ತಿಂಗಳು ಪೂರ್ತಿ ನಡೆದ ಸತ್ಯದೇವಿ ಮಾತಾಜಿ ಅವರ ‘ವಿಶ್ವಧರ್ಮ ಪ್ರವಚನ’ ಸಮಾರೋಪ

ವೈಜಿನಾಥ ತಡಗೂರೆ
ವೈಜಿನಾಥ ತಡಗೂರೆ

ವಚನ ಸಾಹಿತ್ಯದ ಭವ್ಯ ಮೆರವಣಿಗೆ

ಬೀದರ:

ಶರಣ (ಶ್ರಾವಣ) ಮಾಸದ ನಿಮಿತ್ತ ರಾಷ್ಟ್ರೀಯ ಬಸವದಳ, ಯುವ ರಾಷ್ಟ್ರೀಯ ಬಸವದಳ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ವತಿಯಿಂದ ತಿಂಗಳು ಕಾಲ ಪ್ರತಿದಿನ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಪೂಜ್ಯ ಸತ್ಯಾದೇವಿ ಮಾತಾಜಿ ಅವರಿಂದ ಬೀದರ ತಾಲೂಕಿನ ಆಣದೂರ ಗ್ರಾಮದಲ್ಲಿ ‘ವಿಶ್ವಧರ್ಮ ಪ್ರವಚನ’ ಕಾರ್ಯಕ್ರಮ ನಡೆಯಿತು.

ಜಗನ್ಮಾತೆ ಅಕ್ಕಮಹಾದೇವಿ ತಾಯಿಯ ಜೀವನ ಸಾಧನೆ ಕುರಿತು ಪ್ರವಚನ ನಡೆಯಿತು.

ಪ್ರಾರ್ಥನೆ ಎಂದರೇನು, ಪ್ರಾರ್ಥನೆ ಏಕೆ ಮಾಡಬೇಕು, ಪ್ರಾರ್ಥನೆ ಹೇಗೆ ಮಾಡಬೇಕು, ಯಾರನ್ನು ಕುರಿತು ಮಾಡಬೇಕು, ಈ ಜಗತ್ತಿಗೆ ಬಸವಣ್ಣನವರ ಕೊಡುಗೆ ಏನು, ಬಸವಣ್ಣನವರು ಕೊಟ್ಟ ಸ್ವಾತಂತ್ರ್ಯವನ್ನು ಅಕ್ಕಮಹಾದೇವಿ ಅವರು ಹೇಗೆ ಸದುಪಯೋಗಪಡಿಸಿಕೊಂಡರು, ಎಂಬುದನ್ನೂ ಪೂಜ್ಯರು ವಿವರಿಸಿದರು.

ಬಸವಣ್ಣನವರು ಕೊಟ್ಟದ್ದು ವಿಶ್ವಸಂದೇಶವಾದ ಕಾರಣ ಗುರು ಬಸವಣ್ಣನವರನ್ನು ವಿಶ್ವಗುರು ಎಂದು ಕರೆಯಲಾಯಿತು. ಬಸವಣ್ಣನವರು ಈ ಜಗತ್ತಿಗೆ ಹೊನ್ನಿಗಾಗಿ ಬಂದವರಲ್ಲ, ಹೆಣ್ಣಿಗಾಗಿ ಬಂದವರಲ್ಲ, ಮಣ್ಣಿಗಾಗಿ ಬಂದವರಲ್, ಭಕ್ತಿ ಪಥವನ್ನು ಅಂದರೆ ದೇವ ಪಥವನ್ನು ತೋರಿಸಲು ಬಂದವರು.

ಮಾನವ ಮಾನವರಲ್ಲಿರುವ ಜಾತಿಯ ಭೇದಭಾವ, ಆ ನೆಲ ಶ್ರೇಷ್ಠ, ಈ ನೆಲ ಕನಿಷ್ಟವೆಂಬ ಭೇದ, ಆ ನೀರು ತೀರ್ಥ, ಈ ನೀರು ಕನಿಷ್ಟವೆಂಬ ಭೇದ, ಆ ಹೂವು ಶ್ರೇಷ್ಟ, ಈ ಹೂವು ಕನಿಷ್ಟವೆಂಬ ಭೇದ, ಆ ಗಿಡ ಶ್ರೇಷ್ಟ, ಈ ಗಿಡ ಕನಿಷ್ಟವೆಂಬ ಭೇದ, ಆ ದಿಕ್ಕು ಶ್ರೇಷ್ಠ, ಈ ದಿಕ್ಕು ಕನಿಷ್ಟವೆಂಬ ಭೇದ, ಆ ತಿಂಗಳು ಶ್ರೇಷ್ಠ ಈ ತಿಂಗಳು ಕನಿಷ್ಠ, ಆ ವಾರ ಶ್ರೇಷ್ಠ ಈ ವಾರ ಕನಿಷ್ಟ, ಆ ದಿನ ಶ್ರೇಷ್ಠ ಈ ದಿನ ಕನಿಷ್ಠ ಹೀಗೇ ಎಲ್ಲದರಲ್ಲೂ ಭೇದಭಾವ, ದೇಹದ ಅಂಗಾಂಗಗಳಲ್ಲಿ ಭೇದಭಾವ ಎಲ್ಲವನ್ನು ಕಿತ್ತು ಎಲ್ಲದರಲ್ಲೂ ಸಮಾನತೆ ತಂದು ಕೊಟ್ಟವರು ಗುರು ಬಸವಣ್ಣನವರು ಎಂದು ಪ್ರವಚನದ ಮೂಲಕ ಪ್ರತಿದಿನ ಪೂಜ್ಯರು ನೀಡುತಿದ್ದರು.

ಅಕ್ಕಮಹಾದೇವಿಯ ಬಾಲ್ಯದ ಸಂಸ್ಕಾರವನ್ನು ಕುರಿತು ಹೇಳುತ್ತ, ಇಂದಿನ ಮಕ್ಕಳಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದೆ. ಮುಂಜಾನೆ ಏಳುವ ಕ್ರಿಯೆಯಿಂದ ಸಾಯಂಕಾಲ ಮಲಗುವ ಕ್ರಿಯೆಯವರೆಗೆ ಮಕ್ಕಳು ಯಾವರೀತಿ ಇರಬೇಕು ಎಂದು ತಂದೆ ತಾಯಿಗಳು ಕಲಿಸಿಕೊಡಬೇಕು. ಗುರು ಹಿರಿಯರಲ್ಲಿ ಗೌರವ ವಿನಯತೆ, ಕಿರಿಯರ ಮೇಲೆ ಕರುಣೆ, ಬಡವರ ದೀನರ ದಲಿತರ ಅನಾಥರ ಕುರುಡರ ಕುಂಟರ ಮೇಲೆ ದಯೆ, ಸಮಾನರಲ್ಲಿ ಸ್ನೇಹ, ತಂದೆ ತಾಯಿಯವರ ಮೇಲೆ ಗೌರವ, ಪ್ರೀತಿ, ಪೂಜ್ಯತೆ, ಕುಟುಂಬದೊಂದಿಗೆ ಹೊಂದಾಣಿಕೆ, ದುಡ್ಡಿನ ಮಹತ್ವ, ಆರೋಗ್ಯದ ಮಹತ್ವ, ಹುಟ್ಟು ಹಬ್ಬ ಹೇಗೆ ಆಚರಣೆ ಮಾಡಿಕೊಳ್ಳಬೇಕು.

ನಮ್ಮ ರಾಷ್ಟ್ರದ ಮೇಲೆ ಗೌರವ, ನಮ್ಮ ಭಾಷೆಯ ಮೇಲೆ, ನಮ್ಮ ಕಾಯಕದ ಮೇಲೆ ಗೌರವ ಹೀಗೆ ಎಲ್ಲದರ ಮೇಲೆ ಗೌರವ ಇರಬೇಕು ಎಂದು ತಾಯಿ ಮಕ್ಕಳಿಗೆ ಕಲಿಸಬೇಕು ಎಂದು ಮಾತಾಜಿ ಹೇಳಿದರು.

ಹುಟ್ಟಿದ ಪ್ರತಿಯೊಬ್ಬ ಮಾನವರ ಬದುಕಿನಲ್ಲಿ ಕಷ್ಟಗಳು, ನಿಂದೆ ಚುಚ್ಚುಮಾತು ಎಲ್ಲವೂ ಬರುತ್ತವೆ. ಅವುಗಳನ್ನು ಗೆದ್ದು ನಿಲ್ಲಬೇಕಾದರೆ ಶರಣರ, ಅಕ್ಕನ ಜೀವನದ ಬದುಕು ನಮಗೆ ಆದರ್ಶವಾಗಿದೆ. ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.

ಏಕೆಂದರೆ ಎಲವದ ಮರವನ್ನು ಯಾರೂ ಕಲ್ಲು ತೆಗೆದುಕೊಂಡು ಹೊಡೆಯಲಾರರು. ಹಣ್ಣಿನ ಮರಕ್ಕೆ ಲೋಕದ ಜನ ಕಲ್ಲು ತೆಗೆದುಕೊಂಡು ಬೀಸುತ್ತಾರೆ. ಎಂದು ತಿಳಿದುಕೊಂಡು ಸಮಾಧಾನಿಯಾಗಿರಬೇಕೆಂಬುದು ಅಕ್ಕನ ಸಂದೇಶ.

ಕಿನ್ನರಿ ಬೊಮ್ಮಯನ ಪರಿಕ್ಷೆಯಲ್ಲಿ ಗೆದ್ದು ಸೋಲಿಸಿದ ವೀರಾಗಿಣಿ ಅಕ್ಕನವರು. ಈ ಜಗತ್ತಿನ ಫಸ್ಟ್ ಪಾರ್ಲಿಮೆಂಟ್ ಅನುಭವ ಮಂಟಪದ ಶೂನ್ಯ ಪೀಠಾಧಿಕಾರಿ ಅಲ್ಲಮಪ್ರಭುದೇವರನ್ನು ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣರೊಳಗೆ ಜ್ಞಾನದಿಂದ ಸೋಲಿಸಿ ಅಕ್ಕ ಎಂಬ ಬಿರುದನ್ನು ಪಡೆದರು. ಅಷ್ಟಲ್ಲದೆ ಜೀವನದಲ್ಲಿ ಹಸಿವು, ತೃಷೆ, ನಿದ್ರೆ ಎಲ್ಲವನ್ನೂ ಮೀರಿ ಚೆನ್ನಮಲ್ಲಿಕಾರ್ಜುನನ ಬೆರೆದವರು ಅಕ್ಕಮಹಾದೇವಿ ತಾಯಿಯವರು ಎಂದು ಮಾತಾಜಿ ಪ್ರವಚನದಲ್ಲಿ ತಿಳಿಯಪಡಿಸಿದರು.

ವಿಶ್ವಧರ್ಮ ಪ್ರವಚನದ ದಿನಗಳಲ್ಲಿ ಮುಖ್ಯ ಅತಿಥಿಗಳಾಗಿದ್ದ ಗೀತಾ ಗಡ್ಡಿಯವರು, ಸ್ತ್ರೀ ಸ್ವಾತಂತ್ರ್ಯ ಮತ್ತು ವರ್ತಮಾನದ ತಲ್ಲಣಗಳಿಗೆ ವಚನ ಸಾಹಿತ್ಯದ ಮೂಲಕ ಪರಿಹಾರ ವಿಷಯ ಕುರಿತು ಮಾತನಾಡಿದರು.

ಸುನೀತಾ ಗೌಡರ ಅವರು ವಚನಗಳಲ್ಲಿ ಕುಟುಂಬ ಮತ್ತು ನೈತಿಕ ಮೌಲ್ಯಗಳನ್ನು ಕುರಿತು ಮಾತನಾಡಿದರು.

ಡಾ. ವೈಶಾಲಿ ಸೈಗವ್ಕರ್ ಇವರು ಆರೋಗ್ಯವೇ ಭಾಗ್ಯ ಕುರಿತು ಮಾತಾನಾಡಿದರು. ಪ್ರತಿಭಾ ಚಾಮಾ ಮಹಿಳೆಯರ ಜೀವನದಲ್ಲಿ ಸಂಸ್ಕಾರ ಮತ್ತು ಮೌಲ್ಯಗಳು ವಿಷಯ ಕುರಿತು ಮಾತನಾಡಿದರು.

ಡಾ. ಶಿವಶರಣಯ್ಯ ಮಠಪತಿ ಅವರು ಶರಣರ ವಚನಗಳಲ್ಲಿ ಆಹಾರ ಮತ್ತು ಆರೋಗ್ಯ ಕುರಿತು ಮಾತನಾಡಿದರು. ಬಸವರಾಜ ಧನ್ನೂರ ಅವರು ಶರಣರ ವಚನಗಳಲ್ಲಿ ಸಾಮಾಜಿಕ ಅಭಿವೃದ್ಧಿ ಕುರಿತು ಮಾತನಾಡಿದರು.

ವೈಜನಾಥ ಸಜ್ಜನಶೆಟ್ಟಿ ಇವರು ಆರೋಗ್ಯ ಜೀವನಕ್ಕೆ ನಗುವಿನ ಮಹತ್ವ ಕುರಿತು ಮಾತನಾಡುತ್ತ, ಎಲ್ಲರಲ್ಲಿಯೂ ನಗುವಿನ ಹೊನಲನ್ನು ಹರಿಸಿದರು.

ಅಕ್ಕಮಹಾದೇವಿ, ಶಿವಾನಂದ ಸ್ವಾಮೀಜಿ ಅವರು ವಚನಗಳಲ್ಲಿ ಮಾನವೀಯ ಮೌಲ್ಯಗಳನ್ನು ಕುರಿತು ಮಾತನಾಡಿದರು. ಸೈನಿ ಪ್ರದೀಪ್ ಗುಂಟೆ ಅವರು ಮಹಿಳಾ ಸಬಲಿಕರಣ ಕುರಿತು ಮಾತಾನಾಡಿದರು.

ವರದರಾಜ ಭಾವಗೆಯವರು ಕುಟುಂಬದ ಬಂಧುತ್ವ ಕುರಿತು ಮಾತನಾಡಿದರು.

ಒಟ್ಟಾರೆಯಾಗಿ 33 ದಿನಗಳಲ್ಲಿ ದಿನವೂ ನಾಲ್ಕು ಜನ ಮಕ್ಕಳು ವಚನ ಮತ್ತು ವಚನದ ವಿಶ್ಲೇಷಣೆ ಮಾಡಿದರು.

ದಿನವೂ ಒಬ್ಬೊಬ್ಬರು ಕಾರ್ಯಕ್ರಮ ನಿರೂಪಣೆ, ವಚನ ನೃತ್ಯ, ಮಕ್ಕಳಿಂದ ಪ್ರಾರ್ಥನೆ, ದಿನವೂ ಪ್ರವಚನ ಮುಗಿದ ಮೇಲೆ ಭಜನೆ, ಪ್ರಸಾದ ದಾಸೋಹ ಎಲ್ಲವನ್ನೂ ಆಣದೂರಿನ ಸಮಸ್ತ ಬಂಧುಗಳು ಅದ್ಭುತವಾಗಿ ನೆರವೇರಿಸಿದರು.

ಸಮಾರೋಪ ಸಮಾರಂಭದ ದಿನ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನೆರವೇರಿತು.

ಸಮಾರೋಪ ಸಮಾರಂಭದ ವೇದಿಕೆ ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಚನ್ನಬಸವಾನಂದ ಸ್ವಾಮೀಜಿ, ಚೆನ್ನಬಸವೇಶ್ವರ ಜ್ಞಾನಪೀಠ, ಬೆಂಗಳೂರು ವಹಿಸಿದರು. ಸಮ್ಮುಖವನ್ನು ಪೂಜ್ಯ ಸತ್ಯದೇವಿ ಮಾತಾಜಿ ಬಸವ ಮಂಟಪ, ಬೀದರ ವಹಿಸಿದರು.

ಪೂಜ್ಯ ಭಂತೆ ಜ್ಞಾನಸಾಗರ ಥೇರೊ ಬೌದ್ದಿಷ್ಟ ಮಹಾವಿಹಾರ ಧಮ್ಮ ದರ್ಶನ ಭೂಮಿ ವೈಶಾಲಿ ನಗರ, ಆಣದೂರ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಡಾ. ಶೈಲೇಂದ್ರ ಬೆಲ್ದಾಳೆ ಶಾಸಕರು ಬೀದರ್ ದಕ್ಷಿಣ, ಬಂಡೆಪ್ಪ ಕಾಶಂಪುರ ಮಾಜಿ ಸಚಿವರು ಬೀದರ, ಭೀಮರಾವ ಪಾಟೀಲ ವಿಧಾನ ಪರಿಷತ್ ಸದಸ್ಯರು, ಸುರೇಶ ಚನ್ನಶೆಟ್ಟಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು, ಬೀದರ, ಸೋಮನಾಥ ಪಾಟೀಲ ಗಾದಗಿ ರಾಷ್ಟ್ರೀಯ ಬಸವದಳ ಜಿಲ್ಲಾಧ್ಯಕ್ಷರು ಬೀದರ, ಅರುಣಕುಮಾರ ಪಾಟೀಲ್ಯ ನಗರಸಭೆ ಸದಸ್ಯರು ವಹಿಸಿದ್ದರು.

ಪ್ರವಚನ ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ವೇದಿಕೆ ಸಮಾರೋಪ ಕಾರ್ಯಕ್ರಮವು ಜರುಗಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
2 Comments
  • ಒಳ್ಳೆಯ ಕಾರ್ಯಕ್ರಮವಾಗಿದೆ.ಜೈ ಬಸವ

  • ಸತ್ಯದೇವಿ ಮಾತಾಜಿ ಯವರ ಪ್ರವಚನ, ಮಾತೆ ಮಹಾದೇವಿಯವರ ಪ್ರವಚನವನ್ನ nenaಪಿಸಿದಂತಾಯಿತು. ಎಷ್ಟೋ ದಿವಸದ ನಂತರ ನಮ್ಮೂರ ಯುವ ಶಕ್ತಿಗೆ ಈ ಪ್ರವಚನ ಚೈತನ್ಯ, ಸಾರಥ್ಯ ಕೊಟ್ಟಿತು. ಮಲಗಿದ್ದ ಯುವ ಶಕ್ತಿ ಚೇತರಿಸಿಕೊಂಡು ಪ್ರವಚನ ಕ್ರಿಯಾ ಸಮಿತಿಯಾಗಿ ಮುಂದಿನ ಪೀಳಿಗೆಗೆ ಒಂದು ಸ್ಪೂರ್ತಿ ನೀಡಿತು. ಸತ್ಯದೇವಿ ಮಾತಾಜಿ ಗೆ ತಮ್ಮ ಅಮೂಲ್ಯ ಸಮಯ ಕೊಟ್ಟಿದ್ದಕ್ಕಾಗಿ ಧನ್ಯವಾದ,ಶರಣು ಶರಣಾರ್ಥಿ.

Leave a Reply

Your email address will not be published. Required fields are marked *