‘ಲಿಂಗಾಯತರು ಹಿಂದೂಗಳಿಂದ ಬೇರೆಯಾಗುವುದನ್ನು ಬೆಂಬಲಿಸಿದ್ದು ಗೌರಿ ಹತ್ಯೆಗೆ ಮುಖ್ಯ ಕಾರಣವಾಯಿತು’
ಬೆಂಗಳೂರು
ಗೌರಿ ಹತ್ಯೆಯ ಪ್ರಕರಣದಲ್ಲಿ ಪೊಲೀಸರು 10,000 ಪುಟಗಳ ಆರೋಪಪಟ್ಟಿ ಸಿದ್ದಪಡಿಸಿದ್ದಾರೆ. ಅದರ ಆಧಾರದ ಮೇಲೆ ಕೋರ್ಟಿನಲ್ಲಿ ವಿಚಾರಣೆ ಕುಂಟುತ್ತಾ ಕುಂಟುತ್ತಾ ನಡೆಯುತ್ತಿದೆ.
ಗೌರಿ ಮಂಗಳೂರಿನಲ್ಲಿ ‘ನಮಗೆ ಹಿಂದೂ ಧರ್ಮ ಬೇಡ, ಸಂವಿಧಾನವೇ ನಮ್ಮ ಧರ್ಮ,’ ಎಂದು ಒಂದು ಭಾಷಣ ಮಾಡಿದ್ದರು.
ಈ ಭಾಷಣದ ವಿಡಿಯೋದಿಂದ ಕೆರಳಿ ಹಂತಕರು ಅವರನ್ನು ಕೊಲೆ ಮಾಡಿದರು ಎನ್ನುವುದು ಆರೋಪಪಟ್ಟಿಯಲ್ಲಿರುವ ಒಂದು ಮುಖ್ಯಾಂಶ.
ಇದರಲ್ಲಿ ಒಂದು ಅಂಶ ಗೊಂದಲವುಂಟು ಮಾಡುತ್ತದೆ, ಗೌರಿ ಮಂಗಳೂರಿನಲ್ಲಿ ಭಾಷಣ ಮಾಡಿದ್ದು 2012ರಲ್ಲಿ. ಅವರ ಕೊಲೆಯಾಗಿದ್ದು 2017ರಲ್ಲಿ. ಈ ಕೊಲೆಗಡುಕರು ಐದು ವರ್ಷ ಕಾದಿದ್ದೇಕೆ?
ಗೌರಿಯ 2012ರ ಭಾಷಣದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಿಜೆಪಿಯೂ ಸೇರಿದಂತೆ ಹಲವಾರು ಬಲಪಂಥೀಯ ಗುಂಪುಗಳು ಅದನ್ನು ಎಲ್ಲೆಲ್ಲೂ ಹಂಚಿಕೊಂಡಿದ್ದವು. ಬರೀ ಫೇಸ್ಬುಕ್ ನಲ್ಲಿ ಒಂದು ಕೋಟಿ 30 ಲಕ್ಷ ಜನರು ಅದನ್ನು ವೀಕ್ಷಿಸಿದ್ದರು.
ಗೌರಿಯನ್ನು ಕೊಂದ ತಂಡವೇ 2013ರಲ್ಲಿ ನರೇಂದ್ರ ದಾಬೋಲ್ಕರ್, 2015ರಲ್ಲಿ ಗೋವಿಂದ ಪನ್ಸಾರೆ ಹಾಗೂ ಕಲ್ಬುರ್ಗಿ ಅವರನ್ನು ಕೊಲೆ ಮಾಡಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.
ಅಂದರೆ ತಮ್ಮ ಸಿದ್ದಾಂತವನ್ನು ವಿರೋಧಿಸುವ ಚಿಂತಕರ ಬಾಯಿ ಮುಚ್ಚಿಸುವ ಕಲೆ ಈ ಕೊಲೆಗಡುಕರಿಗೆ ಮುಂಚೆಯೇ ಕರತಲಾಮಲಕವಾಗಿತ್ತು.
ಆದರೂ ಗೌರಿಗೆ ಗುಂಡಿಕ್ಕಲು 2017ರವರೆಗೆ ಕಾದಿದ್ದು ಏಕೆ?
‘ಐ ಆಮ್ ಆನ್ ದಿ ಹಿಟ್ ಲಿಸ್ಟ್’

‘ದಿ ನ್ಯೂಯೋರ್ಕ್ ಟೈಮ್ಸ್’ ವಿಶ್ವದ ಅತಿ ಪ್ರತಿಷ್ಠಿತ ಪತ್ರಿಕೆಗಳಲ್ಲೊಂದು ಎನ್ನುವುದರ ಬಗ್ಗೆ ಒಮ್ಮತವಿದೆ.
ಅದರ ಪ್ರಸಿದ್ಧ ಪತ್ರಕರ್ತ ರೋಲೋ ರೋಮಿಗ್ ಗೌರಿಯ ಹತ್ಯೆಯ ಬಗ್ಗೆ ‘ಐ ಆಮ್ ಆನ್ ದಿ ಹಿಟ್ ಲಿಸ್ಟ್’ (I am on hit list) ಎಂಬ ಪುಸ್ತಕ ಬರೆದಿದ್ದಾರೆ. ಒಬ್ಬ ಪತ್ರಕರ್ತೆಯ ಕೊಲೆಯನ್ನು ಭಾರತದಲ್ಲಿ ಬೆಳೆಯುತ್ತಿರುವ ಸರ್ವಾಧಿಕಾರದ ಹಿನ್ನಲೆಯಲ್ಲಿ ನೋಡುವ ಪ್ರಯತ್ನವಿದು.
ಪುಸ್ತಕದ ಎರಡನೇ ಅಧ್ಯಾಯದ ಹೆಸರೇ ‘ಲಿಂಗಾಯತ ಪ್ರಶ್ನೆ’ ಎನ್ನುವುದು. ಅದರಲ್ಲಿ ಲಿಂಗಾಯತ ಧರ್ಮದ ಹೋರಾಟದಲ್ಲಿ ಗಣನೀಯವಾಗಿ ತೊಡಗಿಸಿಕೊಳ್ಳಲು ಆರಂಭಿಸಿದ್ದ ಗೌರಿಯ ಚಟುವಟಿಕೆಗಳ ವಿವರಣೆಯಿದೆ.
2017, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಕಾವೇರಿದ ವರ್ಷ. ಲಂಕೇಶ್ ಪತ್ರಿಕೆಯಲ್ಲಿ ಗೌರಿ ಲಿಂಗಾಯತ ಹೋರಾಟದ ಬಗ್ಗೆ ಸತತವಾಗಿ ಬರೆಯಲಾರಂಭಿಸಿದ್ದರು.
ಅವರ ಕೊಲೆಯ ಮುಂಚೆ ಪ್ರಕಟವಾಗಿದ್ದ ನಾಲ್ಕೂ ಲಂಕೇಶ್ ಪತ್ರಿಕೆ ಆವೃತ್ತಿಗಳೂ ಲಿಂಗಾಯತ ಹೋರಾಟದ ವರದಿಗಳಿಂದ ತುಂಬಿದ್ದವು.
ಆಗ ಲಿಂಗಾಯತ ಹೋರಾಟದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಬಹಳ ಗೊಂದಲಗಳಿದ್ದವು. ಮೂಲತಃ ಇಂಗ್ಲಿಷ್ ಪತ್ರಕರ್ತೆಯಾಗಿದ್ದ ಗೌರಿ ಪ್ರಮುಖ ಇಂಗ್ಲಿಷ್ ಪತ್ರಿಕೆಗಳಲ್ಲಿ ಲಿಂಗಾಯತ ಹೋರಾಟದ ಬಗ್ಗೆ ಬರೆಯಲಾರಂಭಿಸಿದ್ದರು.
ಆಗಸ್ಟ್ 8, 2017, ಅಂದರೆ ಹತ್ಯೆಯ ಸುಮಾರು ಒಂದು ತಿಂಗಳ ಮುಂಚೆ, ‘ದಿ ವೈರ್’ ಪತ್ರಿಕೆಯಲ್ಲಿ ಲಿಂಗಾಯತ ಚಳುವಳಿಯ ಹಿನ್ನಲೆ, ಹೋರಾಟವನ್ನು ಗೌರಿ ವಿವರಿಸಿದ್ದರು.
“ಬಸವಾದಿ ಶರಣರು ಹಿಂದೂ ಧರ್ಮದ ಎಲ್ಲಾ ಅಂಶಗಳನ್ನು ತಿರಸ್ಕರಿಸಿ, ಅದರ ವಿರುದ್ಧ ದಂಗೆ ಎದ್ದಿದ್ದರು.
ಹಿಂದೂ ಧರ್ಮದ ತತ್ವಗಳಿಗೆ ವಿರುದ್ಧವಾಗಿ ಹುಟ್ಟಿದ ಬೌದ್ಧ ಧರ್ಮ, ಜೈನ ಧರ್ಮ ಮತ್ತು ಸಿಖ್ ಧರ್ಮಗಳನ್ನು ಪ್ರತ್ಯೇಕ ಧರ್ಮಗಳೆಂದು ಪರಿಗಣಿಸಬಹುದಾದರೆ, ಲಿಂಗಾಯತವನ್ನು ಏಕೆ ಪರಿಗಣಿಸಬಾರದು?” ಇದು ಅವರು ಕೇಳಿದ್ದ ಪ್ರಶ್ನೆ.
ಗೌರಿಯವರ ಆಪ್ತರಾಗಿದ್ದ ಪ್ರೊ ಚಂದನ್ ಗೌಡ ‘ಐ ಆಮ್ ಆನ್ ಹಿಟ್ ಲಿಸ್ಟ್’ ಪುಸ್ತಕದಲ್ಲಿ ಹತ್ಯೆಯ ಬಗ್ಗೆ ಮಾತನಾಡಿದ್ದಾರೆ.
“ನಾನು ಹೇಳುವ ಯಾವುದನ್ನೂ ನೀವು ಸಾಬೀತುಪಡಿಸಲು ಸಾಧ್ಯವಿಲ್ಲ. ಆದರೆ ಗೌರಿಯ ಹತ್ಯೆಯ ಕಾರಣ ಏನಿರಬಹುದು ಎಂಬುದರ ಕುರಿತು ನಾನು ಆಳವಾಗಿ ಯೋಚಿಸಿದ್ದೇನೆ.
ನಾನು ಬಂದಿರುವ ತೀರ್ಮಾನವೆಂದರೆ ಬಹುಶಃ ಲಿಂಗಾಯತರು ಹಿಂದೂಗಳಿಂದ ಬೇರೆಯಾಗುವುದನ್ನು ಬೆಂಬಲಿಸಿದ್ದು ಗೌರಿ ಹತ್ಯೆಗೆ ಮುಖ್ಯ ಕಾರಣವಾಯಿತು…
…ಪ್ರತ್ಯೇಕ ಧರ್ಮದ ಹೋರಾಟದ ಮುಂಚೂಣಿಯಲ್ಲಿದ್ದ ಮುಖಂಡರನ್ನು ಹತ್ಯೆ ಮಾಡಿದ್ದರೆ ಲಿಂಗಾಯತರು ಸುಮ್ಮನಿರುತ್ತಿರಲಿಲ್ಲ. ಅದಕ್ಕೆ ಗೌರಿಯನ್ನು ಕೊಂದು ಮಿಕ್ಕವರಿಗೆ ಒಂದು ಸಂದೇಶ ಕಳಿಸುವ ಪ್ರಯತ್ನ ನಡೆದಿರಬಹುದು,” ಎಂದು ಅವರು ಅಭಿಪ್ರಾಯ ಪಡುತ್ತಾರೆ.
ಚಂದನ್ ಗೌಡ ಗೌರಿ ಹತ್ಯೆಯ ನಂತರ ಅವರ ಬಗ್ಗೆ ಇಂಗ್ಲಿಷಿನಲ್ಲಿ ಒಂದು ಪುಸ್ತಕವನ್ನೂ ಸಂಪಾದಿಸಿದ್ದಾರೆ.
ರ್ಯಾಲಿಗಳ ನಡುವೆ ಹತ್ಯೆ

ದೇಶ ವಿದೇಶಗಳಲ್ಲಿ ಸುದ್ದಿ ಮಾಡಿದ ಸರಣಿ ಲಿಂಗಾಯತ ರ್ಯಾಲಿಗಳ ನಡುವೆಯೇ ಗೌರಿಯ ಹತ್ಯೆಯಾಗಿದ್ದು.
2017ರ ಜೂಲೈ, ಆಗಸ್ಟ್ ತಿಂಗಳುಗಳಲ್ಲಿ ಬೀದರ್, ಬೆಳಗಾವಿಗಳಲ್ಲಿ ಲಕ್ಷಾಂತರ ಲಿಂಗಾಯತರನ್ನು ಸೆಳೆದು ರ್ಯಾಲಿಗಳು ನಡೆದವು.
ಗೌರಿ ಕೊಲೆಯಾಗಿದ್ದು ಸೆಪ್ಟೆಂಬರ್ 5. ಅದೇ ತಿಂಗಳು ನಡೆದ ಕಲಬುರಗಿ ರ್ಯಾಲಿಯ ಕೆಲವು ದಿನಗಳ ಮುಂಚೆ.
ಈ ರ್ಯಾಲಿಗಳಿಗೆ ಸಿಕ್ಕ ಬೃಹತ್ ಬೆಂಬಲ, ಅವುಗಳು ಸೃಷ್ಟಿಸಿದ ಸಂಚಲನ ಲಿಂಗಾಯತದ ವಿರೋಧಿಗಳಿಗೆ ನಡುಕ ಹುಟ್ಟಿಸಿತ್ತು. 2018ರಲ್ಲಿ ಬರಲಿದ್ದ ರಾಜ್ಯ ಚುನಾವಣೆ ಅವರನ್ನು ಮತ್ತಷ್ಟು ದಿಗಿಲು ಬೀಳಿಸಿತ್ತು.
ಗೌರಿಯ ಹತ್ಯೆಯಾಗಿದ್ದು ಈ ಹಿನ್ನಲೆಯಲ್ಲಿಯೇ ಎನ್ನುವುದನ್ನು ಗಮನಿಸಬೇಕು.
ಗಾಂಧಿ ಕೊಂದ ಪಿಸ್ತೂಲ್

ಗೌರಿ, ಕಲ್ಬುರ್ಗಿ, ದಾಬೋಲ್ಕರ್, ಪನ್ಸಾರೆ ಅವರನ್ನು 7.65 ಎಂಎಂ ಸಣ್ಣ ಪಿಸ್ತೂಲಿನಿಂದ ಕೊಲೆ ಮಾಡಲಾಯಿತು. ಇದು ಬಳಸುವ ಗುಂಡಿನ ಅಗಲ 7.65 ಎಂಎಂ. ಜೇಬಿನಲ್ಲಿ ಮುಚ್ಚಿಟ್ಟುಕೊಂಡು ಹತ್ತಿರದಿಂದ ಸುಲುಭವಾಗಿ ಗುರಿಯಿಟ್ಟು ಹೊಡೆಯುವಂತಹ ಪಿಸ್ತೂಲಿದು.
ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ್ದೂ ಇದೇ ರೀತಿಯ ಸಣ್ಣ ಪಿಸ್ತೂಲಿನಿಂದ. ಅದರ ಗುಂಡಿನ ಅಗಲ 9 ಎಂಎಂ. ಎರಡೂ ಪಿಸ್ತೂಲುಗಳು ಬಳಸುವ ಗುಂಡಿನ ಉದ್ದ 17 ಎಂಎಂ.
ತಜ್ಞರ ಪ್ರಕಾರ ಇವೆರಡೂ ಒಂದೇ ಜಾತಿಯ ಆಯುಧಗಳು.
