ಬೆಂಗಳೂರು
ಕರ್ನಾಟಕದ ಮಣ್ಣಿನಲ್ಲಿ ಬಸವ ತತ್ತ್ವ ಬೆರೆತಿದೆ, ಇದರಿಂದ ನಾನೂ ಸಾಕಷ್ಟು ಕಲಿತಿದ್ದೇನೆ, ಎಂದು ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ ಸಂಸ್ಥಾಪಕ, ಸದ್ಗುರು ಶ್ರೀ ಮಧುಸೂದನ ಸಾಯಿ ಗುರುವಾರ ಅಭಿಪ್ರಾಯಪಟ್ಟರು.
ನಗರದಲ್ಲಿ ಬಸವ ಸಮಿತಿ ಸಂಸ್ಥಾಪಕ ಬಿ.ಡಿ.ಜತ್ತಿ ಅವರ 114ನೇ ಜಯಂತ್ಯುತ್ಸವದ ಪ್ರಯುಕ್ತ ‘ದಾಸೋಹ ರತ್ನ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ವಚನ ಸಾಹಿತ್ಯ ನನಗೆ ಬಹಳ ಇಷ್ಟ. ಸೋಹಂ ಎಂಬುದ ಕೇಳಿ ದಾಸೋಹವ ಮಾಡದಿದ್ದರೆ ಅತಿಗಳೆವ ಗುಹೇಶ್ವರ, ಎನ್ನುತ್ತಾರೆ ಅಲ್ಲಮಪ್ರಭು.
ಛತ್ತೀಸಗಡದಲ್ಲಿ ಹುಟ್ಟಿ, ಆಂಧ್ರದಲ್ಲಿ ವಿದ್ಯಾಭ್ಯಾಸ ಮಾಡಿ, ಕರ್ನಾಟಕವನ್ನು ಕರ್ಮಭೂಮಿ ಮಾಡಿಕೊಂಡಿದ್ದೇನೆ. ನನ್ನನ್ನು ಯಾರೂ ‘ಇವನಾರವ’ ಎಂದು ಕೇಳಲಿಲ್ಲ. ಬದಲಿಗೆ ‘ಇವ ನಮ್ಮವ’ ಎಂದು ಒಪ್ಪಿಕೊಂಡರು. ಇದು ನಿಜವಾದ ಬಸವ ತತ್ತ್ವ.

ವಚನ ಸಾಹಿತ್ಯವನ್ನು ವಿಶ್ವಮಟ್ಟದಲ್ಲಿ ಪ್ರಸಾರ ಮಾಡುವ ದೃಷ್ಟಿಯಿಂದ ನಮ್ಮ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯವು ಬಸವ ಸಮಿತಿ ಜೊತೆಗೆ ಕೆಲಸ ಮಾಡಲಿದೆ. ಬಾಬಾರವರ ಸಾಹಿತ್ಯದೊಂದಿಗೆ ಬಸವಸಾಹಿತ್ಯವೂ ವಿಶ್ವದಾದ್ಯಂತ ಹರಡಬೇಕು’ ಎಂದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ ಮಧುಸೂದನ ಸಾಯಿ ಅವರು ಎಲ್ಲಿಯಾದರೂ ಹುಟ್ಟಿರಲಿ, ಈಗ ಅವರು ಕನ್ನಡಿಗರು. ಅವರ ಸೇವೆ, ಸಾಧನೆ, ಕೀರ್ತಿ ಎಲ್ಲವೂ ರಾಜ್ಯದ ಘನತೆಯನ್ನು ಹೆಚ್ಚಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.
ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಬೇಲಿಮಠ ಮಹಾಸಂಸ್ಥಾನದ ಶಿವರುದ್ರ ಸ್ವಾಮೀಜಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಮಿತಿ ಕಟ್ಟಡದ ಆವರಣದಲ್ಲಿ ‘ಬಸವ ಅಂತರರಾಷ್ಟ್ರೀಯ ಮಾಹಿತಿ ಕೇಂದ್ರ’ವನ್ನು ಉದ್ಘಾಟಿಸಲಾಯಿತು.

ಒಳ್ಳೆಯ ವಿಚಾರ ಜೈ ಬಸವ