ಬಸವಕಲ್ಯಾಣ :
ಐತಿಹಾಸಿಕ ಬಸವಕಲ್ಯಾಣ ನಗರದಲ್ಲಿ 25ನೇ ಕಲ್ಯಾಣ ಪರ್ವ ಉತ್ಸವ ಹಾಗೂ ರಜತ ಮಹೋತ್ಸವದ ಅಂಗವಾಗಿ ಭವ್ಯ ಮೆರವಣಿಗೆ ಸೋಮವಾರ ಸಂಭ್ರಮದಿಂದ ನಡೆಯಿತು.

ನಗರದ ಐತಿಹಾಸಿಕ ಕೋಟೆಯಿಂದ ಆರಂಭಗೊಂಡ ಮೆರವಣಿಗೆ ಸಹಾಯಕ ಆಯುಕ್ತ ಪ್ರಕಾಶ ಕುದರಿ ಚಾಲನೆ ನೀಡಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯು ಬಸವಣ್ಣನವರ ತತ್ವಾದರ್ಶ, ವಚನ ಸಾಹಿತ್ಯ ಹಾಗೂ ಶರಣ ಸಂಸ್ಕೃತಿಯ ವೈಭವವನ್ನು ಅನಾವರಣಗೊಳಿಸಿತು.
ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಸಹಾಯಕ ಆಯುಕ್ತ ಪ್ರಕಾಶ ಕುದರಿ ಅವರು, ಬಸವಣ್ಣನವರ ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳ ಸಂದೇಶವನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ಆಯೋಜಿಸಿರುವ ಕಲ್ಯಾಣ ಪರ್ವವು ನಾಡಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ಇತಿಹಾಸದಲ್ಲಿ ವಿಶೇಷ ಮಹತ್ವ ಹೊಂದಿದೆ ಎಂದು ಅಭಿಪ್ರಾಯಪಟ್ಟರು.

ಕಲ್ಯಾಣ ಪರ್ವ ಕೇವಲ ಧಾರ್ಮಿಕ ಉತ್ಸವವಲ್ಲ; ಬಸವಣ್ಣನವರ ಕ್ರಾಂತಿಕಾರಿ ವಿಚಾರಧಾರೆ, ಸಾಮಾಜಿಕ ಸಮಾನತೆ ಹಾಗೂ ಮಾನವ ಕಲ್ಯಾಣದ ಆಶಯಗಳನ್ನು ಜನಮಾನಸದಲ್ಲಿ ಬಿತ್ತುವ ಮಹತ್ವದ ವೇದಿಕೆಯಾಗಿದೆ.
ಬಸವಣ್ಣನವರು ಪ್ರತಿಪಾದಿಸಿದ ಕಾಯಕವೇ ಕೈಲಾಸ, ದಾಸೋಹದ ಮಹತ್ವ ಮತ್ತು ಜಾತಿಭೇದವಿಲ್ಲದ ಸಮಸಮಾಜದ ಪರಿಕಲ್ಪನೆ ಇಂದಿಗೂ ಪ್ರಸ್ತುತವಾಗಿವೆ ಎಂಬ ಸಂದೇಶವನ್ನು ಸಾರಿದರು.

ಕಲ್ಯಾಣ ಪರ್ವದ 25 ವರ್ಷಗಳ ಪಯಣವು ಬಸವತತ್ವದ ಪ್ರಸಾರ, ಶರಣರ ವಚನ ಸಾಹಿತ್ಯದ ಪರಿಚಯ ಹಾಗೂ ಸಾಮಾಜಿಕ ಜಾಗೃತಿಯ ನಿರಂತರ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ಯುವಜನರು ಶರಣರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅಸಮಾನತೆ, ಮೂಢನಂಬಿಕೆ ಮತ್ತು ಸಾಮಾಜಿಕ ಅನ್ಯಾಯಗಳ ವಿರುದ್ಧ ಜಾಗೃತರಾಗಬೇಕು. ಇಂತಹ ಉತ್ಸವಗಳು ಧಾರ್ಮಿಕ ಸಾಮರಸ್ಯ, ಸಹೋದರತ್ವ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಬಲಪಡಿಸುತ್ತವೆ ಎಂದು ಅವರು ಹೇಳಿದರು.
ಬೆಳ್ಳಿ ರಥದ ಮೇಲೆ ವಿಶ್ವಗುರು ಬಸವಣ್ಣನವರ ವಚನ ಸಾಹಿತ್ಯ, ಬಸವಣ್ಣನವರ ಬೃಹತ್ ಮೂರ್ತಿ ಹಾಗೂ ಮಾತೆ ಮಹಾದೇವಿಯವರ ಭಾವಚಿತ್ರ ಮೆರವಣಿಗೆಯ ಪ್ರಮುಖ ಆಕರ್ಷಣೆಗಳಾಗಿದ್ದವು.

ಶರಣರ ವೇಷಭೂಷಣ ಧರಿಸಿದ ಮಕ್ಕಳು, ಡೊಳ್ಳು ಕುಣಿತ, ಒಂಟೆ, ಹಲಗೆ ವಾದನ ಹಾಗೂ ಬಸವಭಕ್ತರ ನೃತ್ಯ ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.
ಸಾವಿರಾರು ಬಸವಭಕ್ತರು ಉತ್ಸಾಹದಿಂದ ಪಾಲ್ಗೊಂಡು ರಜತ ಮಹೋತ್ಸವದ ಸಂಭ್ರಮವನ್ನು ಹೆಚ್ಚಿಸಿದರು.
ಈ ಸಂದರ್ಭದಲ್ಲಿ ಬಸವಧರ್ಮ ಪೀಠದ ಪೂಜ್ಯ ಡಾ. ಗಂಗಾಮಾತಾಜಿ, ಪಾಂಡೋಮಟ್ಟಿಯ ಪೂಜ್ಯ ಗುರುಬಸವ ಮಹಾಸ್ವಾಮಿಗಳು, ಜಗದ್ಗುರು ಮಾತೆ ಜ್ಞಾನೇಶ್ವರಿ ಮಾತಾಜಿ, ಪೂಜ್ಯ ಸಿದ್ರಾಮೇಶ್ವರ ಸ್ವಾಮೀಜಿ, ಪೂಜ್ಯ ವಿರತೀಶಾನಂದ ಸ್ವಾಮೀಜಿ ಸೇರಿದಂತೆ ಹಲವು ಪೂಜ್ಯರು ಉಪಸ್ಥಿತರಿದ್ದರು.

ಹುಲಸೂರು ತಹಸೀಲ್ದಾರ್ ಶಿವರಾಜ್ ಮೇತ್ರಿ, ಮೆರವಣಿಗೆ ಸಮಿತಿ ಅಧ್ಯಕ್ಷ ಪ್ರದೀಪ ವಾತಡೆ, ಸಾಹಿತಿ ಸಂಗಮೇಶ ಜವಾದಿ, ರಾಷ್ಟ್ರೀಯ ಬಸವದಳದ ತಾಲೂಕು ಅಧ್ಯಕ್ಷ ರವೀಂದ್ರ ಕೋಳಕುರ, ಹುಲಸೂರು ಬಸವ ಕೇಂದ್ರದ ಅಧ್ಯಕ್ಷ ಆಕಾಶ ಖಂಡಾಳೆ, ರಾಜೇಂದ್ರ ಗಂಧಗೆ, ಜಗನ್ನಾಥ ಖೂಬಾ ಸೇರಿದಂತೆ ಅನೇಕ ಗಣ್ಯರು ಹಾಗೂ ಬಸವಭಕ್ತರು ಭಾಗವಹಿಸಿದ್ದರು.
ಬಸವಣ್ಣನವರ ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯತೆಯ ತತ್ವಗಳನ್ನು ಜನಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದೊಂದಿಗೆ ನಡೆದ 25ನೇ ಕಲ್ಯಾಣ ಪರ್ವದ ರಜತ ಮಹೋತ್ಸವದ ಮೆರವಣಿಗೆಯು ಶರಣ ಸಂಸ್ಕೃತಿಯ ಮಹತ್ವವನ್ನು ಮತ್ತೊಮ್ಮೆ ಸಾರಿತು.


ಬಹಳ ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ವಿಚಾರ ಮಂಟಪ ಹಾಗೂ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ ಜೈ ಬಸವ ಶರಣು ಶರಣಾರ್ಥಿ