1904-1940: ಲಿಂಗಾಯತ ಇತಿಹಾಸ ಬದಲಿಸಿದ ಆ ಮೂವತ್ತಾರು ವರ್ಷಗಳು
ಬೆಂಗಳೂರು
ಹಾನಗಲ್ ಕುಮಾರಸ್ವಾಮಿಗಳ ಮಾರ್ಗದರ್ಶನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪನೆಯಾಯಿತು. ಮೊದಲ ಅಧಿವೇಶನ ಧಾರವಾಡದಲ್ಲಿ ನಡೆಯಿತು.
ಕೆಲವು ಮೂಲಗಳು ಮೊದಲ ಅಧಿವೇಶನ 1903ರಲ್ಲಿ ನಡೆಯಿತೆನ್ನುತ್ತವೆ, ಇನ್ನು ಕೆಲವು 1904 ಎನ್ನುತ್ತವೆ.
ಒಂದು ವರ್ಷದ ಈ ವ್ಯತ್ಯಾಸ ನನ್ನ ವಾದಕ್ಕೆ ಮುಖ್ಯವಲ್ಲ. ಮುಖ್ಯವಾದದ್ದು ಅಲ್ಲಿ ಕೈಗೊಂಡ ನಿರ್ಣಯಗಳು.
ಆ ಮೊದಲ ಅಧಿವೇಶನದಲ್ಲಿ ಮೂರು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಒಂದು, ವೀರಶೈವರು ವೇದ, ಉಪನಿಷತ್ತು, ಶಾಸ್ತ್ರ, ಪುರಾಣ ಮತ್ತು ಆಗಮಗಳನ್ನು ಒಪ್ಪುತ್ತಾರೆ.
ಎರಡು, ವೀರಶೈವರು ಹಿಂದೂಗಳು.
ಮೂರು, ಲಿಂಗಾಯತ ಮಠಗಳಿಗೆ ಜಂಗಮ ಜಾತಿಯವರನ್ನೇ ಸ್ವಾಮಿಗಳಾಗಿ ನೇಮಿಸಬೇಕು.
ಜೊತೆಗೆ ಆ ಸಭೆ ಇನ್ನೊಂದು ಮಾತನ್ನೂ ದಾಖಲಿಸಿತು. ವೀರಶೈವ ಮತವು ನಿಗಮಾಗಮೋಪನಿಷತ್ ಪ್ರತಿಪಾದಿತ ತತ್ವದಿಂದ ಅನಾದಿ ಸಂಸಿದ್ಧವಾದದ್ದು; ಬಸವೇಶ್ವರರು ಈ ಮತವನ್ನು ಪ್ರಚಾರ ಮಾಡಿದವರೇ ಹೊರತು ಸ್ಥಾಪಕರಲ್ಲ ಎಂದು.
ಜೊತೆಗೆ, ‘ವೀರಶೈವ ಮತವು ನಿಗಮಾಗಮೋಪನಿಷತ್ ಪ್ರತಿಪಾದಿತ ತತ್ವದಿಂದ ಅನಾದಿ ಸಂಸಿದ್ಧವಾದದ್ದು, ಬಸವೇಶ್ವರರು ಈ ಮತವನ್ನು ಪ್ರಚಾರ ಮಾಡಿದವರೇ ಹೊರತು ಸ್ಥಾಪಕರಲ್ಲ,’ ಎಂಬ ಅಭಿಪ್ರಾಯವನ್ನೂ ಆ ಸಭೆ ದಾಖಲಿಸಿತು.
ಬಸವೇಶ್ವರರು ವೀರಶೈವ ಮತವನ್ನು ಪ್ರಚಾರ ಮಾಡಿದವರೇ ಹೊರತು ಸ್ಥಾಪಕರಲ್ಲ
ಈಗ ಈ ನಾಲ್ಕೂ ನಿಲುವುಗಳನ್ನು ಒಟ್ಟಿಗೆ ಇಟ್ಟು ನೋಡಿ.
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ, ಆಗಮದ ಮೂಗ ಕೊಯ್ಯುವೆ ಎಂದವರು ಬಸವಣ್ಣನವರು. ಆದರೆ ಅವರ ಸಮಾಜದ ಪ್ರಮುಖ ಪ್ರಾತಿನಿಧಿಕ ಸಂಸ್ಥೆ ತನ್ನ ಮೊದಲ ಸಭೆಯಲ್ಲೇ ವೇದ ಆಗಮಗಳನ್ನು ಒಪ್ಪಿಕೊಂಡಿತು.
ಜಾತಿಯನ್ನು ನಿರಾಕರಿಸಿದ ಧರ್ಮದ ಸಂಸ್ಥೆಯು ಮಠಾಧಿಪತಿಯ ಸ್ಥಾನಕ್ಕೆ ಜಾತಿಯ ಅರ್ಹತೆಯನ್ನು ವಿಧಿಸಿತು. ಧರ್ಮವನ್ನು ಸ್ಥಾಪಿಸಿದವರನ್ನು ಪ್ರಚಾರಕರ ಸ್ಥಾನಕ್ಕೆ ಇಳಿಸಿತು.
ಇವು ಯಾವುವೂ ನನ್ನ ಆರೋಪಗಳಲ್ಲ, ನಿರ್ಣಯಗಳು.
ಪೂಜ್ಯ ಮಾತೆ ಮಹಾದೇವಿಯವರು ಈ ನಿರ್ಣಯಗಳ ಹಿಂದಿನ ಮನಃಸ್ಥಿತಿಯನ್ನು ಒಂದು ಚಿತ್ರದಲ್ಲಿ ಹಿಡಿದಿಟ್ಟಿದ್ದಾರೆ.
‘ಕತ್ತಲಲ್ಲಿ ಕೈಗೆ ಸಿಕ್ಕಿದ್ದನ್ನು ಹಿಡಿದುಕೊಳ್ಳುವಂತೆ, ಪ್ರವಾಹದಲ್ಲಿ ಕೊಚ್ಚಿಹೋಗುವವನು ಹುಲ್ಲುಕಡ್ಡಿಯನ್ನಾದರೂ ಹಿಡಿಯುವಂತೆ, ಶೂದ್ರತ್ವದ ಪ್ರವಾಹದಿಂದ ತಪ್ಪಿಸಿಕೊಳ್ಳಲು ನಿಗಮಾಗಮಗಳ ಆಸರೆಯನ್ನು ಹಿಡಿಯುವ ಪ್ರಯತ್ನ ಅದಾಗಿತ್ತು,’ ಎಂದು ಅವರು ಹೇಳಿದ್ದರು.
ಈ ವಿವರಣೆ ನನಗೆ ಒಪ್ಪಿಗೆ. ವೀರಶೈವ ಮಹಾಸಭಾ ಮಾಡಿದ್ದು ದ್ರೋಹವಲ್ಲ. ಅದು ತೋರಿಸಿದ್ದು ಗಾಬರಿ.
ಆದರೆ ಗಾಬರಿಯ ಕ್ಷಣದಲ್ಲಿ ಆಸರೆಯೆಂದು ಹಿಡಿದ ಅದೇ ಹುಲ್ಲುಕಡ್ಡಿ, ಮುಂದೆ ಬೇರುಬಿಟ್ಟು ಮರದಂತೆ ಗಟ್ಟಿಯಾಗಿ ನಿಂತರೆ? ಆಗ ಏನು ಮಾಡಬೇಕು? ಅದೇ ಈ ಲೇಖನದ ವಿಷಯ.
ಈ ನಿರ್ಣಯಗಳಾದಾಗ ವಚನ ಸಾಹಿತ್ಯ ಇನ್ನೂ ಬೆಳಕಿಗೆ ಬಂದಿರಲಿಲ್ಲ
ಒಂದು ಪ್ರಮುಖ ಸಂಗತಿಯನ್ನೂ ಇಲ್ಲಿ ಸೇರಿಸಬೇಕು. ಈ ನಿರ್ಣಯಗಳಾದಾಗ ವಚನ ಸಾಹಿತ್ಯ ಇನ್ನೂ ಬೆಳಕಿಗೆ ಬಂದಿರಲಿಲ್ಲ. ಹಳಕಟ್ಟಿಯವರ ಸಂಶೋಧನೆ ಆಮೇಲೆ ಬಂದದ್ದು. ಅಂದರೆ 10904ರಲ್ಲಿ ನಿರ್ಣಯ ಕೈಗೊಂಡವರ ಬಳಿ, ಇಂದು ನಮ್ಮ ಬಳಿ ಇರುವ ಆಧಾರ ಇರಲಿಲ್ಲ. ಇದನ್ನು ಒಪ್ಪದೆ ಅವರನ್ನು ದೂಷಿಸುವುದು ಅನ್ಯಾಯ.
ಅದೇ ಕಾರಣಕ್ಕಾಗಿ, ಇಂದು ಆಧಾರ ದೊರೆತ ಮೇಲೂ ಆ ನಿರ್ಣಯಗಳನ್ನು ಸಮರ್ಥಿಸುವುದು ಕೂಡ ಅನ್ಯಾಯವೇ.
ಪರಳಿ ವೈಜನಾಥದ ವ್ಯಾಜ್ಯ

ಈ ಪ್ರಸಂಗವೇ ಇಡೀ ಚರ್ಚೆಯ ಕೇಂದ್ರಬಿಂದು. ಇದನ್ನು ವಿವರವಾಗಿ ನೋಡೋಣ. ಹೈದರಾಬಾದ್ ನಿಜಾಮನ ಆಡಳಿತಕ್ಕೆ ಒಳಪಟ್ಟಿದ್ದ ಪರಳಿ ವೈಜನಾಥ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದವರು ಬ್ರಾಹ್ಮಣರು. ಆ ಸ್ಥಾನಗಳಿಗೆ ಲಿಂಗಾಯತರನ್ನು ನೇಮಿಸಬೇಕೆಂಬ ವಿವಾದ ನಿಜಾಮನ ಹೈಕೋರ್ಟಿನ ಮಟ್ಟವನ್ನು ತಲುಪಿತು.
ಆ ಪ್ರಕರಣದಲ್ಲಿ ನಮ್ಮ ಕಡೆಯಿಂದ ಮಂಡಿಸಲಾದ ಕೇಂದ್ರ ವಾದ ಯಾವುದು ಎಂಬುದನ್ನು ಈಗ ನೋಡೋಣ: “ಲಿಂಗಾಯತರು ಲಿಂಗೀ ಬ್ರಾಹ್ಮಣರು. ಆದ್ದರಿಂದ ವೈಜನಾಥನ ಪೂಜೆ ಮಾಡುವ ಅಧಿಕಾರವನ್ನು ಲಿಂಗಾಯತರಿಗೆ ಕೊಡಬೇಕು.”
ಈ ವ್ಯಾಜ್ಯದ ಹಿಂದಿನ ನಾಯಕರಲ್ಲಿ ಹಾನಗಲ್ ಕುಮಾರಸ್ವಾಮಿಗಳೂ ಒಬ್ಬರು.
ಅವರ ಕೋರಿಕೆಯಂತೆ, ಇಂದೋರಿನಲ್ಲಿ ಸಂಸ್ಕೃತ ಶಾಲೆಯ ಪ್ರಾಚಾರ್ಯರಾಗಿದ್ದ ವಿರೂಪಾಕ್ಷ ಒಡೆಯರ್ ಅವರು ತಜ್ಞ ಸಾಕ್ಷಿಯಾಗಿ ಬಂದರು. ಲಿಂಗಾಯತರು ಲಿಂಗೀ ಬ್ರಾಹ್ಮಣರೆಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು. ವ್ಯಾಜ್ಯವನ್ನು ಗೆದ್ದೆವು. ಪೂಜಾರಿಕೆ ದೊರೆಯಿತು.
ಆ ಕಾಲದಲ್ಲಿ ಈ ವ್ಯಾಜ್ಯ ಅನಿವಾರ್ಯವಾಗಿತ್ತು, ಶೂದ್ರ ಎಂಬ ಕಳಂಕದಿಂದ ಹೊರಬರಲು ಇದು ಬೇಕಿತ್ತು ಎಂದು ಹೇಳಬಹುದು. ಸರಿ. ಆದರೆ ಒಂದು ಲೆಕ್ಕ ಹಾಕೋಣ.
ಆ ಗೆಲುವಿನಿಂದ ನಮಗೆ ದೊರೆತದ್ದು ಒಂದು ದೇವಸ್ಥಾನದ ಪೂಜಾ ಹಕ್ಕು. ಆ ಗೆಲುವಿಗಾಗಿ ನಾವು ತೆತ್ತದ್ದೇನು? ನ್ಯಾಯಾಲಯದ ದಾಖಲೆಯಲ್ಲಿ, ಶಾಶ್ವತವಾಗಿ, ನಾವು ಬ್ರಾಹ್ಮಣರೆಂಬ ಹೇಳಿಕೆ. ಅಂದರೆ ಬ್ರಾಹ್ಮಣ್ಯವೇ ಶ್ರೇಷ್ಠ ಎಂಬ ಮೂಲ ತತ್ವವನ್ನು ನಾವು ಒಪ್ಪಿಕೊಂಡೆವು. ಆ ಏಣಿ ಸರಿಯೆಂದು ಒಪ್ಪಿ, ಅದರಲ್ಲಿ ನಮಗೆ ಮೇಲಿನ ಮೆಟ್ಟಿಲನ್ನು ಕೇಳಿದೆವು.
ಎಲ್ಲಿಯ ಬಸವಣ್ಣ, ಎಲ್ಲಿಯ ಲಿಂಗೀ ಬ್ರಾಹ್ಮಣರು ಎಂದು ಡಾ. ಜಾಮದಾರರು ಈ ಪ್ರಸಂಗದ ಕುರಿತು ಬರೆಯುತ್ತಾರೆ:
ದೇವರು ಮತ್ತು ಭಕ್ತನ ನಡುವೆ ದಲ್ಲಾಳಿ ಬೇಡವೆಂದು ಹೇಳಿ ಪ್ರತಿಯೊಬ್ಬರ ಕೊರಳಿಗೂ ಇಷ್ಟಲಿಂಗವನ್ನು ಕಟ್ಟಿದ ಧರ್ಮವು, ಗುಡಿಯ ದಲ್ಲಾಳಿಯ ಹುದ್ದೆಗಾಗಿ ನ್ಯಾಯಾಲಯದ ಮೆಟ್ಟಿಲನ್ನು ಏರಿತು.
ಈ ವಾಕ್ಯ ಕಟುವಾಗಿದೆ ಎಂದು ಯಾರಾದರೂ ಹೇಳಬಹುದು. ಆದರೆ ಇದರಲ್ಲಿ ಸುಳ್ಳು ಯಾವುದೆಂದು ಮಾತ್ರ ಇನ್ನೂ ಯಾರೂ ತೋರಿಸಿಲ್ಲ.
ನಾಳೆ ಭಾಗ 3: ಶಿವಯೋಗ ಮಂದಿರ ಕಲಿಸಿದ ವೈದಿಕತೆ; ಮಡಿವಂತಿಕೆ ಹಿಡಿದ ಸಮಾಜ

ನಿಮ್ಮ ಹಿರಿಯರು ಬಹಳ ತಪ್ಪು ಮಾಡಿದ್ದಾರೆ.ಈಗ ನಾವು ತಿದ್ದಿ ಕೊಳ್ಳಬೇಕು. ಜೈ ಬಸವ
ಏನಾದ್ರೂ ಮಾಡಿ ಎಲ್ಲಾ ಸಮಾಜಗಳನ್ನು ಒಂದೂ ಮಾಡಿ.. ಪ್ರಪಂಚ dandantyya… ಲಿಂಗಾಯತ ಅಂಡ್ ಬಸವಣ್ಣಾ ಹೆಸರು ಉಳಿಬೇಕು ಅಷ್ಟು ಮಾಡಿ…