ಗುರುಕುಲದಲ್ಲಿ ವಿಶ್ವ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ
ಭಾಲ್ಕಿ:
ಸ್ವಚ್ಛತೆ ಎನ್ನುವುದು ಕೇವಲ ಸರಕಾರ ಅಥವಾ ಗ್ರಾಮ ಪಂಚಾಯತಿಯ ಜವಾಬ್ದಾರಿ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.

ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಸಮುಚ್ಚಯದಲ್ಲಿ ವಿಶ್ವ ಸ್ವಚ್ಛತಾ ಅಭಿಯಾನದ ನಿಮಿತ್ತ ಭಾನುವಾರ ಆಯೋಜಿಸಿದ್ದ ಸ್ವಚ್ಛತಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಶ್ವ ಸ್ವಚ್ಛತಾ ಅಭಿಯಾನ ಎನ್ನುವುದು ಜಾಗತಿಕ ತ್ಯಾಜ್ಯ ಸಮಸ್ಯೆಯನ್ನು ಎದುರಿಸಲು ಮತ್ತು ಸ್ವಚ್ಛ ಪರಿಸರವನ್ನು ನಿರ್ಮಿಸಲು ಕೈಗೊಳ್ಳುವ ವಿಶ್ವದ ಅತಿದೊಡ್ಡ ನಾಗರಿಕ ಆಂದೋಲನಗಳಲ್ಲಿ ಒಂದಾಗಿದೆ.
ದೇಶದ ಭವಿಷ್ಯ ಆಗಿರುವ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಬಗ್ಗೆ ಅರಿವಿದ್ದರೆ ಅವರು ಸುತ್ತಲಿನ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ. ಪ್ರತಿಯೊಬ್ಬ ಮನುಷ್ಯನಿಗೆ ಅಗತ್ಯವಾಗಿ ಬೇಕಾಗಿರುವುದು ಆರೋಗ್ಯ ಭಾಗ್ಯ. ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ಆರೋಗ್ಯವನ್ನು ಜೋಪಾನ ಮಾಡಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಮೋಹನ ರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಉಪಪ್ರಾಚಾರ್ಯ ಸಿದ್ರಾಮ ಗೊಗ್ಗಾ, ಎನ್. ರಾಜು, ಮಹೇಶ ಮಹಾರಾಜ, ಮಹೇಶ ಕುಲಕರ್ಣಿ, ಜಯಕ್ಕ ಗಾಂವಕರ, ಅನಿಲಕುಮಾರ ಪಾಟೀಲ, ರಾಜಶೇಖರ ಪಾಟೀಲ ಸೇರಿದಂತೆ ಹಲವರು ಇದ್ದರು.
