‘ಇಡೀ ಸಮುದಾಯವನ್ನು ಅರಿವಿನ  ಮಂಟಪವಾಗಿ ರೂಪಿಸಿದ್ದ ಬಸವಾದಿ ಶರಣರು’

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ :

ಬಸವಾದಿ ಶರಣರು ಅನುಭವ ಮಂಟಪದಲ್ಲಿ ಸೇರಿದ್ದು ಅವರಲ್ಲಿ ಇರುವ ಬೌದ್ಧಿಕ ಮತ್ತು ವೈಚಾರಿಕ ಚಿಂತನೆಗಳ ಉತ್ಕೃಷ್ಟತೆಯಿಂದ ಇಡೀ ಸಮುದಾಯವನ್ನು ಅರಿವಿನ  ಮಂಟಪವಾಗಿ ರೂಪಿಸಿದ್ದರು ಎಂದು ಬಸವಕಲ್ಯಾಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಮೀನಾಕ್ಷಿ ಬಿರಾದಾರ ಹೇಳಿದರು.

ಕಲ್ಯಾಣ ಕರ್ನಾಟಕ ಭಾಗ ಆರ್ಥಿಕ , ಔದ್ಯೋಗಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮುಂದುವರಿಕೆಗೆ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗಬೇಕು ಎಂದರು.

ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಚಿಗುರು ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣವು ಪ್ರಾದೇಶಿಕ ಅಸಮಾನತೆ ನೀಗಿಸುವ ಮಾಧ್ಯಮವಾಗಿದೆ ಎಂದರು.

ಶಿಕ್ಷಣದ ಮೂಲ ಉದ್ದೇಶವೇ ಎಲ್ಲ ಬಗೆಯಲ್ಲೂ ಸಮಾನತೆ ತರುವುದಾಗಿದೆ. ಪದವಿಗಳು ಕೇವಲ ಸರ್ಟಿಫಿಕೇಟ್ ಆಗಿರದೆ, ಸ್ಪರ್ಧಾತ್ಮಕ ಯುಗದಲ್ಲಿ ಬದುಕು ಕಟ್ಟಿಕೊಳ್ಳಲು ಆಧಾರವಾಗಬೇಕು. ವ್ಯಕ್ತಿಯ ಸಂವರ್ಧನೆಗಾಗಿ ಗಂಭೀರವಾದ ಓದು ಅಧ್ಯಯನ ನಡೆಯಲಿ  ಎಂದರು.

ಬಸವಾದಿ ಶರಣರು ಅನುಭವ ಮಂಟಪದಲ್ಲಿ ಸೇರಿದ್ದು ಅವರಲ್ಲಿ ಇರುವ ಬೌದ್ಧಿಕ ಮತ್ತು ವೈಚಾರಿಕ ಚಿಂತನೆಗಳ ಉತ್ಕೃಷ್ಟತೆಯಿಂದ ಇಡೀ ಸಮುದಾಯವನ್ನು ಅರಿವಿನ  ಮಂಟಪವಾಗಿ ರೂಪಿಸಿದ್ದರು ಎಂದರು.

ರಂಗಕರ್ಮಿ ಉಮೇಶ ಪಾಟೀಲ ಮಾತನಾಡಿ, ಸಮಕಾಲೀನ ಬಿಕ್ಕಟ್ಟು ಮತ್ತು ಸಂದಿಗ್ಧತೆಗಳಿಗೆ ರಂಗಭೂಮಿ ಮತ್ತು ನಾಟಕಗಳು ಕನ್ನಡಿಯಾಗಿವೆ.  ಸಮಾಜದ ಎಚ್ಚರಕ್ಕಾಗಿ ನಾಟಕಗಳು ಬೇಕು. ಸಾಮಾಜಿಕ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗ್ರಹಿಸಿ  ವಿಮರ್ಶಿಸುವ ಗುಣ ಕಲೆಗಳಿಗಿದೆ ಎಂದರು.

ಕನ್ನಡದಲ್ಲಿ ಹಲವು ನಾಟಕಗಳು ಬಂದಿವೆ. ಸಂಕ್ರಾಂತಿ, ತಲೆದಂಡ, ಮಹಾಚೈತ್ರ, ಕೆಟ್ಟಿತ್ತು ಕಲ್ಯಾಣ, ಮುಂದಣ ಕಥನ, ಕಲ್ಯಾಣಪುರ ಈ ಎಲ್ಲ ರಂಗ ಪಠ್ಯಗಳ ಕೇಂದ್ರ ಕಲ್ಯಾಣ ಕ್ರಾಂತಿ ಮತ್ತು ಬಸವಣ್ಣ. ಕೆವೈಎನ್ ಮತ್ತು ಸಿ. ಬಸವಲಿಂಗಯ್ಯ ಅವರ ‘ವಚನ ಕಲ್ಯಾಣ’ ದೊಡ್ಡ ರಂಗರೂಪ ಹೊತ್ತು ಬರುತ್ತಿದೆ ಎಂದರು.

ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ :

ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಲೆ, ಮಾನವಿಕಗಳ ಮತ್ತು ಕೌಶಲ್ಯ ಆಧಾರಿತ ಶಿಕ್ಷಣ ಈ ಕಾಲದಲ್ಲಿ ಅಗತ್ಯವಾಗಿದೆ. ಸರ್ವೊತೋಮುಖ ಬೆಳವಣಿಗೆಗೆ  ಅಂತರ್ಶಿಸ್ತೀಯ ಜ್ಞಾನ ಮುಖ್ಯ, ಇದರಿಂದ ವಿದ್ಯಾರ್ಥಿಗಳ ಈ ಯುಗದ  ಭವಿಷ್ಯ ಭದ್ರವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಡಿಪಿಸಿ ನಿರ್ದೇಶಕ ಬಸವರಾಜ ತೊಂಡಾರೆ ಅವರು ಮಾತನಾಡಿ, ಗುಣಮಟ್ಟದ ಶಿಕ್ಷಣ ಮತ್ತು ಸೃಜನಾತ್ಮಕ ಕೆಲಸಗಳು ಶಿಕ್ಷಣ ಸಂಸ್ಥೆಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹೊಸ ಅಸ್ತಿತ್ವ ಒದಗಿಸುತ್ತವೆ. ಶಿಕ್ಷಣವು ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸುವ ಮಾಧ್ಯಮಗಳಾಗಿವೆ.

ನಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉನ್ನತ ಮಟ್ಟದ ಸಾಧನೆ ಮಾಡಲಿ ಎಂದರು.

ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ಸಾಮಾಜಿಕ ಪ್ರಜ್ಞೆ ಮೂಡಿಸುವ, ಸಾಂಸ್ಕೃತಿಕ ಯಜಮಾನಿಕೆಯನ್ನು ಪ್ರತಿರೋಧಿಸುವ, ಸೂಕ್ಷ್ಮತೆ ಬೆಳೆಸುವ, ಲೋಕವನ್ನು ಅರಿಯುವ ದಾರಿಯಾಗಿ ಶಿಕ್ಷಣ ಮತ್ತು ರಂಗಭೂಮಿ ಇವೆ. ಸಮಾಜ, ರಾಜಕಾರಣ, ಮತ್ತು ವ್ಯವಸ್ಥೆಗಳನ್ನು ಮರುವ್ಯಾಖ್ಯಾನಿಸುವ, ವಿಮರ್ಶೆ ಮಾಡುವ ಕೆಲಸ ಕಲೆಗಳಿಂದ ಸಾಧ್ಯ ಎಂದರು.

ಎಲ್ಲ ಜೀವಿಗಳ ಜೀವನ ವಿಧಾನ ಅರಿಯುವ, ಸಮಾಜ, ಜನಸಮುದಾಯದ ಕುರಿತ ಕಾಳಜಿ, ಪರಿಸರ ಪ್ರಜ್ಞೆ ಮೂಡಿಸುವ ಕೆಲಸ ಶಿಕ್ಷಣದಿಂದ ನಡೆಯುತ್ತದೆ   ಎಂದರು.

ಕನ್ನಡ ನಾಟಕ ಸಾಹಿತ್ಯ ಮತ್ತು ರಂಗಭೂಮಿ ಪರಂಪರೆಯಲ್ಲಿ ವಚನ ಚಳುವಳಿ ಮತ್ತು ಬಸವಾದಿ ಶರಣರ ಬದುಕಿನ ಕಥನ ಬಹು ನೆಲೆಗಳಲ್ಲಿ ನಿರೂಪಣೆಗೊಂಡಿದೆ ಎಂದರು.

ರಂಗಕರ್ಮಿ ಉಮೇಶ ಪಾಟೀಲ ಅವರ ಬರೆದು ನಿರ್ದೇಶಿಸಿರುವ ‘ಟ್ಯಾಬ್ಲೆಟ್’ ನಾಟಕ ಮತ್ತು ವೈಶಾಲಿ ಅಭಿನಯದ  ‘ಚಂದ್ರಮತಿಯ ಪ್ರಲಾಪ’ ನಾಟಕಗಳ ಏಕಪಾತ್ರಾಭಿನಯ ಗಮನ ಸೆಳೆದವು.

ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ, ಸಹಕಾರ್ಯದರ್ಶಿ ಬಸವರಾಜ ಬಾಲಕಿಲೆ, ಸುನಿಲ ರಾಯವಾಡೆ, ನಿರ್ದೇಶಕರಾದ ವೀರಣ್ಣ ಹಲಶೆಟ್ಟೆ, ಭದ್ರಿನಾಥ ಪಾಟೀಲ, ಮಲ್ಲಿಕಾರ್ಜುನ ಚಿರಡೆ, ಪುಷ್ಪಾ ಮಾಮಾ, ಬಿಡಿವಿಸಿ ಕಾರ್ಯದರ್ಶಿ ನಾಗಯ್ಯ ಸ್ವಾಮಿ, ಕೋಶಾಧ್ಯಕ್ಷ ಶಿವರಾಜ ಶಾಶೆಟ್ಟೆ, ವಿಶ್ವಸ್ಥರಾದ ಸೋಮಶೇಖರಯ್ಯ ವಸ್ತ್ರದ, ಮಾಯಾ ಮುರಾಳೆ, ಡಾ. ರುದ್ರಮಣಿ ಮಠಪತಿ, ಡಾ. ಶಾಂತಲಾ ಪಾಟೀಲ ಇದ್ದರು. ಡಾ. ಬಸವರಾಜ ಖಂಡಾಳೆ ನಿರೂಪಿಸಿದರು. ಸಂಗೀತಾ ಮಹಾಗಾವೆ ಸ್ವಾಗತಿಸಿದರು. ಜಗದೇವಿ ಜವಳಗೆ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *