ಪ್ರತಿದಿನ ಸಂಗೀತ ಶಿಕ್ಷಕರು “ವಚನ ನಾದಲೋಕ”ಕ್ಕೆ ತರಬೇತಿ ನೀಡುತ್ತಿದ್ದಾರೆ
ದಾವಣಗೆರೆ
ಕರ್ನಾಟಕದ ಹೃದಯವಾಗಿರುವ ದಾವಣಗೆರೆ ಒಂದು ದಾಖಲೆ ನಿರ್ಮಿಸುವ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ.
ಇದೇ ಸೆಪ್ಟೆಂಬರ್ 30ರಂದು ಸಂಜೆ 6 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಹಸ್ರ ಸಹಸ್ರ ಕಂಠಗಳಲ್ಲಿ ಬಸವಣ್ಣನವರ ವಚನಗಳನ್ನು ಹಾಡುವ “ವಚನ ನಾದಲೋಕ” ಕಾರ್ಯಕ್ರಮ ನಡೆಯಲಿದೆ.
ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾಮಠದ ಪಟ್ಟಾಧ್ಯಕ್ಷರಾದ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಹಾಗೂ ಚಿಕ್ಕಮಗಳೂರು ಬಸವತತ್ವ ಪೀಠದ ಪೂಜ್ಯ ಡಾ. ಬಸವ ಮರುಳಸಿದ್ಧ ಸ್ವಾಮಿಗಳು ಹಾಗೂ ಪಾಂಡೋಮಟ್ಟಿ ಕಮ್ಮತ್ತಹಳ್ಳಿ ವಿರಕ್ತಮಠದ ಪೂಜ್ಯ ಡಾ. ಗುರುಬಸವ ಸ್ವಾಮಿಗಳು ಹಾಗೂ ದಾವಣಗೆರೆ ವಿರಕ್ತ ಮಠದ ಪೂಜ್ಯ ಬಸವಪ್ರಭು ಸ್ವಾಮಿಗಳ ನೇತೃತ್ವದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಲಿಂಗಾಯತ ಧರ್ಮ ಸ್ಥಾಪಕರು, ವಿಶ್ವಗುರು, ಭಕ್ತಿ ಭಂಡಾರಿ ಬಸವಣ್ಣನವರ ಮಾನವೀಯ ಮೌಲ್ಯಗಳ ದಿವ್ಯ ಸಂಕೇತದಂತಿರುವ ಅಮೂಲ್ಯ ವಚನಗಳನ್ನು ಒಂದೇ ವೇದಿಕೆಯಲ್ಲಿ ಸಾವಿರಾರು ಕಂಠಗಳು ಹಾಡುವ ರೋಮಾಂಚನವನ್ನು ಈ ಕಾರ್ಯಕ್ರಮದಲ್ಲಿ ಕಾಣಬಹುದಾಗಿದೆ.
ಇಂತಹ ಅಪೂರ್ವ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು ಈಗಾಗಲೇ ದಾವಣಗೆರೆಯ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಪ್ರತಿದಿನ ಮಧ್ಯಾಹ್ನ 3ರಿಂದ 4.30ರವರೆಗೆ ಸಂಗೀತ ಶಿಕ್ಷಕರ ಮಾರ್ಗದರ್ಶನದಲ್ಲಿ ವಚನಗಳನ್ನು ರಾಗಬದ್ಧವಾಗಿ ಹಾಡುವ ತರಬೇತಿಯನ್ನು ಮಾಡಲಾಗುತ್ತಿದೆ.
ವಯೋಮಾನದ ಮಿತಿಯಿಲ್ಲದೆ, ಲಿಂಗ ಭೇದವಿಲ್ಲದೆ ವಚನಾಸಕ್ತರು ನಾ ಮುಂದು ತಾ ಮುಂದು ಎನ್ನುವಂತೆ ನಿತ್ಯವೂ ಸಮಯಕ್ಕೆ ಸರಿಯಾಗಿ ಆಗಮಿಸಿ ವಚನ ಗಾಯನದ ಅಭ್ಯಾಸವನ್ನ ಮಾಡುತ್ತಿರುವುದು ಈ ಕಾರ್ಯಕ್ರಮದ ಮೇಲೆ ಬೆಣ್ಣೆನಗರಿಯ ವಚನಾಸಕ್ತರಿಗೆ ಇರುವ ಉತ್ಸಾಹವನ್ನು ತೋರುತ್ತಿದೆ.
ಅಷ್ಟೇ ಅಲ್ಲದೆ ಹಲವು ಶಾಲಾ- ಕಾಲೇಜುಗಳಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಕರ ನೇತೃತ್ವದಲ್ಲಿ ತರಬೇತಿಯನ್ನು ಸಹ ನೀಡಲಾಗುತ್ತಿದ್ದು ಈ ಅಭೂತಪೂರ್ವ ಕಾರ್ಯಕ್ರಮದ ಯಶಸ್ಸಿಗೆ ಬಸವಪರ ಸಂಘಟನೆಗಳು ಸಹ ಬೆಂಬಲ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದೆ.
ಒಟ್ಟಾರೆಯಾಗಿ ದಾವಣಗೆರೆ ನಗರದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ, ಅಂದಾಜು 2000 ಜನರು ಏಕಕಾಲದಲ್ಲಿ ಹಾಡುವ ಸಾಮೂಹಿಕ ವಚನ ಗಾಯನ, ವಚನ ನಾದ ಲೋಕ ಕಾರ್ಯಕ್ರಮದ ಮೇಲೆ ಸಾರ್ವಜನಿಕರ ನಿರೀಕ್ಷೆ ದುಪ್ಪಟ್ಟಾಗಿದ್ದು, ಈ ಕಾರ್ಯಕ್ರಮವು ಯಶಸ್ವಿಯಾಗಲಿ, ಆ ಮೂಲಕ ಎಲ್ಲರೊಂದಿಗೆ ಸಾಮರಸ್ಯ ಸೌಹಾರ್ದತೆ ಹಾಗೂ ಶರಣ ಪರಂಪರೆಯ ಮೌಲ್ಯಗಳ ಪ್ರಭಾವಶಾಲಿ ಪ್ರಚಾರ ಆಗಲಿ ಎಂಬ ಆಶಯವನ್ನು ಬಸವ ತತ್ವಾಸಕ್ತರು ಹೊಂದಿದ್ದಾರೆ.
