ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆ
ಚಿತ್ರದುರ್ಗ:
ದೇವಭೂಮಿ ಎಂಬ ಅಭಿದಾನಕ್ಕೆ ಪಾತ್ರವಾದ ಹಿಮಾಲಯದಿಂದ ಬಂದ ಇಬ್ಬರು ಯತಿಗಳು ಇಲ್ಲಿನ ಶರಣ ಸಮೂಹದಲ್ಲಿ ಸೇರಿಕೊಂಡರು. ಅವರೇ ಮಹಾತಪಸ್ವಿ ಮಹಾಲಿಂಗೇಶ್ವರರು ಮತ್ತು ಶಿವತೇಜಸ್ವಿ ಶಿವಲಿಂಗೇಶ್ವರರು.

ಭಕ್ತಿಜ್ಞಾನ ವೈರಾಗ್ಯವೇ ಮುಪ್ಪುರಿಗೊಂಡು ಮೂಡಿಬಂದ ಪುಣ್ಯಾತ್ಮರಾದ ಮಹಾಲಿಂಗೇಶ್ವರರು ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಭಾವ, ಚಿತ್ತದಲ್ಲಿ ನಿರಪೇಕ್ಷೆ, ವಿಷಯಂಗಳಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ, ಪ್ರಸಾದದಲ್ಲಿ ಪರಿಣಾಮಗೊಂಡ ಪುಣ್ಯಪುರುಷರಾಗಿದ್ದಾರೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ. ದೊಡ್ಡಮಲ್ಲಯ್ಯನವರು ಹೇಳಿದರು.
ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣಮಾಸದ ಪ್ರಯುಕ್ತ ಆಯೋಜಿಸಿರುವ ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆಯಲ್ಲಿ ಶ್ರೀಮಠದ ಬಸವೇಶ್ವರ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಾಲಿಂಗಪುರದ ಶ್ರೀ ಮಹಾಲಿಂಗೇಶ್ವರರ ಜೀವನ ಹಾಗೂ ಸಾಧನೆ ಕುರಿತು ಚಿಂತನಗೋಷ್ಠಿಯಲ್ಲಿ ಉಪನ್ಯಾಸ ನೀಡುತ್ತಿದ್ದರು.
ಶ್ರೀ ಮಹಾಲಿಂಗೇಶ್ವರರು ಲೋಕಸಂಚಾರ ಕೈಗೊಂಡು ನೇರವಾಗಿ ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಢಳಾಪುರಕ್ಕೆ ಆಗಮಿಸುತ್ತಾರೆ. ಜ್ಞಾನ ಕ್ರಿಯೆಗಳ ಸಂಗಮದಂತಿದ್ದ ಹಿರಿಯ ಚೇತನ ಗುರುಲಿಂಗ ಮಹಾರಾಜರು ಯತಿಗಳನ್ನು ಕಂಡು ಸಂತಸಗೊಳ್ಳುತ್ತಾರೆ.
ಹಿಮಾಲಯದಿಂದ ಹೊರಟು ತಾವು ಕರ್ನಾಟಕದ ಶರಣ ಸಂದೋಹದಲ್ಲಿ ಭಾಗಿಯಾಗಲು ಹೊರಟಿದ್ದೇವೆ ಎನ್ನುತ್ತಾರೆ.
ಬಯಲ ಭಂಡಾರ ಬದುಕಿನ ಬಯಲೇ ಬಂಡಾರ ಮಾಡಿಕೊಂಡ ಯತಿಗಳನ್ನು ಕಂಡು ಗುರುಲಿಂಗರು ನೀವು ಹೀಗೆ ಹೋದರೆ ನಿಮ್ಮನ್ನು ನಮ್ಮ ಕನ್ನಡಿಗರು ಗುರುಗಳೆಂದು ಸ್ವೀಕರಿಸಲಾರರು, ಮೊದಲು ಅಷ್ಟಾವರಣಗಳ ಸುಸಂಪನ್ನರಾಗಿ ಪ್ರಯಾಣ ಬೆಳೆಸಿ ಎನ್ನುತ್ತಾರೆ. ಅದರಂತೆ ಶ್ರೀ ಗುರುಲಿಂಗರು ನೀಡಿದ ಶಿವದೀಕ್ಷೆಯನ್ನು ಸ್ವೀಕರಿಸುತ್ತಾರೆ.
ಕೊರಳಲ್ಲಿ ಶಿವರುದ್ರಾಕ್ಷಿ, ಕೈಯಲ್ಲಿ ಕಮಂಡಲ, ಪಾದಕ್ಕೆ ಪಾದರಕ್ಷೆ, ಜಡೆಯನ್ನು ಸುತ್ತಿ ಹೆಡೆಯನ್ನಾಗಿ ಮಾಡಿಕೊಂಡ ಓಂಕಾರದ ಮುಖ ಮಂದಾರ, ಕಾವಿ ಲಾಂಛನದ ಕಾಂತಿ ಕಾರುಣ್ಯ ಹೀಗೆ ಶರಣ ಸಂಪ್ರದಾಯದ ಅಲ್ಲಮನ ಅವತಾರಿಗಳಾಗಿ ಕನ್ನಡ ನಾಡಿಗೆ ಪಾದಯಾತ್ರೆ ಬೆಳೆಸುತ್ತಾರೆಂದರು.
ಅವರು ನೇರವಾಗಿ ತೇರದಾಳದ ಮಗಿ ಪ್ರಭುದೇವರ ಹತ್ತಿರ ಬಂದು ಕೆಲವು ದಿನ ತಂಗಿ ಧ್ಯಾನಾಸಕ್ತರಾಗುತ್ತಾರೆ. ಮಹಾಂತಯೋಗಿ ಪ್ರಭುದೇವರು ಹೃದಯತುಂಬಿ ಹಾರೈಸುತ್ತಾರೆ. ಮತ್ತೆ ಪ್ರಯಾಣ ಕೈಗೊಳ್ಳುತ್ತೇವೆ ಎಂದು ಕೇಳಿಕೊಂಡಾಗ ಗುರುಗಳ ಅಪ್ಪಣೆ ಪಡೆದು ಮಹಾಲಿಂಗೇಶ್ವರರು ಪಶ್ಚಿಮಕ್ಕೆ, ಶಿವಲಿಂಗೇಶ್ವರರು ದಕ್ಷಿಣಕ್ಕೆ ಹೊರಡುತ್ತಾರೆ.

ಮಹಾಲಿಂಗೇಶ್ವರರು ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಪ್ರಕೃತಿ ಸೊಬಗಿನ ನರಗಟ್ಟಿ ಎನ್ನುವ ಪುಟ್ಟ ಪುರಕ್ಕೆ ಪಾದಾರ್ಪಣೆ ಮಾಡುತ್ತಾರೆ. ಊರು ಹೊರಗಿನ ಶಿವಾಲಯದಲ್ಲಿ ಧ್ಯಾನಾಸಕ್ತರಾಗುತ್ತಾರೆ. ಈ ವಿಷಯ ತಿಳಿದ ಪುರುದ ಓರ್ವ ಶಿವಭಕ್ತೆ ಸಿದ್ದಾಯಿ ಯತಿಗಳಿಗೆ ಹಾಲು ಹಣ್ಣು ಪ್ರಸಾದ ನೀಡಿ ಸತ್ಕರಿಸುತ್ತಾಳೆ. ಕೆಲವು ದಿನಗಳ ನಂತರ ಅಲ್ಲಿ ಇನ್ನೂ ಏಕಾಂತಕ್ಕೆ ಪ್ರಾಶಸ್ತ್ಯವಾದ ಸ್ಥಳವನ್ನಾರಿಸಿ ಅಲ್ಲೇ ಪಕ್ಕದಲ್ಲಿರುವ ಚೆನ್ನಗಿರಿ ಎನ್ನುವ ಪುಟ್ಟ ಊರಿಗೆ ಬಂದು ತಮ್ಮ ತಪೋನುಷ್ಠಾನವನ್ನು ಮಾಡುವ ಸಂಕಲ್ಪ ಮಾಡುತ್ತಾರೆ.
ಇಲ್ಲಿ ಮಹಾಲಿಂಗೇಶ್ವರರು ಆಶ್ರಮವನ್ನು ನಿರ್ಮಿಸಿಕೊಂಡು ನಿತ್ಯ ಲಿಂಗಾರ್ಚನೆ ಜಂಗಮ ದಾಸೋಹ ಕೈಗೊಳ್ಳುತ್ತಾರೆ. ಗುರುಗಳ ತಪಃಶಕ್ತಿ ಕಂಡು ದರ್ಶನಕ್ಕಾಗಿ ಜನ ತಂಡೋಪತಂಡವಾಗಿ ಬರುತ್ತಾರೆ. ಆಗ ಗುರುಗಳು ಅಂಧತ್ವದಿಂದ ಬಳಲುತ್ತಿದ್ದ ರುದ್ರಮ್ಮಳಿಗೆ ದೃಷ್ಟಿ ನೀಡಿ ಉದ್ಧರಿಸುತ್ತಾರೆ. ದಂಪತಿಯೊಬ್ಬರಿಗೆ ಪುತ್ರಸಂತಾನ ಭಾಗ್ಯವನ್ನು ಕರುಣಿಸುತ್ತಾರೆ. ಇದೆಲ್ಲವನ್ನು ಕೇಳಿದ ಮುಧೋಳ ಸಂಸ್ಥಾನದ ರಾಜ ಮಲ್ಲೋಜಿರಾವ್ ಘೋರ್ಪಡೆಯವರು ತನ್ನ ಸೇವಕರು ಆನೆ ಒಂಟೆ ತರುಗ ಬಲದೊಂದಿಗೆ ಬಂದು ದರ್ಶನ ನಮಸ್ಕಾರ ಮಾಡಿ ದರ್ಶನ ಪಡೆಯುತ್ತಾರೆ.
ಆಗ ರಾಜರ ಆನೆಯಿಂದ ಆಘಾತಕ್ಕೊಳಗಾದ ಬಾಲಕನೊಬ್ಬ ಸತ್ತು ಹೋಗುತ್ತಾನೆ. ಇದರಿಂದ ರಾಜರು ಘಾಸಿಗೊಳ್ಳುತ್ತಾರೆ. ಆಗ ಮಹಾಲಿಂಗೇಶ್ವರರು ಆ ಬಾಲಕನನ್ನು ಬದುಕಿಸುತ್ತಾರೆ. ಈ ಪವಾಡವನ್ನು ಕಂಡ ಭಕ್ತರು ಆಶ್ಚರ್ಯ ಚಕಿತರಾಗುತ್ತಾರೆ. ಮುಂದೆ ಮಲ್ಲೋಜಿರಾವ್ ರಾಜರು ಗುರುಗಳಿಗೆ ಭಕ್ತರಾಗಿ, ನರಗಟ್ಟಿ-ಚೆನ್ನಗಿರಿ ಸುತ್ತ ಅಷ್ಟದಿಕ್ಕುಗಳಲ್ಲಿ ಲಿಂಗಮುದ್ರೆಯ ಕಲ್ಲುಗಳನ್ನು ಸ್ಥಾಪನೆ ಮಾಡಿದ ದಿನದಿಂದ ಸಮಗ್ರ ನಾಡೇ ಮಹಾಲಿಂಗಮಯವಾಯಿತು. ರಾಜನು ಭಿನ್ನವಿಸಿಕೊಂಡ ಕಾರಣ ಆ ಭಾಗ ಮುಂದೆ ಮಹಾಲಿಂಗಪುರವಾಯಿತು.
ಒಮ್ಮೆ ರಾಜರ ಕುದುರೆ ಆಕಸ್ಮಿಕವಾಗಿ ಸಾವನ್ನಪ್ಪಿದಾಗ ಅದನ್ನು ಶ್ರೀಗಳು ಬದುಕಿಸುತ್ತಾರೆ. ಯುದ್ಧದಲ್ಲಿ ಬಲವನ್ನು ತುಂಬುತ್ತಾರೆ. ಬಾವಿಯಲ್ಲಿ ಬೀಳುತ್ತಿದ್ದ ಶರಣೆ ಶಾಂತಮ್ಮನ್ನು ಎತ್ತಿಹಿಡಿದು ಬಾಳು ಎಂದು ಆಶೀರ್ವದಿಸುತ್ತಾರೆ.
ದೇವಸ್ಥಾನದಲ್ಲಿ ಕದಿಯುತ್ತಿದ್ದ ಕಳ್ಳನನ್ನು ಶಿಕ್ಷಿಸದೆ, ತಿಳಿದು ಬದುಕುವಂತೆ ಮಾರ್ಗ ತೋರಿಸುತ್ತಾರೆ. ಕೊನೆಗೆ ತನ್ನನ್ನು ಅನನ್ಯ ಭಕ್ತಿಯಿಂದ ಕಂಡಿದ್ದ ಸಿದ್ದಾಯಿಗೆ ತನ್ನ ಅಂತ್ಯಕಾಲದಲ್ಲಿ ಎಳೆಜಡೆಗಳನ್ನು ಮುಂಗುರುಳುಗಳನ್ನು ನೀಡಿ ತನ್ನ ಗುರುತು ನಿನ್ನನ್ನು ಕಾಪಾಡಲಿ ಎಂದು ಬೆಳಕಾಗುತ್ತಾರೆ.
ಗುರುಗಳೊಂದಿಗೆ ಸಿದ್ದಾಯಿಯು ಇತಿಹಾಸ ಬೆರೆತಳು. ಈಗಲೂ ಅಲ್ಲಿ ಜಟಾದರ್ಶನವು ಬಹಳ ಭಕ್ತಿಯ ದರ್ಶನವೆಂಬ ಪ್ರತೀತಿ ಇದೆ. ಪ್ರತಿವರ್ಷ ಭಾದ್ರಪದ ಮಾಸದ ಚತುದರ್ಶಿಯಂದು ವಿಜೃಂಭಣೆಯಿಂದ ಜಾತ್ರೆ ನಡೆಯುತ್ತದೆ. ಇತರೆ ಶರಣರ ರೀತಿಗೆ ವ್ಯತಿರಿಕ್ತರಾಗಿ ಮಹಾಲಿಂಗೇಶ್ವರರು ಪವಾಡಗಳಿಂದ ಪ್ರಸಿದ್ಧರಾದವರು. ಆದರೆ ಆ ಪವಾಡಗಳು ಅವರ ಜೀವನ ರೀತಿಗಳಾಗಿದ್ದವು ಮತ್ತು ಅಪಾರ ಪಾಮರರಿಗೆ ಬದುಕುವ ಮಾರ್ಗಗಳಾಗಿದ್ದವು ಎನ್ನುವುದು ವಿಶೇಷ.
ನಾಡಿನ ಅಸಂಖ್ಯ ಶರಣ ಮಹಾತ್ಮರ ಸಾಲಿನಲ್ಲಿ ಮಹಾಲಿಂಗೇಶ್ವರರು ಅಮರರಾಗಿ ಉಳಿದಿದ್ದಾರೆಂದರೆ ಮಾನವತೆಗೆ ಅವರು ನೀಡಿದ ಕೊಡಗೆ ಅನುಪಮವಾದುದು ಎಂದು ಹೇಳಿದರು.
ಸಮಾರಂಭದ ಸಮ್ಮುಖ ವಹಿಸಿದ್ದ ಗುರುಮಠಕಲ್ ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಬಹುತೇಕ ಸಮಾಜ ಸುಧಾರಕರು ತಾವು ನೋವುಂಡು ಸಮಾಜ ಆರೋಗ್ಯವಾಗಿರಲೆಂಬ ಸದಾಶಯದಿಂದ ಜೀವನ ಸಾಗಿಸಿದವರೇ ಆಗಿದ್ದಾರೆ.

ಅದರಲ್ಲಿ ಮಹಾಲಿಂಗಪುರ ಮಹಾಲಿಂಗೇಶ್ವರರು ಒಬ್ಬರು. ಇವರು ತಮ್ಮ ತಪಃಶಕ್ತಿಯ ಫಲವಾಗಿ ಸಮಾಜದಲ್ಲಿನ ಪ್ರಜೆಗಳು ಅಂದುಕೊಂಡದ್ದನ್ನು ಕರುಣಿಸುವ ಮಹಾಯೋಗಿಯಾಗಿದ್ದರು.
ತಾವೂ ಬೆಳೆಯಬೇಕು ಅದರೊಂದಿಗೆ ಸಮಾಜವೂ ಬೆಳೆಯಬೇಕೆಂಬ ಅಭಿಲಾಷೆ ಹೊತ್ತು ನಾಡನ್ನು ಸುತ್ತಿ ಮಹಾಲಿಂಗಪುರದಲ್ಲಿ ನೆಲೆ ನಿಂತ ಕಾರಣ ಅದು ಮಹಾಲಿಂಗಪುರವಾಯಿತು. ಮಹಾಲಿಂಗೇಶ್ವರರ ಹೆಸರು ಎಷ್ಟು ಪ್ರಸಿದ್ಧಿಯೋ ಅಷ್ಟೇ ಪ್ರಸಿದ್ಧಿ ಅಲ್ಲಿ ತಯಾರಾಗುವ ಬೆಲ್ಲ ಅಷ್ಟೊಂದು ಸ್ವಾದಿಷ್ಟವಾಗಿರುತ್ತದೆ ಎಂದು ನುಡಿದರು.
ಸಮಾರಂಭದಲ್ಲಿ ವಿವಿಧ ಸಂಘಟನೆ ಸಮಾಜಗಳ ಮುಖಂಡರುಗಳಾದ ಜಯಕುಮಾರ, ಸಿ.ಟಿ. ಶೈಲಾ, ಬಸವರಾಜ ಕಟ್ಟಿ, ಗಾಯತ್ರಿ ಶಿವರಾಂ, ಪಿ.ಎಂ.ಜಿ. ರಾಜೇಶ, ಶಿವಣ್ಣ ಕಸವನಹಳ್ಳಿ, ಕೊಟ್ರೇಶಪ್ಪ, ಚಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.
ಶ್ರೀ ಬೃಹನ್ಮಠ ಸಂಯುಕ್ತ ಪ.ಪೂ ಕಾಲೇಜಿನ ನಿರ್ವಹಣೆಯಲ್ಲಿ ನಡೆದ ಸಮಾರಂಭಕ್ಕೆ ಮಹಾಲಿಂಗೇಶ್ವರ ಬಗೆಗಿನ ಗೀತೆ ಹಾಗೂ ಶಿವಶರಣರ ವಚನಗಳನ್ನು ಕಲಾವಿದ ಉಮೇಶ ಪತ್ತಾರ ಹಾಡಿದರು. ಸೌಮ್ಯ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಬಿಂದು ಪಿ.ಸಿ. ನಿರೂಪಿಸಿ ಶರಣು ಸಮರ್ಪಣೆ ಮಾಡಿದರು.
