ಆಡುವ ನುಡಿಯನ್ನೇ ಸಾಹಿತ್ಯ ಪ್ರಕಾರವಾಗಿ ರೂಪಿಸಿದ ಶರಣರು: ಡಾ. ಅಕ್ಕಿ ಬಸವೇಶ

ಹೊಸಪೇಟೆ:

ಆಡುವ ಕನ್ನಡ ನುಡಿಯನ್ನೇ ಸಾಹಿತ್ಯ ಪ್ರಕಾರವಾಗಿ ೧೨ನೇ ಶತಕದ ಬಸವಾದಿ ಶರಣರು ವಚನ ಸಾಹಿತ್ಯವನ್ನ ಚಾಲನೆಗೆ ತಂದರೆಂದು ಹಗರಿಬೊಮ್ಮನಹಳ್ಳಿ ಜಿವಿಪಿಪಿ ಸರ್ಕಾರಿ ಪ್ರಥಮ ಧರ್ಜೆ ಕಾಲೇಜಿನ ಉಪನ್ಯಾಸಕ ಡಾ. ಅಕ್ಕಿ ಬಸವೇಶ ಹೇಳಿದರು.

ಗುರುವಾರ ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ಪ್ರೌಢ ದೇವರಾಯ ತಾಂತ್ರಿಕ ಮಹಾವಿದ್ಯಾಲಯ ಸಂಯುಕ್ತವಾಗಿ ನಡೆಸಿದ ದಿವಂಗತ ಕಲ್ಗುಡಿ ಉಮೇಶ ಸ್ಮಾರಕ ದತ್ತಿ ಕಾರ್ಯಕ್ರಮದಲ್ಲಿ “ವಚನ ಸಾಹಿತ್ಯ ಮತ್ತು ಸಾಮಾಜಿಕ ಅನುಸಂಧಾನ” ವಿಷಯ ಕುರಿತು ಉಪನ್ಯಾಸ ನೀಡಿದರು.

ಜನಭಾಷೆ ಮಾತುಗಳ ಬಳಸಿ ಸಾಹಿತ್ಯ ರಚಿಸುವಿಕೆಯು ಜಗತ್ತಿನ ಯಾವ ಭಾಷೆಯಲ್ಲೂ ಇಲ್ಲ. ಅದು ಶರಣರ ಧಾರ್ಮಿಕ, ಸಾಮಾಜಿಕ ಚಿಂತನೆಗಳ, ವಚನ ಸಾಹಿತ್ಯದ ಕನ್ನಡದ ಭಾಷೆಗಷ್ಟೇ ಇದೆ. ಅಂತೆಯೇ ವಿಶ್ವ ಸಾಹಿತ್ಯಕ್ಕೆ ಕನ್ನಡದ ಕೊಡುಗೆಯೇ ವಿಶ್ವಮಾನ್ಯ ವಚನ ಸಾಹಿತ್ಯವೆಂದರು.

ವಚನಗಳು ಕನ್ನಡ ಭಾಷಿಕ ಚಳುವಳಿಯಾಗಿ, ಸಮಸಾಮಾಜಿಕ ಚಿಂತನೆಯ ಶರಣ ಅನುಭಾವಗಳು ವಚನ ಕ್ರಾಂತಿಯಾಗಿ, ಕನ್ನಡದ ಪ್ರಬುದ್ಧತೆಯು ಲೋಕ ಕೀರ್ತಿಗೆ ಪಾತ್ರವಾಯಿತು.

ಅದುವರೆಗೂ ಮೇಲ್ವರ್ಗತನದ ಸಂಸ್ಕೃತ ಭಾಷೆಯೇ ಸಾಹಿತ್ಯ ರಚನೆಗೆ ಕಡ್ಡಾಯದ ದ್ವಾರ ಎನಿಸಿತ್ತು. ಇದರಾಚೆಗೆ ಸಂಸ್ಕೃತದ ಹಂಗನ್ನೇ ತೊರೆದು ಅಚ್ಚ ಕನ್ನಡದಲ್ಲೇ ಸಾಮಾಜಿಕ ಪರಿವರ್ತನೆಗಾಗಿ ಶರಣರ ವಚನ ರಚನೆಯು ಬೃಹತ್ತಾಗಿ ಬೆಳೆದು, ಸಾಮಾಜಿಕ ಪ್ರಗತಿಯ ಹೊಣೆಗಾರಿಕೆಯನ್ನ ಶರಣರು ಅನುಸರಿಸುವಿಕೆಯ ಧೇಯವು ವಚನ ಸಾಹಿತ್ಯದ್ದಾಯಿತು.

ಸಾಮಾಜಿಕ ವಿದ್ಯಾಮಾನಗಳನ್ನ ಸಮರ್ಥವಾಗಿ ಎದುರಿಸುವ ಮುಖಾಮುಖಿ, ವಿಮರ್ಶೆ, ವಿಶ್ಲೇಷಣೆ ಮೂಲಕ, ಸಾಮಾಜಿಕ ಅಸ್ವಸ್ಥತೆಗೆ, ಚಿಕಿತ್ಸೆ ನೀಡುವಿಕೆಯು ವಚನಗಳ ಆಳವಾಗಿತ್ತು. ಅದುವರೆಗಿನ ಸಿದ್ಧ ಮಾದರಿಯ ಜಡತೆಯ ವೇದ ಪುರಾಣ ಆಚರಣೆಗಳ ಹೊಡೆದಾಕಿ, ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಗೆ ವಚನ ಸಾಹಿತ್ಯವು ಮುನ್ನಡಿ ಬರೆಯಿತು.

ಶರಣರ ವಚನಗಳಲ್ಲಿ ಯಜಮಾನ್ಯ ಮುಖಿಗಿಂತ ಜನಪರ ಸಮಾಜಮುಖಿತನವೇ ಪ್ರಮುಖವಾಗಿದೆ. ಇಂದು ಕಾರ್ಪೋರೇಟ್ ವಲಯವು ಮನುಜರ ಭಾಹ್ಯಾಡಂಭರವನ್ನೇ ಪ್ರಚೋಧಿಸಿ ಮಾರುಕಟ್ಟೆಯಾಗಿಸಿ ಟೀವಿಗಳಲ್ಲಿ ಪ್ರಚಾರವಾಗುತ್ತಲಿದೆ. ಆದರೆ ಶರಣರ ವಚನಗಳ ಅಂತರಂಗ ಶುದ್ಧಿತನವು ಇಲ್ಲಿ ದೂರವಾಗಿದೆ ಎಂದರು.

ಸಾಮಾಜಿಕ ಪಿಡುಗಿನ ಲಿಂಗತಾರತಮ್ಯತೆ ವಿರುದ್ಧದ “ಮೊಲೆ ಮೂಡಿದರೇ ಹೆಣ್ಣೆಂಬರು ಗಡ್ಡ ಮೀಸೆ ಮೂಡಿದಡೆ ಗಂಡೆಂಬರು ನಡುವೆ ಸುಳಿವ ಆತ್ಮ ಹೆಣ್ಣು ಅಲ್ಲ ಗಂಡು ಅಲ್ಲ” ಅಲ್ಲಮ ಪ್ರಭು ವಚನವಿದ್ದರೆ, ಇಂದೂ ಸಹ ಹೆಣ್ಣು ಭ್ರೂಣ ಹತ್ಯೆ ತಡೆಗೆ ಕಾಯ್ದೆ ಇದ್ರೂ ಸಹ ಹೆಣ್ಣುಭ್ರೂಣ ಹತ್ಯೆ ಸಂಗತಿಗಳ ಕಾಣುತ್ತೇವೆ.

“ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯಾ” ಬಸವಣ್ಣನವರ ವಚನವಿದ್ರೇ ಇಂದು ದೊಡ್ಡ ದೊಡ್ಡ ದೇವರುಗಳ ದೇವಾಲಯಗಳಲಿ ಕೋಟಿ ಕೋಟಿಗಟ್ಟಲೇ ಮಾರುಕಟ್ಟೆಯ ದೇವರುಗಳ ಪೈಪೋಟಿ ಇದೆ ಎಂಬುದ ಶಿರಡಿ ಸಾಯಿಬಾಬಾ, ತಿರುಪತಿ ತಿಮ್ಮಪ್ಪ ಮೊದಲಾದ ಗುಡಿಗಳ ಉದಾಹರಿಸುತ್ತಾ, ಶರಣರ ವಚನ ಸಾಹಿತ್ಯವು ಈ ಜಡತನಗಳ ತಡೆಯಲೆಂದೇ ಬಸವಾದಿ ಶರಣರ ವಚನ ಸಾಹಿತ್ಯವು ಎಂದೆಂದಿಗೂ ಸಾರ್ವಕಾಲಿಕ ಅನುಸಂಧಾನತೆಗೆ ಮುಖಾಮುಖಿಯ ಮಾರ್ಧನಿಯಂತಿದೆ ಎಂದು ಬಸವೇಶ ಅಭಿಪ್ರಾಯಪಟ್ಟರು.

ಸ್ದಳೀಯ ಸಮಾಜ ಮುಖಂಡ ಕೆ. ಕೊಟ್ರೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡತನದ ವಚನ ಸಾಹಿತ್ಯ, ಜನಪದ ಸಾಹಿತ್ಯಗಳು ಕನ್ನಡ ಮಣ್ಣಿನ ಅನುಭಾವತೆಯ ಪ್ರತೀಕವಾಗಿದ್ದು, ಶರಣರ ವಚನಗಳ ವಿಶ್ಲೇಷಣೆ, ಅನುಭಾವದಿಂದ ಉತ್ತಮ ಸಾಮಾಜಿಕ ಬೆಳವಣಿಗೆ ಸಾಧ್ಯವೆಂದರು.

ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಅಧ್ಯಕ್ಷರು, ಈ ದತ್ತಿ ಕಾರ್ಯಕ್ರಮದ ದತ್ತಿದಾನಿ ಕಲ್ಗುಡಿ ಮಂಜುನಾಥ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಸ್ದಳೀಯ ವಿಜಯನಗರ ಮಹಾವಿದ್ಯಾಲಯದ ಅಧ್ಯಕ್ಷ ಮೇಟ್ರಿ ಮಲ್ಲಿಕಾರ್ಜುನ, ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಉಪಾಧ್ಮಕ್ಷ ಗುಜ್ಜಲ ಗಣೇಶ, ಪಿಡಿಐಟಿ ಕಾಲೇಜಿನ ಪ್ರಾಂಶುಪಾಲ ಡಾ. ರೋಹಿತ್, ಕಾರ್ಯಕ್ರಮದ ಸಂಚಾಲಕ ಡಾ. ರವಿಕುಮಾರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಮಕ್ಷ ಡಾ. ಗುಂಡಿ ಮಾರುತಿ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜ ಮಾವಿನಹಳ್ಳಿ, ಅಕ್ಕಿ ಮಲ್ಲಿಕಾರ್ಜುನ, ನಿವೃತ್ತ ಪ್ರಾಂಶುಪಾಲ ಡಾ. ಕೆ ರೇವಣಸಿದ್ಧಪ್ಪ, ಲತಾ ನಿಷ್ಠಿ ರುದ್ರಪ್ಪ ಇತರರು ಉಪಸ್ಥಿತರಿದ್ದರು.

ಆರಂಭದಲ್ಲಿ ಕ.ಸಾ.ಪ. ಕಾರ್ಯಕಾರಿ ಸದಸ್ಯ ಸೋ.ದಾ. ವಿರೂಪಾಕ್ಷಗೌಡ ಸ್ವಾಗತ ಮಾಡಿ, ಪಿಡಿಐಟಿ ಕಾಲೇಜಿನ ಡಾ. ವಿಶ್ವನಾಥ ಕಾರ್ಯಕ್ರಮ ನಿರೂಪಿಸಿ, ಕ. ಸಾ. ಪ.ಕಾರ್ಯದರ್ಶಿ ಮುದೇನೂರು ಉಮಾಮಹೇಶ್ವರ ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *