ಯಲಬುರ್ಗಾ:
ತಾಲೂಕಿನ ಮರಕಟ್ಟ ಗ್ರಾಮದ ಬಸವ ಕೇಂದ್ರದ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ‘ವಚನಗಳ ನಡೆ ಮನೆ-ಮನಗಳ ಕಡೆಗೆ’ ಎಂಬ ೨೯ ನೇ ದಿನದ ಕಾಯ೯ಕ್ರಮ ಹಾಗೂ ಕಾರ್ಯಕ್ರಮದ ಸಮಾರೋಪ ಸಮಾರಂಭ ಗುರುವಾರ ಷಣ್ಮುಖಪ್ಪ ಬಾಲಪ್ಪ ಬಳ್ಳಾರಿ ಅವರ ಮನೆಯಲ್ಲಿ ನಡೆಯಿತು.
ಕಾಯ೯ಕ್ರಮ ಪ್ರಾಸ್ತಾವಿಕ ಮಾತುಗಳನ್ನಾಡಿದ ಬಸವ ಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ ಅವರು, ಗ್ರಾಮದ ಕೇಂದ್ರದ ವತಿಯಿಂದ ನಡೆದ ೩ ನೇ ವಷ೯ದ ವಚನಗಳ ನಡೆ ಮನೆ-ಮನಗಳ ಕಡೆಗೆ ಎಂಬ ಕಾಯ೯ಕ್ರಮ ೨೯ ದಿನಗಳವರೆಗೆ ಗ್ರಾಮದ ಬಸವ ಕೇಂದ್ರದ ಸದಸ್ಯರು ಹಾಗೂ ಗ್ರಾಮದ ರೈತಬಾಂಧವರ ಸಹಕಾರದಿಂದ ದಾಸೋಹದೊಂದಿಗೆ ತಿಂಗಳು ಕಾಲ ‘ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು’ ಎಂಬ ಶಿಷಿ೯ಕೆಯ ಅಡಿಯಲ್ಲಿ ನಡೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗದಗ ಬಸವದಳದ ಹಿರಿಯ ಶರಣರಾದ ಎಸ್.ಎ. ಮುಗದ ಅವರು ಇಷ್ಟಲಿಂಗ ಪರಿಕಲ್ಪನೆ ಬಗ್ಗೆ ಮಾತನಾಡಿದರು. ಇಷ್ಟಲಿಂಗ ಬೇರೆ ಏನೂ ಅಲ್ಲಾ, ಅದು ನಮ್ಮೆಲ್ಲರೊಳಗಿರುವ ಆತ್ಮದ ಕುರುಹು. ಇಷ್ಟಲಿಂಗ ಪೂಜೆ ಮಾಡಿದರೆ ಇಡೀ ವಿಶ್ವವನ್ನೆ ಪೂಜೆ ಮಾಡಿದಂತೆ ಆಗುತ್ತದೆ. ಹಲವಾರು ಕಲ್ಪಿತ ದೇವರ ಪೂಜೆಯನ್ನು ಶರಣರು ತಿರಸ್ಕರಿಸಿದರು ಎಂಬುದನ್ನು ಅವರು ತಿಳಿಸಿದರು.

ಕಾಯ೯ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗದಗ ಜಿಲ್ಲಾ ಜೆ.ಎಲ್.ಎಂ. ಪ್ರಧಾನ ಕಾರ್ಯದರ್ಶಿ ಶೇಕಣ್ಣ ಕವಳಿಕಾಯಿ ಅವರು ಬಸವಣ್ಣ ಬೇರೆನು ಅಲ್ಲ. ನಮ್ಮೆಲ್ಲರೊಳಗಿನ ಅಂಕು-ಡೊಂಕು ತಿದ್ದಿ, ಬುದ್ಧಿ ಹೇಳಿ ಬದುಕುವ ಮತ್ತು ಸಮಾಜವನ್ನು ಬದುಕಿಸುವ ಮಾಗ೯ ತೋರಿಸಿದ ಮಹಾಸಂತ ಎಂದು ಬಣ್ಣಿಸಿದರು.

ಗದಗ ಬಸವದಳದ ಅಧ್ಯಕ್ಷ ವಿ.ಕೆ. ಕರೇಗೌಡ್ರ, ನಾಗಭೂಷಣ ಬಡಿಗಣ್ಣನವರ, ಬಸವರಾಜಪ್ಪ ಇಂಗಳಧಾಳ, ನಾಗನಗೌಡ ಮಾಟಲದಿನ್ನಿ, ಅಮರೇಶಪ್ಪ ದೇವಲ, ಕೇಶಣ್ಣ ಚೌಡಾಪೂರ, ಹನುಮಂತಪ್ಪ ಗದ್ದಿ, ನರಸಪ್ಪ ತಳಕೇರಿ ಹಾಗೂ ಮರಕಟ್ಟ ಗ್ರಾಮದ ಬಸವ ಕೇಂದ್ರದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

ಕಾಯ೯ಕ್ರಮದ ನಿರೂಪಣೆಯನ್ನು ಉಮೇಶ ಹುಣಸಿಹಾಳ ಅವರು ಮಾಡಿ ಶರಣು ಸಮರ್ಪಿಸಿದರು.
