ಭಕ್ತಿಭಾವ, ಅರ್ಥಪೂರ್ಣ ಚಿಂತನೆಯೊಂದಿಗೆ ನಡೆದ ಬಸವ ಜ್ಯೋತಿ ಕಾರ್ಯಕ್ರಮ
ಬೀದರ:
ರಾಷ್ಟ್ರೀಯ ಬಸವದಳ, ಬೀದರ ಹಾಗೂ ಡಾ. ಮಾತೆ ಮಹಾದೇವಿ ಬಸವ ಬಳಗ, ಬೀದರ ವತಿಯಿಂದ ಮಾಸಿಕ ಬಸವ ಜ್ಯೋತಿ ಕಾರ್ಯಕ್ರಮ ಭಕ್ತಿಭಾವ ಹಾಗೂ ಅರ್ಥಪೂರ್ಣ ಚಿಂತನೆಗಳೊಂದಿಗೆ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವು ಸುಮಿತಾ ಸಂಗಶೆಟ್ಟಿ ಶಟಕಾರ ದಂಪತಿಗಳ ಬಸವ ಪೂಜೆಯೊಂದಿಗೆ ಪ್ರಾರಂಭಿಸಲಾಯಿತು. ಸರ್ವ ಶಿಕ್ಷಕರಿಂದ ಧ್ವಜಾರೋಹಣ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಸಾನಿಧ್ಯವನ್ನು ಪೂಜ್ಯ ಬಸವಪ್ರಭು ಸ್ವಾಮೀಜಿ, ಗುಣತೀರ್ಥವಾಡಿ, ಬಸವಕಲ್ಯಾಣ, ಮುಖ್ಯ ಅತಿಥಿಯಾಗಿ ಡಾ. ಈಶ್ವರಯ್ಯ ಕೋಡಂಬಲ್ ವಹಿಸಿದ್ದರು.

ಡಾ. ಈಶ್ವರಯ್ಯ ಕೋಡಂಬಲ್ ಅವರು ಮಾತನಾಡಿ, ಶಿಕ್ಷಕರು ಕೇವಲ ಪುಸ್ತಕದ ಜ್ಞಾನವನ್ನು ಮಾತ್ರ ನೀಡುವುದಿಲ್ಲ. ನೈತಿಕ ಮೌಲ್ಯಗಳು, ಜೀವನದ ಪಾಠಗಳು ಮತ್ತು ಒಳ್ಳೆಯ ಸಂಸ್ಕಾವನ್ನು ಕಲಿಸುತ್ತಾರೆ. ಮಕ್ಕಳಲ್ಲಿರುವ ಭಯವನ್ನು ದೂರ ಮಾಡಿ, ಆತ್ಮವಿಶ್ವಾಸವನ್ನು ತುಂಬುತ್ತಾರೆ. ಅಜ್ಞಾನದಿಂದ ಜ್ಞಾನದಡೆಗೆ ಕೊಂಡೊಯ್ಯುವ ದಾರಿದೀಪವೇ ಗುರುಗಳು.
ಮುಂದುವರಿದು ‘ಶಿಕ್ಷಕ’ಮತ್ತು ‘ಗುರು’ಪದಗಳ ನಡುವಿನ ವ್ಯತ್ಯಾಸವನ್ನು ತಿಳಿಸಿ ಶಿಕ್ಷಕನು ಪಾಠವನ್ನು ಕಲಿಸಬಹುದು; ಆದರೆ ಗುರುವು ಜೀವನ ಮಾಡುವುದವನ್ನು ಕಲಿಸುತ್ತಾನೆ, ಮೌಲ್ಯಗಳನ್ನು ಬೆಳೆಸುತ್ತಾನೆ, ವ್ಯಕ್ತಿತ್ವವನ್ನು ರೂಪಿಸುತ್ತಾನೆ.
ಜಗತ್ತಿನಾದ್ಯಂತ ಗುರುವಿಗೆ ಮಹತ್ತರ ಹಾಗೂ ಪೂಜ್ಯನೀಯ ಸ್ಥಾನ ಬಹು ಪ್ರಾಚೀನ ಕಾಲದಿಂದಲೂ ನೀಡುತ್ತಾ ಬಂದಿದ್ದಾರೆ. ದೇಶದ ಪ್ರಧಾನಮಂತ್ರಿಯೇ ಆಗಿದ್ದರೂ ತನ್ನ ಗುರುವಿನ ಮುಂದೆ ನಿಂತಾಗ ಗೌರವದಿಂದ ತಲೆಬಾಗುತ್ತಾನೆ. ಹುದ್ದೆ ಎಷ್ಟೇ ದೊಡ್ಡದಾದರೂ, ಗುರುವಿನ ಸ್ಥಾನ ಅದಕ್ಕಿಂತ ದೊಡ್ಡದು” ಎಂದು ಹೇಳುವ ಮೂಲಕ ಗುರುವಿನ ಮಹತ್ವವನ್ನು ಮನದಟ್ಟಾಗಿಸಿದರು.
ಮುಂದುವರೆದು ಇಂದಿನ ಶಿಕ್ಷಣವು ಕೇವಲ ಪರೀಕ್ಷೆ, ಅಂಕ ಮತ್ತು ಉದ್ಯೋಗಕ್ಕೆ ಸೀಮಿತವಾಗಬಾರದು. “ಶಿಕ್ಷಣದ ಉದ್ದೇಶ ಕೇವಲ ಉದ್ಯೋಗ ಪಡೆಯುವುದು ಅಲ್ಲ; ಉತ್ತಮ ಮನುಷ್ಯನಾಗುವುದು”ಎಂಬ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕಾಗಿದೆ.
ಪ್ರತಿಯೊಬ್ಬ ಶಿಕ್ಷಕನು ಕೇವಲ ತನ್ನ ಕರ್ತವ್ಯವನ್ನು ನಿರ್ವಹಿಸುವ ಶಿಕ್ಷಕನಾಗಿರದೆ, ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗುವ ಗುರುವಾಗುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಶರಣ ಶಿವಶಂಕರ ಟೋಕರೆ ಅವರು ಪ್ರೇರಣಾದಾಯಕವಾಗಿ ಮಾತನಾಡಿ, ಡಾ. ಸಂಗಶೆಟ್ಟಿ ಶಟಕಾರ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ CS Professional ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಪರೂಪದ ಸಾಧಕರಾಗಿದ್ದು, ವಿದ್ಯಾರ್ಥಿಗಳಿಗಾಗಿ ಉಚಿತ UGC-NET/KSET ತರಗತಿಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಣ ಪಡೆದ ನಂತರ ಸಮಾಜಕ್ಕೆ ಮರಳಿ ನೀಡುವ ಮನೋಭಾವವೇ ನಿಜವಾದ ಸಾಧನೆಯ ಸಾರ್ಥಕತೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಸಂಗಶೆಟ್ಟಿ ಶಟಕಾರ ಅವರನ್ನು ಡಾ. ಮಾತೆ ಮಹಾದೇವಿ ಬಸವ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಮ್ಮ ಸಾಧನೆಯ ಕುರಿತು ಮಾತನಾಡಿದ ಡಾ. ಶಟಕಾರ ಅವರು, “ನನ್ನ ಯಶಸ್ಸು ನನ್ನದು ಮಾತ್ರವಲ್ಲ; ನನ್ನ ಬದುಕಿಗೆ ದಿಕ್ಕು ತೋರಿಸಿದವರದು”ಎಂದು ವಿನಮ್ರವಾಗಿ ಹೇಳಿದರು.
ತಮ್ಮ ಶೈಕ್ಷಣಿಕ ಪಯಣದ ಆರಂಭದಲ್ಲಿ ಪ್ರೇರಣೆ ನೀಡಿದ ನಾಗಶೆಟ್ಟಿ ಶಟಕಾರ ಅವರನ್ನು ಸ್ಮರಿಸಿದ ಅವರು ನಿರಂತರ ಪರಿಶ್ರಮ, ಆತ್ಮವಿಶ್ವಾಸ ಮತ್ತು ಪ್ರೇರಣೆಯ ಮೂಲಕ ಇಂದು ಸರ್ಕಾರಿ ಉದ್ಯೋಗ ಹಾಗೂ CS Professional ಎಂಬ ಹಂತವನ್ನು ತಲುಪಿದ ಅವರ ಸಾಧನೆಯ ಹಾದಿಯನ್ನು ಮನಬಿಚ್ಚಿ ಹೇಳಿದರು.
ನನ್ನ ಬದುಕಿನಲ್ಲಿ ಯಾರೋ ಒಬ್ಬರು ನನ್ನ ಮೇಲೆ ನಂಬಿಕೆ ಇಟ್ಟಿರದಿದ್ದರೆ, ನಾನು ಈ ಹಂತಕ್ಕೆ ಬರುತ್ತಿರಲಿಲ್ಲ. ಮುಂದುವರೆದು ನನ್ನ ಸಾಧನೆಯ ಹಿಂದೆ ನನ್ನನ್ನು ಪ್ರೇರೇಪಿಸಿದವರ ಆಶೀರ್ವಾದವಿದೆ. ನನ್ನ ವಿದ್ಯಾರ್ಥಿಗಳ ಪ್ರೀತಿ ಮತ್ತು ನಿರಂತರ ಪರಿಶ್ರಮವಿದೆ”ಎಂದು ಭಾವುಕರಾಗಿ ನುಡಿದರು.
“ನಾನು ಪಡೆದ ಜ್ಞಾನ ನನ್ನಲ್ಲೇ ಉಳಿಯಬಾರದು; ಅದು ಮತ್ತೊಬ್ಬ ವಿದ್ಯಾರ್ಥಿಯ ಬದುಕಿಗೆ ಬೆಳಕಾಗಬೇಕು. ನನ್ನ ವಿದ್ಯಾರ್ಥಿಯೊಬ್ಬನು ನನ್ನನ್ನು ಮೀರಿದಾಗಲೇ ನನ್ನ ಶಿಕ್ಷಕ ಜೀವನ ಸಾರ್ಥಕವಾಗುತ್ತದೆ”ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೂಜ್ಯ ಬಸವಪ್ರಭು ಸ್ವಾಮೀಜಿ ಮಾತನಾಡಿ, ಶಿಕ್ಷಕ ಮತ್ತು ಗುರುವಿನ ಮಹತ್ವವನ್ನು ವಿವರಿಸಿದರು. ಇಲ್ಲಿ ನಾವು ಕೇವಲ ಶಿಕ್ಷಣ ದಿನವನ್ನಷ್ಟೇ ಆಚರಿಸುತ್ತಿಲ್ಲ, ಬಸವಾದಿ ಶರಣರ “ಅರಿವಿನ ದಿನ”ವನ್ನು ನೆನಪಿಸಿಕೊಳ್ಳುತ್ತಿದ್ದೇವೆ.
ಗುರುವು ಕೇವಲ ಜ್ಞಾನವನ್ನು ನೀಡುವುದಿಲ್ಲ; ಶಿಷ್ಯನೊಳಗಿನ ಮನುಷ್ಯತ್ವವನ್ನು ಎಬ್ಬಿಸುವಂಥವನು. ಒಬ್ಬ ಶಿಷ್ಯನ ಸಾಧನೆಯ ಹಿಂದೆ ನಿಂತಿರುವ ಗುರುಗಳ ಪಾತ್ರವನ್ನು ಸಮಾಜ ಎಂದಿಗೂ ಮರೆಯಬಾರದು ಎಂದು ಹೇಳಿದರು.
ಮುಂದುವರೆದು ಇಂದು ಸನ್ಮಾನಿತರಾದ ಶರಣರಾದ ಡಾ. ಸಂಗಶೆಟ್ಟಿ ಶಟಕಾರ ಅವರದು ದೊಡ್ಡ ಸಾಧನೆ. ಅವರು ಮಾಡಿದ ಶೈಕ್ಷಣಿಕ ಸಾಧನೆ ಮತ್ತು ಅವರು ವಿದ್ಯಾರ್ಥಿಗಳಿಗಾಗಿ ಉಚಿತ UGC-NET/KSET ತರಗತಿಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಕಾರ್ಯ. ಶಿಕ್ಷಣ ಪಡೆದ ನಂತರ ಸಮಾಜಕ್ಕೆ ಮರಳಿ ನೀಡುವ ಮನೋಭಾವವೇ ನಿಜವಾದ ಸಾಧನೆಯ ಸಾರ್ಥಕತೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತ ಡಾ. ಸಂಗಶೆಟ್ಟಿ ಶಟಕಾರ ಅವರು ಇಂದಿನ ಕಾಲದ ‘ಚೋಟಾ ಅಂಬೇಡ್ಕರ್’ಎಂದು ಸಂಬೋಧಿಸಿ ಗೌರವದ ಸಂತಸ ಭಾವ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಆರಂಭದಲ್ಲಿ GESCOMನ ಅಕೌಂಟ್ಸ್ ಅಧಿಕಾರಿ ಶರಣ ಮಲ್ಲಿಕಾರ್ಜುನ ಶಟಕಾರ ಅವರು ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿ ಮಾತನಾಡುತ್ತ “ಗುರುವು ಶಿಷ್ಯನ ಜೀವನದ ಅಡಿಪಾಯ; ಗುರು ಹಿಂದೆ ನಿಂತು ದಾರಿ ತೋರಿಸಿದರೆ, ಶಿಷ್ಯ ಮುಂದೆ ಸಾಗಲು ಗುರಿ ಹೊಂದುತ್ತಾನೆ”ಎಂದು ಹೇಳಿ ಸರ್ವರನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಸುಲೋಚನ ಪಟ್ನೆ ವಚನ ಗಾಯನ ನಡೆಸಿಕೊಟ್ಟರು. ಕೊನೆಯಲ್ಲಿ ಕುಮಾರ ಪ್ರಣವ ಶಟಕಾರ ಶರಣು ಸಮರ್ಪಣೆ ಅರ್ಪಿಸಿದರು. ಶರಣರಾದ ಪ್ರವೀಣ ಎಕಲಾರೆ ಕಾರ್ಯಕ್ರಮದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ “ಜೀವನಪೂರ್ತಿ ವಿದ್ಯಾರ್ಥಿಗಳಿಗಾಗಿ ಸೇವೆ ಮಿಸಲಿಟ್ಟ ನೂರಾರು ಶಿಕ್ಷಕರಿಗೆ ಗೌರವದ ಸನ್ಮಾನ ಮಾಡಲಾಯಿತು. ಸಂಪೂರ್ಣ ಕಾರ್ಯಕ್ರಮವು “ಗುರುವನ್ನು ಮೀರಿಸುವುದೇ ಶಿಷ್ಯನ ನಿಜವಾದ ಸಾಧನೆ”ಜ್ಞಾನವನ್ನು ಪಡೆದು ಸ್ವತಃ ಬೆಳಗುವುದು ಸಾಧನೆ; ಜ್ಞಾನದಿಂದ ನೂರಾರು ಬದುಕುಗಳನ್ನು ಬೆಳಗಿಸುವುದು ಗುರುತ್ವದ ಸಾರ್ಥಕತೆ ಎಂಬ ಮಹತ್ವದ ಸಂದೇಶವನ್ನು ಸಾರಿತು.
ಬಸವಣ್ಣನವರ “ಕಾಯಕವೇ ಕೈಲಾಸ”ಎಂಬ ತತ್ವದಂತೆ, ಜ್ಞಾನವನ್ನು ಕಾಯಕವನ್ನಾಗಿ ಮಾಡಿಕೊಂಡು, ಪಡೆದ ಶಿಕ್ಷಣವನ್ನು ಸಮಾಜಕ್ಕೆ ಮರಳಿ ನೀಡುವ ಪ್ರತಿಯೊಬ್ಬ ಶಿಕ್ಷಕನೂ ನಿಜವಾದ ಗುರುವಾಗಲಿ ಎಂಬ ಆಶಯದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಶರಣರಿಗೂ, ಬಸವಾಭಿಮಾನಿಗಳಿಗೂ, ಪದಾಧಿಕಾರಿಗಳಿಗೂ, ಸರ್ವಸದಸ್ಯರಿಗೂ ಹಾಗೂ ಶಿಕ್ಷಕ-ಶಿಕ್ಷಕೇತರ ಬಂಧುಗಳಿಗೂ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.

ನಾವು ಮಾಡುತ್ತಿರುವ ಕಾರ್ಯಕ್ರಮದ ವರದಿ ಇಡಿ ನಾಡಿನಾದ್ಯಂತ ಪಸರಿಸಿದ ಕಿರ್ತಿ ಬಸವ ಮಿಡಿಯಾ ಸಲ್ಲುತ್ತದೆ ಬಸವ ಮೆಡಿಯಾದ ಎಲ್ಲಾ ಪದಾಧಿಕಾರಿಗಳಿಗೆ ಶರಣು ಶರಣಾರ್ಥಿಗಳು
ಒಳ್ಳೆ ಕಾರ್ಯಕ್ರಮ ಶರಣು ಶರಣಾರ್ಥಿಗಳು 🙏🙏