ರಂಗಭೂಮಿಗೂ ಮತ್ತು ಮಠಗಳಿಗೂ ಅವಿನಾಭಾವ ಸಂಬಂಧ

ಚಿದಂಬರರಾವ್ ಜಂಬೆ, ಪಿ. ಗಂಗಾಧರಸ್ವಾಮಿ ಅವರ ರಂಗಸೇವೆ ಹಾಗೂ ಕಲಾ ಕೊಡುಗೆ ಸ್ಮರಣೀಯ

ಸಾಣೇಹಳ್ಳಿ:

ರಂಗಭೂಮಿಗೂ ಮತ್ತು ಮಠಗಳಿಗೂ ಅವಿನಾಭಾವ ಸಂಬಂಧವಿದೆ. ಮಠಗಳು ಕೇವಲ ಧಾರ್ಮಿಕ ಕಾರ್ಯಗಳಿಗಷ್ಟೇ ಸೀಮಿತವಾಗದೆ, ಸಾಂಸ್ಕೃತಿಕ ಹಾಗೂ ಕಲಾತ್ಮಕ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿವೆ. ಈ ಪರಂಪರೆಯಲ್ಲಿ ಚಿದಂಬರರಾವ್ ಜಂಬೆಯವರ ರಂಗಸೇವೆ ಹಾಗೂ ಕಲಾ ಕೊಡುಗೆ ಅತ್ಯಂತ ಸ್ಮರಣೀಯ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ರಂಗಶಾಲೆಯ ಆರಂಭದ ಮೊದಲ ಪ್ರಾಚಾರ್ಯ, ರಂಗಕರ್ಮಿ ಚಿದಂಬರರಾವ್ ಜಂಬೆ, ಹಾಗೂ ಶಿವಕುಮಾರ ಪ್ರಶಸ್ತಿ ಪುರಸ್ಕೃತ, ರಂಗಕರ್ಮಿ ಮೈಸೂರಿನ ಪಿ. ಗಂಗಾಧರ ಸ್ವಾಮಿಯವರ ಶ್ರದ್ಧಾಂಜಲಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಕರ್ನಾಟಕದ ರಂಗಭೂಮಿ ಇತಿಹಾಸದಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರ ನಾಟಕ ಚಿಂತನೆ, ನಿರ್ದೇಶನ ಹಾಗೂ ಅಭಿನಯದ ಪ್ರಭಾವದಿಂದ ಕಲಾ ಚಟುವಟಿಕೆಗಳು ಉನ್ನತ ಮಟ್ಟಕ್ಕೇರಿದವು. ಈ ವಾತಾವರಣದಲ್ಲಿ ಬೆಳೆದ ಚಿದಂಬರರಾವ್ ಜಂಬೆ ಹಾಗೂ ಗಂಗಾಧರ ಸ್ವಾಮಿಯವರು ರಂಗಭೂಮಿಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡರು.

2008ರಲ್ಲಿ ರಂಗಶಾಲೆ ಪ್ರಾರಂಭವಾದಾಗ ರಂಗಶಾಲೆಯ ಉಸ್ತುವಾರಿಗೆ ಜಂಬೆಯವರನ್ನು ಕರೆತರಲಾಯಿತು. ಅವರು ಸುಮಾರು 5 ವರ್ಷಗಳ ಕಾಲ ಕಲಾವಿದರಿಗೆ ತಾಯಿಯಂತೆ ಪ್ರೀತಿ ತೋರುತ್ತಾ, ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಪೋಷಿಸಿ ರಂಗಶಿಕ್ಷಣ ನೀಡಿದರು.

ಅವರ ನಿರಂತರ ಸೇವೆಯನ್ನು ಗುರುತಿಸಿ ಶ್ರೀ ಶಿವಕುಮಾರ ಕಲಾಸಂಘದ ವತಿಯಿಂದ ಗೌರವಾನ್ವಿತ ‘ಶಿವಕುಮಾರ ಪ್ರಶಸ್ತಿ’ ನೀಡಿ ಪುರಸ್ಕರಿಸಲಾಗಿತ್ತು.

ಜಂಬೆಯವರ ಮನೆ ಹಾಗೂ ಅವರ ಜೀವನ ಶೈಲಿ ಸರಳತೆಗೆ ಸಾಕ್ಷಿಯಾಗಿತ್ತು. ಅವರ ಮನೆಯಲ್ಲಿ ಹಾವು, ಬೆಕ್ಕು ಹಾಗೂ ನಾಯಿಗಳು ಅತ್ಯಂತ ಸೌಹಾರ್ದತೆಯಿಂದ ಜೀವಿಸುತ್ತಿದ್ದವು. ಅವರ ಈ ಪ್ರಾಣಿಪ್ರೇಮ ಹಾಗೂ ಪರಿಸರ ಪ್ರೇಮ ಪ್ರತಿಯೊಬ್ಬರಿಗೂ ಮಾದರಿಯಾಗಿತ್ತು.

ತಮ್ಮ ರಂಗಜೀವನದ ಅವಧಿಯಲ್ಲಿ ಆರೋಗ್ಯ ಹಾಗೂ ಕಲಾ ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡಿದ್ದ ಅವರು, ಧೂಮಪಾನ ಸೇರಿದಂತೆ ಇತರ ಅಭ್ಯಾಸಗಳನ್ನು ಸಂಪೂರ್ಣವಾಗಿ ತೊರೆದು ಸರಳ ಹಾಗೂ ಸನ್ಮಾರ್ಗದ ಜೀವನವನ್ನು ನಡೆಸಿ ರಂಗಭೂಮಿಗೆ ತಮ್ಮ ಕೊನೆಯುಸಿರಿನವರೆಗೂ ಸೇವೆಯನ್ನು ಸಲ್ಲಿಸಿದರು ಎಂದರು.

ಶ್ರದ್ಧಾಂಜಲಿಯ ನುಡಿಗಳನ್ನಾಡಿದ ರಂಗಶಾಲೆಯ ಪ್ರಾಚಾರ್ಯ ರಘು ಪುರಪ್ಪೆಮನೆ; ರಂಗಶಿಕ್ಷಣ ಎಂದರೆ ಕೇವಲ ನಟರಾಗುವುದಷ್ಟೇ ಅಲ್ಲ, ಮೊದಲು ಮನುಷ್ಯತ್ವವನ್ನು ಬೆಳೆಸಿಕೊಳ್ಳುವುದು ಎಂಬುದು ಚಿದಂಬರರಾವ್ ಜಂಬೆಯವರ ಸ್ಪಷ್ಟ ವಿಚಾರವಾಗಿತ್ತು. ಒಂದೇ ಕಡೆ ಇರದೆ ‘ನಿಂತ ನೀರಾಗಬಾರದು’ ಎಂಬ ತತ್ವದಂತೆ ವಿವಿಧ ರಂಗಶಾಲೆಗಳ ಮೂಲಕ ಮನುಷ್ಯತ್ವ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದರು.

ಸಮಾಜದ ಕೆಟ್ಟ ಪದ್ಧತಿಗಳು, ಜಮೀನ್ದಾರಿ ಶೈಲಿ, ಸರ್ವಾಧಿಕಾರ ಧೋರಣೆ ಹಾಗೂ ಜಾತೀಯತೆಯಂತಹ ಸಾಮಾಜಿಕ ತೊಡಕುಗಳನ್ನು ತೊಡೆದುಹಾಕಲು ರಂಗಭೂಮಿ ಕೆಲಸ ಮಾಡಬೇಕೆಂಬ ಗಟ್ಟಿಯಾದ ನಿಲುವನ್ನು ಅವರು ಹೊಂದಿದ್ದರು ಎಂದರು.

ರಂಗನಿರ್ದೇಶಕ ಮಾಲತೇಶ ಬಡಿಗೇರ ಮಾತನಾಡಿ; ಚಿದಂಬರರಾವ್ ಜಂಬೆ ಅವರು ನೀನಾಸಂನ ಪ್ರಾಚಾರ್ಯರಾಗಿದ್ದಾಗ ಅತ್ಯಂತ ಶಿಸ್ತು ಮತ್ತು ಗಂಭೀರ ವಾತಾವರಣವನ್ನು ಕಾಯ್ದುಕೊಳ್ಳುತ್ತಿದ್ದರು. ಅವರ ಕಟ್ಟುನಿಟ್ಟಿನ ವ್ಯಕ್ತಿತ್ವಕ್ಕೆ ವಿದ್ಯಾರ್ಥಿಗಳು ಭಯಪಡುತ್ತಿದ್ದರೂ, ಒಳಗಿನಿಂದ ಅವರು ಅತ್ಯಂತ ಪ್ರೀತಿ ಹಾಗೂ ‘ಮಗುವಿನಂತಹ ಮನಸ್ಸನ್ನು’ಹೊಂದಿದವರಾಗಿದ್ದರು.  ಹಲವು ನೈಜತಾವಾದಿ ಹಾಗೂ ಗಂಭೀರ ನಾಟಕಗಳನ್ನು ಅವರು ಅತ್ಯಂತ ಗಟ್ಟಿಯಾಗಿ ನಿರ್ದೇಶಿಸುತ್ತಿದ್ದರು. ರಂಗಭೂಮಿಯ ಮೇಲೆ ಸಮಯಪ್ರಜ್ಞೆಯಿಂದ ನಿರ್ವಹಿಸುತ್ತಿದ್ದ ಅಪರೂಪದ ಕಲಾಶಿಲ್ಪಿಯಾಗಿದ್ದರು.

