ಲಿಂಗಾಯತ ಧರ್ಮ ಮಾನ್ಯತೆಗೆ ಮರು ಪ್ರಸ್ತಾವನೆ ಸಲ್ಲಿಸಲು ಒತ್ತಾಯ

ಸಂಗಮೇಶ ಜವಾದಿ
ಸಂಗಮೇಶ ಜವಾದಿ

ಕಲ್ಯಾಣ ಪರ್ವ ರಜತ ಮಹೋತ್ಸವಕ್ಕೆ ತೆರೆ

ಬಸವಕಲ್ಯಾಣ :

ಬಸವಾದಿ ಶರಣರ ತತ್ವಚಿಂತನೆಗಳು, ವಚನ ಸಾಹಿತ್ಯ ಹಾಗೂ ಸಮಾನತೆಯ ಸಂದೇಶವನ್ನು ಜನಮಾನಸಕ್ಕೆ ತಲುಪಿಸುವ ಉದ್ಧೇಶದಿಂದ ಬಸವಕಲ್ಯಾಣದ ಬಸವ ಮಹಾಮನೆ ಪರಿಸರದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ 25ನೇ ಕಲ್ಯಾಣ ಪರ್ವದ ರಜತ ಮಹೋತ್ಸವವು ಅದ್ಧೂರಿಯಾಗಿ ಸಮಾರೋಪಗೊಂಡಿತು.

ಸಮಾರೋಪ ಸಮಾರಂಭದಲ್ಲಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಐದು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ಕೂಡಲಸಂಗಮದ ಬಸವಧರ್ಮ ಪೀಠಾಧ್ಯಕ್ಷೆ ಡಾ. ಮಾತೆ ಗಂಗಾದೇವಿ ಅವರ ಸಾನಿಧ್ಯದಲ್ಲಿ ಸ್ವಾಗತ ಸಮಿತಿ ಕೋಶಕಾರ್ಯದರ್ಶಿ ರಾಜೇಂದ್ರ ಜೊನ್ನಿಕೇರಿ ನಿರ್ಣಯಗಳನ್ನು ಮಂಡಿಸಿದರು. ನೆರೆದಿದ್ದ ಬಸವಾಭಿಮಾನಿಗಳು ಚಪ್ಪಾಳೆ ತಟ್ಟುವ ಮೂಲಕ ನಿರ್ಣಯಗಳಿಗೆ ಬೆಂಬಲ ವ್ಯಕ್ತಪಡಿಸಿದರು.

ಐದು ಮಹತ್ವದ ನಿರ್ಣಯಗಳು:

1. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ : ಕೇಂದ್ರ ಸರ್ಕಾರ ಈ ಹಿಂದೆ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ವ್ಯಕ್ತಪಡಿಸಿರುವ ಆಕ್ಷೇಪಣೆಗಳು ಹಾಗೂ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ, ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ಬಿಂಬಿಸುವ ಅಧಿಕೃತ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಮರುಪರಿಶೀಲನೆಗಾಗಿ ಕೇಂದ್ರ ಸರ್ಕಾರಕ್ಕೆ ಪುನಃ ಸಲ್ಲಿಸಬೇಕು.

2. ಬಸವಣ್ಣನವರಿಗೆ ರಾಷ್ಟ್ರಮಟ್ಟದ ಗೌರವ : ಬಸವಣ್ಣನವರನ್ನು ರಾಷ್ಟ್ರಮಟ್ಟದ ಸಾಂಸ್ಕೃತಿಕ ನಾಯಕರೆಂದು ಘೋಷಿಸಬೇಕು. ಬಸವ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಆಚರಿಸುವುದರ ಜೊತೆಗೆ ಅಂದು ರಾಷ್ಟ್ರೀಯ ರಜೆ ಘೋಷಿಸಬೇಕು.

3. ಬಸವಕಲ್ಯಾಣದ ಅಭಿವೃದ್ಧಿ : ಬಸವಕಲ್ಯಾಣವು ಅಂತಾರಾಷ್ಟ್ರೀಯ ಧಾರ್ಮಿಕ ಕೇಂದ್ರವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ನಗರಕ್ಕೆ ರೈಲ್ವೆ ಸಂಪರ್ಕ ಕಲ್ಪಿಸಬೇಕು ಹಾಗೂ ಬಸವಕಲ್ಯಾಣವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು.

4. ಬಸವಣ್ಣನವರ ಹೆಸರಿನಲ್ಲಿ ನಾಮಕರಣ : ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣ ಹಾಗೂ ನಮ್ಮ ಮೆಟ್ರೊಗೆ ಗುರು ಬಸವಣ್ಣನವರ ಹೆಸರಿಡಬೇಕು. ಕಲಬುರಗಿ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಬಸವಣ್ಣನವರ ಹೆಸರನ್ನು ನಾಮಕರಣ ಮಾಡಬೇಕು.

5. ವಚನ ಸಾಹಿತ್ಯದ ಪ್ರಸಾರ ಮತ್ತು ಸಂಶೋಧನೆ : ವಚನ ಸಾಹಿತ್ಯ ಹಾಗೂ ಬಸವಾದಿ ಶರಣರ ಜೀವನ ಸಂದೇಶಗಳನ್ನು ದೇಶದ ಎಲ್ಲ ಭಾಷೆಗಳಿಗೆ ಅನುವಾದಿಸಬೇಕು. ದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಬಸವೇಶ್ವರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಬೇಕು.

ಮೂರು ದಿನಗಳ ಕಾಲ ನಡೆದ ಕಲ್ಯಾಣ ಪರ್ವದಲ್ಲಿ ಬಸವತತ್ವದ ಚಿಂತನೆಗಳು, ವಚನ ಸಂದೇಶಗಳು, ವಿಚಾರಗೋಷ್ಠಿಗಳು, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಿಂದ ಆಗಮಿಸಿದ್ದ ಮಠಾಧೀಶರು, ಗಣ್ಯರು ಹಾಗೂ ಸಾವಿರಾರು ಬಸವಾಭಿಮಾನಿಗಳು ಪಾಲ್ಗೊಂಡಿದ್ದರು.

ಸಮಾರಂಭದಲ್ಲಿ ಪೂಜ್ಯ ಸಿದ್ಧರಾಮೇಶ್ವರ ಸ್ವಾಮೀಜಿ, ಮಾತೆ ಜ್ಞಾನೇಶ್ವರಿ, ಪೂಜ್ಯ ಲಾವಣ್ಯ ಮಾತಾಜಿ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಬಸವರಾಜ ಬುಳ್ಳಾ, ಪ್ರಧಾನ ಕಾರ್ಯದರ್ಶಿ ಎನ್. ಚಂದ್ರಮೌಳಿ, ರಾಜ್ಯಾಧ್ಯಕ್ಷ ಕೆ. ವೀರೇಶ, ರವಿಶಂಕರ,  ಸೋಮಶೇಖರ ಪಾಟೀಲ ಗಾದಗಿ, ಜೈರಾಜ ಖಂಡ್ರೆ, ರಾಜೇಂದ್ರಕುಮಾರ ಗಂದಗೆ, ಸುರೇಶ ಸ್ವಾಮಿ, ಸಂಜೀವಕುಮಾರ ಪಾಟೀಲ, ಶಿವಶರಣಪ್ಪ ಹುಗ್ಗೆ ಪಾಟೀಲ, ಸಾಹಿತಿ ಸಂಗಮೇಶ ಜವಾದಿ, ರವಿ ಕೋಳಕುರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
1 Comment
  • ಬಹಳ ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ವಿಚಾರ ಮಂಟಪ ಹಾಗೂ ಒಳ್ಳೆಯ ಭಾವನೆ ಇದೆ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *