ಬಸವಶಕ್ತಿ: ಇಂದು ಲಿಂಗಾಯತರು ನರಿಗಳ ಮಾತು ಕೇಳುತ್ತಿದ್ದಾರೆ

ಬಸವ ಮೀಡಿಯಾ
ಬಸವ ಮೀಡಿಯಾ

ಧಾರವಾಡ ಬಸವಶಕ್ತಿ ಶಿಬಿರ: ಮೊದಲ ದಿನದ ವರದಿ

ಧಾರವಾಡ

ಲಿಂಗಾಯತ ಸಮುದಾಯ ಜಾಗೃತವಾಗಿದೆ, ಇಂದಿನ ಲಿಂಗಾಯತರು ಇಟ್ಟಿಗೆ ಹೊರುವ ಲಿಂಗಾಯತರಲ್ಲ. ಆದರೆ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ, ಪ್ರಭಾವ ಬೆಳೆಸಿಕೊಳ್ಳುವತನಕ ಲಿಂಗಾಯತದ ಮೇಲೆ ಸಾಂಸ್ಕೃತಿಕ, ರಾಜಕೀಯ ದಾಳಿ ಮುಂದುವರೆಯಲಿದೆ, ಎಂದು ಬಸವ ಮೀಡಿಯಾ ಟ್ರಸ್ಟಿನ ಛೇರ್ಮನ್ ಟಿ ಆರ್ ಚಂದ್ರಶೇಖರ್ ಅಭಿಪ್ರಾಯ ಪಟ್ಟರು.

ಧಾರವಾಡದಲ್ಲಿ ಸೆಪ್ಟೆಂಬರ್ 26, 27 ನಡೆದ ಎರಡು ದಿನಗಳ ಶಿಬಿರವನ್ನು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಗೊಂಗಡಶೆಟ್ಟಿ ಉದ್ಘಾಟಿಸಿದ ನಂತರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶರಣ ಚಿಂತಕ ಶಶಿಧರ್ ತೋಡಕರ್ ‘ಪಂಚತಂತ್ರ ಕಥೆಗಳಲ್ಲಿ ಕಾಡಿನರಾಜ ಸಿಂಹ ನರಿಗಳ ಮಾತು ಕೇಳುವಂತೆ, ಇಂದು ಲಿಂಗಾಯತರು ನರಿಗಳ ಮಾತು ಕೇಳುತ್ತಿದ್ದಾರೆ.

ಅವರಲ್ಲಿ ಈಗ ನಡೆಯುತ್ತಿರುವ ಸಾಂಸ್ಕೃತಿಕ, ರಾಜಕೀಯ ದಾಳಿಯನ್ನು ಪ್ರತಿಭಟಿಸುವಂತೆ ಜಾಗೃತಿ ಮೂಡಿಸಬೇಕು. ಕನಿಷ್ಠ ನಮ್ಮ ಕಡೆಯಿಂದ ಒಂದು nuisance value ಸೃಷ್ಟಿಯಾದರೆ ನಮ್ಮ ವಿರೋಧಿಗಳು ಸ್ವಲ್ಪ ಯೋಚಿಸುತ್ತಾರೆ.

ಅನುಭವ ಮಂಟಪದ ನಿರ್ವಹಣೆಗೂ ಬಸವ ಸಂಘಟನೆಗಳು ಗಮನ ಕೊಡಬೇಕು. ಇತ್ತೀಚೆಗೆ ಹುಟ್ಟಿದ ಧಾರ್ಮಿಕ ಸಂಸ್ಥೆಗಳೂ ತಮ್ಮ ಭಕ್ತರ ಶ್ರಮದಾನದ ಲಾಭ ಪಡೆಯುತ್ತಿವೆ. ಜಾಗತಿಕ ಲಿಂಗಾಯತ ಮಹಾಸಭಾದಂತಹ ಸಂಘಟನೆಗಳು ಇವುಗಳನ್ನು ಅಧ್ಯಯನ ಮಾಡಿ ಬಸವಾಭಿಮಾನಿಗಳಿಗೆ ತರಭೇತಿ ನೀಡುವ ಕಾರ್ಯಾಗಾರ ರೂಪಿಸಬೇಕು,’ ಎಂದು ಹೇಳಿದರು.

ಸಾಂಸ್ಕೃತಿಕ, ರಾಜಕೀಯ ದಾಳಿ

ಲಿಂಗಾಯತದ ಮೇಲೆ ನಡೆಯುತ್ತಿರುವ ಸಾಂಸ್ಕೃತಿಕ, ರಾಜಕೀಯ ದಾಳಿಯ ಬಗ್ಗೆ ವಿನಯ್ ಶಿರಹಟ್ಟಿಮಠ ಮಾತನಾಡಿದರು.

‘ನಾವು ಇಲ್ಲಿಯವರೆಗೆ ಮಲಗಿದ್ವಿ, ಈಗ ಎದ್ದಿದ್ದೀವಿ ಎಂದು ಈ ದಾಳಿ ತೋರಿಸುತ್ತಿದೆ. ಆದರೆ ಪೂರ್ತಿ ಎದ್ದಿದ್ದೇವೋ ಅಥವಾ ಅರ್ಧ ಎದ್ದಿದ್ದೇವೋ ಎನ್ನುವ ಪ್ರಶ್ನೆಯಿದೆ.

ನಮ್ಮ ಹೊಲಕ್ಕೆ ನಾವು ಬೇಲಿ ಹಾಕಿಲ್ಲ, ಪಾಣಿ, ಸರ್ವೇ ಮಾಡಿಸಿಲ್ಲ, ನೂರಾರು ವರ್ಷದಿಂದ ಉತ್ತಿಲ್ಲ. ಅದೀಗ ಈಗ ಒತ್ತುವರಿಯಾಗಿದೆ. ಯಾಕೆ ಒತ್ತುವರಿ ಮಾಡಿದ್ದೀರಿ ಅಂತ ಕೇಳಿದರೆ ಸನಾತನ ಕಾಲದಿಂದ ಇಲ್ಲೇ ಉತ್ತಿದ್ದೇವೆ ಎಂದು ಅವರು ಹೇಳುತ್ತಾರೆ.

ಇನ್ನೊಬ್ಬರು ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆಯೋ ಅಥವಾ ನಾವು ದಾಳಿಗೆ ಲಭ್ಯರಾಗಿದ್ದೀವೆಯೋ ಎನ್ನುವುದೂ ಕೇಳಬೇಕಿರುವ ಪ್ರಶ್ನೆ, ಎಂದು ಹೇಳಿದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ ಬಸವಕೇಂದ್ರದ ಡಾ. ಶಂಭು ಹೆಗಡಾಳ ‘ನಮ್ಮ ವಿರೋಧಿಗಳು ದಾಳಿ ಮಾಡಿದ್ದರೋ ಅಥವಾ ನಾವು ಅದಕ್ಕೆ ಲಭ್ಯರಾಗಿದ್ದೇವೋ ಯೋಚನೆ ಮಾಡಬೇಕು. ನಾವು ಹುಲಿಗೆ ಹೊಡೆದರೂ ಅಥವಾ ಹುಲಿ ನಮ್ಮ ಮುಖ ಸವರಿದರೂ ರಕ್ತ ಬರುವುದು ನಮಗೆಯೇ.

ನಮ್ಮವರೇ ಅಜ್ಞಾನದಿಂದ ಅಥವಾ ಆಮಿಷಕ್ಕೆ ಒಳಗಾಗಿ ವಿರೋಧಿಗಳ ಜೊತೆ ಕೈ ಜೋಡಿಸಿ ನಮ್ಮ ಮೇಲೆ ಆಕ್ರಮಣ ಮಾಡುತ್ತಿದ್ದಾರೆ. ರಾಜಕಾರಣಿಗಳು ವೈಯಕ್ತಿಕವಾಗಿ ನಮ್ಮ ಸಂಸ್ಕೃತಿಯ ಪರವಾಗಿದ್ದರೂ ಬಹಿರಂಗವಾಗಿ ವಿರೋಧಿಸುತ್ತಿದ್ದಾರೆ.

ಬಸವ ಸಂಸ್ಕೃತಿ ಅಭಿಯಾನ ಮೂಡಿಸಿದ ಜಾಗೃತಿಗೆ ಪ್ರತಿಕ್ರಿಯೆ ನೀಡಲು ಮೂರು, ನಾಲ್ಕು ಜನರನ್ನು ಮುಂದೆ ಬಿಟ್ಟಿದ್ದಾರೆ, ಇದು ಅವರ frustration ತೋರಿಸುತ್ತಿದೆ.

ಅಭಿಯಾನದ ನಂತರ ಅದನ್ನು ಮುಂದುವರೆಸಲು ಸಕಾರಾತ್ಮಕ ಯೋಜನೆ ರೂಪಿಸಬೇಕಿತ್ತು, ಅದರ ಬದಲು ಸಂಘರ್ಷಕ್ಕೆ ಇಳಿದಿದ್ದೇವೆ.

ನಮ್ಮ ಸಂಖ್ಯಾಬಲ ಹೆಚ್ಚಿಸಿಕೊಂಡರೆ ರಾಜಕಾರಣಿಗಳೇ ನಮ್ಮ ಬಾಗಿಲಿಗೆ ಬರುತ್ತಾರೆ. ಇದಕ್ಕೆ ಮಕ್ಕಳಿಗೆ ಬಾಲ್ಯದಿಂದಲೇ ಇಷ್ಟಲಿಂಗ, ಕಾಯಕ, ದಾಸೋಹ ಪ್ರಜ್ಞೆ ಮೂಡಿಸಬೇಕು.

ಕಾಲಕಾಲಕ್ಕೆ ತಕ್ಕಂತೆ ಆ ಸಮಯದ ಅಗತ್ಯಗಳಿಗೆ ಸ್ಪಂದಿಸಲು ಲಿಂಗಾಯತ ಸಮುದಾಯದಲ್ಲಿ ಸಂಸ್ಥೆಗಳು ಹುಟ್ಟಿ ಕಾರ್ಯನಿರ್ವಹಿಸಿವೆ. ಅದೇ ರೀತಿ ಹಳಕಟ್ಟಿಯವರು ಏಕಾಂಗಿಯಾಗಿ ಶುರು ಮಾಡಿದ ಕಾರ್ಯ ಮುಂದುವರೆಸಿ ಜನರಿಗೆ ವಚನಗಳನ್ನು ತಲುಪಿಸಬೇಕು,’ ಎಂದರು.

ರಾಜಕಾರಣಿಗಳ ಮೇಲೆ ಒತ್ತಡ

ಎರಡನೇ ಗೋಷ್ಠಿಯಲ್ಲಿ ಸರಕಾರ, ರಾಜಕಾರಣಿಗಳ ಮೇಲೆ ಒತ್ತಡ ತರುವುದರ ಬಗ್ಗೆ ಹೊಸತು ಪತ್ರಿಕೆಯ ಸಿದ್ದನಗೌಡ ಪಾಟೀಲ್ ಮಾತನಾಡಿದರು.

ಲಿಂಗಾಯತರು ತಾತ್ವಿಕವಾಗಿ ಬಹುಸಂಖ್ಯಾತರಾದರೆ ರಾಜಕಾರಣಿಗಳು ಮಾತು ಕೇಳುತ್ತಾರೆ. ಲಿಂಗಾಯತ ಜಾತಿಯಾದರೆ ಅಲ್ಪಸಂಖ್ಯಾತ ಆದರೆ ಧರ್ಮವಾದರೆ ಬಹುಸಂಖ್ಯಾತ, ಯಾಕಂದರೆ ಇದರಲ್ಲಿ ಎಲ್ಲರನ್ನು ಒಳಗೊಳ್ಳುವ ಸಾಮರ್ಥ್ಯವಿದೆ. ಲಿಂಗಾಯತರು ಶ್ರೇಷ್ಠವೆಂಬ ಭಾವನೆ ಬಿಟ್ಟು ತಳಸಮುದಾಯಗಳನ್ನು ಒಳಗೊಳ್ಳಬೇಕು.

12ನೇ ಶತಮಾನದಲ್ಲಿ ಇತರ ಧರ್ಮಗಳ ಮಿತಿಯನ್ನು ದಾಟಿ ಬಸವಣ್ಣ ಒಂದು ಮಾನವೀಯ ಪರ್ಯಾಯ ನೀಡಿದರು. ವೇದಕ್ಕೆ ಒರೆಯ ಕಟ್ಟಿದ ಬಸವಾದಿ ಶರಣರ ತತ್ವ ಸಿದ್ದಾಂತ ಪ್ರಸಾರ ಮಾಡಬೇಕು, ಯುವಕರನ್ನು ಸೆಳೆಯಲು ಬಸವ ‘ಇಸಂ’ನ ಆಧುನೀಕರಣಗೊಳಿಸಬೇಕು. ಎಂದರು.

ಇದೇ ವಿಷಯದ ಮೇಲೆ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ರಾಜಕಾರಣಿಗಳಿಗೆ ಚುನಾವಣೆ ಬಂದಾಗ ಬಸವಣ್ಣ ನೆನಪಾಗುತ್ತಾರೆ, ನಂತರ ವಿರೋಧ ಮಾಡುತ್ತಾರೆ.

ಲಿಂಗಾಯತ ವಿರೋಧಿ ರಾಜಕಾರಣಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮನವರಿಕೆ ಮಾಡಿಕೊಡಬೇಕು. ಒಪ್ಪದಿದ್ದರೆ ಹೋರಾಟ ಚಳುವಳಿ ಮಾಡಬೇಕು, ಎಂದು ಹೇಳಿದರು.

ರಾಜಕೀಯ ಪ್ರಜ್ಞೆ, ಪ್ರಭಾವ ಬೇಕೇ

ಬಸವ ಸಂಘಟನೆಗಳಿಗೆ ರಾಜಕೀಯ ಪ್ರಜ್ಞೆ, ಪ್ರಭಾವ ಬೇಕೇ ವಿಷಯದ ಮೇಲೆ ಬಸವ ಮೀಡಿಯಾದ ಎಂ ಎ ಅರುಣ್ ಮಾತನಾಡಿದರು. ಲಿಂಗಾಯತರು ರಾಜಕೀಯದಲ್ಲಿ ಭಾವನಾತ್ಮಕವಾಗಿ ಸ್ಪಂದಿಸುವದನ್ನು ನೋಡಿದ್ದೇವೆ. ಅವರು ತಮ್ಮ ನಿಜವಾದ ಹಿತಾಸಕ್ತಿ ಅರ್ಥೈಸಿಕೊಂಡು ದೂರದೃಷ್ಟಿಯಿಂದ ಮತ ಹಾಕುವುದನ್ನು ರೂಡಿಸಿಕೊಳ್ಳಬೇಕು. ಬೆಂಗಳೂರಿನ ಬಸವನಗುಡಿ ಮತಕ್ಷೇತ್ರದ ಬ್ರಾಹ್ಮಣ ಮತದಾರರನ್ನು ನೋಡಿ ಕಲಿಯಬೇಕು, ಎಂದು ಹೇಳಿದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ ಗಂಗಾವತಿ ವೀರ ಗಣಾಚಾರಿ ಪಡೆಯ ಮಹೇಶ್ ಕುಮಾರ್ ಎ ಕೆ, ಲಿಂಗಾಯತರು ಬಹುಸಂಖ್ಯಾತರಾಗಿರುವ ಧಾರವಾಡ ಕ್ಷೇತ್ರದಲ್ಲಿ ಪ್ರಹ್ಲಾದ ಜೋಶಿಯವರು 2004ರಿಂದ ಗೆದ್ದು ಬರುತ್ತಿದ್ದಾರೆ. ನಮ್ಮನ್ನ ನಾವೇ ನಿಯಂತ್ರಣ ಮಾಡಿಕೊಳ್ಳಬೇಕು, ಇನ್ನೊಬ್ಬರು ನಮ್ಮನ್ನ ನಿಯಂತ್ರಣ ಮಾಡಿಕೊಳ್ಳಲು ಬಿಡಬಾರದು, ಎಂದು ತಿಳಿಸಿದರು.

ಲಿಂಗಾಯತ ಧರ್ಮ ನಿರೂಪಣೆ

ಸಮಾಜದ ವಿವಿಧ ವರ್ಗಗಳಿಗೆ ಲಿಂಗಾಯತ ಧರ್ಮವನ್ನು ಪರಿಣಾಮಕಾರಿಯಾಗಿ ನಿರೂಪಿಸುವ ಬಗ್ಗೆ ದಾವಣಗೆರೆ ಶರಣ ಸಾಹಿತ್ಯ ಪರಿಷತ್ತಿನ ವಿಶ್ವೇಶ್ವರಯ್ಯ ಬಸವಬಳ್ಳಿ ಲಿಂಗಾಯತ ಧರ್ಮವನ್ನು ಆತ್ಮವಿಶ್ವಾಸದಿಂದ, ಸತ್ಚಾರಿತ್ರ್ಯದಿಂದ, ಮೃದುಮಾತಿನಲ್ಲಿ ಪ್ರಚಾರ ಮಾಡಬೇಕು, ಎಂದು ಹೇಳಿದರು.

ಲಿಂಗಾಯತ ಧರ್ಮವನ್ನು ಜನರಿಗೆ ತಲುಪಿಸಲು ವಚನಗಳನ್ನು ಬಳಸಿಕೊಳ್ಳಬೇಕು, ಲಿಂಗಾಯತ ಪ್ರಭಾವ ಇರುವ ದೇವಸ್ಥಾನಗಳಲ್ಲಿ ವಚನ ಪರಿಚಯ, ಗಾಯನ, ನೃತ್ಯ ನಡೆಯಬೇಕು.

ಮಕ್ಕಳಲ್ಲಿ ವಚನ ಪ್ರಜ್ಞೆ ಬಿತ್ತಬೇಕು, ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕು. ಲಿಂಗಾಯತ ಧರ್ಮ ಪ್ರತ್ಯೇಕವಾದರೆ ಮಕ್ಕಳ ಭವಿಷ್ಯದ ಮೇಲೆ ಆಗುವ ಪ್ರಯೋಜನದ ಬಗ್ಗೆ ತಿಳಿಸಬೇಕು, ರೀಲ್ಸ್ ಮಾಡಬೇಕು, ಕನ್ನಡ ಹೋರಾಟ ಬೆಂಬಲಿಸಬೇಕು, ಎಂದು ಹೇಳಿದರು.

ಧಾರವಾಡ ಜಾಗತಿಕ ಲಿಂಗಾಯತ ಮಹಾಸಭಾದ ಸವಿತಾ ನಡಕಟ್ಟಿ ಬಸವಶಕ್ತಿ ಶಿಬಿರಗಳು ರಾಜಕೀಯದಲ್ಲಿ ಭಾಗವಹಿಸುವುದರ ಬಗ್ಗೆ ನಡೆಯುತ್ತಿರುವ ಮೊದಲ ಕಾರ್ಯಾಗಾರ, ಎಂದು ಹೇಳಿದರು.

ಇಂದು ಬಸವಪರ ಸಂಘಟನೆಗಳು ರಾಜಕೀಯವಾಗಿ ಜಾಗೃತವಾಗುವ ಅನಿವಾರ್ಯತೆಯಿದೆ. ನಾವು ಸುಮ್ಮನಿದ್ದರೆ, ನಮ್ಮನ್ನು ಕೆಡಸುತ್ತಾರೆ.

50 ವರ್ಷದ ಹಿಂದೆ ಲಿಂಗಾಯತ ಧರ್ಮವೆಂದರೆ ದಿನಕ್ಕೆ ಎರಡು ಸಾರಿ ಲಿಂಗಪೂಜೆ ಮಾಡುವುದು ಎಂದಿತ್ತು. ಈಗ ಲಿಂಗಾಯತ ಧರ್ಮ ಅಂದರೆ ಏನು ಅಂತ ಎಲ್ಲರಿಗೂ ಗೊತ್ತಾಗಿದೆ.

ಶರಣತತ್ವದ ಪ್ರಚಾರ, ಪ್ರಸಾರದ ಅಭೂತಪೂರ್ವ ಯಶಸ್ಸಿನಿಂದ ಮನುವಾದಿಗಳಿಗೆ ನಡುಕ ಉಂಟಾಗಿದೆ. ಅದಕ್ಕೆ ಅವರಿಂದ ಪ್ರತಿಕ್ರಿಯೆ ಬರುತ್ತಿದೆ.

ಲಿಂಗಾಯತ ಧರ್ಮ ಪ್ರಸಾರ ಮಾಡಬೇಕಾದರೆ ಖಂಡನೆ ಬೇಡ, ಪ್ರತಿಪಾದನೆಯಿರಲಿ. ಬೇರೆ ದೇವರನ್ನು ತೆಗೆಸುವ ಪ್ರಯತ್ನ ಬೇಡ. ಲಿಂಗಪೂಜೆಯ ಬಗ್ಗೆ ಅರಿವು ಮೂಡಿಸಿ, ದೇವರು ತಮ್ಮಲ್ಲಿಯೇ ಇದ್ದಾನೆ ಎಂದು ತಿಳಿದರೆ ಜನ ಬದಲಾಗುತ್ತಾರೆ

ಓಂ ಶಾಂತಿ, ಬ್ರಹ್ಮಕುಮಾರಿಗಳಿಗೆ ಲಿಂಗಾಯತ ಮಹಿಳೆಯರು ಹೋಗುತ್ತಿದ್ದಾರೆ, ಅವರಲ್ಲಿ ಅಧ್ಯಯನದ ಕೊರತೆಯಿದೆ. ಅವರಲ್ಲಿ ಜಾಗೃತಿ ಮೂಡಿಸಬೇಕು, ಎಂದು ಹೇಳಿದರು.

ಕಾರ್ಯಕ್ರಮ ಬಸವಕೇಂದ್ರದ ಬಸವಂತಪ್ಪ ತೋಟದ ಅವರ ವಚನ ಪ್ರಾರ್ಥನೆ ಹಾಗೂ ವಕೀಲ ಕೋರಿಶೆಟ್ಟರ್ ಅವರ ಸಂವಿಧಾನ ಪಠಣದೊಂದಿಗೆ ಶುರುವಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
2 Comments
  • ತುಂಬಾ ಅರ್ಥಪೂರ್ಣವಾದ ಕಾರ್ಯಕ್ರಮ ಮತ್ತು ಸೈಕ್ಯಾಂತಿಕ ಮತ್ತು ವೈಚಾರಿಕವಾಗಿ ಕೂಡಿರತಕ್ಕಂತ ಮಾತುಗಳು ಎಲ್ಲಾ ಗಣ್ಯರಿಂದ ಧನ್ಯವಾದ

  • ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಲಿಂಗಾಯತ ಧರ್ಮದ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *