ಚಿಕ್ಕಮಗಳೂರು:
ಒಬ್ಬರು ಹತ್ತು ಜನರನ್ನು ಬಸವ ಭಕ್ತರನ್ನಾಗಿ ಮಾಡುವ ಸಂಕಲ್ಪ ಮಾಡಬೇಕೆಂದು ಬೈಲೂರು ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದ ಸ್ವಾಮೀಜಿ ಭಾನುವಾರ ಕರೆ ಕೊಟ್ಟರು.
ನಗರದ ವೀರಶೈವ-ಲಿಂಗಾಯತ ಸಮುದಾಯ ಭವನದಲ್ಲಿ ನಡೆದ ರಾಷ್ಟ್ರೀಯ ಬಸವದಳದ ಜಿಲ್ಲಾ ಸಮಾವೇಶದಲ್ಲಿ ಅವರು ಮಾತನಾಡಿದರು.

ದೇಶದ ಹಿತಕ್ಕಾಗಿ ಬಸವದಳವು ತನು, ಮನ ಸೇವಾ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ. ಬಸವದಳದವರು ಕಸ ಹಾಕುವವರಲ್ಲ ಕಸ ಗುಡಿಸುವವರು. ಬಸವದಳ ದೇಶದ ಶಕ್ತಿಯಾಗಬೇಕು ಎಲ್ಲರನ್ನು ಒಳಗೊಳ್ಳುವ ಬಸವದಳವಾಗಲಿ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬಸವಧರ್ಮ ಪೀಠದ ಪೂಜ್ಯ ಮಾತೆ ಗಂಗಾದೇವಿ ಚಿತ್ರದುರ್ಗ, ದಾವಣಗೆರೆ ಸೇರಿ ಅನೇಕ ಜಿಲ್ಲೆಗಳಲ್ಲಿ ಬಸವದಳ ಸಮಾವೇಶ ಯಶಸ್ವಿಯಾಗಿ ನಡೆದಿವೆ.
ಚಿಕ್ಕಮಗಳೂರಿನ ನೂತನ ಪದಾಧಿಕಾರಿಗಳು ಗ್ರಾಮೀಣ ಮಟ್ಟದಲ್ಲಿ ಬಸವದಳದ ಮೂಲ ಧ್ಯೇಯ ಪರಿಚಯಿಸುವ ಕಾಯಕ ಮಾಡಬೇಕು. ಅನೇಕ ಪಂಗಡಗಳಲ್ಲಿ ಛಿದ್ರಗೊಂಡಿರುವ ಸಮುದಾಯಗಳನ್ನು ಒಂದಾಗಿಸುವುದೇ ಮೂಲ ಧ್ಯೇಯವಾಗಿದೆ, ಎಂದು ಅವರು ಹೇಳಿದರು.

ಬಸವತತ್ವ ಪೀಠದ ಪೂಜ್ಯ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರು ತೋರಿದ ಮಾರ್ಗದಲ್ಲಿ ಎಲ್ಲರೂ ಸಾಗಬೇಕಿದೆ. ಅವರ ವಚನ, ಅನುಭವ ಮಂಟಪದ ಚಿಂತನೆ, ಸಮ ಸಮಾಜದ ಪರಿಕಲ್ಪನೆ ಹಾಗೂ ಜಾತ್ಯತೀತ ನಿಲುವು ಇಂದಿನ ಸಮಾಜಕ್ಕೆ ಅವಶ್ಯಕ.
ಬಸವಯುಗ ಮರಳುವ ಸೂಚನೆ ನಿಚ್ಚಳವಾಗಿ ಕಂಡುಬರುತ್ತಿದೆ, ಇದನ್ನು ಯಾವ ಶಕ್ತಿಗಳಿಂದಲೂ ತಡೆಯಲು ಸಾಧ್ಯವಿಲ್ಲ, ಎಂದು ತಿಳಿಸಿದರು.
ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಜಾತಿ, ಪಂಥ ಮತ್ತು ವರ್ಗಭೇದ ಮರೆತು ಸರ್ವತೋಮುಖ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಬಸವಣ್ಣನವರ ತತ್ವ ಆದರ್ಶಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿವೆ, ಎಂದು ಹೇಳಿದರು.

ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಗದ್ದೆಮನೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಬಿ.ಎನ್. ಚಿದಾನಂದ ಹಾಗೂ ವಿನಾಯಕ ಸಿಂದಿಗೆರೆ ಅವರಿಂದ ಧರ್ಮ ಗುರುಗಳಿಗೆ ವಿಶೇಷ ಗೌರವ ಸಲ್ಲಿಕೆಯಾಯಿತು.
ಬಸವಯೋಗ ಪುಸ್ತಕ ಬಿಡುಗಡೆ ಮಾಡಲಾಯಿತು. ಕೃತಿ ಕರ್ತೃ ಡಾ. ಪಂಚಾಕ್ಷರಿ ಹಳೇಬೀಡು ಅವರನ್ನು ಸನ್ಮಾನಿಸಲಾಯಿತು.
ವಚನ ಕಂಠಪಾಠ ಸ್ಫರ್ಧೆಯಲ್ಲಿ ಪ್ರಥಮಸ್ಥಾನ ಗಳಿಸಿದ ಹಾಸನದ ಶರಣೆ ನೀಲಾ ನಾಗಭೂಷಣ ಮತ್ತು ಬದುಕು ಬೆಳಗುವ ಬಸವಧರ್ಮ ಸಮ್ಮೇಳನವನ್ನು ಅಕ್ಟೋಬರ್ 4 ರಂದು ಎಡೆಯೂರು ಸಮೀಪ ಕಗ್ಗೆರೆಯಲ್ಲಿ ನಡೆಯಲಿದ್ದು, ಎಲ್ಲರೂ ಭಾಗವಹಿಸುವಂತೆ ತಿಳಿಸಲಾಯಿತು.

ಮುಂಬರುವ ಜನಗಣತಿಯಲ್ಲಿ ಲಿಂಗಾಯತ ಧರ್ಮ ಎಂದೇ ಬರೆಸಬೇಕೆಂದು ಶರಣ ಎನ್. ಚಂದ್ರಮೌಳಿ ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಯಳನಾಡು ಸಂಸ್ಥಾನದ ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಬಸವಯೋಗಿ ಸ್ವಾಮೀಜಿ, ರಾಷ್ಟ್ರೀಯ ಬಸವದಳ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಚನ್ನೇಗೌಡ, ಹಳೇಬೀಡು ಬಸವರಾಜು, ವೈ.ಎನ್. ನಾಗೇಶ, ಸುಮಾ ಸುನೀಲ ಮತ್ತಿತರರು ಇದ್ದರು.
ಬಸವದಳಕ್ಕೆ ಪದಾಧಿಕಾರಿಗಳ ಆಯ್ಕೆ

ಶಿವಾನಂದ ಗದ್ದೆಮನೆ(ಅಧ್ಯಕ್ಷ), ಹಳೇಬೀಡು ಬಸವರಾಜು(ಕಾರ್ಯಾಧ್ಯಕ್ಷ), ಶಿವಮೂರ್ತಿ ಎಸ್. ಕೊಪ್ಪಲು(ಉಪಾಧ್ಯಕ್ಷ), ಎನ್.ಆರ್. ಶಿವಕುಮಾರ್(ಪ್ರಧಾನ ಕಾರ್ಯದರ್ಶಿ), ಯೋಗೀಶಪ್ಪ (ಪ್ರಧಾನ ಸಂಚಾಲಕ), ಟಿ.ಆರ್.ಪ್ರಕಾಶ್(ಖಜಾಂಚಿ), ವಿನಯ್(ಸಹ ಕಾರ್ಯದರ್ಶಿ), ಎಂ.ಸಿ. ಚನ್ನೇಗೌಡ (ಸಂಘಟನಾ ಕಾರ್ಯದರ್ಶಿ).

ಒಳ್ಳೆಯ ಕಾರ್ಯಕ್ರಮವಾಗಿದೆ.ಒಳ್ಳಯ ಸಂದೇಶವನ್ನು ಕೊಟ್ಟಿದ್ದಾರೆ. ಜೈ ಬಸವ
ಬಸವಣ್ಣನವರ ವಿಚಾರದೊಂದಿಗೆ ಬಸವದಳ ಎದ್ದರೆ ಭಾರತ ಬೆಳಗುವುದು. ಉತ್ತಮ ಕಾರ್ಯಕ್ರಮ
ಬಸವಣ್ಣಾ ಮಾಡಿದ್ದು ಅದೇ.. ಎಲ್ಲಾ ಜಾತಿ ತೊರೆದು.. ಲಿಂಗ ಪೂಜೆ ಮಾಡಿದ್ದು.. ಎಲ್ಲರನ್ನೂ ಕೂಡಿಸಿ ಮತ್ತೆ ಬಸವ ಭಕ್ತರನ್ನಾಗಿ ಮಾಡಿ….ಮದ್ಯ ಮಾಂಸ.. ಬಿಟ್ಟು ಲಿಂಗ ಪೂಜೆ ಮಾಡುವ ಹಾಗೆ ಮಾಡಿ.. ಕ್ರೈಸ್ತ ಕನ್ವರ್ಟ್ ಆಗೋದು ಆದ್ರೂ ಕಡಿಮೆ ಆಗುತ್ತೆ