ಎಸ್.ಜೆ.ಎಂ. ಹಳೆ ವಿದ್ಯಾರ್ಥಿಗಳು, ನಿವೃತ್ತ ನೌಕರರಿಂದ ವಚನಾಭಿಷೇಕ

ಬಸವ ಮೀಡಿಯಾ
ಬಸವ ಮೀಡಿಯಾ

ಬದುಕು ಕಟ್ಟಿಕೊಟ್ಟ ಸಂಸ್ಥೆಗೆ ಕೃತಜ್ಞತೆ ತೋರುವುದು ಸಂಸ್ಕೃತಿಯ ಪ್ರತೀಕ: ಡಾ. ಬಸವಕುಮಾರ ಸ್ವಾಮೀಜಿ

ಚಿತ್ರದುರ್ಗ:

ಯಾವುದೇ ಕೊರತೆ ಇಲ್ಲದವರು ಮಠ, ಆಶ್ರಮ ಅಥವಾ ಸಾರ್ವಜನಿಕ ವಿದ್ಯಾರ್ಥಿನಿಲಯಗಳಿಗೆ ಸೇರಲು ಬಯಸುವುದಿಲ್ಲ. ಅದೇ ಬಡತನ ಇರುವವರು ಮೇಲಿನ ಸಂಸ್ಥೆಗಳಲ್ಲಿ ಆಶ್ರಯ ಪಡೆದು ಓದುತ್ತಾರೆ.

ಅದರಂತೆ ಕಳೆದ ೭-೮ ದಶಕಗಳ ಹಿಂದೆ ಸ್ಥಿತಿವಂತರು ಕಡಿಮೆ ಪ್ರಮಾಣದಲ್ಲಿದ್ದರು. ಬಹುತೇಕ ಗ್ರಾಮೀಣ ಭಾಗದ ಜನ ತಮ್ಮ ಮಕ್ಕಳನ್ನು ಮಠಗಳು, ಉಚಿತ ಪ್ರಸಾದ ನಿಲಯಗಳು, ಸರ್ಕಾರದ ಉಚಿತ ವಿದ್ಯಾರ್ಥಿ ನಿಲಯಗಳಿಗೆ ಸೇರಿಸಿದವರೇ ಆಗಿದ್ದಾರೆ.

ಅಂತಹ ವ್ಯವಸ್ಥೆಯಲ್ಲಿ ಓದಿ ರಾಷ್ಟ್ರ, ರಾಜ್ಯಗಳ ಚುಕ್ಕಾಣಿ ಹಿಡಿದವರು, ಓದಲು ಬಂದವರು ದೊಡ್ಡ ದೊಡ್ಡ ಮಠಗಳ ಪೀಠಾಧ್ಯಕ್ಷರಾದ ಉದಾಹರಣೆ ಶ್ರೀ ಮುರುಘಾಮಠದ ಪರಂಪರೆಯಲ್ಲಿ ಸಾಕಷ್ಟಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಠಗಳ ಕೊಡುಗೆಯ ಬಗ್ಗೆ ವಿಶ್ಲೇಷಣೆ ಮಾಡಿದರು.

ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಶಾಲಾಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರು ಶ್ರಾವಣಮಾಸದ ಪ್ರಯುಕ್ತ ಶ್ರೀಮಠದ ಮೂಲಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಏರ್ಪಡಿಸಿದ್ದ ವಚನಾಭಿಷೇಕದ ನಂತರ ಏರ್ಪಡಿಸಿದ್ದ ಸಮಾರಂಭವನ್ನುದ್ಧೇಶಿಸಿ ಮಾತನಾಡುತ್ತಿದ್ದರು.

ಒಂದು ಸಣ್ಣ ಕೆಲಸ ಮಾಡಿಕೊಟ್ಟವರಿಗೆ ನಾವು ಉಪಕೃತರಾಗಿರುತ್ತೇವೆ. ಅದೇ ಒಂದು ಸಂಸ್ಥೆಯಿಂದ ಅಥವಾ ಮಠದಿಂದ ಜೀವನ ಕಟ್ಟಿಕೊಂಡು ಆ ಸಂಸ್ಥೆಯೊಂದಿಗೆ ಒಡನಾಟ, ಪರಸ್ಪರ ಸಹಕಾರ, ಸಲಹೆ ಕೊಡದಿದ್ದರೆ ಹೇಗೆ ಎಂದ ಶ್ರೀಗಳು, ಮುರುಘಾಮಠದ ಅಂದಿನ ಶ್ರೀ ಜಯದೇವ ಜಗದ್ಗುರುಗಳವರು ಸ್ಥಾಪಿಸಿದ ಜಯದೇವ ಉಚಿತ ಪ್ರಸಾದ ನಿಲಯಗಳಲ್ಲಿ ಓದಿ ಈ ನಾಡು ಕಂಡ ಶ್ರೇಷ್ಠರಲ್ಲಿ ಒಬ್ಬರಾಗಿ ಹೋಗಿದ್ದಾರೆ. ಅಂಥ ಮಹನೀಯರಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಒಬ್ಬರು. ಅವರು ತಮ್ಮ ಮಗನಿಗೆ ಜಯದೇವ ಎನ್ನುವ ಹೆಸರನ್ನಿಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

ಮಠಗಳಲ್ಲಿರುವವರಿಗೆ ಓದಿನೊಂದಿಗೆ ಸಂಸ್ಕೃತಿ ಸನ್ನಡತೆಯ ವಿಶೇಷ ಬದುಕನ್ನು ರೂಪಿಸಿದೆ. ಮುರುಘಾಮಠಕ್ಕೆ ಓದಲು ಬಂದವರು ಎಂತೆಂತಹ ಅತ್ಯುನ್ನತ ಸ್ಥಾನ ಪಡೆದಿದ್ದಾರೆ. ಇಲ್ಲಿ ಸೇರಿರುವ ನಾವುಗಳೇ ನೋಡಿ ಅನೇಕ ಮಠಗಳ ಜವಾಬ್ದಾರಿ ಹೊತ್ತು ಸಾಗಿದ್ದೇವೆ. ಅಂತಹ ಮುರುಘೇಶನ ಸನ್ನಿಧಿಗೆ ಬರುವ ಪರಿಪಾಠ ರೂಢಿಸಿಕೊಂಡರೆ ಅದು ನಿಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ದಾರಿಯಾಗುತ್ತದೆ.

ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಮಕ್ಕಳು ಹಾಗೂ ಯುವಕರು ಬರುವುದೇ ಇಲ್ಲ. ನೀವುಗಳು ನಿಮ್ಮ ಮಕ್ಕಳನ್ನು ಕಡ್ಡಾಯವಾಗಿ ಇಂತಹ ಕಾರ್ಯಕ್ರಮಗಳಿಗೆ ಕರೆದುಕೊಂಡು ಬಂದು ಸಂಸ್ಕೃತಿಯನ್ನು ಪರಿಚಯಿಸಬೇಕಿದೆ. ಮಠಗಳು ಜೀವನ ರೂಪಿಸುವ ಶ್ರದ್ಧಾಕೇಂದ್ರಗಳು.

ಜೀವನ ನಿರ್ವಹಣೆಗೆ ಕೇವಲ ಹಣವೊಂದಿದ್ದರೆ ಸಾಲದು ಉತ್ತಮ ನಡವಳಿಕೆಯೂ ಮುಖ್ಯ. ಅಂತಹುದನ್ನು ಮುರುಘಾಮಠ ನಮಗೆ ಕಲಿಸಿದೆ. ಲಕ್ಷಾಂತರ ಕುಟುಂಬಗಳಿಗೆ ನೆರವು ನೀಡಿದೆ ಎಂದು ನುಡಿದರು.

ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿಯವರು ಮಾತನಾಡಿ, ನಾನು ಸಹ ನನ್ನ ಬಡತನ ಕಾರಣದಿಂದ ಶ್ರೀಮಠಕ್ಕೆ ಓದಲು ಬಂದವನಾಗಿದ್ದೆ. ಅಂದು ನಮ್ಮಲ್ಲಿಯೂ ತುಂಟತನಗಳಿದ್ದವು. ಜೀವನದಲ್ಲಿನ ಅನೇಕ ಪಾಠಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ. ಮುರುಘಾಮಠ ನಮ್ಮಂತ ಅನೇಕ ಯುವ ಮಠಾಧೀಶರನ್ನು ತಯಾರು ಮಾಡಿದ ಕಮ್ಮಟವಾಗಿದ್ದು ಶ್ರೀ ಮುರುಘಾಮಠ ಹೀಗೆ ಅನೇಕರ ಬಾಳಿಗೆ ಬೆಳಕನ್ನು ನೀಡಿದೆ. ನಮಗೆ ಇದೊಂದು ತವರುಮನೆ ಇದ್ದಹಾಗೆ. ಅಂತಹ ಸಂಬಂಧವಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ನುಡಿದರು.

ಸಮಾರಂಭದ ವೇದಿಕೆಯಲ್ಲಿ ದಾವಣಗೆರೆಯ ಡಾ. ಬಸವಪ್ರಭು ಸ್ವಾಮೀಜಿ, ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಬೇಲೂರಿನ ಶಿವಕುಮಾರ ಸ್ವಾಮೀಜಿ, ಆಳಂದದ ಕೋರಣೇಶ್ವರ ಸ್ವಾಮೀಜಿ, ರಾವಂದೂರಿನ ಮೋಕ್ಷಪತಿ ಸ್ವಾಮೀಜಿ, ಬಸವನಾಗಿದೇವ ಸ್ವಾಮೀಜಿ, ಬಸವ ಹರಳಯ್ಯ ಸ್ವಾಮೀಜಿ, ಮಾತೆ ಜಯದೇವಿ ತಾಯಿ, ಚಿನ್ಮಯಿತಾಯಿ, ಬಸವ ಮುರುಘೇಂದ್ರ ಸ್ವಾಮೀಜಿ, ಬಸವಾದಿತ್ಯ ದೇವರು, ಬಸವಲಿಂಗಮೂರ್ತಿ ಶರಣರು ಸೇರಿದಂತೆ ಭಕ್ತರು, ಅಭಿಮಾನಿಗಳು ವಿವಿಧ ಸಂಘ ಸಂಸ್ಥೆಗಳ ಸಮಾಜಗಳ ಪದಾಧಿಕಾರಿಗಳಾದ ಚಿದನಾಂದಪ್ಪ, ಮಲ್ಲಿಕಾರ್ಜುನಪ್ಪ, ಗಾಯತ್ರಿ ಶಿವರಾಂ, ಡಾ. ಬಿ. ರಾಜಶೇಖರಪ್ಪ, ಡಾ. ಪಿ. ಯಶೋದ, ನಾಗರಾಜ ಸಂಗಂ, ಛೇರ್ ಮಂಜುನಾಥ, ಗುತ್ತಿನಾಡು ಪ್ರಕಾಶ, ಭರಮಸಾಗರ ಪ್ರದೀಪ, ಶಿವಬಸಯ್ಯ, ಬಸವರಾಜ ಕಟ್ಟಿ, ಗೀತಾ ರುದ್ರೇಶ, ಜಯಶೀಲ ವೀರಣ್ಣ, ಶೈಲಜಾಬಾಬು, ಜಿ.ಟಿ. ನಂದೀಶ್, ಸಿ.ಎಂ. ಧರ್ಮಪ್ಪ, ಸಿ.ಎಂ. ಚಂದ್ರಪ್ಪ, ನಾಗಭೂಷಣ, ಕಡೂರು ಕುಮಾರ, ಕೃಷ್ಣಮೂರ್ತಿ, ದುಮ್ಮಿ ಶಿವಕುಮಾರ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರು ಭಾಗವಹಿಸಿದ್ದರು.

ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದ ಉಮೇಶ ಪತ್ತಾರ ಶ್ರೀ ಮುರುಘರಾಜೇಂದ್ರ ಭಕ್ತಿಗೀತೆ ಹಾಡಿದರೆ, ಕೋಕಿಲಾ ಎಂ.ಜೆ. ಹಾಗೂ ಶಶಿಕಲಾ ಬಸವರಾಜ ಅವರುಗಳು ವಚನಗೀತೆಗಳನ್ನು ಹಾಡಿದರು. ಪಿ. ವೀರೇಂದ್ರಕುಮಾರ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *