ಹಡಪದ ಲಿಂಗಮ್ಮ ವಚನ ವಿಶ್ಲೇಷಣೆ: ಅಂಗವು ಲಿಂಗವೇ ಆಗಿ ಶರಣನೆನಿಸಿ…

ಬಸವ ಮೀಡಿಯಾ
ಬಸವ ಮೀಡಿಯಾ

ಗುಳೇದಗುಡ್ಡ:

ಶರಣ ಶ್ರೀಕಾಂತ ತಿಪ್ಪಣ್ಣಪ್ಪ ಕಂಗಳ ಅವರ ಮನೆಯಲ್ಲಿ ಶನಿವಾರ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ ಬಸವ ಕೇಂದ್ರದ ವತಿಯಿಂದ ನಡೆಯಿತು.

ಕೆಳಗಿನ ಹಡಪದ ಲಿಂಗಮ್ಮ ತಾಯಿಯ ವಚನವನ್ನು ಚಿಂತನೆಗಾಗಿ ಆಯ್ದುಕೊಳ್ಳಲಾಗಿತ್ತು.

ಕದಳಿಯ ಬನದೊಳಗಿರುವ ಲಿಂಗವ

ಅರಸಿದರೆ ಕಾಣಬಾರದು

ನೋಡಿದಡೆ ನೋಟಕ್ಕಿಲ್ಲ

ಹಿಡಿದರೆ ಹಸ್ತಕ್ಕೆ ಇಲ್ಲ    

ನೆನೆದಡೆ ಮನಕ್ಕಗೋಚರ

ಇಂತು ಮಹಾಘನವ ಹೃದಯದಲ್ಲಿ ನೆಲೆಗೊಳಿಸಿದ  ಶರಣರ ಕಂಗಳಲ್ಲಿ ಹೆರೆ ಹಿಂಗದೆ ನೋಡಿ

ಅವರ ಅಂಘ್ರಿಯಲ್ಲಿ ಐಕ್ಯವಾದೆನು, ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ.

ಚಿಂತನೆಯ ಪ್ರಾರಂಭದಲ್ಲಿ ಪ್ರೊ. ಶ್ರೀಕಾಂತ ಗಡೇದ ಅವರು ಈ ವಚನವನ್ನು ಕುರಿತು ಮಾತನಾಡುತ್ತಾ, “ಶರಣೆ ಹಡಪದ ಲಿಂಗಮ್ಮ ತಾಯಿಯವರು ಈ ವಚನವನ್ನು ಬರೆದಿದ್ದು, ಅವರ ವಚನಾಂಕಿತ ಅಪ್ಪಣ್ಣಪ್ರಿಯ ಚನ್ನಬಸವಣ್ಣ ಎಂಬುದಾಗಿದೆ. ಅವರ ಸುಮಾರು 114 ವಚನಗಳು ಸಿಕ್ಕಿವೆ. ಗುರುರಾಜ ಚಾರಿತ್ರ್ಯಎಂಬ ಕಾವ್ಯದಲ್ಲಿ ಅವರ ಉಲ್ಲೇಖವಿದೆ. ಶರಣರ ಸಂಘದಲ್ಲಿ ಬಂದು ಕುಲದ ಸೂತಕವ ಕಳೆದುಕೊಂಡೆ ಎಂದು ಹೇಳಿಕೊಂಡಿದ್ದಾರೆ.

ಅವರ ವಚನಗಳಲ್ಲಿ ಹೆಚ್ಚಾಗಿ ತತ್ವ ಬೋಧೆ ಕಂಡುಬರುತ್ತದೆ. ಇಲ್ಲಿಯೂ ಸಹ ಅದನ್ನೇ ಕಾಣಬಹುದಾಗಿದೆ. ವಿಶ್ವಭರಿತವಾದ ಮಹಾಲಿಂಗವು ತನ್ನಲ್ಲಿಯೇ ಇದ್ದು ಸಾಧನೆಯಿಂದ ಅಲ್ಲದೆ ಹೊರನೋಟ ಮಾತ್ರಕ್ಕೆ ಕಾಣಲಾರದು. ಒಳಗೆ ಕಾಣಬೇಕಾದರೆ ಶರಣರ ಸಂಗಬೇಕು. ಅವರ ನಡೆ ನುಡಿಗಳು ನಮ್ಮಲ್ಲಿ ಅಳವಡಬೇಕು ಅಂದಾಗ ಮಾತ್ರ ಲಿಂಗದಲ್ಲಿ ಬೆರೆಯಲು ಸಾಧ್ಯವಿದೆ ˌಎನ್ನುವುದು ಲಿಂಗಮ್ಮ ತಾಯಿಯ ನಂಬಿಕೆಯಾಗಿದೆ  “ಎಂದು ಹೇಳಿದರು.

ಪ್ರೊ. ಸುರೇಶ ರಾಜನಾಳ ಅವರು ಮಾತನಾಡುತ್ತಾ, “ಶರಣ ಸಂಕುಲದಲ್ಲಿಯೇ ಎದ್ದು ಕಾಣುವ ಹೆಸರು ಲಿಂಗಮ್ಮ ತಾಯಿಯವರದು. ಅಂಗದ ಮೇಲೆ ಲಿಂಗವನ್ನು ಧರಿಸಿ ˌತನ್ನಂಗದಲ್ಲಿ ಅದನ್ನು ಆಚಾರದಲ್ಲಿ ಅಳವಡಿಸಿಕೊಂಡವರು. ಮಹಾಘನವಾದ ಲಿಂಗವು ಅವರಲ್ಲಿ ಅಳವಟ್ಟಾಗಲು ಯಾವ ಅಹಂಕಾರಕ್ಕೂ ಒಳಪಡದೆˌ ವಿನೀತಳಾಗಿ ಶರಣರ ಪಾದಗಳಲ್ಲಿಯೇ ತನ್ನ ಇರುವಿಕೆಯನ್ನು ತೋರಿದವಳು. ಅಪ್ಪಣ್ಣನವರಿಗೆ ತಕ್ಕ ಸತಿಯಾಗಿˌ ಉಳಿದ ಶರಣರಿಂದ ಚಾರು ಗುರುಭಕ್ತೆ ಲಿಂಗಮ್ಮ ಎಂಬ ಕೀರ್ತಿಗೆ ಭಾಜನವಾಗಿˌ ಲಿಂಗದ ಇರುವಿಕೆಯನ್ನು ಹೊರಗಡೆ ಸ್ಥಾಪಿಸದೆˌ ಮನ ಮತ್ತು ಭಾವಗಳಲ್ಲಿ ಅಳವಡಿಸಿಕೊಳ್ಳಬೇಕು. ಅದು ನಿಜವಾದ ಲಿಂಗ ದರ್ಶನ. ಅಲ್ಲಿಂದಲೇ ಲಿಂಗೈಕ್ಯ ಸ್ಥಿತಿ ಎಂಬುದು ಶರಣೆ ಲಿಂಗಮ್ಮನವರ ನಿಲುವಾಗಿದೆ ಎಂದು ತಿಳಿಸಿದರು.

ಡಾ. ಗಿರೀಶ ನೀಲಕಂಠಮಠ ಅವರು ಈ ವಚನವನ್ನು ವಿವರವಾಗಿ ವಿಶ್ಲೇಷಿಸುತ್ತ, ಇತರ ಶರಣರ ವಚನಗಳ ಉದಾಹರಣೆಯೊಂದಿಗೆˌ ಲಿಂಗಮ್ಮ ತಾಯಿಯ ಅನುಭವದ ಎತ್ತರವನ್ನು ಹಾಗೆಯೇ ಅವರ ಕವಿತಾ ಶಕ್ತಿಯನ್ನು ವಿವರಿಸಿ ಹೇಳಿದರು.

ಕದಳಿಯ ಬನದೊಳಗಿರುವ ಲಿಂಗವೆಂದರೆ ಕೇವಲ ಶರೀರ ಮಾತ್ರವಲ್ಲ, ಶರೀರವನ್ನು ಕದಳಿ ಅಂದರೆ ಬಾಳೆದಿಂಡಿಗೆ ಹೋಲಿಸಿದ ಪರಿ ತುಂಬ ಸೊಗಸಾಗಿದೆ. ಬಾಳೆದಿಂಡನ್ನು ಬಿಡಿಸುತ್ತಾ ಹೋದಂತೆ ಅದು ಒಂದೊಂದೇ ಪದರ ಕಳೆದುಕೊಳ್ಳುತ್ತ ಕೊನೆಯಲ್ಲಿ ಏನೊಂದೂ ಉಳಿಯದ ಸ್ಥಿತಿಗೆ ಬರುತ್ತದೆ. ಹಾಗೆಯೇˌಅಷ್ಟಮದˌ ಅರಿಷಡ್ವರ್ಗ ಷಡೂರ್ಮಿಗಳಿಂದ ಕೂಡಿದ ˌಸ್ಥೂಲ ಶರೀರದ ಮೇಲೆ ಇರುವ ಇಷ್ಟಲಿಂಗವು ಅರಿವು ಮತ್ತು ಆಚಾರಗಳಿಂದಾಗಿ ಮನಕ್ಕೆ ಹಾಗೂ ಭಾವಕ್ಕೆ ಸಾಗಿˌ ಎಲ್ಲ ವಿಕಾರಗಳನ್ನು ಕಳೆದುಕೊಂಡು ಪ್ರಾಣ ಲಿಂಗ ಭಾವಲಿಂಗವಾಗಿ ಪರಿವರ್ತಿತವಾಗುತ್ತದೆ. ಆಗ ಅಂಗವು ಲಿಂಗವೇ ಆಗಿ ಶರಣನೆನಿಸಿˌ ಆ ಲಿಂಗದಲ್ಲಿಯೇ ಬಯಲಾಗುತ್ತಾನೆ.

ಅಲ್ಲಿ ಒಳ ಹೊರಗೆ ಎಂಬ ಏನೊಂದು ಇಲ್ಲದ ಸ್ಥಿತಿಯಾಗುತ್ತದೆ. ಇಂತಹ ಸ್ಥಿತಿ ಲಿಂಗಮ್ಮ ತಾಯಿಗೆ ಅಳವಡಲು ಶರಣರ ಸಂಗವೇ ಮುಖ್ಯವೆಂದು ಹೇಳುವಲ್ಲಿˌ ಲಿಂಗಮ್ಮ ತಾಯಿಯ ಮಾತು ತನ್ನ ಹೃದಯದಲ್ಲಿ ಅಗಮ್ಯ ಅಗೋಚರವಾದ ಲಿಂಗ ನೆಲೆಸಿದೆ ಎನ್ನುತ್ತಾಳೆ. ಹೀಗಾಗಿ ಸ್ಥೂಲ ಶರೀರದ ಯಾವ ನ್ಯೂನತೆಯೂ ತನ್ನಲ್ಲಿಲ್ಲ ಎಂಬುದನ್ನು ಬಹು ವಿನಯದಿಂದ ಸ್ಪಷ್ಟಪಡಿಸುತ್ತಾಳೆ” ಎಂದು ವಿವರಿಸಿದರು.

ಮುದ್ದೇಬಿಹಾಳದ ಬಸವ ಕೇಂದ್ರದ ಶರಣ ನಾಗರಾಳ ಅವರು ಸಮಾರೋಪಗೈಯುತ್ತ, ˌಶರಣರು ನುಡಿದಂತೆ ನಡೆದರು. ವಿಶ್ವವನ್ನೆಲ್ಲ ವ್ಯಾಪಿಸಿದ ಆ ಲಿಂಗದ ಇರವು ಸಕಲ ಜೀವರಾಶಿಗಳಲ್ಲಿದೆ ಎಂದು ಶರಣರು ಬಲವಾಗಿ ನಂಬಿದ್ದರಿಂದ, ಅವರಿಗೆ ಭಿನ್ನ ಭೇದ ಕಾಣಿಸಲಿಲ್ಲ.

ಅಂತೆಯೇ ಅನುಭವ ಮಂಟಪದಲ್ಲಿ ಸ್ತ್ರೀ ಪುರುಷರೆನ್ನದೆ ಮೇಲು ಕೀಳೆನ್ನದೆ ಒಂದಾಗಿ ಬದುಕಲು ಸಾಧ್ಯವಾಯಿತು. ಅವರ ಅಂತರಂಗದ ಬದುಕೇ ವಚನಗಳಲ್ಲಿ ಮೂಡಿ ಜಗತ್ತಿನ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ಎನಿಸಿತು. ಅಂಗದ ಅರ್ಥವನ್ನು ಗ್ರಹಿಸಿದರೆ ಈ ಜಗತ್ತೇ ಸರ್ವಸಮಾನತೆಯ ತೊಟ್ಟಿಲಾಗುತ್ತದೆ ಅಂತಾಗಲು ಈ ಮಹಾಮನೆ ಕಾರ್ಯಕ್ರಮಗಳು ಸಹಾಯಕವಾಗುತ್ತವೆ” ಎಂದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಳ್ಳಿಗುಡ್ಡ ಗ್ರಾಮದ ಶರಣ ಸಿ. ಬಿ. ಮೆಣಸಿನಕಾಯಿ, ನಿವೃತ್ತ ಶಿಕ್ಷಕರು ಹಾಗೂ ಅವರ ಸಹಚರರು ವಚನಗಳನ್ನು ಹಾಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಜಯಶ್ರೀ ಬರಗುಂಡಿ ಶ್ರೀದೇವಿ ಶೇಖಾ ಹಾಗೂ ವಿಶಾಲಾಕ್ಷಿ ಗಾಳಿಯವರಿಂದ ವಚನ ಪ್ರಾರ್ಥನೆ ನಡೆಯಿತು. ಮುರುಗೇಶ ಶೇಖಾ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತ ಹಾಗೂ ಶರಣು ಸಮರ್ಪಣೆಯನ್ನು ಮಾಡಿದರು.

ಮಹಾಮನೆ ಒಡೆಯರಾದ ನೇಯ್ಗೆ ಕಾಯಕದ ಶ್ರೀಕಾಂತ ಕಂಗಳ ಅವರ ನಾಲ್ಕು ಕೈಮಗ್ಗಗಳ ನೆಯ್ಗೆಮನೆಯವರು ಅಲ್ಲದೆ ಮುದ್ದೇಬಿಹಾಳ, ಕಳ್ಳಿಗುಡ್ಡ ಗ್ರಾಮದ ಶರಣರ ಆಗಮನದಿಂದ ತುಂಬಿತ್ತು.

ಪುತ್ರಪ್ಪ ಬೀಳಗಿ, ರಾಚಣ್ಣ ಕೆರೂರ, ಬಸವರಾಜ ಖಂಡಿ, ಮಹಾಲಿಂಗಪ್ಪ ಕರನಂದಿ, ಶಿವಯೋಗೆಪ್ಪ ಕೊಣ್ಣೂರ, ಮಹಾಗುಂಡಪ್ಪ ಅರಗಂಜಿ, ರಾಂಪುರ ಸಹೋದರರು,  ಚಂದ್ರಶೇಖರ್ ತೆಗ್ಗಿ,   ಬಸಲಿಂಗಯ್ಯ ಕಂಬಾಳಿಮಠ, ಸಿದ್ದಯ್ಯ  ರೇವಣಸಿದ್ದೇಶ್ವರಮಠ,   ದಾನಪ್ಪ ಬಂಡಿ, ದಾನಮ್ಮ ಕುಂದರಗಿ, ದಾಕ್ಷಾಯಿಣಿ ತೆಗ್ಗಿ, ಕಂಗಳ ಅವರ ಬಂಧು ಬಳಗ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *