ಸಿಂಧನೂರು:
ಧರ್ಮಗುರು ಬಸವಣ್ಣ ಎಂದರೆ ಮಹಾಬೆಳಕು. ಆ ಬೆಳಕನ್ನು ಕತ್ತಲೆಯಿಂದ ಹಿಡಿದಿಡಲು ಸಾಧ್ಯವೇ ಇಲ್ಲ ಎಂದು ಶೇಗುಣಸಿ ಮಹಾಂತಪ್ರಭು ಸ್ವಾಮೀಜಿ ಹೇಳಿದರು.
ನೀಲಾಂಬಿಕ ಪ್ರಸಾದ ನಿಲಯದಲ್ಲಿ ಏರ್ಪಡಿಸಿದ್ದ ತುರವಿಹಾಳ ಸಾಹುಕಾರ ಬಂಧುಗಳ ಲಿಂಗೈಕ್ಯ ಚೆನ್ನಪ್ಪ ಸಾಹುಕಾರ, ಲಿಂಗೈಕ್ಯ ಶಿವನಮ್ಮ ಸಾಹುಕಾರ ಅವರ ಪುಣ್ಯಸ್ಮರಣೆ ಹಾಗೂ ಲಿಂಗೈಕ್ಯ ಮಲ್ಲಿನಾಥ ಶರಣರ 212ನೇ ಸಂಚಾರಿ ಶಿವಾನುಭವ ಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡುತ್ತಿದ್ದರು.

ಬಸವಣ್ಣನವರು ಜಗತ್ತಿನ ಪ್ರಜಾಪ್ರಭುತ್ವದ ಮೊದಲ ಹರಿಕಾರರು. ಇಲ್ಲಿಯವರೆಗೆ ಇಂಗ್ಲೆಂಡಿನ ಮ್ಯಾಗ್ನಾಕಾರ್ಟ್ ಜಗತ್ತಿನ ಮೊದಲ ಸಂಸತ್ತು ಎಂದು ಭಾವಿಸಲಾಗಿತ್ತು. ಇಂಗ್ಲೆಂಡಿನ ಕಿಂಗ್ ಜಾನ್ ಹೇಳುತ್ತಾರೆ ನನ್ನ ಮಾತು ಜನ ಏಕೆ ಕೇಳಬೇಕು, ನಾನೇಕೆ ಜನರ ಮಾತನ್ನು ಕೇಳಬಾರದು ಎಂದು ಪ್ರಶ್ನಿಸುತ್ತಾರೆ. ಅದೇ ಮ್ಯಾಗ್ನಾಕಾರ್ಟ್ ಆಯಿತು. ಇದು ನಡೆದದ್ದು 13ನೇ ಶತಮಾನದಲ್ಲಿ.
ಅದಕ್ಕಿಂತ ಹಿಂದೆ 12ನೇ ಶತಮಾನದಲ್ಲಿಯೇ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ಜಗತ್ತಿನ ಮೊದಲ ಸಂಸತ್ತಿನ ಸ್ಥಾಪಕರೆನಿಸಿದರು ಎಂದರು.

ಅನುಭವ ಮಂಟಪದ ಅಸ್ತಿತ್ವದ ಬಗ್ಗೆ ಕಲಬುರ್ಗಿಯ ಕಪಟರಾಳ ಕೃಷ್ಣರಾಯ ಶಾಸ್ತ್ರಿ ಅಪಸ್ವರ ಎತ್ತಿದರು. ಅದನ್ನು ದಾಖಲೆ ಸಮೇತ ಜಯದೇವಿತಾಯಿ ಲಿಗಾಡೆ ಅವರು ಹಾಗೂ ರೆವೆರೆಂಡ್ ಉತ್ತಂಗಿ ಚನ್ನಪ್ಪನವರು ಅನುಭವ ಮಂಟಪದ ಅಸ್ತಿತ್ವದ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿ ಕೃಷ್ಣರಾಯರಿಗೆ ತೋರಿಸಿಕೊಟ್ಟರು.
ಬಸವಣ್ಣನವರು ಇದ್ದದ್ದು ರಾಜಪ್ರಭುತ್ವದಲ್ಲಿ, ಆತ ಯೋಚಿಸಿದ್ದು ಪ್ರಜಾಪ್ರಭುತ್ವದ ಕುರಿತು. ಬಸವಣ್ಣ ಎಂದರೆ ಮಹಾ ಬೆಳಕು ಆ ಬೆಳಕನ್ನು ಕತ್ತಲೆಯಿಂದ ಹಿಡಿದಿಡಲು ಸಾಧ್ಯವೇ ಇಲ್ಲ. ಸತ್ಯದ ಮನೆಯಲ್ಲಿ ಶಿವನಿರ್ಪಣೆ ಹೊರತು ಅಸತ್ಯದ ಮನೆಯಲ್ಲಿ ಶಿವನಿರ್ಪನೇ? ಬಸವಣ್ಣ ಸತ್ಯದ ಪ್ರತಿಪಾದಕರು ಎಂದರು.
ಬಸವಣ್ಣ ಹಾಗೂ ಶರಣರ ವಿಚಾರಗಳ ಮೇಲೆ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ದಾಳಿಗಳು ನಡೆಯುತ್ತಲೇ ಬಂದಿವೆ. ಮುಂದೆಯೂ ನಡೆಯುತ್ತವೆ. ಆದರೆ ಅವು ಯಾವು ಕೂಡ ಶರಣರ ವಿಚಾರಗಳನ್ನು ಮಂಕಾಗಿಸಲು ಸಾಧ್ಯವೇ ಇಲ್ಲ. ಕಲ್ಯಾಣ ಕ್ರಾಂತಿಯಲ್ಲಿ ರಕ್ತಪಾತವಾಗುತ್ತದೆ. ಶರಣರ ಮೇಲೆ ದಾಳಿಯೂ ನಡೆಯುತ್ತದೆ. ಬಸವಧ್ವಜ ನಾಡಿನ ಉದ್ದಗಲಕ್ಕೂ ಮೆರೆಯುವುದನ್ನು ಯಾರಿಂದಲೂ ತಪ್ಪಿಸಲಾಗುವುದಿಲ್ಲ ಎಂದು ಅಲ್ಲಮಪ್ರಭುಗಳು ಕಾಲಜ್ಞಾನವನ್ನು ನುಡಿದಿದ್ದಾರೆ.
ಬಸವತತ್ವ ತುಂಬಾ ಬಲಿಷ್ಠವಾಗಿದೆ. ಆದರೆ ಆ ತತ್ವದ ಬೀಜ ಬಿತ್ತಿ ಬೆಳೆಯಬೇಕಾದ ಭೂಮಿ ಫಲವತ್ತಾಗಿ ಇರಬೇಕು. ಅಂದರೆ ನಾವು ತತ್ವವನ್ನು ಸಾರುವುದಕ್ಕೆ ಸೀಮಿತವಾಗದೆ ಆಚರಣೆಗೂ ಮುಂದಾಗಬೇಕು.
ನಾವು ಬಸವ ತತ್ವದ ಬರೀ ಘೋಷಣೆ ಹಾಗೂ ಬೇರೆ ಧರ್ಮಗಳ ಟೀಕೆ ಳ-ಟಿಪ್ಪಣಿ ಮಾಡುವುದರಿಂದ ತತ್ವ ಬೆಳೆಯುವುದಿಲ್ಲ, ಅದು ಆಚರಣೆಯಿಂದ ಮಾತ್ರ ಬೆಳೆದು ಧರ್ಮ ಉಳಿಯುತ್ತದೆ.

ಲಿಂಗಪೂಜೆ ನಮ್ಮ ಮೊದಲ ಆದ್ಯತೆಯಾಗಬೇಕು. ನಾವೆಲ್ಲರೂ ಲಿಂಗಧಾರಿಗಳಾಗಿ ಶಿವಯೋಗದ ಅನುಭವವನ್ನು ಸವಿಯಬೇಕು. ಲಿಂಗ ಪೂಜೆಯ ಸುಖ ಪೂಜಿಸುವವನಿಗೆ ಮಾತ್ರ ಗೊತ್ತು. ತುರುವಿಹಾಳ ಮನೆತನದ ಹಿರಿಯ ಜೀವಿಗಳು ಹಾಗೂ ಮಲ್ಲಿನಾಥ ಶರಣರು ಲಿಂಗಯೋಗಿಗಳಾಗಿ ಬದುಕಿದವರು. ಅಂಥವರ ಪ್ರೇರಣೆಯಿಂದ ಈ ಮನೆತನದಲ್ಲಿ ಸಂಸ್ಕಾರ ಉಳಿದಿದೆ. ಅವರು ಭಾವನ್ನದ ವೃಕ್ಷವಿದ್ದಂತೆ. ಲಿಂಗೈಕ್ಯರಾದರು ಅವರ ಪ್ರಭಾವ ಇನ್ನು ಇದೆ ಎಂದು ನುಡಿದರು.
ಅನುಭಾವಿ ಪಿ. ರುದ್ರಪ್ಪ ಅವರು ಮಾತನಾಡುತ್ತಾ, ತುರವಿಹಾಳ ಗ್ರಾಮದ ಬ್ಯಾಲಿಹಾಳ ಕುಟುಂಬದ ಹಿರಿಯರು ತತ್ವ ನಿಷ್ಠರಾಗಿದ್ದವರು. ಅವರು ತಮ್ಮ ಮಕ್ಕಳಿಗೆ ಬಸವತತ್ವದ ಪ್ರಜ್ಞೆಯನ್ನು ಮೂಡಿಸಿದ್ದಾರೆ. ಇಂದಿಗೂ ಆ ಮನೆಯಲ್ಲಿ ಕಾಯಕ, ದಾಸೋಹ ಮತ್ತು ಅನುಭಾವ ನಡೆಯುತ್ತಿವೆ.
ಲಿಂಗೈಕ್ಯ ಮಲ್ಲಿನಾಥ ಶರಣರು ಒಬ್ಬ ಶ್ರೇಷ್ಠ ಕೃಷಿಕರಾಗಿ, ಉದ್ಯಮಿಯಾಗಿ ಹಾಗೆಯೇ ಅವರು ಒಬ್ಬ ಶ್ರೇಷ್ಠ ಬಸವತತ್ವ ಪ್ರಚಾರಕರು, ಸಂತರು ಶರಣರಾಗಿಯೂ ಹೋದರು. ಅವರು ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ಬಸವತತ್ವದ ಬಳ್ಳಿಯನ್ನು ಹಬ್ಬಿಸುವಲ್ಲಿ ಯಶಸ್ವಿ ವ್ಯಕ್ತಿಗಳಾಗಿದ್ದರು.
ರುದ್ರಪ್ಪ ಮುಂದುವರೆದು ಮಾತನಾಡುತ್ತಾ, ಬಸವಣ್ಣನವರು ಸೈನ್ಯವನ್ನು ಕಟ್ಟಲಿಲ್ಲ, ಅದಕ್ಕೆ ಬದಲಾಗಿ ಅರಿವಿನ ಮನೆಯನ್ನು ಕಟ್ಟಿದರು. ಆ ಕಟ್ಟಡಕ್ಕೆ ಮಿತಿ ಇಲ್ಲ. ಭಾವ ಮತ್ತು ಆಧ್ಯಾತ್ಮದ ಎತ್ತರ ಯಾರಿಂದಲೂ ಅಳೆಯಲು ಸಾಧ್ಯವಿಲ್ಲ. ತನುವಿನ ಎತ್ತರಕ್ಕೆ ಮಿತಿ ಇದೆ, ಆದರೆ ಲಿಂಗತತ್ವ ಜಾತಿ, ಮತ, ಪಂಥ ವರ್ಗವನ್ನು ಮೀರಿ ಬೆಳೆಯುವಂತದ್ದು ಎಂದು ನುಡಿದರು.
ಪ್ರಾಸ್ತಾವಿಕವಾಗಿ ಅನುಭಾವಿ ಅಮರೇಶಪ್ಪ ಬಳ್ಳಾರಿ ಅವರು ಮಾತನಾಡಿದರು.
ಜಯಂತಿ ಅಂಗವಾಗಿ ಗಾಂಧೀಜಿ, ಶಾಸ್ತ್ರೀಜಿ ಅವರನ್ನು ಸಹ ಸ್ಮರಿಸಲಾಯಿತು.
ವಚನ ಪ್ರಾರ್ಥನೆಯನ್ನು ಬಸವರಾಜಪ್ಪ ವರದಾಪುರ ಹಾಗೂ ನೀಲಮ್ಮ ಹೋಗರಾನಾಳ ಅವರು ನಡೆಸಿಕೊಟ್ಟರು.

ವೇದಿಕೆಯಲ್ಲಿ ರೈತ ಮುಖಂಡ ಹನುಮನಗೌಡ ಬೆಳಗುರ್ಕಿ, ಶರಣೇಗೌಡ ಗೊರೆಬಾಳ, ನಾಗಭೂಷಣ ನವಲಿ, ಕರೇಗೌಡ ಕುರುಕುಂದ, ಗಂಗಮ್ಮ ಪಿ. ಕುರಕುಂದ, ಸುಮಂಗಲ ಚಿಂಚರಕಿ, ಬಸವರಾಜ ಕೋಳಿಹಾಳ, ಅಮರೇಶ ಗಡಹಳ್ಳಿ, ರುದ್ರಪ್ಪ ಹಳ್ಳಿ, ಸಂಗಣ್ಣ ಕಲಬಾವಿ ಉಪಸ್ಥಿತರಿದ್ದರು.
ನೂರಾರು ಬಸವಭಕ್ತರು ಹಾಗೂ ವಸತಿ ನಿಲಯದ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
