‘ಸಿದ್ಧರಾಮೇಶ್ವರರ ಆದರ್ಶಗಳನ್ನು ಯುವಜನತೆ ಅಳವಡಿಸಿಕೊಳ್ಳಲಿ’

ಚಿಂಚೋಳಿ:

ತಾಲೂಕಿನ ಚಂದಾಪುರ ಬಡಾವಣೆಯ ಶ್ರೀ ಗುರು ಬಸವ ಮಂಟಪದಲ್ಲಿ ನೀಲಾಂಬಿಕ ಬಸವತತ್ವ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಪ್ರತಿ ಸೋಮವಾರ ಹಮ್ಮಿಕೊಳ್ಳುತ್ತಿರುವ ವಿಶೇಷ ಉಪನ್ಯಾಸ ಹಾಗೂ ಶರಣರ ದರ್ಶನ ಕಾರ್ಯಕ್ರಮದ ಅಂಗವಾಗಿ ಶಿವಯೋಗಿ ಸಿದ್ಧರಾಮೇಶ್ವರರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಶಿಕ್ಷಕ ಶಿವಕುಮಾರ ಕೊಟ್ಟಗಾ ಅವರು ಸಿದ್ಧರಾಮೇಶ್ವರರ ಜೀವನ ಚರಿತ್ರೆಯನ್ನು ವಿವರಿಸುತ್ತಾ, ಸಿದ್ಧರಾಮೇಶ್ವರರು ಬಸವ ಧರ್ಮವನ್ನು ಸ್ವೀಕರಿಸಿ, ವಚನ ಸಾಹಿತ್ಯದ ಉಳಿವು ಹಾಗೂ ಬೆಳವಣಿಗೆಗಾಗಿ ಶ್ರಮಿಸಿದರು.

ಕಲ್ಯಾಣ ಕ್ರಾಂತಿಯ ನಂತರ ಶೂನ್ಯಪೀಠದ ಪರಂಪರೆಯನ್ನು ಮುಂದುವರಿಸುವ ಮಹತ್ತರ ಕಾರ್ಯವನ್ನು ಕೈಗೊಂಡ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಕರ್ಮಯೋಗಿ ಸಿದ್ಧರಾಮೇಶ್ವರರು ಅಲ್ಲಮಪ್ರಭುಗಳಿಂದ ಪ್ರಭಾವಿತರಾಗಿ ಬಸವ ತತ್ವಕ್ಕೆ ಆಕರ್ಷಿತರಾಗಿ, ತಮ್ಮ ಬದುಕನ್ನು ಶಿವಯೋಗದ ಸಾಧನೆಗೆ ಸಮರ್ಪಿಸಿಕೊಂಡು ‘ಶಿವಯೋಗಿ ಸಿದ್ಧರಾಮೇಶ್ವರ’ರೆಂದು ಖ್ಯಾತಿ ಪಡೆದರು ಎಂದು ಅವರು ತಿಳಿಸಿದರು.

ಇನ್ನೋರ್ವ ಉಪನ್ಯಾಸಕ ಶಿಕ್ಷಕ ಸಂಗ್ರಾಮ ಕೊಟ್ಟಗಾ ಅವರು ಮಾತನಾಡಿ, ಸೋಲಾಪುರ ನಗರದ ಶಿವಯೋಗಿ ಸಿದ್ಧರಾಮೇಶ್ವರರ ಗದ್ದುಗೆಗೆ ಸಂಬಂಧಿಸಿದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವನ್ನು ಕಡೆಗಣಿಸುವ ಪ್ರಯತ್ನಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಸಿದ್ಧರಾಮೇಶ್ವರರ ಪರಂಪರೆ ಮತ್ತು ಅವರ ಕೊಡುಗೆಯನ್ನು ಗೌರವಿಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಂಭುಲಿಂಗ ಶಿವಪುರಿ, ಸಂತೋಷ ಕಡಗದ, ರಾಜಶೇಖರ ಮುಸ್ತಾರಿ, ಶಾರದಾ ಶೆಳ್ಳಗಿ, ಶ್ರೀದೇವಿ ಬೆಳಕೇರಿ ಅವರು ವೇದಿಕೆಯಲ್ಲಿದ್ದರು.

ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಬೊಮ್ಮ ನಿರೂಪಿಸಿದರು. ಕಾರ್ಯದರ್ಶಿ ಸುನೀತಾ ಪಾಲಾಮೂರ ಹಾಗೂ ದಾಸೋಹಿಗಳಾದ ರಮಾರೆಡ್ಡಿ, ಸುಮಂಗಲಾ ಹುಣಜೆ, ಗಿರಿರಾಜ ಸಜ್ಜನ, ಸೂರ್ಯಕಾಂತ ಹುಲಿಪಾಟೀಲ, ಲೋಕೇಶ ಶೆಳ್ಳಗಿ, ಸುರೇಶ ವಾಲಿಕಾರ, ಕಾಶಿನಾಥ ಹುಣಜೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *