ಅರಿವು, ಅನ್ನ, ಆಶ್ರಯದ ಗುರು ರಾಜೇಂದ್ರ ಮಹಾಸ್ವಾಮಿಗಳು: ಡಾ. ಜಯಪ್ಪ ಹೊನ್ನಾಳಿ

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು :

ಬಸವಾದಿ ಪ್ರಮಥರ ಆತ್ಮದಾಶಯದಂತೆ, ತನ್ನರಿವನ್ನೇ ತನಗೆ ಗುರುವಾಗಿಸಿಕೊಂಡು, ಪ್ರಜ್ಞೆಯನ್ನೆ ಪರಮಾತ್ಮನೆಂದು ಪರಿಭಾವಿಸಿ, ಜೆ.ಎಸ್.ಎಸ್  ಮಹಾವಿದ್ಯಾಪೀಠ ವಿದ್ಯಾ ಸಂಸ್ಥೆಯನ್ನು 1954 ರಲ್ಲೇ ಕಂತೆಭಿಕ್ಷೆ ಬೇಡಿ ಕಟ್ಟಿ, ವಿದ್ಯೆಯ ದಾನವನ್ನು ನಿರಂತರ ಮಾಡಿದವರು, ಅರಿವಿನ ಗುರು ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಎಂದು ಕವಿ, ಮೈಸೂರು ನಗರ ಘಟಕ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಜಯಪ್ಪ ಹೊನ್ನಾಳಿ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ನಗರ ಯುವ ಘಟಕವು, ನಾಡಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲೊಂದಾದ ಬಿಳಿಕೆರೆಯ ವಿದ್ಯಾವಾರಿಧಿ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಮಾಡಿದ ರಾಜೇಂದ್ರ ನಮನ ಮತ್ತು ದತ್ತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ರಾಜೇಂದ್ರ ಶ್ರೀಗಳು ಜಾತಿ ಮತ ನೋಡದೆ, ಕುಲಭೇದ ನೆಲಭೇದಗಳ ಮಾಡದೇ, ನಿರ್ಗತಿಕರ, ನಿರಾಶ್ರಿತರ, ಬಡವರ, ದಲಿತರ, ದಮನಿತರ ಮಕ್ಕಳಿಗೆ ಆಶ್ರಯ, ಅನ್ನ, ಅಕ್ಷರ ಎಂಬ ತ್ರಿವಿಧ ದಾಸೋಹವನ್ನು ನಿತ್ಯ ನಿರಂತರ ನಡೆಸುವುದರ ಜೊತೆಗೆ, ಸಮುದಾಯಕ್ಕೆ ಬಹುಮುಖ್ಯವಾಗಿ ಬೇಕಾದ ಆರೋಗ್ಯವನ್ನೂ ಕೊಡಲು ಕಾರುಣ್ಯದಿಂದ ಆಸ್ಪತ್ರೆಗಳನ್ನು ಆರಂಭಿಸಿ, ಕೇವಲ ಧರ್ಮಯೋಗಿಯೆನಿಸದೇ, ಕರ್ಮಯೋಗಿ ಎನಿಸಿ; ಸದ್ಗುರು ಶ್ರೇಷ್ಠರೆನಿಸಿದರು ಎಂದರು.

ಜಯಚಾಮರಾಜೇಂದ್ರ ಮಹಾರಾಜರಿಂದಲೇ ಸಮುದಾಯದ ಪರಮ ಸೇವೆಗಾಗಿ ರಾಜಗುರುತಿಲಕ ಪ್ರಶಸ್ತಿಯನ್ನೂ, ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಗೌರವವನ್ನೂ ಪಡೆದ, ಅರಿವಿನಲ್ಲೇ ಅನಂತನ ಕಂಡ ಅಂತಹ ತ್ರಿವಿಧ ದಾಸೋಹಿ ಅನುಪಮ ಜಗದ್ಗುರುವಿನ ಆಶಯದಂತೆಯೇ ವಿದ್ಯಾವಾರಿಧಿ ಶಿಕ್ಷಣ ಸಂಸ್ಥೆಯೂ ಕೂಡಾ ಕೆಲಸ ಮಾಡುತ್ತಿದ್ದು, ಗ್ರಾಮೀಣ ಮಕ್ಕಳಿಗೆ ಯಾವುದೇ ಭೇದಭಾವವಿಲ್ಲದೆ, ಉತ್ಕೃಷ್ಟ ಜ್ಞಾನದ  ಜೊತೆಗೆ ಶ್ರೇಷ್ಠ ಸಂಸ್ಕಾರವನ್ನೂ ಕೊಡುವ ಕಾಯಕವನ್ನು, ಅತ್ಯುತ್ತಮ ಗುರುಬಳಗವನ್ನಿಟ್ಟುಕೊಂಡು ಪ್ರಾಮಾಣಿಕವಾಗಿ ಮಾಡುತ್ತಿದೆ.

ಮೈಸೂರು ನಗರದಲ್ಲಿರುವ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಿಗೆ ಯಾವುದರಲ್ಲೂ ಕಡಿಮೆಯಿಲ್ಲದಂತೆ ಪ್ರಗತಿ ತೋರುತ್ತಿರುವ ಇದರ ಸಾಧನೆ ನಿಜಕ್ಕೂ ಶ್ಲಾಘನೀಯ, ಇಂಥ ಸಂಸ್ಥೆಗಳವರ ಸಂತತಿ ಸಾವಿರವಾಗಲಿ ಎಂದರು.

ಆರಂಭದಲ್ಲಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ ವಿದ್ಯಾವಾರಿಧಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹೆಚ್. ಎಸ್. ರಮೇಶ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಆಶೋತ್ತರಗಳನ್ನು ವಿವರಿಸಿದರು.

ಪ್ರಧಾನ ಭಾಷಣ ಮಾಡಿದ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರು, ಸಾಹಿತಿಗಳೂ ಆದ ಕೆ.ಬಿ. ಸೋಮಶೇಖರ, ವಿದ್ಯಾರ್ಥಿಗಳು ಶರಣರಂತೆ ತಮ್ಮ ಬದುಕುಗಳನ್ನು ಪ್ರಾಮಾಣಿಕತೆಯಿಂದ ಕಟ್ಟಿಕೊಳ್ಳಬೇಕು ಎಂದರು.

ಯುವ ಘಟಕದ ಸಂಚಾಲಕಿ ರಶ್ಮಿ ಷಡಕ್ಷರಿ ಎಲ್ಲರನ್ನೂ ಸ್ವಾಗತಿಸಿದರು, ವಿದ್ಯಾವಾರಿಧಿ ಸಂಸ್ಥೆಯ ಪ್ರಾಂಶುಪಾಲರಾದ ಸೌಮ್ಯ ಎಸ್. ಉಪಸ್ಥಿತರಿದ್ದರು.

ದತ್ತಿ ದಾನಿಗಳಾದ ತಾ. ರು. ನಟರಾಜ ಮತ್ತು ರುದ್ರಸ್ವಾಮಿ, ನಿಕಟಪೂರ್ವ ಕದಳಿ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ವೀಣಾ ರಮೇಶ, ಸುನಿತಾ ಗುರು, ಪರಿಷತ್ತಿನ ಉಪಾಧ್ಯಕ್ಷ ಚಿನ್ನಸ್ವಾಮಿ, ಕಾರ್ಯದರ್ಶಿ ನಂದಿಶ್ವರ ಬಿ. ಎನ್, ಖಜಾಂಚಿ ಡಾ. ಮುದ್ದುಮಲ್ಲೇಶ, ಸಂಚಾಲಕರಾದ ಡಾ. ಲೋಕೇಶಪ್ಪ ಹೆಚ್. ಎನ್. ಮುಂತಾದವರಿದ್ದರು.

ಪ್ರಚಲಿತರಿಲ್ಲದ ಶರಣರ ಕುರಿತು ನಡೆಸಿದ್ದ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಣೆ ಮಾಡಿ, ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಶೈಲಜ ನಿರೂಪಿಸಿದರು. ಸಮಾರಂಭದ ನಂತರ ಪ್ರಸಾದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *