯಾಣದಲ್ಲಿ ವಚನಾಂದೋಲನ ಉಂಟಾಯಿತು.
ಮಹಿಳೆಯರಿಗೆ, ದೀನ ದುರ್ಬಲರಿಗೆ ವಚನ ಸಾಹಿತ್ಯ ಧ್ವನಿ ತಂದು ಕೊಟ್ಟಿತು. ಬಸವ ಪ್ರಜ್ಞೆಯಿಂದ ಬದುಕಿನಲ್ಲಿ ಬೆಳಕು ಮೂಡಲು ಸಾಧ್ಯ ಎಂದು ತಿಳಿಸಿದರು.

ಅತಿಥಿಯಾಗಿದ್ದ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಮಾತನಾಡಿ, ಶರಣ ನಗೆಮಾರಿ ತಂದೆಯವರು ಹಾಸ್ಯದ ಮೂಲಕ ಬದುಕಿನ ರಾಸಾಯನ ಉಣಬಡಿಸುತ್ತಿದ್ದರು. ಸತ್ಯಕ್ಕನ ಪ್ರಾಮಾಣಿಕತೆ ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಹಣಮಂತರಾವ ಭೈರಾಮಡಗಿ, ರಾಜಲಕ್ಷ್ಮಿ ಬಿರಾದಾರ, ಆಗಮಿಸಿದ್ದರು.
ಗಣೇಶ ಚಿನ್ನಾಕಾರ ಸ್ವಾಗತಿಸಿದರು. ಬಾಬುರಾವ ಚಿತಕೋಟಿ ಪ್ರಾರ್ಥಿಸಿದರು. ವಚನೋತ್ಸವ ಪ್ರತಿಷ್ಠಾನದ ಕಾರ್ಯದರ್ಶಿ ಬಸವರಾಜ ಧೂಳಾಗುಂಡಿ ಪ್ರಾಸ್ತಾವಿಕ ಮಾತನಾಡಿದರು. ಶಿವರಾಜ ಅಂಡಗಿ ನಿರೂಪಿಸಿದರು. ಕಲ್ಯಾಣಪ್ಪ ಬಿರಾದಾರ ಶರಣು ಸಮರ್ಪಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
