ರಾಯಚೂರು ಶಿಬಿರದ ಎರಡನೇ ದಿನದ ವರದಿ
ರಾಯಚೂರು
ರಾಯಚೂರಿನಲ್ಲಿ ನಡೆದ ಬಸವ ಶಕ್ತಿ ಶಿಬಿರದ ಎರಡನೇ ದಿನದ ಗೋಷ್ಠಿಗಳು ಚುನಾವಣೆಗಳಲ್ಲಿ ಬಸವ ಸಂಘಟನೆಗಳು ಸಕ್ರಿಯವಾಗುವ ಚರ್ಚೆಯಿಂದ ಶುರುವಾಯಿತು.
ಮೊದಲು ಮಾತನಾಡಿದ ವಿಜಯಪುರ ರಾಷ್ಟ್ರೀಯ ಬಸವಸೇನೆಯ ರವಿಕುಮಾರ್ ಬಿರಾದಾರ್ ಲಿಂಗಾಯತ ಧರ್ಮ, ಸಂಸ್ಕೃತಿ ಹಾಳು ಮಾಡಲು ಆರೆಸ್ಸೆಸ್ ಟೂಲ್ ಕಿಟ್ ಬಳಸುತ್ತಿದೆ.

ಇದರ ಮೂಲಕ ಬಸವಣ್ಣ ಹಿಂದೂ ಧರ್ಮ ಸುಧಾರಕ, ಲಿಂಗಾಯತ ಧರ್ಮ ಸ್ಥಾಪಿಸಲಿಲ್ಲ, ಕಲ್ಯಾಣ ಕ್ರಾಂತಿಯೂ ನಡೆಯಲಿಲ್ಲ, ವಚನಗಳು ವೇದ ಉಪನಿಷತ್ತುಗಳ ಭಾಗ, ಲಿಂಗಾಯತ ಮಠಾಧೀಶರನ್ನು ನಿಂದನೆ, ಬಸವ ಅನುಯಾಯಿಗಳನ್ನು ತಾಲಿಬಾನಿಗಳಿಗೆ ಹೋಲಿಸುವುದು ಮುಂತಾದ ಅಪಪ್ರಚಾರ ಮಾಡುತ್ತಿದ್ದಾರೆ.
ಇದನ್ನು ತಡೆಗಟ್ಟಿ, ಧರ್ಮ ಮಾನ್ಯತೆ ಪಡೆಯಲು, ಲಿಂಗಾಯತರು ಸಂಘಟಿತರಾಗಿ ರಾಜಕೀಯ ಶಕ್ತಿ ಬೆಳೆಸಿಕೊಳ್ಳಬೇಕು.
ಪಂಚ ಪೀಠಗಳಲ್ಲಿ ರಾಜಕೀಯ ಪ್ರಜ್ಞೆ ಇರುವುದರಿಂದ ಮುಖ್ಯಮಂತ್ರಿ ಕೂಡ ಅವರ ಮಾತು ಕೇಳುತ್ತಾರೆ. ಆದರೆ ಲಿಂಗಾಯತ ಸಮುದಾಯ ತನಗಿರುವ ಶಕ್ತಿ, ಸಾಮರ್ಥ್ಯ ಬಳಸಿಕೊಳ್ಳುತ್ತಿಲ್ಲ.
ಬೂತ್ ಮಟ್ಟದಲ್ಲಿ ಸಕ್ರಿಯರಾಗಿ ಬಸವ ಸಂಘಟನೆಗಳು ಬಸವ ವಿರೋಧಿ ರಾಜಕಾರಣಿಗಳನ್ನು ವಿರೋಧಿಸಬೇಕು. ಬಸವಣ್ಣನವರ ವಿಚಾರಕ್ಕೆ ಬಂದರೆ ಸುಮ್ಮನಿರುವುದಿಲ್ಲ ಎಂದು ರಾಜಕಾರಣಿಗಳಿಗೆ ಎಚ್ಚರಿಕೆ ನೀಡಬೇಕು.
ಬೂತ್, ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಹೊಸ ಲಿಂಗಾಯತ ನಾಯಕತ್ವದ ಅಗತ್ಯವಿದೆ, ಎಂದರು.
ಇದೇ ವಿಷಯದ ಮೇಲೆ ಮಾತನಾಡಿದ ಬಸವ ಪ್ರಚಾರಕ ಶರಣಪ್ಪ ಸಜ್ಜನರ್ ಕನ್ನೇರಿ ಸ್ವಾಮಿಯಂತವರಿಗೆ ಅದೇ ಭಾಷೆಯಲ್ಲಿ ಉತ್ತರ ಕೊಡಬೇಕು. ಲಿಂಗಾಯತರ ಮೇಲೆ ನಡೆಯುತ್ತಿರುವ ಸಾಂಸ್ಕೃತಿಕ, ರಾಜಕೀಯ ದಾಳಿಯನ್ನು ಬಸವ ಸಂಘಟನೆಗಳು ಉಗ್ರವಾಗಿ ಪ್ರತಿಭಟಿಸಬೇಕು ಎಂದರು.
ಸಂವಾದದಲ್ಲಿ ಭಾಗವಹಿಸಿದ ಪಿ ರುದ್ರಪ್ಪ ಬಸವ ತತ್ವದ ಅಭ್ಯರ್ಥಿಗಳನ್ನು ಬೆಂಬಲಿಸಬೇಕು. ಅದಕ್ಕೆ ಪ್ರತಿ ಬೂತಿನಲ್ಲಿ ನಮ್ಮದೇ ಒಂದು ಗುಂಪು ತಯಾರಾಗಬೇಕು. ಅದಕ್ಕೆ ಬೇಕಾದ ಕಾರ್ಯಕರ್ತರನ್ನು ಗುರುತಿಸಿ ತರಬೇತಿ ನೀಡಬೇಕು ಎಂದರು.
ಲಿಂಗಾಯತ ಚಳುವಳಿಯ ನಿರೂಪಣೆಯ ಬಗ್ಗೆ ದಿನದ ಎರಡನೇ ಗೋಷ್ಠಿ ನಡೆಯಿತು.

ಲಿಂಗಾಯತ ಧರ್ಮದ ಮಾನ್ಯತೆಯ ಹೋರಾಟವನ್ನು ಸಮಾಜಕ್ಕೆ ಸರಳವಾಗಿ ತಿಳಿಸಿಕೊಡುವ ಅಗತ್ಯವಿದೆ ಎಂದು ಹಗರಿಬೊಮ್ಮನಹಳ್ಳಿಯ ಪ್ರಾಧ್ಯಾಪಕ ಡಾ ಅಕ್ಕಿ ಬಸವೇಶ ಹೇಳಿದರು.
ಲಿಂಗಾಯತ ಅರಿವನ್ನೇ ಗುರುವಾಗಿಸಿಕೊಂಡ ಅಂತಃಕರಣದ ಧರ್ಮ. ದೈವತ್ವವನ್ನೇ ಪ್ರಶ್ನಿಸಿ ಮನುಷ್ಯತ್ವವನ್ನೇ ಆ ಎತ್ತರಕ್ಕೇರಿಸಿದ ಧರ್ಮ.
ಮನುಷ್ಯ ಮನುಷ್ಯರನ್ನು ಅಪ್ಪಿಕೊಳ್ಳುವ ಧರ್ಮ ಲಿಂಗಾಯತ. ಶರಣರದು ಕೊಲ್ಲುವ ಭಾಷೆಯಲ್ಲ, ಗೆಲ್ಲುವ ಭಾಷೆ.
ಲಿಂಗಾಯತ ಧರ್ಮವನ್ನು ನಿರೂಪಿಸಬೇಕಾದರೆ ಅದನ್ನು ವೈಚಾರಿಕ ಧರ್ಮವನ್ನಾಗಿ ಪ್ರತಿಪಾದಿಸಬೇಕು.
ಭಕ್ತಿಯನ್ನೇ ಬಂಡವಾಳ ಮಾಡಿಕೊಂಡ ದೇವಸ್ಥಾನಗಳು ವ್ಯಾಪಾರ ಕೇಂದ್ರಗಳಾಗಿವೆ. ಅವುಗಳಲ್ಲಿ ದೇವರನ್ನು ಸಂತೈಸುವ ಕೆಲಸವಾಗಿದೆ ಹೊರತು ನೊಂದವರನ್ನು ಸಂತೈಸುವ ಕೆಲಸವಾಗಿಲ್ಲ. ಲಿಂಗಾಯತರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಬೇಕು.
ಜೊತೆಗೆ ನಮ್ಮ ವಿಶಿಷ್ಟ ಸಾಂಸ್ಕೃತಿಕ ಪರಂಪರೆ, ಇತಿಹಾಸದ ಬಗ್ಗೆಯೂ ಜಾಗೃತಿ ಮೂಡಿಸಬೇಕು. ಕಳೆದ ನೂರು ವರ್ಷಗಳಿಂದ ನಡೆಯುತ್ತಿರುವ ಲಿಂಗಾಯತ ಧರ್ಮದ ಹೋರಾಟ ಜನರಿಗೆ ಗೊತ್ತಾಗಬೇಕು, ಎಂದರು.
ಲಿಂಗಸೂರಿನ ಬಸವ ಪ್ರಚಾರಕ ಶಿವಪ್ಪ ಸಕ್ರಿ ವೈದಿಕ ಪ್ರಭಾವ ಲಿಂಗಾಯತ ಅಸ್ಮಿತೆಯನ್ನು ನಾಶ ಮಾಡುತ್ತಿದೆ. ಇದನ್ನು ಒಗ್ಗಟ್ಟಿನಿಂದ ಪ್ರತಿರೋಧಿಸಬೇಕು. ಲಿಂಗಾಯತ ಪ್ರತ್ಯೇಕ ಧರ್ಮವಾದರೆ ಸಮಾಜದ ಮಕ್ಕಳ ಭವಿಷ್ಯಕ್ಕೆ ಆಗುವ ಲಾಭದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು, ಎಂದರು.
ಡಾ ಸರ್ವಮಂಗಳ ಸಕ್ರಿ ಹಾಗೂ ಪಿ ರುದ್ರಪ್ಪ ಅನುಭವ ಮಂಟಪ ಜಾಗೃತಿ ಶಿಬರ ನಡೆಸಿಕೊಟ್ಟರು.

12ನೇ ಶತಮಾನದಲ್ಲಿ ಶರಣರು ಹುಟ್ಟುಹಾಕಿದ ಅನುಭವ ಮಂಟಪ ಕಲ್ಲಿನ ಕಟ್ಟಡವಾಗಿರಲಿಲ್ಲ ಜ್ಞಾನದ, ಅನುಭಾವದ ಮಂಟಪ ವೇದಿಕೆಯಾಗಿತ್ತು. ಈಗ ಬಸವ ಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪ ಬಸವಾನಿಯಾಯಿಗಳ ನಿಯಂತ್ರಣದಲ್ಲಿರಬೇಕು ಎಂದು ಸರ್ವಮಂಗಳ ಸಕ್ರಿ ಹೇಳಿದರು.
ಪಿ ರುದ್ರಪ್ಪನವರು ಆರು ಅಂತಸ್ತು, 770 ಅಮರಗಣಂಗಳ ಕಂಬವಿರುವ ನೂತನ ಅನುಭವ ಮಂಟಪದ ಪರಿಚಯ ಮಾಡಿಕೊಟ್ಟು, ಶೂದ್ರ ವರ್ಗವನ್ನು ಜಾಗೃತಗೊಳಿಸುವ ಸಾಮರ್ಥ್ಯ ಅದಕ್ಕಿದೆ ಎಂದು ಹೇಳಿದರು. ಬಸವಾದಿ ಶರಣರ ಸೈದ್ಧಾಂತಿಕ ವಿರೋಧಿಗಳಿಂದ ಅದನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ, ಅದರ ಬಗ್ಗೆ ಬಸವಾನಿಯಾಯಿಗಳು ಜಾಗೃತರಾಗಿರಬೇಕೆಂದು ಹೇಳಿದರು.
ಕೊನೆಯಲ್ಲಿ ಅನುಭವ ಮಂಟಪ ನಿರ್ವಹಣೆ, ಸಂರಕ್ಷಣೆಗೆ ಸಿದ್ಧವಾಗುತ್ತಿರುವ ಸ್ವಯಂ ಸೇವಕ ಪಡೆಗೆ ನೋಂದಣಿ ಕಾರ್ಯ ನಡೆಯಿತು.
ಬಸವ ಮಿಡಿಯಾದ ರವೀಂದ್ರ ಹೊನವಾಡ ಕಾರ್ಯಕ್ರಮ ನಿರ್ವಹಿಸಿದರು.
