ಇಂದಿನ ಕಲಬುರ್ಗಿ ಚಲೋ ಪ್ರತಿಭಟನೆಗೆ ರಾಯಚೂರು ಬಸವಾಭಿಮಾನಿಗಳು ಭಾಗಿ

ರಾಯಚೂರು:

‘ಕಲಬುರಗಿಯಲ್ಲಿ ಸೆ. 27ರಂದು ನಡೆಯಲಿರುವ ಬಸವಾದಿ ಶರಣರ ಹಿಂದೂ ಸಮಾವೇಶವು ಅಸಮಾನತೆಯ ಜನಿವಾರ ಕಿತ್ತೊಗೆದು ಸಮಾನತೆಯ ಇಷ್ಟಲಿಂಗ ಕರುಣಿಸಿದ ಶರಣರ ತತ್ವಗಳಿಗೆ ವಿರುದ್ಧವಾಗಿದ್ದು, ಅದರ ವಿರುದ್ಧ ಸೆ. 25ರಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಪಿ. ರುದ್ರಪ್ಪ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ 17ನೇ ಶತಮಾನದಲ್ಲಿ ಬದುಕಿದ್ದ ಕಾಡಸಿದ್ದೇಶ್ವರರು ಶರಣ ಮಾರ್ಗದ ಉಪಾಸಕರಾಗಿದ್ದವರು. ಅವರು ಸುಮಾರು 500 ವಚನಗಳನ್ನು ರಚಿಸುವ ಮೂಲಕ ಲಿಂಗಾಯತ ತತ್ವವನ್ನು ಪ್ರತಿಪಾದಿಸಿದ್ದರು ಎಂದು ಹೇಳಿದರು. ಆದರೆ, ಕನ್ನೇರಿ ಕಾಡಸಿದ್ದೇಶ್ವರ ಸ್ವಾಮೀಜಿಯವರ ಇತ್ತೀಚಿನ ನಿಲುವುಗಳು ಮೂಲ ಶರಣ ತತ್ವಗಳಿಗೆ ವಿರುದ್ಧವಾಗಿವೆ ಎಂದು ಅವರು ಆರೋಪಿಸಿದರು.

ಹಿಂದೂ ಧರ್ಮ ಸಮಾವೇಶ ನಡೆಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಶರಣರನ್ನು ಹಿಂದೂ ಸಮಾವೇಶದೊಂದಿಗೆ ಜೋಡಿಸುವ ಪ್ರಯತ್ನವನ್ನು ವಿರೋಧಿಸುತ್ತೇವೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಡಾ. ಸರ್ವಮಂಗಳಾ ಸಕ್ರಿ ತಿಳಿಸಿದರು.

’25ರಂದು ನಡೆಯುವ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಸವಾಭಿಮಾನಿಗಳು ಭಾಗವಹಿಸಲಿದ್ದಾರೆ. 30ಕ್ಕೂ ಹೆಚ್ಚು ಸಮುದಾಯಗಳ ಜನರು ಪಾಲ್ಗೊಳ್ಳಲಿದ್ದಾರೆ’ ಅಂದು ಕಲಬುರಗಿಯ ಬಸವೇಶ್ವರ ವೃತ್ತದಲ್ಲಿ (ಜಗತ್ ಸರ್ಕಲ್) ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದಕ್ಕೂ ಮುನ್ನ ಕನ್ನಡ ಭವನದಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಮಹಾಸಭಾದ ಗೌರವಾಧ್ಯಕ್ಷ ನಾಗನಗೌಡ ಹರವಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಜೆ. ಬಸವರಾಜ ವಕೀಲರು, ಬಸವರಾಜ ಕುರುಗೋಡು, ಚೆನ್ನಬಸವಣ್ಣ ಮಹಾಜನಶೆಟ್ಟಿ, ಮಲ್ಲಿಕಾರ್ಜುನ ಗುಡಿಮನಿ, ನಾಗೇಶಪ್ಪ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *