ಬಸವಣ್ಣ, ಬುದ್ಧ ಹಾಗೂ ಗಾಂಧೀಜಿಯವರ ತತ್ತ್ವಗಳ ಆಧಾರಿತ ರಾಜಕಾರಣ ದೇಶಕ್ಕೆ ಬೇಕಾಗಿದೆ
ಸಾಣೇಹಳ್ಳಿ:
ಇಲ್ಲಿನ ಎಸ್ಸೆಸ್ ರಂಗಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ವತಿಯಿಂದ ಹಮ್ಮಿಕೊಳ್ಳಲಾಗುವ ರಾಜ್ಯದ ಮಠಾಧೀಶರ ದುಂಡುಮೇಜಿನ ಸಭೆಗೆ ಸಂಬಂಧ ಪಟ್ಟಂತೆ ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು.
ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು; ಸಮಾಜದಲ್ಲಿ ಮದ್ಯಪಾನದ ದುಷ್ಪರಿಣಾಮಗಳು ವ್ಯಾಪಕವಾಗುತ್ತಿರುವ ಈ ಸಂದರ್ಭದಲ್ಲಿ, ನಿರಾಶರಾಗದೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಮುನ್ನುಗ್ಗಿದರೆ ಮಾತ್ರ ಮದ್ಯಮುಕ್ತ ಹಾಗೂ ಮುಕ್ತ ಸಮಾಜ ನಿರ್ಮಾಣ ಸಾಧ್ಯ.

ಮದ್ಯಪಾನ ನಿಯಂತ್ರಣ ಎಂಬುದು ಯಾರೋ ಒಬ್ಬರು ಮಾಡುವ ಕೆಲಸವಲ್ಲ. ಇದು ಸಮಾಜದ, ಪ್ರತಿ ಸರ್ಕಾರದ ಹಾಗೂ ಮಠಾಧಿಪತಿಗಳ ಜಂಟಿ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಮಿತಿಯಲ್ಲಿ ಶ್ರಮಿಸಿದರೆ ಸರಕಾರವೂ ತಲೆಬಾಗುವಂತೆ ಹೋರಾಟವನ್ನು ರೂಪಿಸಬಹುದು.
ಹಿಂದೆ ತರಳುಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸತ್ಯಾಗ್ರಹ, ವಿವಿಧ ಊರುಗಳಲ್ಲಿ ಪಾದಯಾತ್ರೆ ನಡೆಸಿ ಜನರನ್ನು ಮದ್ಯಪಾನದಿಂದ ಮುಕ್ತಗೊಳಿಸಿದ ಆಂದೋಲನ ಯಶಸ್ವಿಯಾಯಿತು.
ಈ ಸಮಾಜಮುಖಿ ಹೋರಾಟಕ್ಕೆ ಮಠಾಧಿಪತಿಗಳ ಒಕ್ಕೂಟವು ಸಂಪೂರ್ಣ ಬೆಂಬಲ ನೀಡಲಿದ್ದು, ಯಾವುದೇ ಸರ್ಕಾರದ ಆಮಿಷಗಳಿಗೆ ಬಲಿಯಾಗದೆ ಮದ್ಯಪಾನ ನಿಷೇಧದ ಪರವಾಗಿ ದೃಢವಾಗಿ ನಿಲ್ಲುವುದು.

ಅಕ್ಟೋಬರ್ 31 ರಂದು ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ಹೋರಾಟ ಅಥವಾ ಕಾರ್ಯಕ್ರಮದ ಬಗ್ಗೆ ಅಧ್ಯಕ್ಷರು ಹಾಗೂ ಮಠಾಧಿಪತಿಗಳು ಗಂಭೀರವಾಗಿ ಚಿಂತನೆ ನಡೆಸಿ, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸಾನಿಧ್ಯ ವಹಿಸಿ ಮಾತನಾಡಿದ ತೋಂಟದ ಸಿದ್ಧರಾಮ ಸ್ವಾಮೀಜಿ; ಮದ್ಯಪಾನವು ಮನುಷ್ಯನ ಆರೋಗ್ಯ, ಕುಟುಂಬ ಹಾಗೂ ಸಾಮಾಜಿಕ ಜೀವನವನ್ನು ನಾಶಪಡಿಸುತ್ತಿದ್ದು, ಕ್ಯಾನ್ಸರ್‌ಗಿಂತಲೂ ಭೀಕರವಾಗಿ ಸಮಾಜವನ್ನು ವ್ಯಾಪಿಸುತ್ತಿದೆ. ಯುವಕರು ಮಾತ್ರವಲ್ಲದೆ ಸಣ್ಣ ಸಣ್ಣ ಶಾಲಾ ಮಕ್ಕಳು ಸಹ ದುರ್ವ್ಯಸನಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿ.
ಇತ್ತೀಚೆಗೆ ಹಳ್ಳಿಗಳಲ್ಲಿ ಮತ್ತು ಕಿರಾಣಿ ಅಂಗಡಿಗಳಲ್ಲಿ ವಾಟರ್ ಪಾಕೇಟ್‌ಗಳಂತೆ ಮದ್ಯದ ಪಾಕೇಟ್‌ಗಳನ್ನು ಮುಕ್ತವಾಗಿ ಮಾರಾಟ ಮಾಡಲಾಗುತ್ತಿದ್ದು, ಇದನ್ನು ತಕ್ಷಣವೇ ತಡೆಯಬೇಕಾಗಿದೆ.
ಸರ್ಕಾರ ಒಂದೆಡೆ ಗ್ಯಾರಂಟಿ ಯೋಜನೆಗಳ ಮೂಲಕ ಬಡ ಕುಟುಂಬಗಳಿಗೆ ನೀಡುವ ಹಣವು, ಅಪ್ರಾಮಾಣಿಕವಾಗಿ ಮದ್ಯದ ಮಾರಾಟದ ಮೂಲಕ ಮತ್ತೆ ಸರ್ಕಾರದ ಖಜಾನೆಗೇ ತಲುಪುವಂತಾಗಿದೆ. ಸರ್ಕಾರ ಮದ್ಯ ಮಾರಾಟಕ್ಕೆ ನೀಡುತ್ತಿರುವ ಉತ್ತೇಜನ ಹಾಗೂ ಶಾಲಾ-ಕಾಲೇಜು, ದೇವಾಲಯಗಳ ಬಳಿಯೂ ನಿಯಮ ಉಲ್ಲಂಘಿಸಿ ಲೈಸೆನ್ಸ್ ನೀಡುತ್ತಿರುವುದನ್ನು ಸಭೆಯಲ್ಲಿ ಕಟುವಾಗಿ ಖಂಡಿಸಲಾಯಿತು.
ಗಾಂಧೀಜಿಯವರ ಸತ್ಯ ಮತ್ತು ಹೃದಯ ಪರಿವರ್ತನೆಯ ತತ್ವಗಳ ಆಧಾರದ ಮೇಲೆ, ಕುಡಿಯುವ ಅಭ್ಯಾಸವಿರುವವರಲ್ಲಿ ಜಾಗೃತಿ ಮೂಡಿಸಿ ಅವರ ಹೃದಯ ಪರಿವರ್ತನೆ ಮಾಡುವುದು ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುವುದು ಈ ಆಂದೋಲನದ ಪ್ರಮುಖ ಉದ್ದೇಶವಾಗಿದೆ ಎಂದರು.
ಇಳಕಲ್ಲಿನ ಗುರುಮಹಾಂತ ಸ್ವಾಮಿಗಳು ಮಾತನಾಡಿ; ಇಂದಿನ ವಿದ್ಯಾರ್ಥಿಗಳೇ ನಾಳೆಯ ಪ್ರಧಾನಿ ಮತ್ತು ಮುಖ್ಯಮಂತ್ರಿಗಳು. ಹಾಗಾಗಿ ಪ್ರತಿಯೊಂದು ಜಿಲ್ಲೆಯ ಶಾಲಾ-ಕಾಲೇಜುಗಳ ಪ್ರಾಂಶುಪಾಲರು ಹಾಗೂ ಸಂಸ್ಥೆಯ ಮುಖ್ಯಸ್ಥರ ಸಭೆ ಕರೆದು, ‘ನಾವು ಭವಿಷ್ಯದಲ್ಲಿ ಅಧಿಕಾರಕ್ಕೆ ಬಂದರೆ ದುಷ್ಟಚಟಗಳು ಹಾಗೂ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸುತ್ತೇವೆ’ ಎಂಬ ಭರವಸೆ ಮತ್ತು ಪ್ರತಿಜ್ಞೆಯನ್ನು ವಿದ್ಯಾರ್ಥಿಗಳಿಂದ ಸ್ವೀಕರಿಸುವಂತೆ ಜಾಗೃತಿ ಮೂಡಿಸಬೇಕು.
ಚುನಾವಣೆ ಹಾಗೂ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಯುವಕರು ಮದ್ಯಪಾನಕ್ಕೆ ದಾಸರಾಗುವುದನ್ನು ತಡೆಯಲು ಚುನಾವಣಾ ಆಯೋಗಕ್ಕೆ ಸೂಕ್ತ ಮನವಿ ಸಲ್ಲಿಸಬೇಕು.
ಸರ್ಕಾರಕ್ಕೆ ಮದ್ಯಪಾನದಿಂದ ಬರುವ ಸುಮಾರು ₹45,000 ಕೋಟಿ ಆದಾಯಕ್ಕೆ ಪರ್ಯಾಯವಾಗಿ, ತೆರಿಗೆ ಹಾಗೂ ಇತರ ಮೂಲಗಳಿಂದ ಆದಾಯ ಸಂಗ್ರಹಿಸುವ ಕುರಿತು ವರದಿ ನೀಡಲು ಶ್ರೇಷ್ಠ ಆರ್ಥಿಕ ತಜ್ಞರ ಸಮಿತಿಯನ್ನು ರಚಿಸುವಂತೆ ಸರ್ಕಾರಕ್ಕೆ ಸಲಹೆ ನೀಡುವುದು.
ಮಹಾತ್ಮ ಗಾಂಧೀಜಿಯವರ ಕನಸಿನಂತೆ, ಗ್ರಾಮಮಟ್ಟದಲ್ಲಿ ನಶಮುಕ್ತ ವಾತಾವರಣ ನಿರ್ಮಿಸಲು ಮದ್ಯ ಹಾಗೂ ಮಾದಕ ವಸ್ತುಗಳ ಮಾರಾಟ ನಿಷೇಧಿಸುವ ಸರ್ವಾಧಿಕಾರವನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ನೀಡಬೇಕು.
ಶ್ರೀಮಠಗಳು, ಪೂಜ್ಯ ಸ್ವಾಮೀಜಿಗಳು, ಸಾಹಿತಿಗಳು, ಚಿಂತಕರು ಹಾಗೂ ಸಮಾಜ ಸೇವಕರನ್ನು ಒಳಗೊಂಡ ಕ್ರಿಯಾಶೀಲ ಮಂಡಳಿಯ ಮೂಲಕ ಈ ಆಂದೋಲನವನ್ನು ನಿರಂತರವಾಗಿ ನಡೆಸುವುದು.
“ಇಂದು ದೇಶದ ಶೇ. 40ರಷ್ಟು ಯುವಕರು ಕುಡಿತದ ಚಟಕ್ಕೆ ಒಳಗಾಗಿದ್ದು, ಮುಂದಿನ ದಿನಗಳಲ್ಲಿ ಇದು ಶೇ. 80 ಕ್ಕೆ ಏರಿದರೆ ದೇಶಕ್ಕೆ ದೊಡ್ಡ ದುರಂತ ಕಾದಿದೆ. ದೇಶದ ಭದ್ರತೆ, ಸಂಸ್ಕಾರ ಮತ್ತು ಕುಟುಂಬಗಳ ನೆಮ್ಮದಿಗಾಗಿ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಚಿತ್ರದುರ್ಗದ ಮಾದಾರ ಗುರುಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ; ಸಮಾಜದಲ್ಲಿ ತೀವ್ರವಾಗಿ ಹರಡುತ್ತಿರುವ ಮದ್ಯಪಾನ ಹಾಗೂ ಡ್ರಗ್ಸ್‌ನಂತಹ ದುಷ್ಟಟಗಳ ವಿರುದ್ಧ ಬೃಹತ್ ಜನಜಾಗೃತಿ ಆಂದೋಲನ ರೂಪಿಸಲು ನಿರ್ಧರಿಸಲಾಗಿದೆ. ಶರಣಬಸಪ್ಪನವರು, ವಿವಿಧ ಶ್ರೀಗಳು, ಮಠಾಧೀಶರು ಹಾಗೂ ಜನನಾಯಕರ ಮಾರ್ಗದರ್ಶನದಲ್ಲಿ ಈ ಸತ್ಕಾರ್ಯಕ್ಕೆ ಶ್ರೀಕಾರ ಬರೆಯಲಾಗಿದೆ.
ಸಿರಿಗೆರೆ ತರಳಬಾಳು ಬೃಹನ್ಮಠ ಸೇರಿದಂತೆ ಹಲವು ಧಾರ್ಮಿಕ ಸಂಸ್ಥೆಗಳು ಹಿಂದೆ ನಡೆಸಿದ ಹೋರಾಟಗಳ ಮಾದರಿಯಲ್ಲೇ, ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಮತ್ತೊಮ್ಮೆ ಮದ್ಯಪಾನ ನಿಷೇಧದ ಬೃಹತ್ ಚಳವಳಿಯನ್ನು ರೂಪಿಸಲು ನಿರ್ಧರಿಸಲಾಗಿದೆ.
ಸರ್ಕಾರಗಳು ಮದ್ಯಮಾರಾಟದಿಂದ ಬರುವ ಅಲ್ಪ ರಾಜಸ್ವಕ್ಕಿಂತ ಅದರಿಂದ ಸಮಾಜದ ಮೇಲಾಗುವ ದುಷ್ಪರಿಣಾಮ ಹಾಗೂ ದುರಂತಗಳನ್ನು ಸರಿಪಡಿಸಲು ದುಪ್ಪಟ್ಟು ವೆಚ್ಚ ಮಾಡುತ್ತಿವೆ. ವಿಶೇಷವಾಗಿ ಗ್ರಾಮೀಣ ಭಾಗದ ಬಡಜನರು ಹಾಗೂ ಪೌರಕಾರ್ಮಿಕರ ಜೀವನ ಮದ್ಯಪಾನದಿಂದ ನಲುಗಿಹೋಗುತ್ತಿದೆ.
ಇಂದಿನ ಯುವಜನತೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಮದ್ಯಕ್ಕಿಂತ ಹೆಚ್ಚಾಗಿ ಅಪಾಯಕಾರಿ ಡ್ರಗ್ಸ್ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಮೈಸೂರು, ದಾವಣಗೆರೆ, ಚಿತ್ರದುರ್ಗ, ಹುಬ್ಬಳ್ಳಿ-ಧಾರವಾಡ ಮುಂತಾದ ನಗರಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದ್ದು, ಇದನ್ನು ಮಟ್ಟಹಾಕಲು ಕಠಿಣ ಕ್ರಮ ಅಗತ್ಯವಾಗಿದೆ.
ಸರ್ಕಾರವು ಕೇವಲ ಮದ್ಯಮಾರಾಟದ ಟಾರ್ಗೆಟ್ ತಲುಪುವುದರ ಮೇಲಷ್ಟೇ ಗಮನಹರಿಸದೆ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವತ್ತ ಆದ್ಯತೆ ನೀಡಬೇಕು.
ಯುವಜನತೆಯನ್ನು ತಪ್ಪು ದಾರಿಯಿಂದ ತಡೆಯಲು ಪೋಷಕರು ತಮ್ಮ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸಂಸ್ಕಾರ ನೀಡಬೇಕಿದೆ.
ಈ ಹೋರಾಟವು ಪಕ್ಷಾತೀತ ಹಾಗೂ ಧರ್ಮಾತೀತವಾಗಿ ನಡೆಯಲಿದ್ದು, ಸಮಾಜದ ಸರ್ವಸ್ತರದ ಜನರು, ಪೂಜ್ಯ ಗುರುಗಳು ಹಾಗೂ ಯುವಜನರು ಕೈಜೋಡಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಲಿದ್ದಾರೆ ಎಂದರು.
ಬೆಂಗಳೂರಿನ ವಿಶ್ವ ಒಕ್ಕಲಿಗ ಮಹಾಸಂಸ್ಥಾನಮಠದ ಡಾ. ನಿಶ್ವಲಾನಂದನಾಥ ಸ್ವಾಮೀಜಿ ಮಾತನಾಡಿ; ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು ಕೇವಲ ಹೆಸರಿಗೆ ಮಾತ್ರ ಸೀಮಿತವಾಗದೆ, ಸಮಾಜದಲ್ಲಿ ಮದ್ಯಪಾನ ಹಾಗೂ ಮಾದಕ ವ್ಯಸನಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ಕಾರ್ಯಾಚರಿಸಲು ನಿರ್ಧರಿಸಿದೆ. ಈ ಸಂಸ್ಥೆಗೆ ಒಂದು ಘನತೆ ಮತ್ತು ಅರ್ಥ ತಂದುಕೊಡುವ ಉದ್ದೇಶದಿಂದ, ಶಾಸಕರು ಹಾಗೂ ಮಂಡಳಿಯ ಅಧ್ಯಕ್ಷರಾದ ಶರಣಪ್ಪ ಸಲ್ದಾಪುರ ಅವರ ನೇತೃತ್ವದಲ್ಲಿ ಮಹತ್ವದ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿತ್ತು.
ವ್ಯಾಪಕ ಜಾಗೃತಿ ಆಂದೋಲನ:
ಮದ್ಯಪಾನ ಮತ್ತು ಮಾದಕ ದ್ರವ್ಯ ವ್ಯಸನಗಳ ದುಷ್ಪರಿಣಾಮಗಳ ಬಗ್ಗೆ ಕೇವಲ ಕಾನೂನಾತ್ಮಕ ನಿಯಂತ್ರಣವಷ್ಟೇ ಸಾಲದು; ಮಾನಸಿಕ ಪರಿವರ್ತನೆ ಮತ್ತು ಸಾಮಾಜಿಕ ಸಂಯಮ ತರುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ರಾಜ್ಯವ್ಯಾಪಿ ಆಂದೋಲನ ರೂಪಿಸಲು ನಿರ್ಧರಿಸಲಾಗಿದೆ.
ಈ ಹಿಂದೆ ಜುಲೈ 4ರಂದು ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯನ್ನು ಆಚರಿಸಲಾಗಿತ್ತು. ಅದನ್ನು ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ನಿರಂತರ ಜಾಗೃತಿ ಅಭಿಯಾನವಾಗಿ ಮುಂದುವರಿಸಲು ಸಂಕಲ್ಪ ಮಾಡಲಾಗಿದೆ.
ದೇಶದ ಏಕತೆಯ ಸಂಕೇತವಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ಮರಣೆ/ಜಯಂತಿಯಂದು ಸಾಧು-ಸಂತರು, ಸಾಮಾಜಿಕ ಚಿಂತಕರು ಹಾಗೂ ಹೋರಾಟಗಾರರ ಸಹಯೋಗದೊಂದಿಗೆ ಈ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲು ಯೋಜಿಸಲಾಗಿದೆ.
ಸಮಾಜದಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಕೂಡ ವಿವಿಧ ರೀತಿಯ ವ್ಯಸನಗಳಿಗೆ ಒಳಗಾಗುತ್ತಿರುವುದರಿಂದ ಕೌಟುಂಬಿಕ ವ್ಯವಸ್ಥೆ ಹಾಗೂ ಸಾಮಾಜಿಕ ಸಂಸ್ಕಾರ ನಾಶವಾಗುತ್ತಿದೆ. ಶಾಲಾ-ಕಾಲೇಜುಗಳು, ಗ್ರಾಮ ಪಂಚಾಯಿತಿಗಳು ಹಾಗೂ ಸಂಘ-ಸಂಸ್ಥೆಗಳ ಮಟ್ಟದಲ್ಲಿ ಯುವಜನತೆಗೆ ವ್ಯಾಪಕ ಅರಿವು ಮೂಡಿಸುವ ಅಗತ್ಯವಿದೆ.
ಸಂವಿಧಾನದ ವಿಧಿ 243 (ಎ) ಅಡಿಯಲ್ಲಿ ಗ್ರಾಮಸಭೆಯ ನಿರ್ಣಯಗಳಿಗೆ ಸಂಸತ್ತಿನ ನಿರ್ಧಾರದಷ್ಟೇ ಮಹತ್ವವಿದೆ. ಮದ್ಯಪಾನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗ್ರಾಮಸಭೆಯ ತೀರ್ಮಾನಗಳಿಗೆ ಸೂಕ್ತ ಬೆಲೆ ಸಿಗುವಂತೆ ಕಾನೂನು ತಿದ್ದುಪಡಿ ತರಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಬ್ರಹ್ಮಕುಮಾರಿಯ ಲೀಲಾ ಅಕ್ಕನವರು ಮಾತನಾಡಿ; ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಶಾಮುಕ್ತಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದ್ದು, ದೇಶಾದ್ಯಂತ 10 ಕೋಟಿ ಜನರಿಂದ ವ್ಯಸನಮುಕ್ತ ಪ್ರತಿಜ್ಞಾವಿಧಿ ಸ್ವೀಕರಿಸುವ ಬೃಹತ್ ಗುರಿಯನ್ನು ಹೊಂದಲಾಗಿದೆ.
ಆಗಸ್ಟ್ 5 ರಿಂದ ಪ್ರಾರಂಭಗೊಂಡಿರುವ ಈ ಅಭಿಯಾನದಲ್ಲಿ 10 ಕೋಟಿ ಜನರಿಗೆ ವ್ಯಸನಮುಕ್ತ ಪ್ರತಿಜ್ಞೆ ಮಾಡಿಸುವ ಉದ್ದೇಶವಿದೆ. ಕನಿಷ್ಠ 10,000 ಜನರಾದರೂ ತಮ್ಮ ದುಶ್ಚಟಗಳನ್ನು ತೊರೆದರೆ ಈ ಶ್ರಮ ಸಾರ್ಥಕವಾಗಲಿದೆ.
ದಾವಣಗೆರೆಯ ಎಲ್ಲಾ ಶಾಲೆ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಮತ್ತು ಸಂಸ್ಥೆಗಳಿಗೆ ತೆರಳಿ 15 ನಿಮಿಷಗಳಲ್ಲಿ ದುಷ್ಪರಿಣಾಮಗಳ ಜಾಗೃತಿ ಮೂಡಿಸಿ ಪ್ರತಿಜ್ಞೆ ಮಾಡಿಸಲಾಗುತ್ತಿದೆ. ಈಗಾಗಲೇ 55,000ಕ್ಕೂ ಹೆಚ್ಚು ಯುವಕರು ಮತ್ತು ಮಕ್ಕಳಿಂದ ಪ್ರತಿಜ್ಞಾವಿಧಿ ಸ್ವೀಕರಿಸಲಾಗಿದೆ.
ದುಶ್ಚಟಗಳನ್ನು ಬಿಡಿಸುವುದಕ್ಕಿಂತ, ಚಿಕ್ಕ ವಯಸ್ಸಿನಲ್ಲೇ (ಪ್ರಾಥಮಿಕ ಮತ್ತು ಪ್ರೌಢಶಾಲೆ) ಮಕ್ಕಳಲ್ಲಿ ಸಂಸ್ಕಾರ ಹಾಗೂ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ಪ್ರಸ್ತುತ ಪೋಷಕರು ಕೂಡ ಮಕ್ಕಳ ದುಶ್ಚಟಗಳ ಮುಂದೆ ಅಸಹಾಯಕರಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ದಾವಣಗೆರೆಯ ಅಶ್ವಿನಿ ಆಯುರ್ವೇದಿಕ್ ಕಾಲೇಜಿನಲ್ಲಿ ಚಾಕೊಲೇಟ್ ಮತ್ತು ಜ್ಯೂಸ್ ರೂಪದ ಸುಲಭ ಔಷಧಗಳ ಮೂಲಕ ವ್ಯಸನಮುಕ್ತರಾಗುವ ಸೌಲಭ್ಯವಿದೆ ಎಂದು ಡಾ. ಜ್ಞಾನೇಶ್ವರ್ ತಿಳಿಸಿದ್ದಾರೆ. ಇದರೊಂದಿಗೆ ರಾಜಯೋಗ ಧ್ಯಾನ ಮತ್ತು ಆಧ್ಯಾತ್ಮಿಕತೆಯು ಮನೋಬಲವನ್ನು ಹೆಚ್ಚಿಸಿ ಸಂಪೂರ್ಣ ವ್ಯಸನಮುಕ್ತರಾಗಲು ಸಹಕಾರಿಯಾಗಿದೆ.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ ಮಾತನಾಡಿ; ರಾಜ್ಯದಲ್ಲಿ ಮದ್ಯಪಾನ ಹಾಗೂ ಮಾದಕ ವಸ್ತುಗಳ ಬಳಕೆ ಭೀಕರವಾಗಿ ಹೆಚ್ಚುತ್ತಿದ್ದು, ಆರೋಗ್ಯಕರ ಹಾಗೂ ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಪೂಜ್ಯ ಮಠಾಧೀಶರ ಸಹಯೋಗದೊಂದಿಗೆ ಬೃಹತ್ ಚಳವಳಿ ರೂಪಿಸಲು ಪೂರ್ವಭಾವಿ ಚಿಂತನ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.
ಮದ್ಯಪಾನ ಕೇವಲ ವೈಯಕ್ತಿಕ ಸಮಸ್ಯೆಯಾಗಿರದೆ, ಕೌಟುಂಬಿಕ ಹಾಗೂ ಸಾಮಾಜಿಕ ವ್ಯವಸ್ಥೆಯನ್ನೇ ಹಾಳುಮಾಡುತ್ತಿದೆ. ಗಾಂಧೀಜಿಯವರ ಕನಸಿನ ಸೌಹಾರ್ದ ಮತ್ತು ಸ್ವಸ್ಥ ಸಮಾಜ ಕಟ್ಟಲು ಮಂಡಳಿಯ ಬಜೆಟ್‌ಗಿಂತಲೂ ವಿಶಾಲವಾದ ಚಿಂತನೆ ಹಾಗೂ ಜನಶಕ್ತಿಯ ಅಗತ್ಯವಿದೆ.
ಇಡೀ ಜಗತ್ತನ್ನೇ ತಮ್ಮ ಕುಟುಂಬವೆಂದು ಭಾವಿಸಿ ಸಮಾಜ ತಿದ್ದುವ ಕಾರ್ಯ ಮಾಡುತ್ತಿರುವ ವಿವಿಧ ಮಠಗಳ ಮಠಾಧೀಶರು, ಪೂಜ್ಯರು ಹಾಗೂ ಮಾರ್ಗದರ್ಶಕರ ನೇತೃತ್ವದಲ್ಲಿ ಈ ಅಭಿಯಾನ ನಡೆಯಲಿದೆ.
ಒಟ್ಟು ಜನಸಂಖ್ಯೆಯಲ್ಲಿ ದುಡಿಯುವ ಶಕ್ತಿ ಶೇ. 49 ರಷ್ಟಿದ್ದರೆ, ದುಡಿಯದ ಶಕ್ತಿ ಶೇ. 51 ರಷ್ಟಿದೆ. ಶೇ. 39 ರಷ್ಟು ಮಕ್ಕಳಿದ್ದು, ಶೇ. 50 ರಷ್ಟು ಜನರು ಮದ್ಯಪಾನ ಹಾಗೂ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿರುವುದು ಅತ್ಯಂತ ಭಯಾನಕ ಸ್ಥಿತಿಯನ್ನು ತೋರಿಸುತ್ತದೆ.
ದೇಶದ ಆಸ್ತಿಯಾದ ಯುವಕರು ಮತ್ತು ಮಕ್ಕಳು ಸನ್ಮಾರ್ಗದಲ್ಲಿ ಸಾಗಲು ಸಂಸ್ಕಾರ ಹಾಗೂ ಮೌಲ್ಯಯುತ ಬದುಕು ಅಗತ್ಯ. ಆಸ್ತಿಗಿಂತ ಹೆಚ್ಚಾಗಿ ಮಕ್ಕಳಿಗೆ ಉತ್ತಮ ವಿಚಾರಗಳನ್ನು ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಳ್ಳಿಗಳಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಇದನ್ನು ತಡೆಯಲು ಜನಸಾಮಾನ್ಯರು ಹಾಗೂ ಸರ್ಕಾರ ಜಂಟಿಯಾಗಿ ಕ್ರಮ ಕೈಗೊಳ್ಳಬೇಕಿದೆ.
ಮದ್ಯವರ್ಜನ ಹಾಗೂ ಜಾಗೃತಿ ಕ್ಷೇತ್ರದಲ್ಲಿ ಶ್ರೇಷ್ಠ ಕೆಲಸ ಮಾಡಿದ ಗ್ರಾಮಗಳು ಮತ್ತು ವ್ಯಕ್ತಿಗಳಿಗೆ ‘ಸಂಯಮ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ. ಮಾರ್ಗದರ್ಶನಗಳು ಹಾಗೂ ನಿರ್ಧಾರಗಳನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ನೀತಿ ರೂಪಿಸಲು ಶ್ರಮಿಸಲಾಗುವುದು.
ಜನಜಾಗೃತಿ ಚಳವಳಿಯ ಮೂಲಕ ಕರ್ನಾಟಕವನ್ನು ಇಡೀ ದೇಶಕ್ಕೆ ಮಾದರಿಯಾಗಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಕೋರಲಾಗಿದೆ ಎಂದರು.

ಶಹಾಪುರದ ಚರಬಸವೇಶ್ವರ ಮಠದ ಶರಣು ಬಿ. ಗದ್ದುಗೆ ಮಾತನಾಡಿ; ಹಳ್ಳಿ, ಪಟ್ಟಣ ಹಾಗೂ ಜಿಲ್ಲಾ ಮಟ್ಟದಲ್ಲಿ ಮದ್ಯವರ್ಜನ ಮತ್ತು ಜಾಗೃತಿ ಅಭಿಯಾನಗಳು ವ್ಯಾಪಕವಾಗಿ ನಡೆಯಬೇಕು. ಪುರಾಣ ಹಾಗೂ ಪ್ರವಚನಗಳ ಮೂಲಕ ಸಮಾಜಕ್ಕೆ ಜಾಗೃತಿಯ ಸಂದೇಶ ತಲುಪಿಸುವ ಅಗತ್ಯವಿದೆ. ಗಾಂಧಿ ಜಯಂತಿಯ ಶುಭ ದಿನವಾದ ಅಕ್ಟೋಬರ್ 2 ರಿಂದ ರಾಜ್ಯಾದ್ಯಂತ ಈ ಜಾಗೃತಿ ಅಭಿಯಾನವನ್ನು ಪ್ರಕಟಿಸಿ, ಯಶಸ್ವಿಯಾಗಿ ಪ್ರಾರಂಭಿಸಬೇಕೆಂದು ಸಭೆಯಲ್ಲಿ ಮನವಿ ಮಾಡಲಾಯಿತು.
ಸಮಾಜದ ಸ್ವಾಸ್ಥ್ಯ ಮತ್ತು ಕುಟುಂಬಗಳ ನೆಮ್ಮದಿಯನ್ನು ಹಾಳು ಮಾಡುತ್ತಿರುವ ಮದ್ಯಪಾನ ನಿಯಂತ್ರಣಕ್ಕೆ ಸರ್ಕಾರವು ವರ್ಷಕ್ಕೆ ಕನಿಷ್ಠ ₹1 ಕೋಟಿ ಅನುದಾನ ಮೀಸಲಿಟ್ಟು, ಜಿಲ್ಲಾ ಮಟ್ಟಗಳಲ್ಲಿ ಜಾಗೃತಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದರು.
ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ; ಅಕ್ಟೋಬರ್ 31 ಸಭೆ ನಡೆಸಿ ಚಳವಳಿ ಆರಂಭಿಸಲು ದಿನಾಂಕ ನಿಗದಿಪಡಿಸಬೇಕು. ಮುಂಬರುವ ಗ್ರಾಮ ಪಂಚಾಯತಿ, ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳಿಗಿಂತ ಮುಂಚಿತವಾಗಿಯೇ ಈ ಚಳವಳಿಯನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕು.
ದುಶ್ಚಟಗಳಿಲ್ಲದ ಹಾಗೂ ಮದ್ಯಪಾನ ಬೆಂಬಲಿಸದ ಅಭ್ಯರ್ಥಿಗಳಿಗೆ ಮಾತ್ರ ಪಕ್ಷಾತೀತವಾಗಿ ಮತದಾರರು ಬೆಂಬಲ ನೀಡಬೇಕು. ರಾಜಕಾರಣಿಗಳು ಮತ್ತು ನಾಯಕರು ಈ ಸತ್ಕಾರ್ಯಕ್ಕೆ ಜಂಟಿಯಾಗಿ ಕೈಜೋಡಿಸಬೇಕೆಂದು ಮನವಿ ಮಾಡಲಾಯಿತು.
ಸಂವಿಧಾನದ ಆಶಯದಂತೆ ಗ್ರಾಮ ಪಂಚಾಯತಿಗಳು ಕೇವಲ ಹೆಸರಿಗಷ್ಟೇ ಇರದೆ, ನೈಜ ‘ಗ್ರಾಮ ಸರ್ಕಾರ’ಗಳಾಗಿ ಕಾರ್ಯಾಚರಿಸಲು ಅಧಿಕಾರ ವಿಕೇಂದ್ರೀಕರಣವಾಗಬೇಕು ಎಂದರು.
ಮಾಜಿ ಶಾಸಕ ಮಹಿಮಾ ಪಾಟೀಲ್ ಮಾತನಾಡಿ; ಸಮಾಜದಲ್ಲಿ ಹೆಚ್ಚುತ್ತಿರುವ ಮದ್ಯಪಾನ, ತಂಬಾಕು, ಮೊಬೈಲ್ ಹಾಗೂ ಇತರ ಗ್ಯಾಡ್ಜೆಟ್ಸ್‌ಗಳ ವ್ಯಸನಗಳಂತಹ ದುಶ್ಚಟಗಳಿಂದ ಜನರನ್ನು ಮುಕ್ತಗೊಳಿಸಿ, ಉತ್ತಮ ಭವಿಷ್ಯವನ್ನು ರೂಪಿಸಲು ‘ಅರಿವು ಆಧಾರಿತ ಸಾಮೂಹಿಕ ಕಾಯಕ’ ಮತ್ತು ಸಂಯಮ ಶಿಕ್ಷಣದ ಅಗತ್ಯವಿದೆ.
ಮದ್ಯಪಾನ, ತಂಬಾಕು, ಜೂಜಾಟ, ಸ್ತ್ರೀ ವ್ಯಾಮೋಹ ಮಾತ್ರವಲ್ಲದೆ ಇಂದಿನ ಪೀಳಿಗೆಗೆ ಮೊಬೈಲ್ ಮತ್ತು ಕಂಪ್ಯೂಟರ್ ಗ್ಯಾಡ್ಜೆಟ್‌ಗಳೇ ದೊಡ್ಡ ವ್ಯಸನವಾಗಿ ಪರಿಣಮಿಸಿವೆ. ಬರಿ ಕಾನೂನು ಅಥವಾ ನಿಷೇಧದಿಂದಲೇ ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ ಎಂಬುದಕ್ಕೆ ವಿದೇಶಗಳ ಹಾಗೂ ಕೆಲವು ರಾಜ್ಯಗಳ ಪ್ರಯೋಗಗಳೇ ಉದಾಹರಣೆ. ವ್ಯಸನಕ್ಕೆ ದಾಸರಾದಾಗ ಮನಸ್ಸು ಮತ್ತು ದೇಹದ ಮೇಲಿನ ನಿಯಂತ್ರಣ ತಪ್ಪುತ್ತದೆ. ಇದನ್ನು ತಡೆಯಲು ಸ್ವ-ಸಂಯಮ, ಜಾಗೃತಿ ಮತ್ತು ನಿರಂತರ ಪರಿವರ್ತನೆ ಅಗತ್ಯವಾಗಿದೆ.
ಜಗತ್ತಿನ ಪ್ರಮುಖ ಚಿಂತಕರ ಆಲೋಚನೆಗಳನ್ನು ಆಧರಿಸಿ ಹಾಗೂ ಸರ್ವೋದಯದ ಸಂಕಲ್ಪದೊಂದಿಗೆ ಸುಮಾರು 20ಕ್ಕೂ ಹೆಚ್ಚು ದೇಶಗಳ ಜಾಗೃತ ಸಮೂಹದೊಂದಿಗೆ ಸಾಗಲಾಗುತ್ತಿದೆ. ಪರಿಸರ ಸಂರಕ್ಷಣೆ, ರಾಸಾಯನಿಕ ಮುಕ್ತ ಕೃಷಿ, ಆರೋಗ್ಯ ಹಾಗೂ ಸಂಯಮದ ಶಿಕ್ಷಣವನ್ನು ಬಾಲ್ಯದಿಂದಲೇ ನೀಡುವುದರ ಮೂಲಕ ಸುಂದರ ಸಮಾಜ ನಿರ್ಮಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ.
ಬಸವಣ್ಣ, ಬುದ್ಧ ಹಾಗೂ ಗಾಂಧೀಜಿಯವರ ತತ್ತ್ವಗಳ ಆಧಾರಿತ ರಾಜಕಾರಣ ಇಂದು ದೇಶಕ್ಕೆ ಬೇಕಾಗಿದೆ. ಚುನಾವಣೆಗಳಲ್ಲಿ ಹಣ ಹಾಗೂ ಹೆಂಡ ಹಂಚುವ ಅಭ್ಯರ್ಥಿಗಳಿಗೆ ಸಾರ್ವಜನಿಕರು ಹಾಗೂ ಮತದಾರರು ವೋಟ್ ನೀಡಬಾರದು ಎಂದು ಜಾಗೃತಿ ಮೂಡಿಸಲು ರಾಜ್ಯದ ಮೂರು ಸಾವಿರಕ್ಕೂ ಹೆಚ್ಚು ಮಠಾಧೀಶರು ಮತ್ತು ಶರಣರು ಕೈಜೋಡಿಸಬೇಕಿದೆ.
ಸಾಮಾಜಿಕ ಹೋರಟಟಗಾರ್ತಿ ಸ್ವರ್ಣಭಟ್ ಮಾತನಾಡಿ; ಮದ್ಯಪಾನ ಮತ್ತು ವಿವಿಧ ವ್ಯಸನಗಳಿಂದಾಗಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮದ್ಯ ಮಾರಾಟದ ಮೇಲೆ ಕಠಿಣ ‘ನಿಯಂತ್ರಣ’ ತರಲು ಸರ್ಕಾರ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
“ಸಂಯಮ ಅಥವಾ ಸ್ವಯಂ ನಿಯಂತ್ರಣದ ಮಾತುಗಳು ಕೇವಲ ಮಹಿಳೆಯರ ಮೇಲಷ್ಟೇ ಪ್ರಯೋಗವಾಗುತ್ತಿವೆ. ದಶಕಗಳಿಂದ ಮಹಿಳೆಯರು ಮದ್ಯಪಾನದ ದುಷ್ಪರಿಣಾಮಗಳನ್ನು ತಡೆದುಕೊಂಡು ಸಾಗುತ್ತಿದ್ದು, ಇನ್ನು ಮುಂದೆ ತಡೆಯಲು ಸಾಧ್ಯವಿಲ್ಲ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹರಿಯಾಣ ಮಾದರಿಯಲ್ಲಿ, ಶೇಕಡಾ 10 ರಷ್ಟು ಮಹಿಳೆಯರು ಸೇರಿ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳನ್ನು ತೆರೆಯಬಾರದು ಎಂದು ನಿರ್ಣಯ ಅಂಗೀಕರಿಸಿದರೆ, ಅದನ್ನು ರದ್ದುಗೊಳಿಸುವ ಕಾನೂನಾತ್ಮಕ ಅಧಿಕಾರವನ್ನು ಗ್ರಾಮಸಭೆಗಳಿಗೆ ನೀಡಬೇಕು. 2016ರಲ್ಲಿ ಇದ್ದ ಈ ನಿಯಮವನ್ನು ಸರ್ಕಾರ ಮರಳಿ ಜಾರಿಗೆ ತರಬೇಕು.
ಪ್ರತಿಯೊಂದು ಹಳ್ಳಿಯಲ್ಲಿಯೂ ಅಕ್ರಮ ಮದ್ಯ ಮಾರಾಟ ತಡೆಯಲು ಕಾವಲು ಸಮಿತಿಗಳನ್ನು ರಚಿಸಬೇಕು. ಈ ಸಮಿತಿಗಳಲ್ಲಿ ಸಾಮಾಜಿಕ ಕಳಕಳಿಯುಳ್ಳ ಸಾರ್ವಜನಿಕರು ಮತ್ತು ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು.
2020ರಲ್ಲಿ ಹೈಕೋರ್ಟ್ ನೀಡಿರುವ ನಿರ್ದೇಶನದಂತೆ ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಉಲ್ಲಂಘಿಸುವ ಅಧಿಕಾರಿಗಳ ಮೇಲೆಯೇ ಹೊಣೆಗಾರಿಕೆ ನಿಗದಿಪಡಿಸಬೇಕು.
ಸರ್ಕಾರ ಕೇವಲ ಮದ್ಯದಿಂದ ಬರುವ ಆದಾಯದ ಕಡೆಗೆ ಗಮನ ಹರಿಸದೆ, ಇದರಿಂದ ಸಮಾಜ, ಆರೋಗ್ಯ ಮತ್ತು ಯುವ ಪೀಳಿಗೆಯ ಮೇಲಾಗುತ್ತಿರುವ ಹಾನಿಯ ಕಡೆಗೆ ಗಮನ ಹರಿಸಬೇಕು. ಮದ್ಯದಿಂದ ಬರುವ ಆದಾಯಕ್ಕಿಂತ ಮೂರರಷ್ಟು ಹಣವನ್ನು ಅದರ ದುಷ್ಪರಿಣಾಮಗಳ ಚಿಕಿತ್ಸೆ ಮತ್ತು ಸರಿಪಡಿಸುವಿಕೆಗೆ ಸರ್ಕಾರ ವೆಚ್ಚ ಮಾಡುತ್ತಿದೆ.
ಮದ್ಯಪಾನವು ಸಮಾಜದ ಶಾಂತಿ ಮತ್ತು ಮಹಿಳೆಯರ ಸುರಕ್ಷತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಸರ್ಕಾರ ತಕ್ಷಣವೇ ‘ಮದ್ಯ ಸಂಯಮ ಮಂಡಳಿ’ಯೊಂದಿಗೆ ‘ನಿಯಂತ್ರಣ’ ಪದವನ್ನು ಸೇರಿಸಿ, ಸೂಕ್ತ ಕಾನೂನು ತಿದ್ದುಪಡಿ ತರಬೇಕೆಂದು ಹೇಳಿದರು.
ಬೆಂಗಳೂರಿನ ಗಾಂಧಿ ಸ್ಮಾರಕ ಅಧ್ಯಕ್ಷ ಡಾ. ವೋಡೆ ಪಿ. ಕೃಷ್ಣ ಮಾತನಾಡಿ; ಮಹಾತ್ಮ ಗಾಂಧೀಜಿಯವರು ತಮ್ಮ ದೇಶ ಪರ್ಯಟನೆಯ ಸಮಯದಲ್ಲಿ ಭಾರತದ ಪ್ರಮುಖ ಸಾಮಾಜಿಕ ಪಿಡುಗುಗಳಾದ ಕೋಮು ಗಲಭೆ, ಬಡತನದಿಂದ ಸೃಷ್ಟಿಯಾದ ಮದ್ಯಪಾನ/ಪಾನ ನಿಷೇಧ, ಮತ್ತು ಅಸ್ಪೃಶ್ಯತೆ ಎಂಬ ಮೂರು ಮುಖ್ಯ ಸಮಸ್ಯೆಗಳನ್ನು ಗುರುತಿಸಿ, ಸ್ವಾತಂತ್ರ್ಯ ಸಂಗ್ರಾಮದ ಜೊತೆಜೊತೆಯಲ್ಲೇ ಸಾಮಾಜಿಕ ಹೋರಾಟಗಳನ್ನು ನಡೆಸಿದ್ದರು.
ಗಾಂಧೀಜಿಯವರು ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸುವಾಗ ಎಂದಿಗೂ ಹತಾಶರಾಗದೆ, ಜನರ ಸಹಕಾರದೊಂದಿಗೆ ಸದಾ ಆಂದೋಲನ ರೂಪದಲ್ಲಿ ಹೋರಾಟ ಮುನ್ನಡೆಸಿದರು. ಅವರು ಶ್ರೀಸಾಮಾನ್ಯನ ಶಕ್ತಿ ಮತ್ತು ಜನರ ಆತ್ಮಚೇತನವನ್ನು ಜಾಗೃತಗೊಳಿಸುವಲ್ಲಿ ಅಪಾರ ನಂಬಿಕೆ ಇಟ್ಟಿದ್ದರು.
ಕೋಮು ಸೌಹಾರ್ದತೆಯ ಕೊರತೆ, ಮದ್ಯಪಾನದ ಶಾಪ ಮತ್ತು ಅಸ್ಪೃಶ್ಯತೆ. ಈ ಮೂರು ಸಮಸ್ಯೆಗಳಿಗೆ ಸಮಾಜವನ್ನು ಸಂಘಟಿಸುವುದರ ಮೂಲಕವೇ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಅವರು ನಂಬಿದ್ದರು.
ಮದ್ಯಪಾನ ನಿಷೇಧ ಅಥವಾ ವ್ಯಸನ ಮುಕ್ತ ವಾತಾವರಣ ನಿರ್ಮಾಣ ಮಾಡುವುದು ಕೇವಲ ಸರ್ಕಾರಿ ಕಾಯ್ದೆಗಳಿಂದ ಸಾಧ್ಯವಿಲ್ಲ, ಅದು ಜನಾಂದೋಲನವಾಗಬೇಕು. ಹಳ್ಳಿ ಹಳ್ಳಿಗಳಿಗೆ ಹೋಗಿ, ವ್ಯಸನಿಗಳ ಮನೆ ಬಾಗಿಲಿಗೆ ತೆರಳಿ, ಮನ ಪರಿವರ್ತನೆ ಮಾಡುವಂತಹ ಪ್ರಯತ್ನಗಳು ಅಗತ್ಯವಾಗಿವೆ.
ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಹಾಗೂ ಸಿಖ್ ಸೇರಿದಂತೆ ಎಲ್ಲಾ ಧರ್ಮಗಳ ಗುರುಗಳು, ಮಠಾಧೀಶರು ಹಾಗೂ ಸಮಾಜದ ಪ್ರಮುಖರು ಒಂದಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ದುಂಡುಮೇಜಿನ ಪರಿಷತ್ತು ಹಾಗೂ ಧರ್ಮಗುರುಗಳ ಅಧಿವೇಶನಗಳ ಮೂಲಕ ವ್ಯಾಪಕ ಜಾಗೃತಿ ತರಲು ಯೋಜನೆ ರೂಪಿಸಲಾಗುತ್ತಿದೆ.
ಕೇವಲ ಚರ್ಚೆಗಳು ಅಥವಾ ಸಭೆಗಳು ನಡೆದು ಪತ್ರಿಕೆಗಳಲ್ಲಿ ಸುದ್ದಿ ಬಂದರೆ ಸಾಲದು; ಈ ಕಾರ್ಯಕ್ರಮವು ನಿರಂತರವಾಗಿ ನಡೆಯುವ ಸಮಾಜಮುಖಿ ಆಂದೋಲನವಾಗಬೇಕು ಎಂದು ಕರೆಯನ್ನು ನೀಡಲಾಯಿತು.
ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಲು ಸಮಾಜದ ಎಲ್ಲ ವರ್ಗದ ಜನರು, ಮಹಿಳೆಯರು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸಿ ಸಶಕ್ತ, ಮದ್ಯಮುಕ್ತ ಹಾಗೂ ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕೆಂದು ಹೇಳಿದರು.
ದಾವಣಗೆರೆಯ ಚಿಂತಕ ಶಿವನಕೆರೆ ಬಸವಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರಪ್ಪ, ಚಂದ್ರಪ್ಪ, ಸಂಪತ್ ಸಭೆಯಲ್ಲಿ ಉಪಸ್ಥಿತರಿದ್ದರು.
ಸಂಯಮ ಮಂಡಳಿಯ ಸದಸ್ಯ ರೂಪ ಸ್ವಾಗತಿಸಿ ನಿರೂಪಿಸಿದರು. ನಾಗರಾಜ ಹೆಚ್.ಎಸ್. ವಚನ ಗೀತೆಗಳನ್ನು ಹಾಡಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6
