ದಾವಣಗೆರೆ ಶಾಲೆಯಲ್ಲಿ ಕಾಯಕಯೋಗಿ ನುಲಿಯ ಚಂದಯ್ಯ ಸ್ಮರಣೋತ್ಸವ

ದಾವಣಗೆರೆ:

“ಭಕ್ತರು ದೇವರನ್ನು ಒಲಿಸಿಕೊಳ್ಳುವುದಲ್ಲ, ದೇವರೇ ಭಕ್ತನನ್ನು ಓಲೈಕೆ ಮಾಡುವಂತೆ ಮಾಡಿದ ಮಹಾನ್ ಕಾಯಕಯೋಗಿ ನುಲಿಯ ಚಂದಯ್ಯ” ಎಂದು ಬಸವತತ್ವ ಚಿಂತಕ ಜಿ.ಎಚ್. ರಾಜಶೇಖರ ಅಭಿಪ್ರಾಯಪಟ್ಟರು.

ನಗರದ ಶ್ರೀ ಬಕ್ಕೇಶ್ವರ ಪ್ರೌಢಶಾಲೆಯ ಎಸ್.ಜೆ. ಎಂ. ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್ತು ನಗರ ಘಟಕದ ವತಿಯಿಂದ ಆಯೋಜಿಸಲಾಗಿದ್ದ ದತ್ತಿ ಕಾರ್ಯಕ್ರಮ ಹಾಗೂ ಶರಣ ನುಲಿಯ ಚಂದಯ್ಯ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನುಲಿಯ ಚಂದಯ್ಯ ಅವರು 12ನೇ ಶತಮಾನದ ಬಸವ ಯುಗದ ಪ್ರಮುಖ ಶಿವಶರಣರು ಮತ್ತು ವಚನಕಾರರು. ಇವರು ಬಿಜಾಪುರ ಜಿಲ್ಲೆಯ ಶಿವಣಗಿಯಲ್ಲಿ ಜನಿಸಿದರು. ಮತ್ತು ಇವರು ಕ್ರಿ ಶ 1160 ರ ಕಾಲಘಟ್ಟದವರೆಂದು ತಿಳಿಯಬಹುದಾಗಿದೆ.

ಇವರು ಬಸವಾದಿ ಶರಣರ ವಿಚಾರಗಳನ್ನು ತಿಳಿದು ಕಲ್ಯಾಣಕ್ಕೆ ಬಂದು ಹುಲ್ಲು ಕತ್ತಾಳೆಯಿಂದ ಹಗ್ಗ ಹೊಸೆದು ಮಾರಾಟ ಮಾಡಿ ಬಂದ ಹಣದಿಂದ ಜಂಗಮ ದಾಸೋಹ ಮಾಡುತ್ತಿದ್ದವರು, ಒಮ್ಮೆ ಕಲ್ಯಾಣದ ತ್ರಿಪುರಾಂತಕ ಕೆರೆಯ ಆಸುಪಾಸಿನಲ್ಲಿ ಕಾಯಕದಲ್ಲಿ ತೊಡಗಿದ್ದಾಗ ತನ್ನ ಅಂಗದಲ್ಲಿದ್ದ ಇಷ್ಟಲಿಂಗವು ಜಾರಿ ನೆಲಕ್ಕೆ ಬಿದ್ದರೂ ಕೂಡ ಅದನ್ನು ಹುಡುಕದೆ ತನ್ನ ಕಾಯಕವೇ ಪ್ರಧಾನವೆಂದು ತಿಳಿದು ಹುಲ್ಲು ನಾರಿನ ಮೂಟೆಯೊಂದಿಗೆ ಮನೆಗೆ ಹಿಂತಿರುಗುತ್ತಾರೆ.

ಸಾಕ್ಷಾತ್ ಪರಶಿವನ ಸ್ವರೂಪವಾದ ಇಷ್ಟಲಿಂಗವೇ ಚಂದಯ್ಯನವರನ್ನು ಹಿಂಬಾಲಿಸಿ ನನ್ನನ್ನ ಮತ್ತೆ ನಿನ್ನೊಂದಿಗೆ ಸೇರಿಸಿಕೋ ಎಂದು ಚಂದಯ್ಯನವರಲ್ಲಿ ಬೇಡಿಕೊಂಡಾಗ ಚಂದಯ್ಯನು ಒಪ್ಪುವುದಿಲ್ಲ. ಕಡೆಗೆ ಈ ವಿಷಯದ ಕುರಿತು ಅನುಭವ ಮಂಟಪದಲ್ಲಿ ಚರ್ಚೆಯಾಗುವುದನ್ನು ಶೂನ್ಯ ಸಂಪಾದನೆ ಕೃತಿಯಲ್ಲಿ ಕಾಣಬಹುದಾಗಿದೆ. ಆದರೆ ಇಂದು ಭಕ್ತರು ಇಂತಹ ಶುದ್ಧ ಮನಸ್ಸಿನ ಕಾಯಕನಿಷ್ಠೆಯನ್ನು ಮಾಡದೆ ಗುಡಿ ಗುಂಡಾರಗಳಿಗೆ ದೇವರನ್ನು ಕಾಣಲು ಹೋಗುತ್ತಿರುವುದು, ಹರಕೆ ಕಟ್ಟಿಕೊಳ್ಳುವುದು ವಿಪರ್ಯಾಸವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಾಗರಾಜಪ್ಪ ಮೆಳ್ಳೆಕಟ್ಟೆ ಅವರು, ಈ ದಿನದ ದತ್ತಿ ದಾನಿಗಳಾದ ಮಗನೂರು ಗುರುಪಾದಪ್ಪ ಹಾಗೂ ಚಿಂದೋಡಿ ಚಂದ್ರಧರ ಅವರನ್ನು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಂ. ಪರಮೇಶ್ವರಪ್ಪ ಸಿರಿಗೆರೆ ಅವರು, ಶರಣ ಸಾಹಿತ್ಯ ಪರಿಷತ್ತು 1986ರ ಆಗಸ್ಟ್ 29 ರಂದು ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರ 70ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಅಧಿಕೃತವಾಗಿ ಉದ್ಘಾಟನೆಗೊಂಡಿತು.

ಅಂದಿನಿಂದ ಇಂದಿನವರೆಗೆ ಸತತವಾಗಿ ಬಸವದಿ ಶರಣರ ತತ್ವ ಹಾಗೂ ವಚನ ಸಾಹಿತ್ಯವನ್ನು ನಾಡಿನಾದ್ಯಂತ ದತ್ತಿ ದಾನಿಗಳ ಸಹಯೋಗದೊಂದಿಗೆ ಯಶಸ್ವಿಯಾಗಿ ಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಭಾರತಿ ಪ್ರಾರ್ಥನೆಯನ್ನು ನೆರವೇರಿಸಿದರು. 9ನೇ ತರಗತಿಯ ಅಮೃತ ಎ. ಅವರು ವಚನ ಗೀತೆಯನ್ನು ಹಾಡಿದರು. ವನಜ ಮಹಾಲಿಂಗಯ್ಯ ಅವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಮುಖ್ಯೋಪಾಧ್ಯಾಯರಾದ ಸಿದ್ದಲಿಂಗಸ್ವಾಮಿ, ಶಾಲೆ ಮೇಲುಸ್ತುವಾರಿ ಬೀರದಾಳ್, ಗಿರಿಜಮ್ಮ ಕೆ.ಎಂ, ಸಂಘಟನೆಯ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *