ಬಸವಕಲ್ಯಾಣ :
ಬಸವಕಲ್ಯಾಣದಲ್ಲಿ ನಡೆಯುವ ೪೭ನೆಯ ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವ-೨೦೨೬ ನಿಮಿತ್ತ, ೨೧-೧೧-೨೦೨೬ ರಿಂದ ೨೭-೧೧-೨೦೨೬ ರವರೆಗೆ ಏಳು ದಿವಸಗಳ ಕಾಲ ನಡೆಯುವ ಸಾಮೂಹಿಕ ವಚನ ಪಾರಾಯಣ ಕುರಿತು ಪೂಜ್ಯ ಗುರುಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ವಚನ ಪಾರಾಯಣ ಸೇವಾ ಸಮಿತಿಯ ಅಧ್ಯಕ್ಷರಾಗಿ ಮಮತಾ ಭೂಸೆ ಅವರನ್ನು, ಕಾರ್ಯಾಧ್ಯಕ್ಷರಾಗಿ ಜಯಶ್ರೀ ಬಿರಾದಾರ ಅವರನ್ನು ನೇಮಕ ಮಾಡಲಾಯಿತು.
ಸಾನಿಧ್ಯ ವಹಿಸಿದ ಗುರುಬಸವ ಪಟ್ಟದ್ದೇವರು ಮಾತನಾಡುತ್ತ, ಬಸವಾದಿ ಶರಣರ ಅನುಭಾವದಿಂದ ಹೊರಹೊಮ್ಮಿದ ವಚನಗಳೇ ನಮ್ಮ ಧರ್ಮಗ್ರಂಥವಾಗಿ ರೂಪತಾಳಿದೆ. ಇಂದು ನಾವು ನಮ್ಮ ಜೀವನ ಸುಖಿ ಮತ್ತು ಸಂತೃಪ್ತ ಮಾಡಿಕೊಳ್ಳಬೇಕಾದರೆ, ನಮಗೆ ವಚನಗಳ ಅಧ್ಯಯನ ಬಹಳ ಅವಶ್ಯಕವಾಗಿದೆ.
ಅದರಲ್ಲಿಯೂ ವಿಶೇಷವಾಗಿ ಬಸವಣ್ಣನವರ ವಚನಗಳು ದುಃಖಿತರನ್ನು ಸಮಾಧಾನ ಪಡಿಸುತ್ತವೆ. ಕಷ್ಟದಲ್ಲಿದ್ದವರಿಗೆ ಧೈರ್ಯ ತುಂಬುತ್ತವೆ. ಬಡವ, ದೀನ, ದುಃಖಿತರ ಕುರಿತು ಪ್ರೀತಿಯನ್ನು ಹೆಚ್ಚಿಸುತ್ತವೆ. ಧಾರ್ಮಿಕ ತತ್ತ್ವಗಳ ಜೊತೆಗೆ ಬದುಕುವ ವಿಧಾನವನ್ನು ಕಲಿಸಿಕೊಡುತ್ತವೆ ಎಂದರು.
ಬಸವಣ್ಣನವರ ವಚನಗಳು ನಮಗೆ ಪರಮಾತ್ಮನ ಸನ್ನಿಧಿಯಲ್ಲಿಯೇ ಒಯ್ದು ಬಿಡುತ್ತವೆ. ಆಗ ನಮಗೆ ಪರಮಾತ್ಮನ ದರ್ಶನವೇ ಆಗುತ್ತದೆ. ಅದಕ್ಕಾಗಿ ನಾವು ಸಾಮೂಹಿಕ ವಚನ ಪಾರಾಯಣ ಮಾಡಬೇಕು. ಸಾಮೂಹಿಕ ವಚನ ಪಾರಾಯಣ ಮಾಡುವುದರಿಂದ ಬಸವಾದಿ ಶರಣರ ದೈವಿಕರುಣೆ ನಮ್ಮ ಕುಟುಂಬದ ಮೇಲೆ ಶ್ರೀರಕ್ಷೆಯಾಗಿ ನಿಲ್ಲುತ್ತದೆ. ಆದರಿಂದ ಎಲ್ಲರೂ ಈ ಸಾಮೂಹಿಕ ವಚನ ಪಾರಾಯಣದಲ್ಲಿ ಭಾಗಿಯಾಗಬೇಕೆಂದು ಆರ್ಶೀವಚನ ನೀಡಿದರು.
ಪೂಜ್ಯ ಶಿವಾನಂದ ಸ್ವಾಮಿಗಳು, ಪ್ರಭುಲಿಂಗ ಸ್ವಾಮಿಗಳು, ಹಾಲಮ್ಮ ತಾಯಿ, ಬಸವದೇವರು, ಶಿವಬಸವ ದೇವರು, ಲೋಕೇಶ ಗುರೂಜಿ, ಶೈಲೇಶದೇವರು ಹಾಗೂ ರವಿ ಕೋಳಕುರ ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU
