‘ಸಮಾಜಕ್ಕೆ ಸಮಸ್ತ ಸಂಪತ್ತು ಸಮರ್ಪಿಸಿದ ಶಿರಸಂಗಿಯ ಲಿಂಗರಾಜರು’

ಬಸವ ಮೀಡಿಯಾ
ಬಸವ ಮೀಡಿಯಾ

ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆ

ಚಿತ್ರದುರ್ಗ:

ಕರ್ನಾಟಕ ಏಕೆ ಭಾರತದ ಇತಿಹಾಸದಲ್ಲೇ ಒಂದು ಧರ್ಮಕ್ಕಾಗಿ, ಅದರ ಸಮುದಾಯದ ಅಭಿವೃದ್ಧಿಗಾಗಿ ತನ್ನ ಸಮಸ್ತ ಸಂಪತ್ತನ್ನು ಅರ್ಪಿಸಿದ ಶಿರಸಂಗಿ ಸಂಸ್ಥಾನದ ಅಧಿಪತಿಯಾದ ತ್ಯಾಗವೀರ ಲಿಂಗರಾಜರಂಥವರು ಮತ್ತೊಬ್ಬರಿಲ್ಲ ಎಂದು ಡಾ.ಪಿ.ಯಶೋದಾ ರಾಜಶೇಖರಪ್ಪ ಅಭಿಪ್ರಾಯಪಟ್ಟರು.

ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿರುವ ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆಯಲ್ಲಿ ಭಾನುವಾರ ಶ್ರೀಮಠದ ಬಸವೇಶ್ವರ ಸಭಾಂಗಣದಲ್ಲಿ ನಡೆದ ಶಿರಸಂಗಿಯ ದೇಸಾಯಿ ಲಿಂಗರಾಜರ ಜೀವನ ಹಾಗೂ ಸಾಧನೆ ಕುರಿತ ಚಿಂತನಗೋಷ್ಠಿಯಲ್ಲಿ ಉಪನ್ಯಾಸ ನೀಡುತ್ತಿದ್ದರು.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಶಿರಸಂಗಿ ಎಂಬ ದೇಸಗತಿಗೆ ಚಿಕ್ಕ ವಯಸ್ಸಿನಲ್ಲಿಯೇ ದತ್ತುಪುತ್ರನಾಗಿ ಬಂದ ಲಿಂಗರಾಜರ ಮೊದಲ ಹೆಸರು ರಾಮಪ್ಪ ದ್ಯಾವಪ್ಪ ದೇಸಾಯಿಯ ಮೊದಲ ಪತ್ನಿ ಗಂಗೂಬಾಯಿಯ ಪ್ರೀತಿಯ ಆರೈಕೆಯಲ್ಲಿ ಬೆಳೆದ ಅವರು ದತ್ತು ತಾಯಿಯ ಮರಣಾ ನಂತರ ಇನ್ನೊಬ್ಬ ತಾಯಿ ಉಮಾಬಾಯಿಯವರು ದತ್ತಕವನ್ನೇ ರದ್ದುಮಾಡಲು ಯತ್ನಿಸಿದರು.

ಆಗ ಶಿರಸಂಗಿ ಸಂಸ್ಥಾನದ ನ್ಯಾಯಾಲಯ ಇವರ ದತ್ತಕವನ್ನು ಎತ್ತಿಹಿಡಿದು ತೀರ್ಪು ಕೊಟ್ಟಿತು. ದತ್ತಕ ಸ್ಥಿರವಾದ ಪ್ರಜೆಗಳ ಅಭಿವೃದ್ಧಿಗೆ ಗಮನಕೊಟ್ಟು ಸಾಲ ಕೂಡಾ ಮಾಡಿ ಭವಾನಿಕೆರೆ, ಹೊಸಬಾಳೆ ಕೆರೆ, ಶಿರಸಂಗಿ ಕೆರೆ ಕಟ್ಟಿಸಿ, ಸಿದ್ಧನಕೊಳ್ಳದ ಜಲಾಶಯವನ್ನು ನಿರ್ಮಿಸಿ, ಕೃಷಿ ಅಭಿವೃದ್ಧಿ ಮಾಡಿದರು.

ಕೃಷಿಗಾಗಿ ಒಂಟೆಗಳನ್ನು, ವಿದೇಶದಿಂದ ರಂಟೆ ನೇಗಿಲುಗಳನ್ನು ತರಿಸಿ ಸಂಸ್ಥಾನದ ವ್ಯವಸಾಯದ ಅಭಿವೃದ್ಧಿಯನ್ನು ಮಾಡಿದರು.

ಸಂಸ್ಥಾನದ ಕೃಷಿ ಆದಾಯವನ್ನು ಇಪ್ಪತ್ತು ಸಾವಿರದಿಂದ ಐವತ್ತು ಸಾವಿರ ರೂಪಾಯಿಗಳವರೆಗೆ ಏರಿಸಿದರು. ಇವರ ಅಭಿವೃದ್ಧಿ ಕ್ರಮಗಳನ್ನು ಗಮನಿಸಿದ ಬ್ರಿಟಿಷ್ ಸರ್ಕಾರ ಇವರಿಗೆ ಬೊಂಬಾಯಿ ಪ್ರೆಸಿಡೆನ್ಸಿಯ ದಕ್ಷಿಣ ಭಾಗದ ಆಸ್ತಿಗಳ ಅಪರಾಧಗಳ ವ್ಯಾಜ್ಯಗಳ ನಿರ್ಣಯ ಮಾಡುವ ನ್ಯಾಯಾಧಿಕಾರವನ್ನು ನೀಡಿತು. ಇವರ ದಕ್ಷತೆಗಾಗಿ ಸರ್ದಾರ್ ಪ್ರಶಸ್ತಿಯನ್ನೂ ನೀಡಿ ಗೌರವಿಸಿತು ಎಂದರು.

ಇವರಿಗೆ ಬೇರೆ ಬೇರೆ ಪತ್ನಿಯರಿಗೆ ಹುಟ್ಟಿದ ಮೂರು ಮಕ್ಕಳೂ ಸತ್ತು, ಪ್ರಿಯ ಪತ್ನಿಯೂ ತೀರಿ ಹೋದಾಗ ಇವರು ಅಧ್ಯಾತ್ಮದ ಕಡೆಗೆ ತಿರುಗಿದರು. ಆಗ ಅಥಣಿಯ ಶಿವಯೋಗಿಗಳ ಬಳಿ ಮಕ್ಕಳಿಲ್ಲದ ತಮ್ಮ ನೋವನ್ನು ಹೇಳಿಕೊಂಡಾಗ, ಅವರು ಸಂಸ್ಥಾನದ ಎಲ್ಲ ಮಕ್ಕಳೂ ನಿನ್ನ ಮಕ್ಕಳೇ ಎಂದು ತಿಳಿಹೇಳಿ ಅವರ ಶಿಕ್ಷಣ ಅಭಿವೃದ್ಧಿಗೆ ಗಮನಕೊಡಲು ಪ್ರೇರೇಪಿಸಿದರು.

ಇಂಗ್ಲೆಂಡಿನಲ್ಲಿ ಎಡ್ವರ್ಡ್ ದೊರೆಯ ಪಟ್ಟಾಧಿಕಾರ ಆದಾಗ, ಭಾರತದ ದೆಹಲಿಯಲ್ಲಿ ಒಂದು ಸಂಭ್ರಮಾಚರಣೆ ಏರ್ಪಟ್ಟಾಗ, ದಕ್ಷಿಣ ಭಾರತದಿಂದ ಆಹ್ವಾನಿತರಾದ ಇಬ್ಬರೇ ಇಬ್ಬರಲ್ಲಿ ಇವರಿಗೂ ವಂಟಮುರಿ ದೇಸಾಯರಿಗೂ ಗೌರವಿಸಲಾಯಿತು. ಆಗ ಉತ್ತರ ಭಾರತದ ಕೈಗಾರಿಕಾ ಅಭಿವೃದ್ಧಿಯನ್ನು ಕಂಡ ಇವರು ವೀರಶೈವ ಲಿಂಗಾಯತ ಸಮುದಾಯದಲ್ಲೂ ಇಂಥ ಅಭಿವೃದ್ಧಿ ಆಗಲೆಂದು ಅಲ್ಲಲ್ಲಿ ಕೈಗಾರಿಕೆಗಳನ್ನು ತೆರೆದರು. ಕೆಲವು ಸ್ಥಳಗಳ ಹೊಸ ರಸ್ತೆ ನಿರ್ಮಾಣ ಕೈಕೊಂಡು, ಭೂಮಿದಾನ, ಹಣಕಾಸಿನ ಸಹಾಯ ಕೂಡಾ ಮಾಡಿದರು.

ಅಜ್ಮೀರದಿಂದ ಬಂದಿದ್ದ ಒಬ್ಬ ಸೂಫಿ ಸಂತನಿಗೆ ೮೫ ಎಕರೆ ಜಮೀನು ನೀಡಿ ದರ್ಗಾ ಕೂಡಾ ಕಟ್ಟಿಸಿದರು. ಅದು ಇನ್ನೂ ಇದೆ. ಬ್ರಾಹ್ಮಣರ ದತ್ತಾತ್ರೇಯ ದೇವಾಲಯಕ್ಕೆ ಜಮೀನು ದಾನ ಮಾಡಿದರು. ಅವರಿಗೆ ಒಂದು ಕಾಲಕ್ಕೆ ಕಿರುಕುಳ ಕೊಟ್ಟಿದ್ದ ವ್ಯಕ್ತಿಯ ಆರೋಗ್ಯ ಕೆಟ್ಟಾಗ, ಬೊಂಬಾಯಿಯಲ್ಲಿ ಅವನಿಗೆ ಚಿಕಿತ್ಸೆಯನ್ನು ಕೊಡಿಸಿ, ಅದು ಫಲಿಸದೆ ಆತ ಮರಣಿಸಿದಾಗ ಅವನ ದೇಹವನ್ನು ಧಾರವಾಡಕ್ಕೆ ತರಿಸಿಕೊಂಡು ಸಂಸ್ಕಾರ ಮಾಡಿಸಿದರು. ಇದು ಅವರ ಮಾನವೀಯ ಗುಣವನ್ನು ತೋರಿಸುತ್ತದೆ ಎಂದರು.

ಧಾರವಾಡ ಮತ್ತು ಬೆಂಗಳೂರಲ್ಲಿ ಎರಡೂ ವೀರಶೈವ ಮಹಾಸಭಾದ ಸಮ್ಮೇಳನಗಳಿಗೆ ಇವರನ್ನೇ ಅಧ್ಯಕ್ಷರನ್ನಾಗಿ ಮಾಡಿದರು. ಆಗ ಅವರು ಮಾಡಿದ ಭಾಷಣ, ಕೊಟ್ಟ ಸಲಹೆ, ನಿರ್ಣಯಗಳು ಅಪೂರ್ವವಾದವು.

ಅನಂತರದಲ್ಲಿ ಅವರು ಜೀವನದಲ್ಲಿ ಕೈಕೊಂಡ ನಿರ್ಣಯ – ಲಿಂಗಾಯತ ಸಮುದಾಯದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ಅವರ ಆರೋಗ್ಯ ಕ್ಷೀಣಿಸಿದಾಗ ಅವರು ತಮ್ಮ ಉಯಿಲಿನಲ್ಲಿ ತಮ್ಮ ಸಮಸ್ತ ಚರ ಸ್ಥಿರ ಆಸ್ತಿಗಳೆಲ್ಲವು ಲಿಂಗಾಯತ ಸಮಾಜದ ಶೈಕ್ಷಣಿಕ, ಕೈಗಾರಿಕಾ, ಕೃಷಿ ಅಭಿವೃದ್ಧಿಗೆ ಸಲ್ಲಬೇಕೆಂದು ಬರೆದು ಅರಟಾಳ ರುದ್ರಗೌಡರ ನೇತೃತ್ವದಲ್ಲಿ ಒಂದು ಟ್ರಸ್ಟ್ ಮಾಡಿ, ಬೆಳಗಾವಿ ಜಿಲ್ಲಾಧಿಕಾರಿಯನ್ನು ಅದರ ಅಧ್ಯಕ್ಷರನ್ನಾಗಿ ಮಾಡಿ ತಮ್ಮ ಮರಣಾನಂತರ ಉಯಿಲನ್ನು ಪ್ರಕಟ ಮಾಡಲು ಮತ್ತು ಅದನ್ನು ಕಾರ‍್ಯಗತ ಮಾಡಲು ಹೇಳಿ ವ್ಯವಸ್ಥೆ ಮಾಡಿ ಕೇವಲ ೪೫ ವರ್ಷಗಳ ವಯಸ್ಸಿನಲ್ಲೇ ಮರಣ ಹೊಂದಿದರು.

ಇಂದು ಕೂಡಾ ಆ ಟ್ರಸ್ಟ್ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ಇಂದು ಕೆಎಲ್‌ಇ ಎಂದು ಪ್ರಸಿದ್ಧಿ ಪಡೆದ ಶೈಕ್ಷಣಿಕ ಸಂಸ್ಥೆಗೆ ಅದರ ಸ್ಥಾಪನೆಯ ಕಾಲದಲ್ಲಿ ೮ ಎಕರೆ ಭೂಮಿ ೧೫ ಸಾವಿರ ರೂಪಾಯಿಗಳ ಆರ್ಥಿಕ ನೆರವನ್ನು ನೀಡಿ ಅದರ ಸ್ಥಾಪಕರಲ್ಲಿ ಅವರೂ ಒಬ್ಬರೆನಿಸಿದ್ದಾರೆ. ಆ ಸಂಸ್ಥೆ ಇವರ ಹೆಸರಿನಲ್ಲಿ ಶಾಲಾ ಕಾಲೇಜುಗಳನ್ನು ತೆರೆದು ನಡೆಸುತ್ತಿದೆ. ಹೀಗೆ ಒಂದು ಸಮುದಾಯದ ಅಭಿವೃದ್ಧಿಗೆ ತನು ಮನ ಧನಗಳ ತ್ಯಾಗ ಮಾಡಿದ ಮಹಾಮಹಿಮರೆಂದು ಅವರು ಅಮರರಾಗಿದ್ದಾರೆಂದು ಸ್ಮರಿಸಿದರು.

ಸಮ್ಮುಖ ವಹಿಸಿದ್ದ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿದರು.

ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ಗುರುಮಠಲ್‌ನ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು.

ಬಸವರಾಜ ಕಟ್ಟಿ, ನಾಗರಾಜ ಸಂಗಂ, ಎಸ್. ವೀರೇಶ, ಕಸವನಹಳ್ಳಿ ಶಿವಣ್ಣ, ಬಸವರಾಜಪ್ಪ, ರಾಜಶೇಖರ್, ಆರ್. ಮಂಜುನಾಥ, ಮತ್ತಿತರರು ಭಾಗವಹಿಸಿದ್ದರು.

ಎಸ್.ಜೆ.ಎಂ. ಫರ‍್ಮಸಿ, ಬಸವೇಶ್ವರ ಫಿಸಿಯೋಥೆರಪಿ ಹಾಗೂ ಬಸವೇಶ್ವರ ಅಲೈಡ್ ಹೆಲ್ತ್ ಸೈನ್ಸಸ್ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಜಮುರಾ ಕಲಾವಿದ ಉಮೇಶ ಪತ್ತಾರ ಲಿಂಗರಾಜ ದೇಸಾಯಿ ಕುರಿತಾದ ಗೀತೆಯನ್ನು ಹಾಡಿದರು. ಕಲ್ಲೇಶ ಸ್ವಾಗತಿಸಿದರು. ಅಮೃತ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *