ಹತ್ತು ದಿನಗಳ ಯಶಸ್ವೀ ಶರಣ ಸಂಸ್ಕೃತಿ ಉತ್ಸವಕ್ಕೆ ತೆರೆ

ಬಸವ ಮೀಡಿಯಾ
ಬಸವ ಮೀಡಿಯಾ

‘ಶರಣ ಸಂಸ್ಕೃತಿ ಉತ್ಸವ ನಿತ್ಯೋತ್ಸವವಾಗಬೇಕು‘

ಚಿತ್ರದುರ್ಗ :

ಹತ್ತು ದಿನಗಳ ಕಾಲ ಯಶಸ್ವೀಯಾಗಿ ನಡೆದ ಶರಣ ಸಂಸ್ಕೃತಿ ಉತ್ಸವದ ಸಮಾರೋಪ ಸಮಾರಂಭ ನಡೆಯಿತು.

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಈ ಹತ್ತು ದಿನಗಳ ಶರಣ ಸಂಸ್ಕೃತಿ ಉತ್ಸವದ ಯಶಸ್ವಿಗೆ ಕಾರಣರಾದ ಎಲ್ಲಾ ವರ್ಗದ ಶರಣರಿಗೆ ತುಂಬು ಹೃದಯದ ಶರಣಾರ್ಥಿಗಳನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಈ ಉತ್ಸವದ ಯಶಸ್ವಿಗೆ ಕಾರಣರಾದ ಡಾ. ಬಸವಕುಮಾರ ಸ್ವಾಮಿಗಳಿಗೆ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ ಮಾತನಾಡಿ, ಶರಣ ಎಂದರೆ ದೇಹದ ಮೇಲೆ ವ್ಯಾಮೋಹವಿಲ್ಲದೆ ಅಹಂಕಾರವಿಲ್ಲದಿರುವ ವ್ಯಕ್ತಿ.

ಸಂಸ್ಕೃತಿ ಎಂದರೆ ಸಮಾಜ, ನಾಡು ವಿಕಾಸವಾಗುವಂತೆ ಮಾಡಿ ಪರಿಪೂರ್ಣತೆಯೆಡೆಗೆ ನಡೆಯುವುದೇ ಸಂಸ್ಕೃತಿ. ಉತ್ಸವವೆಂದರೆ ಅದು ಹಬ್ಬ ಉಲ್ಲಾಸ ಹಾಗೂ ಎಲ್ಲರನ್ನೂ ಸೇರಿಸು, ಸಂಭ್ರಮಿಸುವ ಶಕ್ತಿ.

ಶರಣ ಸಂಸ್ಕೃತಿ ಉತ್ಸವ ಕೇವಲ ೧೦ ದಿನಗಳಿಗೆ ಸೀಮಿತವಾಗದೆ ಪ್ರತಿದಿನ ನಮ್ಮ ಬದುಕಿನ ಉತ್ಸಾಹವಾಗಬೇಕು ಎಂದು ತಿಳಿಸಿದರು.

ಧಾರವಾಡ-ಗದಗದ ಬ್ರಹ್ಮಕುಮಾರಿಸ್ ಸಂಸ್ಥೆಯ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಜಯಂತಿ ಅಕ್ಕನವರು ಮಾತನಾಡಿ, ನಾವು ಆತ್ಮ ಮತ್ತು ಪರಮಾತ್ಮನನ್ನು ಸೇರಲು ಬಾಲ್ಯದಿಂದಲೇ ಪ್ರಾರಂಭಿಸಿದ್ದೆವು. ಇಂದು ಪ್ರತಿಯೊಬ್ಬ ಶರಣರು ಆಧ್ಯಾತ್ಮಿಕತೆಯನ್ನು ಬೆಳಸಿಕೊಳ್ಳಬೇಕು. ತನ್ನನ್ನು ತಾನು ಅರಿತವರೆ ಶರಣರು. ತನ್ನನ್ನು ತಾನು ಮರೆತವರೆ ಮಾನವರು.

ಅಕ್ಕಮಹಾದೇವಿ ದೇಹ ಮತ್ತು ಆತ್ಮದ ಬಗ್ಗೆ ಹೇಳಿರುವುದನ್ನು ವ್ಯಾಖ್ಯಾನಿಸುತ್ತ ಆತ್ಮಜ್ಯೋತಿ ಇದೆ ಅದನ್ನು ತಾವೇ ಕಾಣಬೇಕು. ದೇವನೊಬ್ಬನೇ, ಆತನೇ ಪರಮಾತ್ಮ ಶಿವ. ಪರಮಾತ್ಮನಿಗೆ ಸಾವಿಲ್ಲ ಅದಕ್ಕೆ ಜ್ಯೋತಿ ರೂಪವನ್ನು ಕೊಡುತ್ತೇವೆ ಎಂದು ನುಡಿದರು.

ಮಾಜಿ ಶಾಸಕ ಜಿ.ಎಸ್. ತಿಪ್ಪಾರೆಡ್ಡಿ ಮಾತನಾಡಿ, ಶ್ರೀಮುರುಘಾಮಠದ ಶರಣ ಸಂಸ್ಕೃತಿ ಉತ್ಸವ ಮೈಸೂರು ದಸರಾಕ್ಕಿಂತ ಕಡಿಮೆ ಇಲ್ಲ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮತ್ತು ಸಮಾಜಮುಖಿ ಕಾರ್ಯಗಳನ್ನು ಶ್ರೀಮಠವು ಮಾಡುತ್ತಾ ಬಂದಿದೆ. ಹಾಗೂ ಇಂತಹ ಉತ್ಸಾಹಗಳಲ್ಲಿ ಭಾಗವಹಿಸಿದ್ದು ನನಗೆ ಸಂತಸ ತಂದಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಚನ್ನಬಸವ ಸ್ವಾಮಿಗಳು, ವಿವಿಧ ಮಠಾದೀಶರು, ಹರಗುರು ಚರಮೂರ್ತಿಗಳು, ಸಾಹಿತಿ ಗಣೇಶ ಅಮೀನಗಡ, ಕನ್ನಡಪರ ಹೋರಾಟಗಾರ, ಪಾಲನೇತ್ರ, ಚಿತ್ರದುರ್ಗದ ಈಶ್ವರ್ ಸ್ಟೀಲ್‌ನ ರುದ್ರೇಶ ಐಗಳ್, ಯಾದವ ಸಮಾಜದ ಸಿ. ಮಹಾಲಿಂಗಪ್ಪ, ಒಕ್ಕಲಿಗ ಸಮಾಜದ ಜಿ.ಎಸ್. ಪರಮೇಶ್ವರಪ್ಪ, ಆರ್ಯವೈಶ್ಯ ಸಮಾಜದ ಎಲ್.ಜಿ. ಶ್ರೀನಿವಾಸ್ ಬಾಬು, ಮೇದಾರ ಸಮಾಜದ ಸಿ.ಬಿ. ಪಾಟೀಲ್, ಜೈನ ಸಮಾಜದ ರಣಜಿತ್ ಜೈನ್, ಜೋಗಿ ಸಮಾಜದ ಡಾ. ಕೆ. ಜಗದೀಶ್, ಗಾಣಿಗ ಸಮಾಜದ ತಿಪ್ಪೇಸ್ವಾಮಿ ಹಾಗೂ ಈಡಿಗ ಸಮಾಜದ ಎಸ್.‌ ಜೀವನ್ ಉಪಸ್ಥಿತರಿದ್ದರು.

ಮಂಗಳೂರಿನ ಮೆಗಾ ಮ್ಯೂಸಿಕ್ ಸ್ಟಾರ್ ಕುದ್ರೋಳಿ ಗಣೇಶ್ ಅವರು ಜಾದೂ ಪ್ರದರ್ಶನ ನಡಸಿಕೊಟ್ಟರೆ, ಶ್ರೀ ವಿಜಯ ಮಹಾಂತೇಶ್ವರ ಮ್ಯೂಸಿಕಲ್ ಎಂಟರ್‌ಟೈನರ್ ತಂಡ, ಕಲರ್ಸ್ ಕನ್ನಡ ವಾಹಿನಿಯ ಕನ್ನಡ ಕೋಗಿಲೆ ಕಾರ್ಯಕ್ರಮದ ವಿಜೇತ ಖಾಸೀಂ ಆಲಿ, ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಹಿನ್ನೆಲೆ ಗಾಯಕ ದ್ಯಾಮೇಶ್, ಸರಿಗಮಪ ಲಿಟಲ್ ಚಾಂಪ್ಸ್ ರನ್ನರ್-ಅಪ್ ಹಿನ್ನೆಲೆ ಗಾಯಕಿ ವಸುಶ್ರೀ, ಜೀ ಕನ್ನಡ ವಾಹಿನಿಯ ಮಹಾನಟಿ ವಿಜೇತೆ ದೀಪಿಕಾ ಹಾಗೂ ಕಾಮಿಡಿ ಕಿಲಾಡಿಗಳು ಕಲಾವಿದ ಪ್ರವೀಣ್ ಗಸ್ತಿ ಹಾಗೂ ಎಸ್.ಜೆ.ಎಂ ಕಾನೂನು ಮಹಾವಿದ್ಯಾಲಯದವರು ಸಾಂಸ್ಕೃತಿಕ ಸಂಭ್ರಮದಲ್ಲಿ ಸಂಗೀತ, ನೃತ್ಯ, ಹಾಸ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಗಾನಯೋಗಿ ಬಳಗದವರು ಪ್ರಾರ್ಥಿಸಿ, ಜಗದೀಶ್ವರಿ ಹಿರೇಮಠ್ ಸ್ವಾಗತಿಸಿ, ಗೀತಾ ಭರಮಸಾಗರ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *