ಲಿಂಗಾಯತರಿಗೆ ಎಲ್ಲ ದಿನಗಳು, ಎಲ್ಲ ಮಾಸಗಳೂ ಶ್ರೇಷ್ಠ
ಹುಬ್ಬಳ್ಳಿ:
ಲಿಂಗಾಯತ ಧರ್ಮಿಯರು ಕುಟುಂಬದ ಸದಸ್ಯರೆಲ್ಲ ನಿತ್ಯ ಒಟ್ಟಾಗಿ ಕುಳಿತು ಬಸವ ಪ್ರಾರ್ಥನೆ ಹಾಗೂ ವಚನ ಪಠಣವನ್ನು ಕಡ್ಡಾಯವಾಗಿ ಮಾಡಬೇಕು ಇದರಿಂದ ಕುಟುಂಬದಲ್ಲಿ ಸಾಮರಸ್ಯ, ಸಂತೋಷ ವೃದ್ಧಿಸುತ್ತದೆ ಎಂದು ಧಾರವಾಡ ಹೈಕೋರ್ಟ್ ನ್ಯಾಯವಾದಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಕಾನೂನು ಸಲಹೆಗಾರ ಕೆ. ಎಸ್. ಕೋರಿಶೆಟ್ಟರ ಅಭಿಪ್ರಾಯಪಟ್ಟರು.
ಅವರು ಹುಬ್ಬಳ್ಳಿ ಬಸವ ಕೇಂದ್ರದ ವತಿಯಿಂದ ಮಂಜುನಾಥ ನಗರದ ಬಸನಗೌಡರ ಶೀಲವಂತರ ಅವರ ನಿವಾಸದಲ್ಲಿ ಈಚೆಗೆ ಹಮ್ಮಿಕೊಂಡಿದ್ದ “ವಚನ ಶ್ರಾವಣ” ಕಾರ್ಯಕ್ರಮದಲ್ಲಿ ಅನುಭಾವ ನೀಡುತ್ತಿದ್ದರು.

“ಲಿಂಗಾಯತರಿಗೆ ಎಲ್ಲ ದಿನಗಳು, ಎಲ್ಲ ಮಾಸಗಳೂ ಶ್ರೇಷ್ಠವೇ, ಆದರೆ ಭಾರತೀಯ ಸಂಸ್ಕೃತಿಯಲ್ಲಿ ಶ್ರಾವಣ ಮಾಸಕ್ಕೆ ವಿಶಿಷ್ಟ ಸ್ಥಾನವಿದೆ. ಏಕೆಂದರೆ ಬಹುಸಂಖ್ಯಾತ ರೈತರಿರುವ ಈ ದೇಶದಲ್ಲಿ ಮುಂಗಾರು ಬಿತ್ತನೆಯ ನಂತರ ಭೂಮಿ ಹಸಿರಾಗಿ ಫಸಲು ಬೆಳೆಯುತ್ತಿರುತ್ತದೆ, ಆ ಸಂಧರ್ಭದಲ್ಲಿ ರೈತವರ್ಗ ಧಾರ್ಮಿಕ ಆದ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸತ್ ಪರಂಪರೆ ಅನೂಚಾನವಾಗಿ ಸಾಗಿ ಬಂದಿದೆ”. ‘ಇಷ್ಟಲಿಂಗ ನಿಷ್ಠೆ ಹೊಂದಿರುವ ಲಿಂಗಾಯತರಿಗೆ ಆಷಾಢ, ಪುಷ್ಯ ಎಲ್ಲವೂ ಒಳ್ಳೆಯವೇ’ ಎಂದರು.
ವಿಶ್ರಾಂತ ಪ್ರೊ. ಎಸ್. ಎನ್. ಪೊಲೀಸಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿ ಬಸವ ಕೇಂದ್ರದ ಅಧ್ಯಕ್ಷ ಪ್ರೊ. ಜಿ.ಬಿ. ಹಳ್ಯಾಳ ಅನುಭಾವ ನೀಡಿ ನೂರಾರು ಮನೆಗಳಲ್ಲಿ ಪ್ರತಿದಿನ ಹಮ್ಮಿಕೊಂಡ ವಚನ ಶ್ರಾವಣ ಕಾರ್ಯಕ್ರಮ ಅದ್ಭುತ ಯಶಸ್ಸು ಕಂಡಿದೆ ಎಂದರು.

ಹಿರಿಯರಾದ ಬಸನಗೌಡ್ರು ಶೀಲವಂತರ ಅವರ ಆತಿಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವ ಕೇಂದ್ರದ ಪ್ರಧಾನ ಕಾರ್ಯದರ್ಶಿ ಕೆ. ಎಸ್. ಇನಾಮತಿ ಸಭಾ ನಿರ್ವಹಣೆ ಮಾಡಿದರು. ಬಸವಕೇಂದ್ರದ ಉಪಾಧ್ಯಕ್ಷ ಪ್ರಭು ಅಂಗಡಿ, ಹಿರಿಯರಾದ ಪ್ರೊ. ಎಸ್.ವಿ. ಪಟ್ಟಣಶೆಟ್ಟಿ, ಬಿ. ಎಲ್. ಲಿಂಗಶೆಟ್ಟರ, ಪಂಕಜಾ ಹುಗ್ಗಿಶೆಟ್ಟರ ಮುಂತಾದವರು ಹಾಜರಿದ್ದರು.
ಉಮಾ ಮಠದ ಹಾಗೂ ವಿದ್ಯಾ ಲಿಂಗಶೆಟ್ಟರ ವಚನ ಪ್ರಾರ್ಥನೆ ಮಾಡಿದರು. ಶರಣ ಶರಣೆಯರು ಉಪಸ್ಥಿತರಿದ್ದರು.