ಮತ್ತೊಬ್ಬ ರಂಗಪ್ರಮುಖರಾದ ಜಿ. ಗಂಗಾಧರಸ್ವಾಮಿ ಅವರು ಸಮುದಾಯ ಸಂಘಟನೆಯ ಮುಖಾಂತರ ಸಿ.ಜಿ.ಕೆ. ಅವರೊಂದಿಗೆ ಸೇರಿ ಕರ್ನಾಟಕದಾದ್ಯಂತ ಬೀದಿ ನಾಟಕ ಚಳವಳಿಯನ್ನು ಕಟ್ಟಿ ಬೆಳೆಸಿದವರು. ನಂತರ ಮೈಸೂರಿನ ರಂಗಾಯಣದ ನಿರ್ದೇಶಕರಾಗಿಯೂ, ಸಾಣೇಹಳ್ಳಿ ಶಿವಸಂಚಾರ ತಂಡದಲ್ಲೂ ರಂಗಭೂಮಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. 

ಚಿದಂಬರರಾವ್ ಜಂಬೆ ಹಾಗೂ ಗಂಗಾಧರಸ್ವಾಮಿ ಅವರಿಬ್ಬರೂ ಒಂದೇ ಕಡೆ ನಿಂತ ನೀರಾಗದೆ ‘ಜಂಗಮರಾಗಿ’ಇಡೀ ಕರ್ನಾಟಕದಾದ್ಯಂತ ರಂಗಸೇವೆಯನ್ನು ಸಲ್ಲಿಸಿದ ಮಹಾನ್ ಚೇತನಗಳು ಎಂದರು.

ಮುಖ್ಯ ಶಿಕ್ಷಕ ಶಿವಕುಮಾರ ಮಾತನಾಡಿ; ಚಿದಂಬರರಾವ್ ಜಂಬೆಯವರು ರಂಗಭೂಮಿ ಮತ್ತು ತಮ್ಮ ವೃತ್ತಿಬದುಕಿನಲ್ಲಿ ಅತ್ಯಂತ ಶಿಸ್ತುಬದ್ಧ ಸ್ವಭಾವವನ್ನು ಹೊಂದಿದ್ದರು. ರಂಗಾಯಣ ಹಾಗೂ ಶಾಲೆಯ ಚಟುವಟಿಕೆಗಳಲ್ಲಿ ಇವರ ಬದ್ಧತೆ ಎದ್ದು ಕಾಣುತ್ತಿತ್ತು. 

ಜಂಬೆಯವರ ಜೊತೆಯಲ್ಲಿ ಯಾವಾಗಲೂ ಅವರ ಸಾಕುನಾಯಿ ಇರುತ್ತಿತ್ತು. ಪ್ರಾಣಿಗಳ ಮೇಲಿನ ಅವರ ಪ್ರೀತಿ ಮತ್ತು ಪ್ರಾಮಾಣಿಕ ಒಡನಾಟ ಅಪರೂಪದ್ದಾಗಿತ್ತು ಎಂದರು.

ವೇದಿಕೆಯ ಮೇಲೆ ಇಂಜಿನಿಯರ್ ಪ್ರದೀಪ್ ಮಲ್ಲಿಕಾರ್ಜುನ ಉಪಸ್ಥಿತರಿದ್ದರು‌. ಆರಂಭದಲ್ಲಿ ರಂಗಶಾಲೆ ಹಾಗೂ ಶಿವಸಂಚಾರ ತಂಡದ ಕಲಾವಿದರು ಕೋಲಾಟ ಪ್ರದರ್ಶಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *